ಮಂಗಳವಾರ, ಮೇ 11, 2021
27 °C

ಎಲ್ಲಿ ನೋಡಿದರೂ ನಿಂಬೆ

-ರಮೇಶ ವಿ ಬಳ್ಳಾ . Updated:

ಅಕ್ಷರ ಗಾತ್ರ : | |

ವರ ತೋಟದಲ್ಲಿ ಎಲ್ಲಿ ನೋಡಿದರೂ ನಿಂಬೆ ಹಣ್ಣುಗಳೇ. ಇವುಗಳ ಭಾರಕ್ಕೆ ಗಿಡಗಳೂ ಬಾಗಿದ್ದರೆ ನೆಲಕ್ಕೆ ಬಿದ್ದು ಅಲ್ಲೂ ನಿಂಬೆಮಯವಾಗಿದೆ. ಇದು ಬೀಳಗಿ ತಾಲ್ಲೂಕಿನ ಕುಂದರಗಿಯ ರೈತ ದುಂಡಪ್ಪ ಯಂಕಪ್ಪ ಹಳ್ಳಿಯವರ ನಿಂಬೆ ತೋಟದ ನೋಟ. ಇದು ಸಾವಯವದ ಚಮತ್ಕಾರವೂ ಹೌದು.ಇವರು ತಮ್ಮಲ್ಲಿರುವ ಜಮೀನಿನ ಪೈಕಿ ಎರಡೂವರೆ ಎಕರೆಯಲ್ಲಿ 300 ನಿಂಬೆ ಗಿಡಗಳನ್ನು ಬೆಳೆದಿದ್ದಾರೆ. ಸಂಪೂರ್ಣ ನೀರಾವರಿಯ ಅನುಕೂಲತೆಯಿಂದ ತೋಟದ ಬೆಳೆಗಳು ಚೆನ್ನಾಗಿಯೇ ಬೆಳೆಯುತ್ತಿವೆ. ಆದರೆ ನೀರಿಕ್ಷೆಗೂ ಮೀರಿ ಈ ವರ್ಷ ನಿಂಬೆ ಅಧಿಕ ಆದಾಯ ನೀಡಿರುವುದು ದುಂಡಪ್ಪನವರ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ.ಸಾವಯವ ಸಂಸ್ಕಾರ

ಭರಪೂರ ಹಣ್ಣುಗಳಿಂದ ತುಂಬಿಕೊಂಡು ನಳನಳಿಸುತ್ತಿರುವ ನಿಂಬೆ ತೋಟದ ಹಿಂದಿನ ಗುಟ್ಟು ಸಾವಯವ ಪದ್ಧತಿ. ಇವರು 20 ದನಕರು, 80 ಕುರಿಗಳನ್ನು ಸಾಕುತ್ತಿದ್ದಾರೆ. ಜೊತೆಗೆ 8 ಎರೆಹುಳು ಘಟಕಗಳನ್ನು ನಿರ್ಮಿಸಿಕೊಂಡು ಎರೆಗೊಬ್ಬರ ತಯಾರಿಕೆಯಲ್ಲಿ ತೊಡಗಿದ್ದಾರೆ. ಈ ದನಕರುಗಳ ಸಗಣಿ, ಗಂಜಲುಗಳನ್ನು ಯಥೇಚ್ಛವಾಗಿ ತೋಟಗಳಿಗೆ ಬಳಸಲಾಗುತ್ತಿದೆ.

ಕುರಿಗಳು ಜಮೀನಿನಲ್ಲಿಯೇ ಹಿಕ್ಕೆ ಹಾಕುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿಕ್ಕೆಗಳನ್ನು ದೊಡ್ಡಿಗಳಿಂದ ಕೂಡಿಟ್ಟು ಜಮೀನುಗಳಲ್ಲಿ ಹರಡಲಾಗುತ್ತದೆ. ರಾಸಾಯನಿಕವನ್ನು ಇವರು ಎಂದಿಗೂ ಬಳಸಿಲ್ಲ.ಸಾವಯವ ರೀತಿ ಬೆಳೆದ ನಿಂಬೆಯಿಂದ ಈ ವರ್ಷ ಭರ್ಜರಿ ಆದಾಯ ಬಂದಿದೆ.

ಕಳೆದ ವರ್ಷವೊಂದರಲ್ಲಿಯೇ ಇವರು ಆರು ಲಕ್ಷ ರೂಪಾಯಿಗಳ ಆದಾಯ ಪಡೆದಿದ್ದರೆ, ಕಳೆದ ಫೆಬ್ರುವರಿ ತಿಂಗಳೊಂದರಲ್ಲಿಯೇ ಸುಮಾರು 80 ಸಾವಿರ ರೂಪಾಯಿ ಇವರ ಜೇಬು ಸೇರಿದೆ. ಬೇಸಿಗೆಯಲ್ಲಿ ಇಮ್ಮಡಿ ಆದಾಯ. ನೇರ ಮಾರುಕಟ್ಟೆಯ ಮೂಲಕ ನಿಂಬೆಯ ವಹಿವಾಟು ಮಾಡುತ್ತಿರುವ ಇವರು, ಹುಬ್ಬಳ್ಳಿ, ಬಾಗಲಕೋಟಗೆ ನಿಂಬೆ ಸಾಗಿಸಿರುತ್ತಾರೆ.ದುಂಡಪ್ಪನವರು ಅಲ್ಲಲ್ಲಿ ನಡೆಯುವ ಕೃಷಿ ಮೇಳಗಳು, ಪ್ರದರ್ಶನಗಳಿಗೆ ಭೇಟಿ ನೀಡುತ್ತಾರೆ. ಹೊಸ ಹೊಸ ಬೆಳೆ ವಿಧಾನಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಯೋಗಶೀಲರಾಗುತ್ತಾರೆ. ಸಂಪರ್ಕಕ್ಕೆ :9900129660.

-ರಮೇಶ ವಿ ಬಳ್ಳಾ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.