ಶುಕ್ರವಾರ, ಮೇ 7, 2021
23 °C

ಎಸ್.ಬಿ. ಪಾಲಭಾವಿಗೆ ಮುಖ್ಯಮಂತ್ರಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಪೊಲೀಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ನೀಡುವ ರಾಜ್ಯದ ಅತ್ಯುನ್ನತ ಸೇವಾ ಪದಕವಾಗಿರುವ `ಮುಖ್ಯಮಂತ್ರಿ ಪದಕ~ವನ್ನು ಹಿರಿಯೂರಿನ ಗ್ರಾಮಾಂತರ ಠಾಣೆಯ ಎಸ್‌ಐ  ಎಸ್.ಬಿ. ಪಾಲಭಾವಿ ಪಡೆದಿದ್ದಾರೆ.1984ರಲ್ಲಿ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಪಾಲಭಾವಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಗಾಂಧಿಯನ್ ಸ್ಟಡೀಸ್‌ನಲ್ಲಿ ಡಿಪ್ಲೊಮೊ ಪದವಿ ಗಳಿಸಿದ್ದಾರೆ. 2007ರ ಬ್ಯಾಚ್‌ನಲ್ಲಿ ಎಸ್‌ಐ ಆಗಿ ಆಯ್ಕೆಯಾದರು. ಪ್ರಾಯೋಗಿಕ ತರಬೇತಿಯಲ್ಲಿದ್ದಾಗ ತಲೆ ಮರೆಸಿಕೊಂಡಿದ್ದ ಕಾಡುಗಳ್ಳ ವೀರಪ್ಪನ್ ಸಹಚರರಾದ ಬೋಂಡಾ ಬಸವ ಮತ್ತು ಈರಣ್ಣ ಎಂಬ ಟಾಡಾ ಆರೋಪಿಗಳನ್ನು ಬಂಧಿಸುವಲ್ಲಿ ತೋರಿದ ಚಾಕಚಕ್ಯತೆ ಮೆಚ್ಚಿ ಚಾಮರಾಜನಗರ ಪೊಲೀಸ್ ಅಧೀಕ್ಷಕರು ಶ್ಲಾಘನಾಪತ್ರ ನೀಡಿದ್ದಾರೆ.ಚಿತ್ರದುರ್ಗದ ಸಂಚಾರ ಠಾಣೆ, ಚಳ್ಳಕೆರೆ ಪೊಲೀಸ್‌ಠಾಣೆ, ಹಿರಿಯೂರು ನಗರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಚಳ್ಳಕೆರೆ ಠಾಣೆಯಲ್ಲಿ ಕುಖ್ಯಾತ ಆರೋಪಿ ರಾಮಮೂರ್ತಿ ಎಂಬಾತ ಭಾಗಿಯಾಗಿದ್ದ ಹಲವು ಕಳವು ಪ್ರಕರಣಗಳನ್ನು ಪತ್ತೆ ಮಾಡಿ ರೂ2.55 ಲಕ್ಷ ಮೊತ್ತದ ಚಿನ್ನ-ಬೆಳ್ಳಿ ಒಡವೆ ವಶ. ಮತ್ತೊಬ್ಬ ಕುಖ್ಯಾತ ಕಳ್ಳರಾದ ರಾಜಾ, ಪಾಪಣ್ಣ ಅವರನ್ನು ದಸ್ತಗಿರಿ ಮಾಡಿ ರೂ2.78 ಲಕ್ಷ ಮೌಲ್ಯದ ತಾಮ್ರ ಹಾಗೂ ಅಲ್ಯೂಮೀನಿಯಂ ಗಟ್ಟಿ ವಶ. ಪತ್ರಿಕೆ ವರದಿಗಾರರೆಂದು ಡಾಬಾ ಮಾಲೀಕನಿಗೆ ಬೆದರಿಸಿದ್ದ ರಂಗಸ್ವಾಮಿ, ಪುಟ್ಟರಾಜುವನ್ನು ಘಟನೆ ನಡೆದ ಕೇವಲ ಒಂದೇ ಗಂಟೆಯಲ್ಲಿ ಬಂಧಿಸಿ ರೂ2.18 ಲಕ್ಷ ಮೌಲ್ಯದ ವಸ್ತು ಮತ್ತು ಟಾಟಾಸುಮೋ ವಾಹನ ವಶ.ಅಂತರ ಜಿಲ್ಲೆ ಆರೋಪಿ ದೇವರಾಜನಿಂದ ರೂ1.7 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, ಹಿರಿಯೂರಿನಲ್ಲಿ ಪ್ಯಾರೂ ಎಂಬಾತನನ್ನು ಬಂಧಿಸಿ ರೂ95 ಸಾವಿರ  ಮೌಲ್ಯದ ಕಬ್ಬಿಣ ವಶ, ಬ್ಯಾರಮಡು, ಪಿಲ್ಲಾಜನಹಳ್ಳಿಯಲ್ಲಿ ಕಳ್ಳತನಗಳ ಪತ್ತೆ ಸೇರಿದಂತೆ ಹತ್ತಾರು ಕಳ್ಳತನ, ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪಾಲಭಾವಿ ಯಶಸ್ವಿಯಾಗಿದ್ದರು.ಕುಖ್ಯಾತ ಸೈಕೋ ಕಿಲ್ಲರ್ ಜೈಶಂಕರ್‌ನನ್ನು ಬಂಧಿಸಲು ಸಹಕರಿಸಿ ಉತ್ತಮ ಕಾರ್ಯ ನಿರ್ವಹಣೆಗೆ ಡಿಜಿ ಮತ್ತು ಐಜಿಪಿ ಅವರಿಂದ ರೂ4 ಸಾವಿರ ನಗದು ಬಹುಮಾನ. 2010ನೇ ಸಾಲಿನ ಅಪರಾಧ ತಡೆ ಮಾಸಾಚರಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆಗೆ  ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಹಿಂದಿನ ವರ್ಷ ಹಿರಿಯೂರು ಉಪ ವಿಭಾಗದಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದ ರುದ್ರಮುನಿ ಅವರಿಗೆ ರಾಷ್ಟ್ರಪತಿ ಪದಕ, ವೃತ್ತ ನಿರೀಕ್ಷಕರಾಗಿದ್ದ ರವಿ ಅವರಿಗೆ ಮುಖ್ಯಮಂತ್ರಿ ಪದಕ ಬಂದಿದ್ದನ್ನು ಸ್ಮರಿಸಬಹುದು.

