ಸೋಮವಾರ, ಜನವರಿ 20, 2020
29 °C

ಎಡಬಿಡಂಗಿ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರದ ಹಣದಲ್ಲಿ ರಾಜಕೀಯ ಮುಖಂಡರ ಪ್ರತಿಮೆಗಳನ್ನು ಸ್ಥಾಪಿಸಿ ಈಗ ಅವುಗಳಿಗೆ ಸರ್ಕಾರಿ ಖರ್ಚಿನಲ್ಲೇ ಹೊದಿಕೆ ಹಾಕಿ ಮರೆಮಾಚುವಂತಹ ವಿಚಿತ್ರ ಪರಿಸ್ಥಿತಿ ಉತ್ತರಪ್ರದೇಶದಲ್ಲಿ ನಿರ್ಮಾಣವಾಗಿದೆ.

 

ರಾಜ್ಯದ ಹಲವೆಡೆ ಇರುವ ಮುಖ್ಯಮಂತ್ರಿ ಮಾಯಾವತಿ ಹಾಗೂ ಬಹುಜನ ಪಕ್ಷದ ಚಿಹ್ನೆಯಾದ ಆನೆಯ ಪ್ರತಿಮೆಗಳು ಮತದಾರರ ಮೇಲೆ ಪ್ರಭಾವ ಬೀರುತ್ತವೆ ಎಂದು ವಿರೋಧ ಪಕ್ಷಗಳು ತಕರಾರು ಎತ್ತಿದ್ದರಿಂದ ಚುನಾವಣಾ ಆಯೋಗ ಇಂತಹ ಕ್ರಮಕ್ಕೆ ಮುಂದಾಗಿದೆ. ವಿರೋಧ ಪಕ್ಷಗಳ ತಕರಾರಿಗೆ ಯಾವ ತರ್ಕವೂ ಇಲ್ಲ.

 

ಆನೆಯ ಪ್ರತಿಮೆಗಳಿಗೆ ಹೊದಿಕೆ ಹಾಕಿ ಮುಚ್ಚಬಹುದು. ಉತ್ತರ ಪ್ರದೇಶದಲ್ಲಿರುವ ಜೀವಂತ ಆನೆಗಳಿಗೂ ಹಾಗೆ ಮಾಡಲು ಸಾಧ್ಯವೇ? ಮುಖ್ಯಮಂತ್ರಿ ಮಾಯಾವತಿ ಸರ್ಕಾರಿ ಹಣದಲ್ಲಿ ತಮ್ಮ ಹಾಗೂ ತಮ್ಮ `ಗುರು~ ಕಾನ್ಶೀರಾಂ ಮತ್ತು ಆನೆಯ ಪ್ರತಿಮೆಗಳನ್ನು ಕೋಟ್ಯಂತರ ರೂಪಾಯಿ ಖರ್ಚಿನಲ್ಲಿ ಸ್ಥಾಪಿಸಿದ ಕ್ರಮವೇ ಜನವಿರೋಧಿ. ಅದಕ್ಕೆ ಸುಪ್ರೀಂ ಕೋರ್ಟ್ ಸಹ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಬಡತನ, ಅನಕ್ಷರತೆ ಮತ್ತು ಮೂಢನಂಬಿಕೆ ಇತ್ಯಾದಿ ಸಮಸ್ಯೆಗಳನ್ನು ಬದಿಗಿಟ್ಟು ಸಾರ್ವಜನಿಕ ಸ್ಥಳದಲ್ಲಿ ತಮ್ಮದೇ ಪ್ರತಿಮೆಗಳನ್ನು ಸ್ಥಾಪನೆ ಮಾಡಿದ ಮಾಯಾವತಿ ಸರ್ಕಾರದ ಜನವಿರೋಧಿ ಧೋರಣೆಯನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಮತದಾರರ ವಿಶ್ವಾಸ ಗಳಿಸುವ ಅವಕಾಶವನ್ನು ಕೈಬಿಟ್ಟ ವಿರೋಧ ಪಕ್ಷಗಳು ಪ್ರತಿಮೆಗಳನ್ನು ಮತದಾರರಿಗೆ ಕಾಣದಂತೆ ಮರೆಮಾಡಿಸುವಂತಹ ಎಡಬಿಡಂಗಿ ನಿಲುವು ತಾಳಿರುವುದು ಹಾಸ್ಯಾಸ್ಪದ.ಚುನಾವಣಾ ಆಯೋಗ ಮಾಯಾವತಿ ಅವರ ಪ್ರತಿಮೆಯ ಜೊತೆ ಅವರ ಪಕ್ಷದ ಚುನಾವಣಾ ಚಿಹ್ನೆಯಾದ ಆನೆಯ ಪ್ರತಿಮೆಗಳನ್ನು ಮುಚ್ಚಿರುವುದರಿಂದ ಪಕ್ಷಪಾತದ ಆರೋಪಕ್ಕೂ ಗುರಿಯಾಗಿದೆ.

