ಸೋಮವಾರ, ಜನವರಿ 20, 2020
17 °C

ಎಳ್ಳು-ಬೆಲ್ಲದ ಸಿಹಿ; ಸಂಕ್ರಮಣದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಸಿದ್ಧೇಶ್ವರ ದೇವಸ್ಥಾನದ ಎದುರು ಭಾನುವಾರ ಕಂಡಿದ್ದು ಸ್ನೇಹ ಬೆಸೆಯುವ ಸಂಭ್ರಮ. ಸಂಕ್ರಾಂತಿಯ ಅಂಗವಾಗಿ ಜನತೆ ಪರಸ್ಪರ ಎಳ್ಳು-ಬೆಲ್ಲವ ಬೀರಿ ತಮ್ಮ ಸೇಹ ಮತ್ತು ಸೌಹಾರ್ದತೆಯ ಕೊಂಡಿಯನ್ನು ಗಟ್ಟಿಗೊಳಿಸಿಕೊಂಡರು. ಸಂಜೆ ನಡೆದ ಹೋಮ-ಹವನದಲ್ಲಿ ಭಯ-ಭಕ್ತಿಯಿಂದ ಪಾಲ್ಗೊಂಡರು.ದೇವಸ್ಥಾನದ ಆವರಣದ ಹೋಮ ಕಟ್ಟೆಯನ್ನು ಧಾರ್ಮಿಕ ವಿಧಿ-ವಿಧಾನಗಳಿಂದ ಸಿಂಗಾರಗೊಳಿಸಲಾಗಿತ್ತು. ಬಸಯ್ಯ ಗಚ್ಚಿನಮಠ ಹಾಗೂ ಮಂದಿರದ ಅರ್ಚಕರು ವೇದ ಮಂತ್ರಗಳೊಂದಿಗೆ ಹೋಮ ನೆರವೇರಿಸಿದರು.ಕುಂಬಾರ ಕನ್ಯೆ ಶಿವಯೋಗಿ ಸಿದ್ಧರಾಮನ ಯೋಗದಂಡದೊಂದಿಗೆ ಮದುವೆ ಆದ ಪ್ರಾಯಶ್ಚಿತಕ್ಕಾಗಿ ಅಗ್ನಿಯಲ್ಲಿ ಆತ್ಮಾಹುತಿ ಮಾಡಿಕೊಂಡ ಘಟನೆಯನ್ನು ನೆನಪಿಸಿ ಸಾಕ್ಷೀಕರಿಸುವುದು ಈ ಹೋಮ-ಹವನದ ಉದ್ದೇಶವಾಗಿತ್ತು ಎಂದು ಅರ್ಚಕರು ಹೇಳಿದರು.ರೈತರಿಗೆ, ನಾಡ ಜನರಿಗೆ ಶುಭಕೋರಿ ಪ್ರಾರ್ಥಿಸುವ ಈ ಪೂಜಾ ಕಾರ್ಯಕ್ರಮ ನೇತೃತ್ವವನ್ನು ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಜಾತ್ರಾ ಸಮಿತಿಯವರು ವಹಿಸಿದ್ದರು. ಜಾತ್ರೆಯ ಧಾರ್ಮಿಕ ಪೂಜಾ ಸಮಿತಿ ಪದಾಧಿಕಾರಿಗಳಾದ  ಬಸಯ್ಯೊ ಗಚ್ಚಿನಮಠ, ಶಿವಲಿಂಗಯ್ಯ ಗಚ್ಚಿನಮಠ, ಸದಾನಂದ ಪೂಜಾರಿ, ಸಂಗಯ್ಯ ಹಿರೇಮಠ, ಶರಣಯ್ಯ ಗೊಳಸಂಗಿಮಠ, ಮಲ್ಲಯ್ಯ ಪೂಜಾರಿ, ನೀಲಕಂಠಯ್ಯ ಪೂಜಾರಿ, ಪ್ರಶಾಂತ ವಸ್ತ್ರದ, ವೆಂಕಟೇಶ ಗೋಡಾಳ ಅವರು  ಸಿದ್ಧರಾಮನ ಜೀವನ ಸಂದೇಶ ಓದಿದರು.ಪಲ್ಲಕ್ಕಿಯೊಂದಿಗೆ ಸಪ್ತ ನಂದಿಕೋಲುಗಳ ಮೆರವಣಿಗೆಯೂ ನಡೆಯಿತು. ಅದರಲ್ಲಿ ವಿಶಿಷ್ಠವಾದ ಸಾಲಂಕೃತಗೊಂಡ ಪಡಿ ನಂದಿಕೋಲು ಆಕರ್ಷಣೀಯವಾಗಿತ್ತು.ನಂತರ ಸಾರವಾಡದ ಶಿವನಗೌಡ ಕೋಟಿ ತಂಡದಿಂದ  ಶ್ರಿಕೃಷ್ಣ ಪಾರಿಜಾತ  ನೆರವೇರಿತು. ಅಂಬೇಡ್ಕರ ಕ್ರೀಡಾಂಗಣದಲ್ಲಿ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ ತಂಡದವರು ಸಂಗೀತ ಕಾರ್ಯಕ್ರಮ ನೀಡಿದರು. ಎಸ್ಪಿ ಡಾ.ಡಿ.ಸಿ. ರಾಜಪ್ಪ ಈ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರತಿಕ್ರಿಯಿಸಿ (+)