ಶುಕ್ರವಾರ, ಮೇ 29, 2020
27 °C

ಎಪಿಎಂಸಿ ಚುನಾವಣೆ: ಶೇ 50ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯಲ್ಲಿರುವ ಆರು ಕೃಷಿ ಉತ್ಪನ್ನ ಮಾರುಕಟ್ಟೆಗಳಿಗಾಗಿ ಮಂಗಳವಾರ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು, ಬಳ್ಳಾರಿ ತಾಲ್ಲೂಕಿನ ಪರಮ ದೇವನಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಚುನಾವಣಾ ಸಂಬಂಧಿ ಘರ್ಷಣೆ ನಡೆದು, ಇಬ್ಬರಿಗೆ ಗಾಯಗಳಾಗಿವೆ.ಜಿಲ್ಲೆಯ ರೈತರಿಂದ ಮತದಾನಕ್ಕೆ ಸಂಬಂಧಿಸಿದಂತೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಧ್ಯಾಹ್ನದ ವೇಳೆಗೆ ಕೇವಲ 20ರಷ್ಟಾಗಿದ್ದ ಶೇಕಡಾವಾರು ಮತದಾನ, ಸಂಜೆಯ ವೇಳೆಗೆ ಶೇ 50ರಷ್ಟು ಆಗಿದೆ.ತಾಲ್ಲೂಕಿನ ಪರಮ ದೇವನಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 4ರ ಸುಮಾರಿಗೆ ಮತದಾನ ಮಾಡಿ ಹೊರಬರುತ್ತಿದ್ದ ಇಬ್ಬರು ದಲಿತ ಯುವಕರನ್ನು,  ಮತದಾನ ಮಾಡಿದ್ದೇಕೆ? ಎಂದು ಇಬ್ಬರು ಪಶ್ನಿಸಿದ ಹಿನ್ನೆಲೆಯಲ್ಲಿ ಹೊಡೆದಾಟ ನಡೆದು ಶಿವಾರೆಡ್ಡಿ ಹಾಗೂ ಸತ್ಯನಾರಾಯಣ ರೆಡ್ಡಿ ಎಂಬುವವರಿಗೆ ಗಾಯಗಳಾಗಿವೆ.ಈ ಸಂಬಂಧ ಮಲ್ಲಿಕಾರ್ಜುನ ಎಂಬ ವ್ಯಕ್ತಿ ಒಳಗೊಂಡಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಚುನಾವಣೆ ಪ್ರಕ್ರಿಯೆಗೂ ಈ ಹೊಡೆದಾಟಕ್ಕೂ ಯಾವುದೇ ಸಂಬಂಧವಿಲ್ಲ. ಹಳೆಯ ವೈಷಮ್ಯವೇ ಚುನಾವಣೆ ವೇಳೆ ಬಹಿರಂಗಗೊಂಡು, ಎರಡು ಗುಂಪುಗಳ ನಡುವೆ ಚಿಕ್ಕ ಘರ್ಷಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.ಲಘು ಲಾಠಿ ಪ್ರಹಾರ: ಬಳ್ಳಾರಿಯ ಎಪಿಎಂಸಿ ಆವರಣದಲ್ಲಿನ ಮತಗಟ್ಟೆಯೆದುರು ಚುನಾವಣೆ ವೇಳೆ ನುಗ್ಗಲಾರಂಭಿಸಿದ ಕೆಲವು ಜನರನ್ನು ಚದುರಿಸಲು ಪೊಲೀಸರು ಮಧ್ಯಾಹ್ನ ಲಘು ಲಾಠಿ ಪ್ರಹಾರ ನಡೆಸಿದ್ದು, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಸ್ವತಃ ಲಾಠಿ ಹಿಡಿದು ನಿಂತಿದ್ದು ವಿಶೇಷವಾಗಿತ್ತು.ಮತದಾನ ಮಾಡಲು ಬಂದಿದ್ದ ಶಾಸಕ ಜಿ.ಸೋಮಶೇಖರರೆಡ್ಡಿ ಮತಗಟ್ಟೆಯಲ್ಲೇ ಕುಳಿತಿದ್ದನ್ನು ಕಂಡ ಜಿಲ್ಲಾಧಿಕಾರಿ 100 ಮೀಟರ್ ವ್ಯಾಪ್ತಿ ಬಿಟ್ಟು ಹೊರಹೋಗುವಂತೆ ನಯವಾಗಿ ಹೇಳಿದರು ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಗೈರು


ಕೊಟ್ಟೂರು : ಕೊಟ್ಟೂರು ಎಪಿಎಂಸಿಗೆ  ಮಂಗಳವಾರ ಶಾಂತಿಯುತ  ಚುನಾವಣೆ ನಡೆಯಿತು.

