ಬುಧವಾರ, ಮೇ 18, 2022
23 °C

ಎಡಬಿಡಂಗಿ ಕವಿಗೋಷ್ಠಿ: ಅಧ್ಯಕ್ಷರು ಪೇಚಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಕನ್ನಡಪರ ಸಂಘಟನೆಗಳನ್ನು ಹೊರಗಿಟ್ಟಿ ರುವುದು ಹಾಗೂ ಒಂದೇ ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿಗಳನ್ನು ಆಯೋಜಿಸಿದ ಕಾರಣಕ್ಕೆ ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪೇಚಿಗೆ ಸಿಲುಕಿದರು.ಪತ್ರಿಕಾಗೋಷ್ಠಿ ಆರಂಭವಾಗುತ್ತಿದ್ದಂತೆ ‘ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಪರ ಸಂಘಟನೆಗಳನ್ನು ಹೊರಗಿಟ್ಟಿದ್ದೇಕೆ ಎಂಬ ಪ್ರಶ್ನೆ ಎದುರಾಯಿತು. ಅಧ್ಯಕ್ಷ ಉದಯರವಿ ಅವರು ಎಲ್ಲರನ್ನೂ ಆಹ್ವಾನಿಸಿದ್ದೇವೆ ಎಂದರು. ಯಾರ್ಯಾರನ್ನು ಆಹ್ವಾನಿಸಿದ್ದೀರಿ ಎಂದು ಕೇಳಿದರೆ ನಿರುತ್ತರರಾದರು. ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲೆಯ ಕನ್ನಡಪರ ಸಂಘ ಸಂಸ್ಥೆಗಳ ಒಂದು ಪಟ್ಟಿಯೂ ಇಲ್ಲ, ಸಮ್ಮೇಳನಕ್ಕೆ ಪರಿಷತ್ತು ಯಾವುದೇ ಸಂಸ್ಥೆಯವರನ್ನು ಆಹ್ವಾನಿಸಿಲ್ಲ. ಸಂಘ ಸಂಸ್ಥೆ ಪದಾಧಿಕಾರಿಗಳ ಸಭೆ ಕರೆಯಬೇಕಿತ್ತು, ಅದನ್ನೂ ಮಾಡಿಲ್ಲ. ಕೆಲವೇ ಕೆಲವರಿಗಾಗಿ ಸಮ್ಮೇಳನ ಆಯೋಜನೆಯಾಗಿದೆಯೇ ಎಂಬ ಪ್ರಶ್ನೆಗೂ ಉತ್ತರವಿರಲಿಲ್ಲ.ಇತ್ತ ಒಂದೇ ಸಮ್ಮೇಳನದಲ್ಲಿ ಎರಡು ಪತ್ರಿಕಾ ಗೋಷ್ಠಿಗಳನ್ನು ಆಯೋಜಿಸಿರುವುದೂ ಅಚ್ಚರಿಯ ಸಂಗತಿ ಯಾಗಿಯೇ ಕಂಡುಬಂತು. ಮಾ. 19ರಂದು ಸಂಜೆ 5.30ಕ್ಕೆ ಒಂದು ಕವಿಗೋಷ್ಠಿ ಆಯೋಜಿಸಲಾಗಿದೆ. ಇದರಲ್ಲಿ 30 ಕವಿಗಳು ಕವನ ಓದಲಿದ್ದಾರೆ. ಡಾ. ಎಲ್.ಎನ್ ಮುಕುಂದರಾಜ್ ಅವರು ಈ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.ಮರುದಿನ (ಮಾ.20) ಬೆಳಿಗ್ಗೆ 11.30ಕ್ಕೆ ಇನ್ನೊಂದು ಕವಿಗೋಷ್ಠಿ ಆಯೋಜಿಸಲಾಗಿದೆ. ಇದರ ಅಧ್ಯಕ್ಷತೆಯನ್ನು ಬೆಂಗಳೂರಿನ ಜೋಗಿ ವಹಿಸುವರು. ಇದರಲ್ಲಿ 17 ಕವಿಗಳ ಹೆಸರಿದ್ದರೂ ಕವಿಗಳಾಗಿ ಗುರುತಿಸಿಕೊಂಡವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಈ ಕವಿಗೋಷ್ಠಿಯ ಉದ್ದೇಶವೇನು ? ಎಂದು ಕೇಳಿದರೆ ‘ಇದು ಮಾಧ್ಯಮ ಕವಿಗೋಷ್ಠಿ. ಮುದ್ರಣ ದೋಷದಿಂದ ‘ಮಾಧ್ಯಮ’ ಪದ ಬಿಟ್ಟುಹೋಗಿ ಬರಿಯ ಕವಿಗೋಷ್ಠಿ ಎಂದು ಮುದ್ರಣವಾಗಿದೆ. ಒಂದೇ ಗೋಷ್ಠಿಯಲ್ಲಿ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಮಾಧ್ಯಮದವರಿಗೆ ಪ್ರತ್ಯೇಕ ಗೋಷ್ಠಿ ಆಯೋಜಿಸಿದ್ದೇವೆ’ ಎಂದರು.