ಮಂಗಳವಾರ, ಏಪ್ರಿಲ್ 13, 2021
30 °C

ಎಲ್ಲೆಡೆ ನೀರಿಗಾಗಿ ನಿಲ್ಲದ ತತ್ವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ:  ಮೋಡ ಕವಿದ ವಾತಾವರಣ, ಆದರೆ ಮಳೆ ಇಲ್ಲ. ತಾಲ್ಲೂಕಿನ ನಗರ ಪ್ರದೇಶಕ್ಕೆ ನೀರು ಒದಗಿಸುತ್ತಿದ್ದ ಚಿತ್ರಾವತಿ ನದಿ ಬ್ಯಾರೇಜ್ ದಿನೇ ದಿನೇ ಬತ್ತುತ್ತಿದೆ. ತಾಲ್ಲೂಕಿನ ಗ್ರಾಮೀಣ ಜನತೆ ಬಹುಪಾಲು ಕೊಳವೆ ಬಾವಿ, ಕೆರೆಗಳ ಮೇಲೆ ಅವಲಂಬಿಸಿದ್ದಾರೆ. ಆದರೆ ಅಂತರ್ಜಲ ಪ್ರಮಾಣ ಕುಸಿದು ಕೆರೆ, ಕೊಳವೆ ಬಾವಿಗಳಲ್ಲೂ ನೀರು ಬತ್ತಿ, ಹನಿ ನೀರಿಗೂ ಹಾಹಾಕಾರ ಏರ್ಪಟ್ಟಿದೆ.ತಾಲ್ಲೂಕಿನಲ್ಲಿ ಒಟ್ಟು 405 ಕೆರೆ ಇದೆ. ಈ ಪೈಕಿ 373 ಚಿಕ್ಕ ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ, 32 ದೊಡ್ಡ ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ ಸೇರುತ್ತವೆ. 40 ಎಕರೆಗಿಂತ ಕಡಿಮೆ ವಿಸ್ತೀರ್ಣ ಇರುವ ಕೆರೆಗಳು ಜಿಲ್ಲಾ ಪಂಚಾಯಿತಿ ತಾಂತ್ರಿಕ ಇಲಾಖೆ ವ್ಯಾಪ್ತಿಗೆ, 40 ಎಕರೆಗೆ ಮೇಲ್ಪಟ್ಟು 140 ಎಕರೆ ಅಚ್ಚುಕಟ್ಟು ಪ್ರದೇಶದ ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ ಸೇರುತ್ತವೆ. ಇನ್ನು ರಾಜ ಮಹಾರಾಜರು, ಪಾಳೇಗಾರರು, ಆಂಗ್ಲರ ಆಳ್ವಿಕೆ ಕಾಲದಲ್ಲಿ ನಿರ್ಮಿಸಿದ ರಾಜಕಾಲುವೆ ಹಾಗೂ ಕೆರೆಗಳಂತೂ ಈಗ ಅಸ್ತಿತ್ವವನ್ನೆ ಕಳೆದುಕೊಂಡಿವೆ.ಗ್ರಾಮೀಣ ಪ್ರದೇಶದ ಸಮಸ್ಯೆ: ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿಯ ಏಟಿಗಡ್ಡಪಲ್ಲಿ, ಪುಟ್ಟಪರ್ತಿ, ಮಾಕಿರೆಡ್ಡಿಪಲ್ಲಿ, ದೇವರಗುಡಿಪಲ್ಲಿ-ಮಾಕಿರೆಡ್ಡಿಪಲ್ಲಿ, ಯಲ್ಲಂಪಲ್ಲಿ-ಪಾಕಪಟ್ಲಪಲ್ಲಿ, ಆಚೇಪಲ್ಲಿ ಕಾಲೊನಿ, ಲಗುಮದ್ದೇಪಲ್ಲಿ, ಯಲ್ಲಂಪಲ್ಲಿ, ಐವಾರಪಲ್ಲಿ, ಟೆಂಕಾಯಿಮಾಕಲಪಲ್ಲಿ, ಮಿಟ್ಟೇಮರಿ-ಪೊಟ್ಲವಾರಿಪಲ್ಲಿ, ಚೊಕ್ಕಂಪಲ್ಲಿ, ಜೀಗಾನಪಲ್ಲಿ, ಚಿನ್ನಓಬಯ್ಯಗಾರಿಪಲ್ಲಿ, ಕಾನಗಮಾಕಲಪಲ್ಲಿ-ಅರಿಗೇಪಲ್ಲಿ, ಕೊತ್ತಕೋಟೆ-ಮದಕವಾರಿಪಲ್ಲಿ, ಪೆಸಲಪರ್ತಿ, ಕೊತ್ತಕೋಟೆ, ವಡ್ರಹಳ್ಳಿ, ಗೊರ್ತಪಲ್ಲಿ-ಡಿ.ಕೊತ್ತಪಲ್ಲಿ, ಬಿಳ್ಳೂರು-ಎಗವಮಿದ್ದಿಲು, ಬೋಯಿಪಲ್ಲಿ, ಉಗ್ರಾಣಂಪಲ್ಲಿ, ಬಾಬೇನಾಯ್ಕನಪಲ್ಲಿ, ನಾರೇಮದ್ದೇಪಲ್ಲಿ-ಕುರುಬಲಪಲ್ಲಿ, ಜಂಗಾಲಪಲ್ಲಿ, ಬೆಸ್ತಲಪಲ್ಲಿ, ದೊಡ್ಡಿವಾರಿಪಲ್ಲಿ, ಪುಲಗಲ್-ಸೀತರೆಡ್ಡಿಪಲ್ಲಿ, ನಲ್ಲಗುಟ್ಲಪಲ್ಲಿ-ಕೊತ್ತಕೋಟವಾಂಡ್ಲಪಲ್ಲಿ, ಪಾಳ್ಯಕೆರೆ-ಪೆದ್ದರಾಜಪಲ್ಲಿ, ಚೇಳೂರು-ಬೈರಪ್ಪನಹಳ್ಳಿ, ರಾಶ್ಚೆರವು-ಕುರುಬವಾಂಡ್ಲಪಲ್ಲಿ, ತಿಮ್ಮಂಪಲ್ಲಿ-ಬ್ರಾಹ್ಮರಹಳ್ಳಿ, ಗುಟ್ಟಪಾಳ್ಯ, ಮುಲ್ಲಂಗಿಚೆಟ್ಲಪಲ್ಲಿ, ಗುಜ್ಜವಾಂಡ್ಲಪಲ್ಲಿ, ಯಗವಮದ್ದಲಖಾನೆ, ದಿಗವಮದ್ದಲಖಾನೆ, ನರಾವುಲಪಲ್ಲಿ, ದೋರಣಾಲಪಲ್ಲಿ ಗ್ರಾಮಗಳ ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗಿ, ಸಮಸ್ಯೆ ತೀವ್ರವಾಗಿದೆ.24 ಗ್ರಾಮ ಪಂಚಾಯಿತಿಗಳಲ್ಲಿ 409 ಕೊಳವೆ ಬಾವಿ ಕೊರೆಸಲಾಗಿತ್ತು. ಆ ಪೈಕಿ 367 ಕೊಳವೆ ಬಾವಿ ಕಾರ್ಯನಿರ್ವಹಿಸುತ್ತಿದೆ. ಇನ್ನು190 ಕೈಪಂಪುಗಳ ಪೈಕಿ 34 ಕಾರ್ಯ ನಿರ್ವಹಿಸುತ್ತಿದೆ. ತೊಳ್ಳಪಲ್ಲಿ-20, ಜೂಲಪಾಳ್ಯ-24, ತಿಮ್ಮಂಪಲ್ಲಿ-20, ಚೇಳೂರು-18, ಕೊತ್ತಕೋಟೆ-13, ಘಂಟಂವಾರಿಪಲ್ಲಿ-13, ದೇವರಗುಡಿಪಲ್ಲಿ-19, ನಾರೇಮದ್ದೇಪಲ್ಲಿ-12 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ.  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಪೈಪ್‌ಲೈನ್ ವ್ಯವಸ್ಥೆ ಇದ್ದು, ಕುಡಿಯುವ ನೀರಿನ ಮಿನಿ ಸರಬರಾಜು ಕೇಂದ್ರ 300, ಕೈ ಪಂಪುಗಳು 862 ಇವೆ.ಇಷ್ಟೆಲ್ಲ ನೀರಿನ ಮೂಲಗಳಿದ್ದರೂ ತಾಲ್ಲೂಕಿನಲ್ಲಿ ಕುಡಿಯವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಒಂದೆಡೆ ಬರಗಾಲದ ಛಾಯೆಯಿದ್ದರೆ, ಮತ್ತೊಂದೆಡೆ ಜಾನುವಾರುಗಳಿಗೆ ಮೇವು-ಕುಡಿಯುವ ನೀರಿನ ಸಮಸ್ಯೆ. ಕೆಲ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸಿದ್ದರೂ ಪಂಪ್ ಮೋಟಾರ್, ವಿದ್ಯುತ್ ಸಂಪರ್ಕ ಕಲ್ಪಿಸದೆ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಕೆಲ ಪ್ರಭಾವಿಗಳ ಮನೆಗಳಿಗೆ ನೀರು ಸರಬರಾಜು ಆಗುತ್ತದೆ. ಉಳಿದವರಿಗೆ ಬಿಂದಿಗೆ ನೀರೇ ಗತಿ ಎಂಬಂತಾಗಿದೆ.`ಗ್ರಾಮದಲ್ಲಿ 80 ಮನೆ ಇದೆ. 750 ಅಡಿ ಕೊರೆಸಿರುವ ಕೊಳವೆಬಾವಿಗೆ ಸುಮಾರು 35 ಪೈಪು ಬಿಟ್ಟಿದ್ದಾರೆ. ಆದರೆ 5 ತಿಂಗಳಿಂದ ಕುಡಿಯುವ ನೀರಿಗೆ ತೊಂದರೆ ಆಗಿದೆ. ಖಾಸಗಿ ಕೊಳವೆಬಾವಿ ಹಾಗೂ ಬಾವಿಗಳಿಂದ ನೀರು ತರಬೇಕಾಗಿದೆ. ಮಳೆ ಇಲ್ಲದ ಈ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರ ಕುಡಿಯುವ ನೀರು ಕಲ್ಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ~ ಎಂದು ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗುಚಿನ್ನೇಪಲ್ಲಿ ಗ್ರಾಮದ ಗಿರಿಜಮ್ಮ `ಪ್ರಜಾವಾಣಿ~ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.