ಮಂಗಳವಾರ, ಮೇ 24, 2022
30 °C

ಎರಡು ತಾಲ್ಲೂಕು ಬರ ಪಟ್ಟಿಯಿಂದ ಹೊರಕ್ಕೆ: ಆಕ್ರೋಶ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

 ರಾಮನಗರ: ಜಿಲ್ಲೆಯ ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿರುವ ರಾಜ್ಯ ಸರ್ಕಾರವು ಜೆಡಿಎಸ್ ಶಾಸಕರನ್ನು ಹೊಂದಿರುವ ರಾಮನಗರ ಮತ್ತು ಮಾಗಡಿ ತಾಲ್ಲೂಕುಗಳನ್ನು ಈ ಪಟ್ಟಿಯಿಂದ ಕೈಬಿಟ್ಟಿರುವುದು ರೈತರು ಮತ್ತು ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.`ರಾಮನಗರ ಮತ್ತು ಮಾಗಡಿ ಭಾಗದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದರಿಂದ ಶೇ 50ಕ್ಕಿಂತ ಹೆಚ್ಚು ಬೆಳೆಗಳು ನಾಶವಾಗಿದೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಇನ್ನಷ್ಟು ನಷ್ಟ ಸಂಭವಿಸಿ, ರೈತರು ಬೀದಿಪಾಲಾಗುತ್ತಾರೆ~ ಎಂದು ರಾಮನಗರದ ಶಾಸಕ ಕೆ.ರಾಜು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ಮತ್ತು ತಾಲ್ಲೂಕುಗಳ ಕೃಷಿ ಅಧಿಕಾರಿಗಳು ಸರ್ಕಾರಕ್ಕೆ ಸೂಕ್ತ ವರದಿ ಮತ್ತು ಮಾಹಿತಿ ನೀಡಿಲ್ಲ. ಅಲ್ಲದೆ ಸರ್ಕಾರ ಕೂಡ ರಾಜಕೀಯ ದೃಷ್ಟಿಯಿಂದಲೇ ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಟ್ಟಿದೆ ಎಂಬ ಭಾವನೆ ಬರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ನೀರಾವರಿ ಪ್ರದೇಶ ಹೊಂದಿರುವ ಮಂಡ್ಯ ಮತ್ತು ಮದ್ದೂರನ್ನು ಬರ ಪೀಡಿತ ಪ್ರದೇಶ ಎಂದು ಸರ್ಕಾರ ಹೇಳುತ್ತದೆ ಎಂದರೆ, ಆ ಭಾಗದ ಕೃಷಿ ಅಧಿಕಾರಿಗಳು ಸೂಕ್ತ ಮತ್ತು ಸಮರ್ಪಕವಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದಾರೆ ಎಂದರ್ಥ. ಬಯಲು ಸೀಮೆಯಾದ ರಾಮನಗರ ಮತ್ತು ಮಾಗಡಿಯನ್ನು ಈ ಪಟ್ಟಿಯಿಂದ ಕೈಬಿಟ್ಟಿದೆ ಎಂದರೆ ಇಲ್ಲಿನ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ ಎಂದು ಅರ್ಥ ಬರುತ್ತದೆ. ಅಥವಾ ಸರ್ಕಾರವೇ ರಾಜಕೀಯ ಮಾಡುತ್ತಿದೆ ಅನಿಸುತ್ತದೆ~ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಜಿಲ್ಲೆಯ ಈ ಎರಡೂ ತಾಲ್ಲೂಕುಗಳನ್ನು ಬರಪಟ್ಟಿಗೆ ಸೇರಿಸಿ ಇಲ್ಲಿನ ರೈತರಿಗೆ ಬೆಳೆ ನಷ್ಟ ತುಂಬಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.`ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಬರ ಪಟ್ಟಿ ಸಿದ್ಧಪಡಿಸಿದೆ. ಬರ ಪೀಡಿತ ಪ್ರದೇಶಗಳಾದ ರಾಮನಗರ ಮತ್ತು ಮಾಗಡಿಯನ್ನು ವಿವಿಧ ಕಾರಣಗಳಿಂದ ಬರ ಪಟ್ಟಿಯಿಂದ ಕೈಬಿಟ್ಟಿರುವುದು ಖಂಡನೀಯ~ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ ಟೀಕಿಸಿದ್ದಾರೆ.ಈ ಕುರಿತು ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ರಾಮನಗರ ತಾಲ್ಲೂಕಿನಲ್ಲಿ ಶೇ 50 ಬೆಳೆ ನಷ್ಟವಾಗಿದೆ. ಮಳೆಯಾಧಾರಿತ ಮತ್ತು ನೀರಾವರಿ ಆಧಾರಿತ ಬೆಳೆಗಳು ನಾಶವಾಗುತ್ತಿವೆ. ಈ ಕುರಿತು ವರದಿ ನೀಡಲಾಗಿದೆ. ಸರ್ಕಾರ ಬರ ಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ನಾವೇನು ಮಾಡಲು ಆಗುವುದಿಲ್ಲ. ಸ್ಥಳೀಯ ಜನ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.`ನಾವು ಆಯ್ಕೆ ಮಾಡಿದ ಜನ ಪ್ರತಿನಿಧಿಗಳು ಬರ ಸಂದರ್ಭದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ರೈತರ ಬೆಳೆಗಳು ನಾಶವಾಗುತ್ತಿದ್ದರೂ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿಲ್ಲ. ಸರ್ಕಾರದ ಗಮನ ಸೆಳೆಯುವ ಕೆಲಸಗಳನ್ನು ಮಾಡುತ್ತಿಲ್ಲ. ರೈತರ ವಿಷಯದಲ್ಲಿ ಸರ್ಕಾರ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಆಟ ಆಡುತ್ತಿದ್ದಾರೆ. ಸರ್ಕಾರ ಮತ್ತು ಸ್ಥಳೀಯ ಶಾಸಕರ ರಾಜಕೀಯದ ಆಟದಿಂದ ನೋವಾಗುತ್ತಿರುವುದು ಮಾತ್ರ ರೈತರಿಗೆ ಎಂಬ ವಿಷಯ ಅವರಿಗೇಕೆ ಗೊತ್ತಾಗುತ್ತಿಲ್ಲ~ ಎಂದು ರೈತ ರಂಗಪ್ಪ ಕಳವಳ ವ್ಯಕ್ತಪಡಿಸಿದರು.`ಸೆಪ್ಟೆಂಬರ್ ತಿಂಗಳಲ್ಲಿ ರಾಮನಗರದಲ್ಲಿ 177.8 ಮಿ.ಮೀ ವಾಡಿಕೆ ಮಳೆಯಾಗಿದ್ದರೆ ಬಂದಿರುವುದು ಕೇವಲ 60 ಮಿ.ಮೀ. ಅಕ್ಟೋಬರ್‌ನಲ್ಲಿ ಇಲ್ಲಿಯವರೆಗೆ 24 ಮಿ.ಮೀ ಮಳೆ ಬಂದಿದೆ. ರಾಗಿ ಒಣಗುತ್ತಿದ್ದರೆ, ಕೆಲ ಭಾಗದಲ್ಲಿ ಬತ್ತ ಬೆಂಕಿ ರೋಗ, ಕಾಂಡ ಕೊರೆಯುವ ರೋಗಕ್ಕೆ ತುತ್ತಾಗುತ್ತಿದೆ~ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

