ಭಾನುವಾರ, ಜನವರಿ 19, 2020
26 °C

ಎಸ್ಮಾ : ಹಿಂಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಂಘ ಸಂಸ್ಥೆಗಳ ನೌಕರರ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶ­ದಿಂದ ಸರ್ಕಾರ   ಜಾರಿಗೆ ತರಲು ಉದ್ದೇಶಿಸಿರುವ ‘ಅಗತ್ಯ ವಸ್ತುಗಳ ನಿರ್ವಹಣಾ ಕಾಯ್ದೆ’ (ಎಸ್ಮಾ) ಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್‌.ಬೈರಪ್ಪ ಒತ್ತಾಯಿಸಿದರು.ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎಸ್ಮಾ ಕಾಯ್ದೆಯು ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಯಾಗಿದೆ. ಸಂಘ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿ­ಸುವ ನೌಕರರು ಅಗತ್ಯ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತಿಭಟನೆ ನಡೆಸು­ವುದು ಅನಿವಾರ್ಯವಾಗಿದೆ. ಸರ್ಕಾರ ಕೂಡಲೇ ಈ ಕಾರ್ಮಿಕ ವಿರೋಧಿ ಕಾಯ್ದೆ­ಯನ್ನು ಹಿಂಪಡೆಯಬೇಕು’  ಎಂದರು.‘ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ತೆರವಾಗಿರುವ ಸದಸ್ಯರ ಹುದ್ದೆಗ­ಳಿಗೆ ನೇಮಕ ಮಾಡದ ಕಾರಣ ಹಲವು ಪ್ರಕರಣಗಳು ಇತ್ಯರ್ಥವಾಗದೇ ಉಳಿ­ದಿವೆ. ತೆರವಾಗಿರುವ ಹುದ್ದೆಗಳಿಗೆ ಕೂಡಲೇ ಸದಸ್ಯರನ್ನು ನೇಮಿಸಬೇಕು’  ಎಂದರು.‘ಜಿ.ಪಂ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ನೀಡುತ್ತಿಲ್ಲ. ನಿಗದಿತ ಸಮಯಕ್ಕೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು’  ಎಂದು ಒತ್ತಾಯಿಸಿದರು.ಪ್ರಧಾನ ಕಾರ್ಯದರ್ಶಿ ಬಿ.ಎಂ. ಪಟೇಲ್‌ ಪಾಂಡು ಮಾತನಾಡಿ, ‘ವೇತನ ವಿಳಂಬ ತಪ್ಪಿಸಲು ಮತ್ತು ಬಡ್ತಿ ಗೊಂದಲ ನಿವಾರಿಸಲು ಜಿಲ್ಲಾ ಕೇಂದ್ರಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.‘ರಾಜ್ಯ ಸರಕಾರಿ ನೌಕರರ ಸಂಘ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ  ಜ.18ರಿಂದ 20ರವರೆಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಐದು ಸಾವಿರ ಸರಕಾರಿ ನೌಕರರು ಭಾಗವಹಿಸುವ ನಿರೀಕ್ಷೆ ಇದೆ’  ಎಂದರು.

ಪ್ರತಿಕ್ರಿಯಿಸಿ (+)