ಮಂಗಳವಾರ, ಜನವರಿ 28, 2020
22 °C

ಎಳ್ಳು-ಬೆಲ್ಲ: ಬೆಲೆ ತಗ್ಗಲೇ ಇಲ್ಲ

ಪ್ರಜಾವಾಣಿ ವಾರ್ತೆ ಎಂ.ರವಿ Updated:

ಅಕ್ಷರ ಗಾತ್ರ : | |

ಮೈಸೂರು: ಪ್ರತಿ ಹಬ್ಬ ಬಂದಾಗಲು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತವೆ. ಅದರಂತೆ ಸಂಕ್ರಾಂತಿ ಹಬ್ಬಕ್ಕೂ ಬೆಲೆ ಗಗನಮುಖಿಯಾಗಿದೆ ಹೊರತು ಇಳಿ ದಿಲ್ಲ. ಹಬ್ಬಕ್ಕೆ ಬೇಕಾದ ಎಳ್ಳು-ಬೆಲ್ಲ, ಕಬ್ಬು, ಬೆಲ್ಲದ ಅಚ್ಚು, ಹೂ ಇತ್ಯಾದಿ ವಸ್ತುಗಳ ಬೆಲೆ ಹೆಚ್ಚಿವೆ. ಅಂದ ಮಾತ್ರಕ್ಕೆ ಗ್ರಾಹಕರು ಖರೀದಿ ಮಾಡುವುದನ್ನು ನಿಲ್ಲಿಸಿಲ್ಲ.ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ತೆರಳಿ ಸ್ನೇಹಿತರು-ನೆಂಟರಿಸ್ಟರಿಗೆ ಎಳ್ಳು ಬೀರುವುದು. ಎಳ್ಳು -ಬೆಲ್ಲ, ಕಬ್ಬು ಸಂಕ್ರಾಂತಿ ಹಬ್ಬಕ್ಕೆ ಅಗತ್ಯವಾಗಿ ಬೇಕೇ ಬೇಕು. ಹಬ್ಬ 15 ದಿನ ಬಾಕಿ ಇರುವಾಗಲೇ ಮನೆಗ ಳಲ್ಲಿ ಎಳ್ಳು-ಬೆಲ್ಲದ ಸಿದ್ಧತೆ ನಡೆಯುತ್ತದೆ. ಆದರೆ ಮನೆಯಲ್ಲಿ ಇದನ್ನು ತಯಾರು ಮಾಡದವರಿಗೆ ಮಾರುಕಟ್ಟೆಯಲ್ಲಿ ರೆಡಿಮೇಡ್ ಎಳ್ಳು-ಬೆಲ್ಲ ಪ್ಯಾಕೇಟ್‌ಗಳು ಲಭ್ಯವಿದೆ.ಎಳ್ಳು-ಬೆಲ್ಲ ರೂ.80-140, ಬೆಲ್ಲದ ಅಚ್ಚು ಕೆಜಿಗೆ ರೂ.100 ರಿಂದ ರೂ.125ಕ್ಕೆ ಹೆಚ್ಚಿದೆ. ಕಳೆದ ವರ್ಷ ಕೆಜಿಗೆ ರೂ.70 ಬೆಲೆಯಿದ್ದ ರೆಡಿಮೇಡ್ ಎಳ್ಳು-ಬೆಲ್ಲ ಈ ಬಾರಿ ರೂ100 ಆಗಿದೆ. ಕಳೆದ ವರ್ಷಕ್ಕೆ ಹೋಲಿ ಸಿದಲ್ಲಿ ಈ ಬಾರಿ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ಗ್ರಾಹಕರು. ಇನ್ನು ಸಕ್ಕರೆ ನಗರ ನೆರೆಯ ಮಂಡ್ಯದಿಂದ ಮೂರು ದಿನಗಳಿಂದಲೇ ನಗರಕ್ಕೆ ಕಬ್ಬು ಬರತೊಡ ಗಿದೆ. ಗ್ರಾಮೀಣ ಭಾಗದಲ್ಲಿ ಜನ ಗದ್ದೆ ಮಗ್ಗುಲಲ್ಲಿ ಆಳೆತ್ತರಕ್ಕೆ ಬೆಳೆದಿರುವ ಕಬ್ಬಿನ ಜಲ್ಲೆಯನ್ನು ಮುರಿದು ಮನೆಗೆ ಕೊಂಡೊಯ್ಯುತ್ತಾರೆ. ಆದರೆ ನಗರ ಪ್ರದೇಶದಲ್ಲಿ ಒಂದು ಜಲ್ಲೆ ಕಬ್ಬಿಗೆ ರೂ.20 ನೀಡಿ ಕೊಂಡುಕೊಳ್ಳಬೇಕು. ಕನಿಷ್ಠ ಎಂದರೂ ಒಂದು ಮನೆಗೆ ಒಂದು ಜೊತೆ ಕಬ್ಬಿನ ಜಲ್ಲೆ ಬೇಕು.ಇನ್ನು ಪೂಜೆಗೆ ಅಗತ್ಯವಾಗಿ ಬೇಕಾದ ಹೂವಿನ ಬೆಲೆಯಂತೂ ಹೇಳತೀರದಾಗಿದೆ. ಕಾಕಡ ಮೀಟರ್‌ಗೆ 30, ಮಲ್ಲಿಗೆ 35, ಕನಕಾಂಬರ 50, ಸೇವಂತಿಗೆ 30 ಇದೆ. ದೇವರಾಜ ಮಾರುಕಟ್ಟೆ, ಜೆ.ಕೆ. ಮೈದಾನದ ಎದುರು, ಅಗ್ರಹಾರ, ನಂಜುಮಳಿಗೆ, ಚಾಮುಂಡಿ ಪುರಂ, ಕುವೆಂಪುನಗರ ಕಾಂಪ್ಲೆಕ್ಸ್ ಬಳಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಳ ಆಗಿದ್ದರೂ ಗ್ರಾಹಕರು ಮಾತ್ರ ವಸ್ತುಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿಲ್ಲ. ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಗೊಣಗಿಕೊಂಡೆ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.ಅಗತ್ಯ ವಸ್ತುಗಳ ಜೊತೆಗೆ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ಕೊಳ್ಳಲು ಸಹ ಜನರು ಬಟ್ಟೆ ಮಳಿಗೆಗಳಿಗೆ ಮುಗಿಬೀಳುತ್ತಿದ್ದರು. ಶನಿವಾರ ಮಧ್ಯಾಹ್ನದಿಂದಲೇ ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ದೇವರಾಜ ಮಾರುಕಟ್ಟೆ, ಪ್ರಭ ಚಿತ್ರಮಂದಿರದ ಬಳಿ, ಎಂ.ಜಿ. ರಸ್ತೆಯ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಸಂಜೆ ವೇಳೆಗೆ ವಾಹನ ಸಂಚಾರ ಹೆಚ್ಚಾ ಗತೊಡಗಿತು. ಎಂ.ಜಿ. ರಸ್ತೆಯ ಮಾರುಕಟ್ಟೆಯಲ್ಲಿ ಗ್ರಾಹಕರು ಬೆಳಿಗ್ಗೆಯೇ ಖರೀದಿಯಲ್ಲಿ ತೊಡಗಿದ್ದರು. ಮಾರುಕಟ್ಟೆ ಯಿಂದ ಹೊರಕ್ಕೆ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರ ನಡೆಯುತ್ತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ವಾಹನಗಳು ಮುಂದೆ ಸಾಗಲಾಗದೆ ಪರದಾಡಿದವು.ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆ ಜಾನು ವಾರುಗಳು. ನಗರದಲ್ಲಿ ಹಸು ಸಾಕಿದವರು ಜಾನು ವಾರುಗಳಿಗೆ ಸ್ನಾನ ಮಾಡಿಸಿ ಬಣ್ಣ ಬಳಿದು ಹಬ್ಬಕ್ಕೆ ಸಿದ್ಧ ಮಾಡುತ್ತಿದ್ದರು. ಹೊಸದಾಗಿ ಮೂಗುದಾರ, ಕೊರಳಿಗೆ ಹಗ್ಗ, ಗೆಜ್ಜೆಗಳನ್ನು ಕಟ್ಟಲಾಗುತ್ತದೆ. ಜಾನು ವಾರುಗಳನ್ನು ಶೃಂಗಾರಗೊಳಿಸಲು ಬೇಕಾದ ಅಗತ್ಯ ಪರಿಕರಗಳನ್ನು ಗೋಪಾಲಕರು ಉತ್ಸಾಹದಲ್ಲಿ ತೊಡಗಿದ್ದರು.`ಯಾವುದೇ ಹಬ್ಬ ಹರಿದಿನ ಬಂದರೂ ವಸ್ತುಗಳ ಬೆಲೆ ಹೆಚ್ಚುತ್ತವೆ. ಹಾಗಂತ ಹಬ್ಬ ಆಚರಿಸದೆ ಸುಮ್ಮನೆ ಇರಲಾಗುವುದಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆಯಂತೆ ನಮ್ಮ ಶಕ್ತಿಗೆ ಅನುಗುಣ ವಾಗಿ ವಸ್ತುಗಳನ್ನು ಖರೀದಿ ಮಾಡುತ್ತೇವೆ. ಬೆಲೆ ಹೆಚ್ಚಳದ ಲಾಭ ವ್ಯಾಪಾರಿಗಳಿಗೆ ಹೊರತು ಗ್ರಾಹಕರಿ ಗಲ್ಲ. ಪ್ರತಿ ಬಾರಿ ಹಬ್ಬಗಳಂದು ಬೆಲೆ ಹೆಚ್ಚಳದ ಬಿಸಿ ಗ್ರಾಹಕರಿಗೆ ತಟ್ಟೇ ತಟ್ಟುತ್ತದೆ~ ಎಂದು ಚಾಮುಂಡಿ ಪುರಂ ನಿವಾಸಿ ನಳಿನಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)