ಶನಿವಾರ, ಮೇ 8, 2021
19 °C
ಸುರಕ್ಷತಾ ಮಾರ್ಗಸೂಚಿ ಜಾರಿಗೆ ಪೊಲೀಸರ ಕಿರುಕುಳ

ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರ

ಬೆಂಗಳೂರು: ಶಾಲಾ ವಾಹನಗಳ ಸುರಕ್ಷತೆಯ ಮಾರ್ಗಸೂಚಿ ಜಾರಿಯಲ್ಲಿ ಪೊಲೀಸರ ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಿ ರಾಜ್ಯ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ ನಡೆಸುತ್ತಿರುವ ಮುಷ್ಕರ ಎರಡನೇ ದಿನವೂ ಮುಂದುವರಿದಿದೆ. ಹೀಗಾಗಿ ಗುರುವಾರವೂ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಪರದಾಡಬೇಕಾಯಿತು.ಸ್ವಂತ ವಾಹನಗಳಿರುವ ಪೋಷಕರು ಮಕ್ಕಳನ್ನು ತಮ್ಮ ವಾಹನಗಳಲ್ಲಿ ಶಾಲೆಗೆ ಬಿಟ್ಟು ಹೋದರು. ಮಕ್ಕಳನ್ನು ಶಾಲೆ ಕಳಿಸಲು ಕೆಲವು ಪೋಷಕರು ಆಟೊಗಳ ಮೊರೆ ಹೋದರೆ, ಕೆಲವರು ಬಿಎಂಟಿಸಿ ಬಸ್‌ಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ದರು. `ಮಕ್ಕಳನ್ನು ಮನೆ ಬಾಗಿಲಿನಿಂದ ಶಾಲಾ ವಾಹನಕ್ಕೆ ಹತ್ತಿಸಿ ಸುಮ್ಮನಾಗುತ್ತಿದ್ದೆವು. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟುಬರುವುದು ಎಷ್ಟು ಕಷ್ಟ ಎಂಬುದು ಈಗ ಅರಿವಿಗೆ ಬರುತ್ತಿದೆ.

