ಗುರುವಾರ , ಜೂನ್ 4, 2020
27 °C

ಎಷ್ಟೊಂದು ಕಷ್ಟ! (ಚಿತ್ರ ಇಷ್ಟ)

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಎಷ್ಟೊಂದು ಕಷ್ಟ! (ಚಿತ್ರ ಇಷ್ಟ)

ಬಾರ್ ಒಂದರಲ್ಲಿ ಕುಡಿಯುತ್ತಾ ಕುಳಿತ ನಾಯಕ ಅಲ್ಲಿ ಕೆಲಸ ಮಾಡುವ ಬಾಲಕಾರ್ಮಿಕನಿಗೆ ಕುಡಿತದ ಮಹತ್ವದ ಬಗ್ಗೆ ಉಪದೇಶ ಮಾಡುತ್ತಾನೆ. ಚಿತ್ರದುದ್ದಕ್ಕೂ ಕುಡಿಯುತ್ತಾನೆ. ಪ್ರೀತಿಯ ಬಲೆಗೆ ಬಿದ್ದ ನಂತರವೂ ನಾಯಕ ಕುಡಿಯುತ್ತಾನೆ.ನಾಯಕಿಯ ಜೊತೆಯಲ್ಲಿದ್ದಾಗಲೂ ಕುಡಿಯುತ್ತಲೇ ಇರುತ್ತಾನೆ. ಅದನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾನೆ. ಆತ ಕುಡಿಯುವುದು ಅಮ್ಮನ ಪ್ರೀತಿ ಸಿಗದ ಕೊರಗಿಗೆ. ಕೊನೆಯ ಸನ್ನಿವೇಶಗಳಲ್ಲಿ ಮಾತ್ರ ಆತನ ಕೈಯಲ್ಲಿ ಬಾಟಲಿ ಕಾಣುವುದಿಲ್ಲ. ಮಗಳ ಮೇಲಿನ ಆಸ್ಥೆಯಿಂದ ವಿಜಯ್‌ಕುಮಾರ್ ಛಾಬ್ರಿಯಾ ನಿರ್ಮಿಸಿರುವ `ಇಷ್ಟ~ ಚಿತ್ರದಲ್ಲಿನ ಇಂತಹ ಹಲವು ಸನ್ನಿವೇಶಗಳನ್ನು ಅರಗಿಸಿಕೊಳ್ಳುವುದು ಪ್ರೇಕ್ಷಕನಿಗೆ ಕಷ್ಟವಾಗುತ್ತದೆ.ನಿರ್ದೇಶಕ ಆರ್.ಪಿ. ಕೃಷ್ಣ ಕಥೆಯನ್ನು ಎಳೆದಾಡಲು ಹೋಗಿಲ್ಲ. ಆದರೆ ಅದನ್ನು ಆಳವಾಗಿ ಕಟ್ಟಿಕೊಡುವ ಪ್ರಯತ್ನವನ್ನೂ ಮಾಡಿಲ್ಲ. ಬಾಲ್ಯದಲ್ಲೇ ತಂದೆಯನ್ನು ಕೊಂದು ರಿಮ್ಯಾಂಡ್ ಹೋಂ ಸೇರುವ ನಾಯಕ ಬಿಡುಗಡೆಯಾದ ಬಳಿಕ ಗ್ಯಾರೇಜ್ ನಡೆಸುತ್ತಾನೆ. ನಾಯಕಿಗೆ ಆತನ ಮೇಲೆ ಪ್ರೀತಿ ಹುಟ್ಟುತ್ತದೆ. ತಂದೆತಾಯಿಯಿಂದ ಪ್ರೀತಿ ಸಿಗದ ಆಕೆಗೆ ಆತ ತನಗಿಂತಲೂ ಸಾಕಷ್ಟು ನೋವನ್ನನುಭವಿಸುತ್ತಿದ್ದಾನೆ ಎಂಬ ಅನುಕಂಪವೇ ಪ್ರೀತಿಗೆ ಮೂಲ. ಆದರೆ ಒರಟು ವ್ಯಕ್ತಿತ್ವದ ನಾಯಕನನ್ನು ಒಲಿಸಿಕೊಳ್ಳುವುದು ಸುಲಭವಾಗುವುದಿಲ್ಲ. ಕೊನೆಗೂ ಅವನಲ್ಲಿ ಪ್ರೀತಿ ಮೂಡುತ್ತದೆ.ನಿನಗಾಗಿ ಇಷ್ಟೆಲ್ಲ ಸೈಕಲ್ ಹೊಡೆದೆ ಎನ್ನುತ್ತಾಳೆ ನಾಯಕಿ. ನಾಯಕ ಕುಡಿಯುತ್ತಲೇ ಮಾತಾಡುತ್ತಾನೆ. ಬಳಿಕ ಎಂದಿನಂತೆ ಖಳನಾಯಕ ಬರುತ್ತಾನೆ.