 

ಆನೆಯ ಪ್ರತಿಮೆಗಳನ್ನು ಹೊದಿಕೆಯಿಂದ ಮುಚ್ಚಿ, ಇತರ ರಾಜಕೀಯ ಪಕ್ಷಗಳ ಚಿಹ್ನೆಗಳಾದ ಹಸ್ತ, ಸೈಕಲ್, ಕಮಲ, ಲಾಟೀನು ಮೊದಲಾದವು ಮುಕ್ತವಾಗಿ ಪ್ರದರ್ಶನಗೊಳ್ಳುವುದಕ್ಕೆ ಆಸ್ಪದ ಕೊಡುವುದು ತಾರತಮ್ಯಕ್ಕೆ ಎಡೆ ಕೊಡಲಾರದೇ? ಚುನಾವಣಾ ಚಿಹ್ನೆಗಳು ಮತದಾರರಿಗೆ ರಾಜಕೀಯ ಪಕ್ಷಗಳನ್ನು ಗುರುತಿಸಲು ನೆರವಾಗುತ್ತವೆ. ಇದಕ್ಕೆ ಅಡ್ಡಿಪಡಿಸುವಂತಹ ಕ್ರಮ ಸಮರ್ಥನೀಯವಲ್ಲ. ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಹಣ ಮತ್ತು ತೋಳ್ಬಲ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ ಎಂಬುದು ರಹಸ್ಯವಲ್ಲ.ಮತದಾರರ ಪೈಕಿ ಬಡವರು ಮತ್ತು ನಿರಕ್ಷರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಹಣದ ಆಮಿಷ ತೋರಿಸಿ ಬೆಂಬಲ ಪಡೆಯುವ ಪ್ರಯತ್ನವನ್ನು ಎಲ್ಲ ರಾಜಕೀಯ ಪಕ್ಷಗಳೂ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ತೆರೆಮರೆಯಲ್ಲಿ ನಡೆಯುವ ಹಣ, ಹೆಂಡ, ಬಟ್ಟೆ ಮತ್ತಿತರ ವಸ್ತುಗಳನ್ನು ಮತದಾರರಿಗೆ ಹಂಚುವುದನ್ನೂ ತಡೆಯಬೇಕಿದೆ. ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ನೇಮಕ ಮಾಡಿಕೊಂಡು ಹಣದ ಹರಿವನ್ನು ನಿಯಂತ್ರಿಸುವ ಮೂಲಕವೇ ಅಕ್ರಮಗಳಿಗೆ ಕಡಿವಾಣ ಹಾಕಬೇಕು.

 

ಮುಕ್ತ ಹಾಗೂ ಶಾಂತಿಯುತ ಮತದಾನ ಆಗುವಂತೆ ನೋಡಿಕೊಳ್ಳುವ ದೊಡ್ಡ ಹೊಣೆ ಆಯೋಗದ ಮೇಲಿದೆ. ಅದನ್ನು ನಿರ್ವಹಿಸಲು ಗಮನ ಕೊಡಬೇಕು.

ಪ್ರತಿಕ್ರಿಯಿಸಿ (+)