ಮಾಧ್ಯಮದವರಿಗಾಗಿ ಪ್ರತ್ಯೇಕ ಕವಿಗೋಷ್ಠಿ ಹಮ್ಮಿಕೊಳ್ಳುವ ಉದ್ದೇಶವಿತ್ತೇ, ಮುಂದಿನ ಬಾರಿ ಶಿಕ್ಷಕರು, ಉಪನ್ಯಾಸಕರು ಮುಂತಾಗಿ ಎಲ್ಲರೂ ನಮಗೆ ಪ್ರತ್ಯೇಕ ಕವಿಗೋಷ್ಠಿ ಮಾಡಿ ಎಂದರೆ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವೇ ? ಎಂಬುದು ಪ್ರಶ್ನೆಯಾಗಿ ಉಳಿದಿದೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಮಾಧ್ಯಮ ಗೋಷ್ಠಿ ಆಯೋಜಿಸಲಾಗುತ್ತಿದೆ. ಮಾತ್ರವಲ್ಲದೆ ಮೊನ್ನೆಮೊನ್ನೆ ಮುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲೂ  ಇಂಥ ಗೋಷ್ಠಿ ನಡೆದಿದೆ. ಆದರೆ ಹಾಸನದಲ್ಲಿ ಅಂಥ ಗೋಷ್ಠಿಯ ಬದಲು ಮಾಧ್ಯಮದವರನ್ನು ಎಳೆದು ತಂದು ಕವಿಗಳನ್ನಾಗಿಸುವ ಪ್ರಯತ್ನ ನಡೆದಿದೆ.ವಿಶೇಷವೆಂದರೆ ರಾಜ್ಯದ ಅತ್ಯಂತ ಹಳೆಯ ಮತ್ತು ಪ್ರಮುಖ ರಾಜ್ಯಮಟ್ಟದ ನಾಲ್ಕು ಪತ್ರಿಕೆಗಳನ್ನು ಕವಿಗೋಷ್ಠಿಯಿಂದ ಹೊರಗಿಡಲಾಗಿದೆ. ಇದರಿಂದಾಗಿ ಕವಿಗಳೆಂದು ಗುರುತಿಸಿಕೊಳ್ಳದವರು ಸ್ಥಾನ ಪಡೆದು ಅತ್ತ ಕವಿಗೋಷ್ಠಿಯೂ ಅಲ್ಲದೆ, ಪ್ರಮುಖ ಪತ್ರಿಕೆಗಳಿಗೆ ಸ್ಥಾನವಿಲ್ಲದೆ ಇತ್ತ ಮಾಧ್ಯಮ ಕವಿ ಗೋಷ್ಠಿಯೂ ಅಲ್ಲದೆ ಈ ಗೋಷ್ಠಿ ಎಡಬಿಡಂಗಿ ಕವಿಗೋಷ್ಠಿ ಎನಿಸುವಂತಾಗಿದೆ.ಜಿಲ್ಲೆಯಲ್ಲಿ ಹತ್ತಾರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪತ್ರಿಕೆಗಳಿವೆ. ಈಚಿನ ದಿನಗಳಲ್ಲಿ ಉಂಟಾಗಿರುವ ತೀವ್ರ ಪೈಪೋಟಿ, ಮಾಧ್ಯಮ ಕ್ಷೇತ್ರದಲ್ಲಾಗಿರುವ ಬದಲಾವಣೆಗಳಿಂದಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪತ್ರಿಕೆಗಳು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಮಾಧ್ಯಮ ಗೋಷ್ಠಿಯೇ ಆಗಿದ್ದಲ್ಲಿ ಇಂಥ ಪತ್ರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳು, ಮುಂದಿನ ಸವಾಲುಗಳ ಬಗ್ಗೆ ಒಂದು ಚರ್ಚೆ ನಡೆಸಬಹುದಾಗಿತ್ತು ಎಂದು ಮಾಧ್ಯಮದವೇ ನುಡಿಯುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.