ಬುಧವಾರ, ಏಪ್ರಿಲ್ 21, 2021
30 °C

ಎಟಿಎಂ ಬ್ಯಾಟರಿ ಕಳವು: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಟಿಎಂ ಘಟಕಗಳಲ್ಲಿ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಹನುಮಂತನಗರ ಪೊಲೀಸರು ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ನರಸಿಂಹ (32), ಹನುಮಂತನಗರದ ನಾಗರಾಜ (22), ಮಡಿವಾಳದ ಈರಪ್ಪ (37) ಮತ್ತು ಬನಶಂಕರಿಯ ಶಿವಕುಮಾರ (59) ಬಂಧಿತರು.ಸೆಕ್ಯುರಿಟಿ ಏಜೆನ್ಸಿಗಳಲ್ಲಿ ನೌಕರರಾಗಿದ್ದ ಆರೋಪಿಗಳು, ಎಟಿಎಂ ಘಟಕಗಳಲ್ಲಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದರು. ಇದರಿಂದಾಗಿ ಅವರಿಗೆ ಎಟಿಎಂ ಘಟಕಗಳಲ್ಲಿನ ಯುಪಿಎಸ್ ಬ್ಯಾಟರಿಗಳನ್ನು ಬಿಚ್ಚಿ ಜೋಡಿಸುವ ಅನುಭವವಿತ್ತು.ಪ್ರಮುಖ ಆರೋಪಿ ನರಸಿಂಹನನ್ನು ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು 2011ರಲ್ಲಿ ಬಂಧಿಸಿದ್ದರು. ಜೈಲಿನಲ್ಲಿದ್ದ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ಸೆಕ್ಯುರಿಟಿ ಗಾರ್ಡ್‌ಗಳಿಲ್ಲದ ಎಟಿಎಂ ಘಟಕಗಳನ್ನು ಗುರುತಿಸಿ ಬೆಳಗಿನ ಜಾವದಲ್ಲಿ ಒಳ ನುಗ್ಗಿ, ಬ್ಯಾಟರಿ ಕಳವು ಮಾಡುತ್ತಿದ್ದರು. ಕೆಲ ಘಟಕಗಳ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಅವರ ದೃಶ್ಯ ಸಹ ದಾಖಲಾಗಿತ್ತು.ಈ ಮಾಹಿತಿ ಆಧರಿಸಿ ಅವರನ್ನು ಬಂಧಿಸಿ 226 ಯುಪಿಎಸ್ ಬ್ಯಾಟರಿ, ಎರಡು ಲ್ಯಾಪ್‌ಟಾಪ್ ಮತ್ತು ಐದು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಅವರು ಹನುಮಂತನಗರ, ಬಸವನಗುಡಿ, ಚಾಮರಾಜಪೇಟೆ, ಗಿರಿನಗರ, ಬನಶಂಕರಿ, ಜೆ.ಪಿ.ನಗರ, ಕುಮಾರಸ್ವಾಮಿಲೇಔಟ್ ಮತ್ತು ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ಎಟಿಎಂ ಘಟಕಗಳಲ್ಲಿ ಕಳವು ಮಾಡಿದ್ದರು. ಆರೋಪಿಗಳ ಬಂಧನದಿಂದ 24 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿದ್ದ ಶಿವಕುಮಾರ ಕರ್ತವ್ಯ ಲೋಪದ ಆರೋಪದ ಮೇಲೆ ಸೇವೆಯಿಂದ ವಜಾಗೊಂಡಿದ್ದ. ಆ ನಂತರ ಆತ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿದ್ದ. ಆರೋಪಿಗಳು ಕಳವು ಮಾಡಿದ ಬ್ಯಾಟರಿಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.