ಮಂಗಳವಾರ, ಮೇ 11, 2021
25 °C
ಅಕ್ರಮ ಮರಳು ಗಣಿಗಾರಿಕೆ ತಡೆಗೆ ಕ್ರಮ

ಎರಡು ದಿನ ನಿಷೇಧಾಜ್ಞೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ಮುಂದಾಗಿರುವ ಜಿಲ್ಲಾಡಳಿತ ರಾಮನಗರದ ಅರ್ಕಾವತಿ ಮತ್ತು ಚನ್ನಪಟ್ಟಣದ ಕಣ್ವ ನದಿ ಪಾತ್ರದಲ್ಲಿ ಎರಡು ತಿಂಗಳವರೆಗೆ ಭಾರತೀಯ ದಂಡ ಸಂಹಿತೆ 144ರ ಕಲಂ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿದೆ.ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆ, ಫಿಲ್ಟರ್ ಮರಳು ದಂಧೆ ಮತ್ತು ಮರಳು ಸಾಗಾಣೆ ಕುರಿತು ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು. ವಾರದಲ್ಲಿ ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸಿ ವರದಿ ನೀಡುವಂತೆಯೂ ಅವರು ತಾಕೀತು ಮಾಡಿದರು.ಇದರ ಹಿನ್ನೆಲೆಯಲ್ಲಿಯೇ ರಾಮನ ಗರ ಉಪ ವಿಭಾಗಾಧಿಕಾರಿ ಡಾ.ಎಂ. ಎನ್.ರಾಜೇಂದ್ರ ಪ್ರಸಾದ್ ಅವರು ಎರಡು ತಿಂಗಳ ನಿಷೇಧಾಜ್ಞೆ ಜಾರಿಗೊಳಿಸಿ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಬ್ರಹ್ಮಾಸ್ತ್ರ ಝಳಪಿಸಿದ್ದಾರೆ. ಈ ಅವಧಿಯಲ್ಲಿ ಅರ್ಕಾವತಿ ಹಾಗೂ ಕಣ್ವ ನದಿ ಪಾತ್ರಗಳ ಸುತ್ತಮುತ್ತಲಿನ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಣಿಕೆ ಮಾಡುವುದನ್ನು ಹಾಗೂ ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರು ಅಥವಾ ಅಕ್ರಮ ಮರಳು ಸಾಗಾಣಿಕೆದಾರರು ಐದು ಜನರಿಗಿಂತ ಹೆಚ್ಚಿಗೆ ಗುಂಪುಗಾರಿಕೆ ಸೇರುವುದನ್ನು ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.ರಾಮನಗರ ಹಾಗೂ ಚನ್ನಪಟ್ಟಣ  ತಾಲ್ಲೂಕು ಪ್ರದೇಶದಲ್ಲಿ ಮರಳುಗಾರಿಕೆಯನ್ನು ಸರ್ಕಾರ ನಿಷೇಧಿಸಿದ್ದು, ಇದನ್ನು ಈ ಹಿಂದೆಯೇ ನಿಷೇಧಿತ ಪ್ರದೇಶ ಎಂದು ಘೋಷಿಸಿದೆ. ಆದರೂ ಅರ್ಕಾವತಿ ಹಾಗೂ ಕಣ್ವ ನದಿ ಪಾತ್ರಗಳಲ್ಲಿ ಬರುವ ಸುತ್ತಮುತ್ತಲಿನ ಗ್ರಾಮಗಳ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಅಕ್ರಮವಾಗಿ ಮರಳನ್ನು ಆಳವಾಗಿ ತೆಗೆದು ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿ ಹಾಗೂ ಸರ್ಕಾರದ ಸಂಪತ್ತು ಲೂಟಿ ಮಾಡುತ್ತಿರುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ಗುರುವಾರದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಆದೇಶದಲ್ಲಿ ಹೇಳಿದ್ದಾರೆ.ಸದರಿ ನಿಷೇಧಿತ ಪ್ರದೇಶದಲ್ಲಿ ದೋಣಿಗಳನ್ನು ಅಳವಡಿಸಿ ಮರಳು ಫಿಲ್ಟರ್ ಮಾಡುವುದನ್ನು, ಭಾರಿ ವಾಹನಗಳಾದ ಲಾರಿಗಳು, ಟಿಪ್ಪರ್‌ಗಳು, ಜೆ.ಸಿ.ಬಿ, ಟ್ರ್ಯಾಕ್ಟರ್ ಮತ್ತು ಇತರೆ ವಾಹನಗಳು ಓಡಾಡುವುದನ್ನು, ಮರಳು ಉತ್ಪಾದನೆ ಮತ್ತು ಎತ್ತುವಳಿ ಮಾಡುವುದನ್ನು ಹಾಗೂ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಆಯುಧ ಹಿಡಿದು ತಿರುಗಾಡುವುದನ್ನು ನಿಷೇಧಿಸಿರುವುದಾಗಿ ಆದೇಶದಲ್ಲಿ ಹೇಳಲಾಗಿದೆ. ಆದೇಶವನ್ನು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ.ಕಳೆದ ವರ್ಷ ರಾಮನಗರದ ತಹಶೀಲ್ದಾರ್ ಅವರು ತಾಲ್ಲೂಕಿನಲ್ಲಿ ಹರಿಯುವ ಅರ್ಕಾವತಿ ನದಿ ಪಾತ್ರದ ಸುತ್ತಮುತ್ತ ಒಂದು ತಿಂಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ನಿಷೇಧಾಜ್ಞೆ ಅವಧಿ ಮುಗಿದ ನಂತರ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಇದೀಗ ಪುನಃ ನಿಷೇಧಾಜ್ಞೆ ಜಾರಿಯಾಗಿದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.