 

ಮಾಗಡಿ: ಬರ ಪೀಡಿತವೆಂದು ಘೋಷಿಸಲು ಆಗ್ರಹ

ಮಾಗಡಿ: ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದೆ. ಬಿತ್ತಿದ್ದ ಬೆಳಗಳೆಲ್ಲಾ ಒಣಗಿ, ರೈತರು ಆಕಾಶ ನೋಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರ ಮಾತ್ರ ಮೀನಾ-ಮೇಷ ಏಣಿಸುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎ. ಮಂಜು ಟೀಕಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಅ.9ರೊಳಗೆ ಮಾಗಡಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ, ಮಾಗಡಿಯ ರಂಗನಾಥ ಸ್ವಾಮಿ ನೂತನ ಕಿರೀಟಧಾರಣ ಸಮಾರಂಭಕ್ಕೆ ಆಗಮಿಸುವ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ರಾಮನಗರ ಜಿಲ್ಲೆಯ ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ ಡಾ. ನಂಜುಂಡಪ್ಪ ವರದಿಯಲ್ಲಿ ತೀರಾ ಹಿಂದುಳಿದ ತಾಲ್ಲೂಕು ಎಂದು ಗುರುತಿಸಿರುವ ಮಾಗಡಿಯನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಎ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತಾಲ್ಲೂಕಿನ ಮಾಡ್‌ಬಾಳ್, ತಿಪ್ಪಸಂದ್ರ, ಕಸಬಾ ಹೋಬಳಿಗಳಲ್ಲಿ ಕುಡಿಯುವ ನೀರಿಗೆ ಪರದಾಡಬೇಕಿದೆ. ರಾಜ್ಯ 70 ಬರಪೀಡಿತ ತಾಲ್ಲೂಕುಗಳಲ್ಲಿ ಮಾಗಡಿ ಮೊದಲಿರಬೇಕಿತ್ತು. ಸ್ಥಳೀಯ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹೀಗಾಗಿದೆ ಎಂದು ಡಿಸಿಸಿ ಸದಸ್ಯ ಜುಟ್ಟನಹಳ್ಳಿ ಜಯರಾಮಯ್ಯ ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್ ಮತ್ತು ಮಾಡ್‌ಬಾಳ್ ಸಿ.ಜಯರಾಮು  ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಮಂಜುನಾಥ್, ಬಿಡದಿ ಹೋಬಳಿಯ ಅಧ್ಯಕ್ಷ ಎ.ಎನ್.ನಟರಾಜ್, ಕಾಂಗ್ರೆಸ್ ಮುಖಂಡರಾದ ಬಿ.ಎಸ್‌ಕುಮಾರ್, ಕೆಂಪಣ್ಣ, ಕಬ್ಬಡ್ಡಿ ಕೃಷ್ಣಪ್ಪ, ದೊಡ್ಡಯ್ಯ, ನರಸಿಂಹಯ್ಯ,  ಹಮತ್ ಉಲ್ಲಾ ಖಾನ್ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.