ದುರಂತಗಳಿಂದ ಆರಂಭವಾಗುವ ಚಿತ್ರಕ್ಕೆ ದುರಂತ ಅಂತ್ಯ ನೀಡಬೇಕೆಂಬ ನಿರ್ದೇಶಕರ ಹಟಮಾರಿತನ ಎದ್ದುಕಾಣುತ್ತದೆ. ಕೊನೆಗೂ ನೈಜ ಪ್ರೇಮ ಒಂದಾಗುವುದಿಲ್ಲ ಎಂಬ ಸಂದೇಶ ಇಲ್ಲಿದೆ! ನಾಯಕಿಗೆ ಆದ್ಯತೆ ನೀಡಬೇಕೆನ್ನುವ ಉದ್ದೇಶದಂತೆ ಚಿತ್ರದುದ್ದಕ್ಕೂ ಆಕೆ ಮಾತನಾಡುತ್ತಾಳೆ. ತನ್ನ ಮನಸಿನ ವೇದನೆಗಳನ್ನು ಗಾಳಿ, ಚಂದ್ರ, ಗೊಂಬೆಗಳೊಂದಿಗೆ ಹಂಚಿಕೊಳ್ಳುತ್ತಾಳೆ.ಆದರೆ ಈ ಸನ್ನಿವೇಶಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಭೂಮಿಕಾ ಹೆಣಗಾಡಿದ್ದಾರೆ. ಅವರ ಧ್ವನಿಯೂ ಜೊತೆಗೂಡುವುದಿಲ್ಲ. ಕೊನೆಯ ದೃಶ್ಯದಲ್ಲಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತಾರೆ. ಸಂತೋಷ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಕ್ಕನ ಮಗಳನ್ನು ಪ್ರೀತಿಸುವ ಖಳನಾಯಕನ (ರವಿತೇಜ) ಪಾತ್ರಕ್ಕೆ ನಿಜವಾದ ಗತ್ತಿಲ್ಲ.ಸಂಭಾಷಣೆ ಮತ್ತು ಕೆಲವು ಗಂಭೀರ ಸನ್ನಿವೇಶಗಳೇ ಹಾಸ್ಯಾಸ್ಪದವಾಗಿರುವುದರಿಂದ ಹಾಸ್ಯ ಪಾತ್ರದ ಅಗತ್ಯವೇ ಬಂದಿಲ್ಲ! ಮುಂಬೈನಿಂದ ಡ್ರಗ್ಸ್ ಸರಬರಾಜು ಮಾಡುವ ಪಾತಕಿ ಕರ್ನಾಟಕಕ್ಕೆ ಬರುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳೊಂದಿಗೆ ಕಮಿಷನರ್ ಸಭೆ ನಡೆಸುವ ದೃಶ್ಯಗಳೇ ಹಾಸ್ಯಮಯವಾಗಿವೆ. ಸಂಭಾಷಣೆಯನ್ನೂ ಬರೆದಿರುವ ನಿರ್ದೇಶಕ ಕೃಷ್ಣ ಭಾವನೆಗಳನ್ನು ತುರುಕುವ ಪ್ರಯತ್ನದಲ್ಲಿ ಜೋಡಿಸಿದ ಪದಗಳು ನೀರಸವೆನಿಸುತ್ತವೆ. ಕೆಲವೊಮ್ಮೆ ಪ್ರೇಕ್ಷಕನನ್ನು ಬೆಚ್ಚಿಬೀಳಿಸುತ್ತವೆ. `ಎಗರಿಸಿ ಎದೆಗೆ ಒದ್ದೆ ಅಂದ್ರೆ....~- ಇದು ತಾಯಿ ಮಗಳಿಗೆ ನೀಡುವ ಎಚ್ಚರಿಕೆಯ ಮಾತು!ಹಲವು ಮಿತಿಗಳ ನಡುವೆ ಗಮನ ಸೆಳೆಯುವುದು ಛಾಯಾಗ್ರಹಣ (ಮಹದೇಶ್ ಸಿ.ಎಸ್). ನಟನೆ ಮತ್ತು ಸನ್ನಿವೇಶಗಳಲ್ಲಿನ ಸಾಂದ್ರತೆಯ ಕೊರತೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಲ್ಲಿ ಛಾಯಾಗ್ರಾಹಕರು ಸಾಕಷ್ಟು ಶ್ರಮಿಸಿದ್ದಾರೆ. ಶುಷ್ಕವೆನಿಸುವ ದೃಶ್ಯವನ್ನೂ ನೋಡುವಂತೆ ಮಾಡಿರುವುದು ಅವರ ಕೌಶಲ್ಯದ ಅಗ್ಗಳಿಕೆ. ಸಂಜೀವ್ ಅವರ ಜೊತೆಗೂಡಿ ಇಂದ್ರಾಣಿ ಛಾಬ್ರಿಯಾ ನೀಡಿರುವ ಸಂಗೀತದಲ್ಲಿ ಎರಡು ಹಾಡು ಮೆಲಕು ಹಾಕುವಂತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.