ಮಗನನ್ನು ಶಾಲೆಗೆ ಕರೆದುಕೊಂಡು ಬರುವಷ್ಟರಲ್ಲಿ ಸಾಕಾಗಿ ಹೋಯಿತು. ಸಂಜೆ ಮತ್ತೆ ಬಂದು ಅವನನ್ನು ಕರೆದುಕೊಂಡು ಹೋಗಬೇಕು. ಸರ್ಕಾರವು ಚಾಲಕರ ಸಂಘದವರೊಂದಿಗೆ ಮಾತುಕತೆ ನಡೆಸಿ ಮುಷ್ಕರ ಕೈ ಬಿಡುವಂತೆ ಮನವೊಲಿಸಬೇಕು' ಎಂದು ರಾಜಾಜಿನಗರ ನಿವಾಸಿ ಸೌಮ್ಯ ಒತ್ತಾಯಿಸಿದರು.ಮಳೆಯಲ್ಲಿ ನೆಂದ ಮಕ್ಕಳು: ಶಾಲೆ ಮುಗಿಸಿಕೊಂಡು ಮನೆಗೆ ಹೋಗಲು ಪೋಷಕರು ಬರುವುದನ್ನು ಕಾಯುತ್ತಿದ್ದ  ಶಾಲಾ ಮಕ್ಕಳು ಗುರುವಾರ ಸಂಜೆ ನೆನೆಯಬೇಕಾದ ಪರಿಸ್ಥಿತಿ ಎದುರಾಯಿತು. ಶಾಲೆ ಬಿಟ್ಟ ತಕ್ಷಣ ಶಾಲಾ ವಾಹನಗಳನ್ನು ಏರಿ ಕುಳಿತುಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಗುರುವಾರ ವಾಹನಗಳಿಲ್ಲದೇ ಮಳೆಯಲ್ಲಿ ನೆಂದರು.`ಐದು ಗಂಟೆಗೆ ಬಂದು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದು ಅಮ್ಮ ಹೇಳಿದ್ದರು. ಆದರೆ, ನಾಲ್ಕು ಗಂಟೆಯಿಂದಲೇ ಮಳೆ ಜೋರಾಗಿತ್ತು. ನಾಲ್ಕೂವರೆ ಹೊತ್ತಿಗೆ ಮಳೆ ಕಡಿಮೆಯಾಗಿತ್ತು. ನಾವು ಶಾಲೆಯಿಂದ ಹೊರಗೆ ಬಂದ ನಂತರ ಮಳೆ ಜೋರಾಗಿ ನೆಂದು ಹೋದೆವು. ಅಮ್ಮ ಇನ್ನೂ ಬಂದಿಲ್ಲ' ಎಂದು ನಂದಿನಿ ಲೇಔಟ್‌ನ ಆಕ್ಸ್‌ಫರ್ಡ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ದಿಲೀಪ್ ತನ್ನ ತೊಂದರೆ ಹೇಳಿಕೊಂಡ.`ಮಳೆಯಿಂದಾಗಿ ಬೈಕ್‌ನಲ್ಲಿ ಬರುವುದು ಕಷ್ಟವಾಯಿತು. ಮಳೆ ನಿಂತ ಮೇಲೆ ಬಂದು ನೋಡಿದರೆ ಮಗಳು ಮಳೆಯಲ್ಲಿ ನೆಂದು ಹೋಗಿದ್ದಾಳೆ. ಮಳೆಯಲ್ಲಿ ನೆನೆಯುವುದು ಮಕ್ಕಳಿಗೆ ಖುಷಿ. ಆದರೆ, ಆನಂತರ ಶೀತ ನೆಗಡಿ ಹೆಚ್ಚಾದರೆ ಎಂಬುದು ನಮ್ಮ ಆತಂಕ. ಮುಷ್ಕರ ಎಂದು ಮುಗಿಯುತ್ತದೋ ಗೊತ್ತಿಲ್ಲ. ಅಲ್ಲಿಯವರೆಗೂ ಈ ತೊಂದರೆ ತಪ್ಪಿದ್ದಲ್ಲ' ಎಂದು ಸುಬ್ರಹ್ಮಣ್ಯನಗರದ ಈಸ್ಟ್‌ವೆಸ್ಟ್ ಶಾಲೆಯಿಂದ ಮಗಳನ್ನು ಕರೆದುಕೊಂಡು ಹೋಗಲು ಬಂದಿದ್ದ ಶಾಲಿನಿ ಅಸಮಾಧಾನ ವ್ಯಕ್ತಪಡಿಸಿದರು.ಚಾಲಕರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಿ: `ನೂತನ ಮಾರ್ಗಸೂಚಿಯಿಂದ ಶಾಲಾ ವಾಹನಗಳ ಚಾಲಕರಿಗೆ ಅನ್ಯಾಯವಾಗುತ್ತಿದೆ. ಚಾಲಕರ ಮುಷ್ಕರದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತೊಂದರೆಯಾಗುತ್ತಿದೆ. 15 ವರ್ಷಕ್ಕಿಂತ ಹಳೆಯ ವಾಹನಗಳ ಬದಲಿಗೆ ಹೊಸ ವಾಹನಗಳನ್ನು ಕೊಳ್ಳಲು ಬಹುಪಾಲು ಚಾಲಕರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಸರ್ಕಾರ ಮಾರ್ಗಸೂಚಿ ನಿಯಮಗಳನ್ನು ಸಡಿಲಿಸಿ ಚಾಲಕರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು' ಎಂದು ಅಖಿಲ ಭಾರತೀಯ ಸಂಯುಕ್ತ ಕಾರ್ಮಿಕ ಸಂಘಟನೆ (ಎಐಯುಟಿಯುಸಿ) ಒತ್ತಾಯಿಸಿದೆ.`ನಿಯಮ ಜಾರಿ ಹೆಸರಿನಲ್ಲಿ ಸಂಚಾರ ಪೊಲೀಸರು ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ. ವಾಹನಗಳನ್ನು ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಇರುವ ಸಮಸ್ಯೆಯನ್ನು ಬಗೆಹರಿಸಿ, ಚಾಲಕರಿಗೆ ನ್ಯಾಯ ಒದಗಿಸುವ ಜತೆಗೆ ವಿದ್ಯಾರ್ಥಿಗಳ ತೊಂದರೆಯನ್ನೂ ತಪ್ಪಿಸಬೇಕು' ಎಂದು ಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಕೆ.ರಾಧಾಕೃಷ್ಣ ಆಗ್ರಹಿಸಿದ್ದಾರೆ.

ಶನಿವಾರ ಬೃಹತ್ ಪ್ರತಿಭಟನೆ

`ಸರ್ಕಾರ ನಮ್ಮ ಬೇಡಿಕೆಗಳಿಗೆ ಒಪ್ಪದಿದ್ದರೆ ಶುಕ್ರವಾರವೂ ಮುಷ್ಕರ ಮುಂದುವರಿಯಲಿದೆ. ಅಲ್ಲದೇ ಶನಿವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಚಾಲಕರ ಸಮಸ್ಯೆಗಳು ಸರ್ಕಾರಕ್ಕೆ ಮುಖ್ಯವಾಗುತ್ತಿಲ್ಲ. ಹೀಗಾಗಿ ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೆಳೆಯುತ್ತೇವೆ'

    -ಪಿ.ಎಸ್. ಷಣ್ಮುಗಂ

ಅಧ್ಯಕ್ಷರು, ರಾಜ್ಯ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ

ಸರ್ಕಾರ ಮಧ್ಯ ಪ್ರವೇಶಿಸಬೇಕು

`ಮುಷ್ಕರದಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಚಾಲಕರ ಸಂಘದ ಪದಾಧಿಕಾರಿಗಳ ಜತೆಗೆ ಮಾತುಕತೆ ನಡೆಸಬೇಕು. ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಸರ್ಕಾರ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು'

- ಎಂ.ಆರ್. ಶ್ರೀಹರಿ

ಸಾರಿಗೆ ತಜ್ಞ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.