ಪ್ರೊಫೆಷನಲ್ ಕೊರಿಯರ್ಸ್‌ನಿಂದ ಪ್ರೀಮಿಯಂ ಎಕ್ಸ್‌ಪ್ರೆಸ್ ಸೇವೆ: ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ದಿ ಪ್ರೊಫೆಷನಲ್ ಕೊರಿಯರ್ಸ್‌ ಈ ತಿಂಗಳಿಂದ ಗ್ರಾಹಕರಿಗೆ ಪ್ರೊ ಪ್ರೀಮಿಯಂ ಎಕ್ಸ್‌ಪ್ರೆಸ್ ವಿಶೇಷ ಸೇವೆ ಆರಂಭಿಸಿದೆ ಎಂದು ಸಂಸ್ಥೆಯ ಬಳ್ಳಾರಿ ವಲಯಾಧಿಕಾರಿ ಎಂ.ಯು. ಶಿವರಾಂ ತಿಳಿಸಿದರು.ಪ್ರೊ ಪ್ರೀಮಿಯಂನಲ್ಲಿ ಕಳಿಸುವ ಪತ್ರಗಳು ಮತ್ತು ಪಾರ್ಸಲ್‌ಗಳನ್ನು ಆಯಾ ಸ್ಥಳಗಳಿಗೆ  ಮರುದಿನ ಮಧ್ಯಾಹ್ನ 12ರ ಒಳಗೆ ಶೇ. 100ರಷ್ಟು ಖಾತರಿಯಾಗಿ ಮತ್ತು ಸುರಕ್ಷಿತವಾಗಿ ತಲುಪಿಸಲಾಗುತ್ತದೆ. ಪತ್ರ ತಲುಪಿದ ಮತ್ತು ಸ್ವೀಕರಿಸಿದ ಬಗ್ಗೆ ಗ್ರಾಹಕರಿಗೆ  ಎಸ್‌ಎಂಎಸ್ ಹಾಗೂ ಇ-ಮೇಲ್ ಮುಖಾಂತರ ಗ್ರಾಹಕರಿಗೆ ಮಾಹಿತಿ ನೀಡುತ್ತೇವೆ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.ಮೂಲ ದಾಖಲೆಗಳು, ತುರ್ತು ರವಾನೆ ಪತ್ರಗಳು, ಉದ್ಯೋಗ ನಿಮಿತ್ತ ಅರ್ಜಿಗಳು, ಟೆಂಡರ್ ಪತ್ರಗಳು, ಪಾಸ್‌ಪೋರ್ಟ್, ವೀಸಾ, ಏರ್‌ಟಿಕೆಟ್, ಪಾನ್‌ಕಾರ್ಡ್‌ಗಳನ್ನು ದುಬಾರಿ ಬೆಲೆಯ ಮೊಬೈಲ್, ಕೈಗಡಿಯಾರ, ರೇಷ್ಮೆ ಸೀರೆ ಮತ್ತಿತರೆ ವಸ್ತುಗಳನ್ನು ಸುರಕ್ಷಿತವಾಗಿ ತಲುಪಿಸುತ್ತೇವೆ. ಒಂದು ವೇಳೆ ತಡವಾದರೆ ಗ್ರಾಹಕರ ಹಣವನ್ನು ಹಿಂತಿರುಗಿಸಲಾಗುವುದು. ಶೀಘ್ರದಲ್ಲಿಯೇ ಗ್ರಾಹಕರಿಗೆ ಅತ್ಯುಪಯುಕ್ತವಾದ ಲಾಜಿಸ್ಟಿಕ್ ಸೇವೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಒದಗಿಸುತ್ತೇವೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.