ಶುಕ್ರವಾರ, ಜೂನ್ 25, 2021
21 °C

ಎಚ್‌ಡಿಸಿಸಿ ಬ್ಯಾಂಕ್ ಶಾಖೆ ಸ್ಥಾಪನೆ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಣನೂರು: ಕೃಷಿಕರಿಗೆ ಸಾಲಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಾಗೂ ಸ್ವ-ಸಹಾಯ ಸಂಘಗಳ ವ್ಯವಹಾರದ ಹಿತದೃಷ್ಟಿಯಿಂದ ಮರಿಯಾ ನಗರದಲ್ಲಿ ಹಾಸನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನೂತನ ಶಾಖೆ ತೆರೆಯಲು ಪ್ರಯತ್ನಿಸುವುದಾಗಿ ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.ಹಾಸನ ಜಿಲ್ಲೆಯ ಗಡಿ ಭಾಗದ ಮರಿಯಾನಗರ ಗ್ರಾಮದಲ್ಲಿ ಸಿ.ಎಂ.ಎಸ್.ಎಸ್. ಸೇವಾ ಸಂಸ್ಥೆಯ ದಿವ್ಯ ಜ್ಯೋತಿ ಮಹಿಳಾ ಸ್ವ ಸಹಾಯ ಸಂಘಗಳು, ಕೊಣನೂರು, ಹೊನಗಾನಹಳ್ಳಿ, ಮರಿಯಾನಗರ ವಿಭಾಗದ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ದಿವ್ಯ ಜ್ಯೋತಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಕೃಷ್ಣ ಅವರಿಗೆ ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಸುತ್ತಲಿನ ಹಳ್ಳಿಗಳ ರೈತರು ಹಾಗೂ ಸ್ವ ಸಹಾಯ ಸಂಘಗಳಿಗೆ ವ್ಯವಹಾರದ ಉದ್ದೇಶಕ್ಕಾಗಿ ಬ್ಯಾಂಕ್‌ನ ಅವಶ್ಯಕತೆಯಿರುವುದಾಗಿ ಸಂಘದ ಸದಸ್ಯರು ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದರು.ಬನ್ನೂರು ಸಂತೆಮಾಳ ಹಾಗೂ ಮರಿಯಾನಗದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಸಂಸ್ಥೆಯ ಸಂಯೋಜಕರು ದೂರಿದ ಹಿನ್ನೆಯಲ್ಲಿ ಮಾತನಾಡಿದ ಬಾಲಕೃಷ್ಣೇಗೌಡ ಅವರು, ಹಳ್ಳಿಗ ಳಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಅಂಜನ್ ಕುಮಾರ್ ಅವರಿಗೆ ಗ್ರಾಮದಲ್ಲಿ ತೀವ್ರವಾಗಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಪಡಿತರ ಚೀಟಿ ವ್ಯವಸ್ಥೆ ಬಗೆಹರಿಸಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಸಮಸ್ಯೆ ಕುರಿತು ಆಲಿಸಿದ ಸಿ.ಇ.ಓ. ಅವರು ತರಾತುರಿಯಲ್ಲಿ ಮಾತು ಮುಗಿಸಿ ಹಾಸನದಲ್ಲಿ ಅನ್ಯ ಕೆಲಸದ ನಿಮಿತ್ತ ಹೊರಡಬೇಕು ಎಂದು ಹೇಳಿ ಅಲ್ಲಿಂದ ಹೊರಟರು.  ಎಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೊನ್ನವಳ್ಳಿ ಸತೀಶ್,  ಜಿ.ಪಂ. ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ ಮಾತನಾಡಿದರು.ದಿವ್ಯ ಜ್ಯೋತಿ ಮಹಾ ಸಂಘದ ಅಧ್ಯಕ್ಷೆ ಸುನೀತ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ತೋಮಸ್ ರೊಜಾರಿಯೋ, ಜಿ.ಪಂ. ಸದಸ್ಯರಾದ ಪಾರ್ವತಮ್ಮ ನಂಜುಂಡಾಚಾರ್, ಜಿ.ಪಂ. ಮಹಿಳಾ ಶಕ್ತಿ ಅಭಿ ಯಾನ ಅಧ್ಯಕ್ಷೆ ಪ್ರೇಮ ನಿಂಗಪ್ಪ, ಕೆ.ಟಿ. ಜಯಶ್ರೀ, ತಾ.ಪಂ. ಸದಸ್ಯೆ ಜವರಮ್ಮ ಅಯ್ಯಣ್ಣಗೌಡ, ಬನ್ನೂರು ಗ್ರಾ.ಪಂ. ಉಪಾಧ್ಯಕ್ಷೆ ಜಯಮ್ಮ ಪಾಪಯ್ಯ, ಸದಸ್ಯೆ ಜ್ಯೋತಿ ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಿಣ್ಣಪ್ಪ ಇದ್ದರು. ಜೀನಾ ಸ್ವಾಗತಿಸಿ, ಕೆ.ಜಿ. ಕೃಷ್ಣ ವಾರ್ಷಿಕ ವರದಿ ಮಂಡಿಸಿ, ಲೀನಾ ನಿರೂಪಿಸಿ, ಪುಷ್ಪ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.