ಶುಕ್ರವಾರ, ಮೇ 29, 2020
27 °C

ಎಸ್‌ಆರ್‌ಕೆ ವಿರುದ್ಧ ಮನೋಜ್ ಕುಮಾರ್ ದಾವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‌ಆರ್‌ಕೆ ವಿರುದ್ಧ ಮನೋಜ್ ಕುಮಾರ್ ದಾವೆ

ಹಿರಿಯ ನಟ ಮನೋಜ್ ಕುಮಾರ್ ಅವರು 2007ರಲ್ಲಿ ತೆರೆಕಂಡ `ಓಂ ಶಾಂತಿ ಓಂ' ಚಿತ್ರದ ನಿರ್ಮಾಪಕರಾದ ಇರೋಸ್ ಇಂಟರ್‌ನ್ಯಾಷನಲ್ ಹಾಗೂ ನಟ ಶಾರುಖ್ ಖಾನ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಸಜ್ಜಾಗಿದ್ದಾರೆ.ಚಿತ್ರ ಇತ್ತೀಚೆಗೆ ಜಪಾನ್‌ನಲ್ಲಿ ಬಿಡುಗಡೆಗೊಂಡಿದ್ದು, ಅದರಲ್ಲಿ ನಟ ಮನೋಜ್ ಕುಮಾರ್ ಅವರನ್ನು ಗೇಲಿ ಮಾಡಿರುವಂಥ ದೃಶ್ಯವನ್ನು ಕತ್ತರಿಸದೇ ಬಿಡುಗಡೆ ಮಾಡಿರುವುದರಿಂದ ಬೇಸರಗೊಂಡಿರುವ ಹಿರಿಯ ನಟ ಅದಕ್ಕಾಗಿ ನೂರು ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಪರಿಹಾರ ರೂಪದಲ್ಲಿ ಕೇಳಿದ್ದಾರೆ.`ಚಿತ್ರದಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸದೆ ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ನಾನು ಎರಡು ಬಾರಿ ಕ್ಷಮಿಸಿದ್ದೆ. ಆದರೆ ಈ ಬಾರಿ ಸಾಧ್ಯವಿಲ್ಲ. ಅವರು ನನ್ನ ಮನವಿಗೆ ಕನಿಷ್ಠ ಬೆಲೆಯನ್ನೂ ನೀಡಿಲ್ಲ. 2008ರಲ್ಲಿ ಮುಂಬೈ ನ್ಯಾಯಾಲಯದ ಮೊರೆಹೋದಾಗ ಎಲ್ಲಾ ಪ್ರಿಂಟ್‌ಗಳಲ್ಲೂ ಶಾಶ್ವತವಾಗಿ ಆಕ್ಷೇಪಾರ್ಹ ದೃಶ್ಯವನ್ನು ತೆಗೆದುಹಾಕುವಂತೆ ಸೂಚಿಸಲಾಗಿತ್ತಾದರೂ ಅದನ್ನು ಅವರು ಗಂಭೀರವಾಗಿ ತೆಗೆದುಕೊಂಡಿಲ್ಲ' ಎಂದು ಹಿರಿಯ ನಟ ಮನೋಜ್ ಕುಮಾರ್ ಖಾರವಾಗಿ ನುಡಿದಿದ್ದಾರೆ.ಚಿತ್ರವನ್ನು ಇರೋಸ್ ಇಂಟರ್‌ನ್ಯಾಷನಲ್ ಹಾಗೂ ಶಾರುಖ್ ಖಾನ್ ಅವರು ಜಂಟಿಯಾಗಿ ನಿರ್ಮಿಸಿರುವುದರಿಂದ ಇಬ್ಬರ ವಿರುದ್ಧವೂ ಮಾನನಷ್ಟ ಮೊಕದ್ದಮೆ ದಾಖಲಿಸಿ ನೂರು ಕೋಟಿ ರೂಪಾಯಿ ಪರಿಹಾರವನ್ನು ಕೇಳುವುದಾಗಿ ಮನೋಜ್ ಕುಮಾರ್ ತಿಳಿಸಿದ್ದಾರೆ.ಉಪಗ್ರಹ ಆಧರಿತ ಚಿತ್ರ ಬಿಡುಗಡೆಯಲ್ಲೂ ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸಬೇಕೆಂದು ನ್ಯಾಯಾಲಯ ತಿಳಿಸಿದ್ದರೂ ನಿರ್ಮಾಪಕರು ಅದನ್ನು ತೆಗೆಯದಿದ್ದದ್ದು ಹಿರಿಯ ನಟನ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.