ಶನಿವಾರ, ಫೆಬ್ರವರಿ 27, 2021
28 °C
ಬಿಸಿಲಿನ ಝಳವನ್ನೂ ಲೆಕ್ಕಿಸದೆ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶಕ್ಕೆ ಕಾದ ಜನ

ಎಣಿಕೆ ಕೇಂದ್ರದ ಮುಂದೆ ಜನಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಣಿಕೆ ಕೇಂದ್ರದ ಮುಂದೆ ಜನಜಾತ್ರೆ

ಮಂಡ್ಯ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಮತ ಎಣಿಕೆ ಕೇಂದ್ರದ ಮುಂದೆ ಜನಸಾಗರವೇ ಸೇರಿತ್ತು. ಬಿಸಿಲಿನ ಝಳವನ್ನೂ ಲೆಕ್ಕಿಸದೆ ಜನರು ಫಲಿತಾಂಶಕ್ಕಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾದು ಕುಳಿತಿದ್ದರು.ಚುನಾವಣೆಗೆ ಮತಯಂತ್ರದ ಬದ ಲಾಗಿ ಮತಪತ್ರ ಬಳಕೆ ಮಾಡಿದ್ದರಿಂದ ಎಣಿಕೆ ಕಾರ್ಯ ನಿಧಾನವಾಗಿತ್ತು. ಫಲಿತಾಂಶ ಮಧ್ಯಾಹ್ನದ ನಂತರವಷ್ಟೇ ಪ್ರಕಟವಾಗ ತೊಡಗಿದವು. ಆದರೂ, ಜನರು ಫಲಿತಾಂಶಕ್ಕಾಗಿ ಕಾದಿದ್ದರು. ಜಿದ್ದಾಜಿದ್ದಿ ಹಾಗೂ ಪ್ರತಿಷ್ಠೆಯ ಚುನಾವಣೆಯಾಗಿದ್ದರಿಂದ ಫಲಿತಾಂಶ ತಿಳಿದುಕೊಳ್ಳಲು ಎರಡೂ ಬಣಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಕಾಲೇಜು ಆವರಣ ತುಂಬಿ, ಹೊರಗಡೆಯೂ ಭಾರಿ ಸಂಖ್ಯೆಯ ಲ್ಲಿದ್ದರು. ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತಾದರೂ, ಜನರು ಬೆಂಗಳೂರು–ಮೈಸೂರು ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳನ್ನು ಸಾಲು, ಸಾಲಾಗಿ ನಿಲ್ಲಿಸಿದ್ದರು. ಅಲ್ಲಿರುವ ಅಂಗಡಿ, ಪೆಟ್ರೋಲ್‌ ಬಂಕ್‌ಗಳಿಗೂ ತೆರಳಲು ಸ್ಥಳವಿರಲಿಲ್ಲ.ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹಾಗೂ ಪಾದಚಾರಿ ಗಳು ಪರದಾಡಬೇಕಾಯಿತು. ಎಲ್ಲಿ ನೋಡಿದರಲ್ಲಿ ಜನರೇ ಕಾಣುತ್ತಿದ್ದರು. ಕಾಲೇಜು ಆವರಣದ ಹೊರಗಡೆ ಚುರುಮುರಿ, ವಿವಿಧ ತಿಂಡಿ, ಐಸ್‌ಕ್ರೀಂ, ಕಬ್ಬಿನ ಹಾಲು ಸೇರಿದಂತೆ ವಿವಿಧ ತಿನಿಸು ಮಾರಾಟ ಮಾಡಲು ವ್ಯಾಪಾರಸ್ಥರು ತಳ್ಳುಗಾಡಿಗಳೊಂದಿಗೆ ಬಂದಿದ್ದರು. ಫಲಿತಾಂಶ ವಿಳಂಬವಾಗಿದ್ದರಿಂದ ವ್ಯಾಪಾರ ಭರ್ಜರಿಯಾಗಿಯೇ ಇತ್ತು.ಮತ ಎಣಿಕೆ ಕೇಂದ್ರದ ಒಳಗಡೆ ಹೋಗಲು ಅಭ್ಯರ್ಥಿಗಳ ಏಜೆಂಟರು ಒಮ್ಮೆಲೇ ಹೆಚ್ಚಿನ ಸಂಖ್ಯೆಯಲ್ಲಿ ನುಗ್ಗಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಪೊಲೀಸರು ಹಾಗೂ ಏಜೆಂಟ್‌ರ ನಡುವೆ ತಳ್ಳಾಟವೂ ನಡೆಯಿತು. ಕೊನೆಗೆ ಸಾಲಿನಲ್ಲಿ ನಿಲ್ಲಿಸಿ, ಏಜೆಂಟರನ್ನು ಒಳಕ್ಕೆ ಬಿಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.