ಈ  ಚುನಾವಣೆಯಲ್ಲಿ ಕಾಂಗ್ರೆಸ್ ಏಜೆಂಟರು,  ಮುಖಂಡರು ಹಾಗೂ  ಅಭ್ಯರ್ಥಿ ಸಹ  ಹಾಜರಿರಲಿಲ್ಲ.ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಉಜ್ಜಿನಿ ಕ್ಷೇತ್ರ ಹೋರಾಟವಿಲ್ಲದೆ ಬಿಜೆಪಿಗೆ ಶರಣಾಗಿರುವುದು ಹಲವಾರು ಸಂಶಯ ಮತ್ತು ಕುತೂಹಲಕ್ಕೆ ಕಾರಣವಾಗಿದೆ.ಕೊಟ್ಟೂರು ಭಾಗದಲ್ಲಿ ಬೆಳಿಗ್ಗೆ ಸ್ವಲ್ಪ ಹೊತ್ತು  ತುಂತುರು ಮಳೆ ಸುರಿದ  ಕಾರಣ ಕೆಲ ಸಮಯ ಮತದಾನ ಮಂದಗತಿಯಲ್ಲಿ ಸಾಗಿತು. ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿತು. ಆದರೂ ನಿರೀಕ್ಷೆಯಂತೆ ಮತದಾನವಾಗಿಲ್ಲ.ಗರಿಷ್ಠ ಶೇ 74.9ರಷ್ಟು ಮತದಾನ

ಸಿರುಗುಪ್ಪ : ಇಲ್ಲಿಯ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 11 ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸರಾಸರಿ ಶೇ 48.87 ರಷ್ಟು ಮತದಾನವಾಗಿದೆ.ಟಿ.ಎಸ್.ಕೂಡ್ಲೂರು ಗ್ರಾಮದ ಮತಗಟ್ಟೆಯಲ್ಲಿ ಶೇ  74.9 ಹೆಚ್ಚು ಮತದಾನವಾದರೆ, ಹಳೇಕೋಟೆಯ ಮತಗಟ್ಟೆಯಲ್ಲಿ ಕೇವಲ 29.06 ಕನಿಷ್ಠ ಮತದಾನವಾಗಿದೆ.ಪ್ರಮುಖರು ಬೆಳಿಗ್ಗೆ ಮತಗಟ್ಟೆಗೆ ಆಗಮಿಸಿ ಮತದಾನದ ಹಕ್ಕು ಚಲಾಯಿಸಿದರು. ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.ಮತದಾರರಿಗೆ ವಾಹನ ಸೌಲಭ್ಯ

ಕಂಪ್ಲಿ: ಹೋಬಳಿ ವ್ಯಾಪ್ತಿಯ ನಂ.2 ಮುದ್ದಾಪುರ ಗ್ರಾಮದಲ್ಲಿ ಗುರುತಿನ ಚೀಟಿಗೆ ಸಂಬಂಧಪಟ್ಟಂತೆ ಎರಡು ಗುಂಪುಗಳ ನಡುವೆ ಪರಸ್ಪರ ವಾಗ್ವಾದ ಹೊರತುಪಡಿಸಿ ಎಪಿಎಂಸಿಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು. ಕಂಪ್ಲಿ, ಸಣಾಪುರ, ರಾಮಸಾಗರ ಮತ್ತು ಮೆಟ್ರಿ ಮತಕ್ಷೇತ್ರ ವ್ಯಾಪ್ತಿಯಲ್ಲಿ 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.  ಅಂದಾಜು ಶೇ. 52.2ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.  ಬೇರೆ ಹಳ್ಳಿಗಳಲ್ಲಿ ವಾಸವಾಗಿರುವ  ಮತದಾರರನ್ನು ಕೆಲವು ಅಭ್ಯರ್ಥಿಗಳು ಜೀಪಗಳಲ್ಲಿ ಮತಗಟ್ಟೆಗೆ ಕರೆತಂದರು. ಉಪ ವಿಭಾಗಧಿಕಾರಿ ಕರೀಗೌಡ, ಹೊಸಪೇಟೆ ತಹಸೀಲದಾರ ಪಿ.ಎಸ್. ಮಂಜುನಾಥ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.  ಬಿರುಸಿನ ಮತದಾನ


ಕುರುಗೋಡು:  ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕರ ಸ್ಥಾನಕ್ಕೆ  ಮಂಗಳವಾರ  ಶಾಂತಿಯುತವಾಗಿ ಮತದಾನ ನಡೆಯಿತು. ಮಧ್ಯಾಹ್ನದವರೆಗೆ ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ನಂತರ ಬಿರುಸಿನಿಂದ ನಡೆಯಿತು. ಒಟ್ಟು ಶೇ.51  ರಷ್ಟು ಮತದಾನವಾಗಿದೆ.     

ಬಾದನಹಟ್ಟಿ, ವದ್ದಟ್ಟಿ, ಗೆಣಿಕೆಹಾಳು ಕ್ಯಾದಿಗೆಹಾಳು, ಯಲ್ಲಾಪುರ, ಯರಂಗಳಿಗಿ, ಮದಿರೆ, ಸೋಮಸಮುದ್ರ ಗ್ರಾಮಗಳು  ಕುರುಗೋಡು ಕ್ಷೇತ್ರದ ವ್ಯಾಪ್ತಿಯಲ್ಲಿವೆ.ಶೇ.42ರಷ್ಟು  ಮತದಾನ

ಹೂವಿನಹಡಗಲಿ:  ಎಪಿಎಂಸಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ.42ರಷ್ಟು  ಮತದಾನವಾಗಿದೆ. ಒಟ್ಟು 69 ಮತಗಟ್ಟೆಗಳಲ್ಲಿ ಮತದಾನ ಶಾಂತಯುತವಾಗಿ ನಡೆದಿದೆ. ಶಾಸಕ ಚಂದ್ರಾನಾಯ್ಕ, ಮಾಜಿ ಸಚಿವ ಈ.ಟಿ.ಶಂಭುನಾಥ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ರವೀಂದ್ರ, ಮಾಜಿ ಶಾಸಕ ಹಾಲಪ್ಪ ಸೇರಿದಂತೆ ಗಣ್ಯರು ಮತದಾನ ಮಾಡಿದರು.ಮತದಾರರ ನೀರಸ ಪ್ರತಿಕ್ರಿಯೆ

ಹೊಸಪೇಟೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ  ಶೇ44.59ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯಾದ ತಹಸೀಲದಾರ  ಪಿ.ಎಸ್. ಮಂಜುನಾಥ ತಿಳಿಸಿದ್ದಾರೆ.ತಾಲ್ಲೂಕಿನ ಒಟ್ಟು 13 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳು ಅವಿರೋಧವಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಉಳಿದ 7 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಿತು.ಮರಿಯಮ್ಮನಹಳ್ಳಿ  ವರದಿ: ಹೊಸಪೇಟೆ  ಎಪಿಎಂಸಿಯ  ಮರಿಯಮ್ಮನಹಳ್ಳಿ ಮತ್ತು ಜಿ.ನಾಗಲಾಪುರ ಕ್ಷೇತ್ರದಲ್ಲಿ ಒಟ್ಟು 10 ಬೂತ್‌ಗಳಲ್ಲಿ ನಡೆದ ಚುನಾವಣೆ ಬಹುತೇಕ ಶಾಂತಯುತವಾಗಿ ಜರುಗಿತು. ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಮಂದಗತಿಯಲ್ಲಿ ಕಾಣಿಸಿಕೊಂಡ ಮತದಾನ ಸಂಜೆವರೆಗೂ ನೀರಸವಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.