ಸೋಮವಾರ, ಜೂನ್ 14, 2021
26 °C

ಏನಾಯಿತು ವಿಮಾನಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರದಿಂದ ಚೀನಾ ರಾಜಧಾನಿ ಬೀಜಿಂಗ್‌ಗೆ ಹೋಗುತ್ತಿದ್ದ ಮಲೇಷ್ಯಾ ಏರ್‌ಲೈನ್‌್ಸನ ಬೋಯಿಂಗ್‌ 777–200 ಪ್ರಯಾಣಿಕ ವಿಮಾನ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಚಾಲಕ ಸಿಬ್ಬಂದಿಯೂ ಸೇರಿದಂತೆ ಅದರಲ್ಲಿದ್ದ 239 ಜನರ ಗತಿ ಏನಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಪ್ರಯಾಣಿಕರಲ್ಲಿ ಐವರು ಭಾರತೀಯರೂ ಇರುವುದರಿಂದ ನಮ್ಮ ದೇಶಕ್ಕೂ ಇದು ಆತಂಕದ ಸಂಗತಿ.ಈ ಘಟನೆ ವಾಯುಯಾನ ಮತ್ತು ವೈಮಾನಿಕ ತಜ್ಞರನ್ನೂ ತಬ್ಬಿಬ್ಬು ಮಾಡಿದೆ. ಬೋಯಿಂಗ್‌ 777–200 ಸರಣಿಯ ಜೆಟ್‌ ವಿಮಾನಗಳು ಅತ್ಯಂತ ಸುರಕ್ಷಿತ ಎಂಬ ಕೀರ್ತಿಗೆ ಪಾತ್ರವಾಗಿವೆ. ಎರಡು ದಶಕದಲ್ಲಿ ದುರಂತಕ್ಕೆ ಈಡಾಗಿದ್ದು ಈ ಸರಣಿಯ ಒಂದು ವಿಮಾನ ಮಾತ್ರ.  ವಿವಿಧ ದೇಶಗಳ ಪರಿಣತರು ಮಲೇಷ್ಯಾದ ವಿಮಾನಕ್ಕಾಗಿ ಎಡೆಬಿಡದೆ ಶೋಧನೆ ನಡೆಸುತ್ತಿದ್ದು, ಮೂರು ದಿನ ಕಳೆದರೂ ಸರಿಯಾದ ಸುಳಿವು ಸಿಗದೇ ಇರುವುದು ನಾವೆಷ್ಟು ಅಸಹಾಯಕರು ಎಂಬುದರ ಸಂಕೇತ.  ವಿಯೆಟ್ನಾಂನ ದಕ್ಷಿಣ ಭಾಗದ ಫು ಕೋ ದ್ವೀಪದ ಸಮೀಪ ಸಮುದ್ರದಲ್ಲಿ ಈ ವಿಮಾನ ಬಿದ್ದಿರಬಹುದು ಎಂದು ಸಂದೇಹಿಸಲಾಗಿತ್ತು. ಆದರೆ ಇದನ್ನು ಖಚಿತಪಡಿಸುವ ಕುರುಹುಗಳು   ಅಲ್ಲೆಲ್ಲೂ ಸಿಕ್ಕಿಲ್ಲ.ಸಮುದ್ರದಲ್ಲಿ ತೇಲುವ ವಸ್ತು, ತೈಲದ ಹರಡುವಿಕೆ ಗೋಚರಿಸಿದೆ ಎಂದು ವಿಯೆಟ್ನಾಂ ನೌಕಾಪಡೆ ವಿಮಾನವೊಂದು ಮಾಹಿತಿ ರವಾನಿಸಿದ್ದರೂ ಅದು ಕಣ್ಮರೆಯಾದ ವಿಮಾನಕ್ಕೆ ಸಂಬಂಧಿಸಿದ್ದು ಎನ್ನುವುದು ರುಜುವಾತಾಗಿಲ್ಲ. ನಿಲ್ದಾಣದಿಂದ ಗಗನಕ್ಕೆ ನೆಗೆದ ಒಂದೇ ತಾಸಿನಲ್ಲಿ ವಿಮಾನ ಭೂ ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡು ರಾಡಾರ್‌ನಿಂದ ಕಾಣೆಯಾಗಿತ್ತು. ಈ ಸಂದರ್ಭದಲ್ಲಿಯೂ  ನಿಯಂತ್ರಣ ಕೇಂದ್ರವನ್ನು ಪೈಲಟ್‌ ಸಂಪರ್ಕಿಸಿಲ್ಲ ಎನ್ನುವುದು ದೃಢಪಟ್ಟಿದೆ.ತಾಂತ್ರಿಕ ಮತ್ತು ವಿನ್ಯಾಸ ದೋಷ, ಪೈಲಟ್‌ನ ತಪ್ಪು ನಿರ್ಧಾರ, ಭಯೋತ್ಪಾದಕರ ದುಷ್ಕೃತ್ಯ, ಪ್ರತಿಕೂಲ ಹವಾಮಾನ, ಭದ್ರತಾ ಲೋಪ ಹೀಗೆ ಹಲವು ಕೋನಗಳಿಂದ ತನಿಖೆ ನಡೆಯುತ್ತಿದೆ. ವಿಮಾನದ ಚಾಲಕ ಕೋಣೆಯಲ್ಲಿನ ಸಂಭಾಷಣೆಗಳ ಧ್ವನಿಮುದ್ರಿಕೆಯ ಕಪ್ಪು ಪೆಟ್ಟಿಗೆ ಮತ್ತು ವೇಗ, ಎತ್ತರ ಮುಂತಾದ  ತಾಂತ್ರಿಕ ಮಾಹಿತಿಗಳನ್ನು ಒಳಗೊಂಡ ಫ್ಲೈಟ್‌ ಡಾಟಾ ರೆಕಾರ್ಡರ್‌ ಸಿಕ್ಕಿದರೆ ಮಾತ್ರ ಇದರ ರಹಸ್ಯ ಬಯಲಿಗೆ ಬಂದೀತು.ಈ ವಿಮಾನದಲ್ಲಿ ನಾಲ್ಕು ಜನ ನಕಲಿ ಪಾಸ್‌ಪೋರ್ಟ್‌ ಬಳಸಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಕ್ವಾಲಾಲಂಪುರ  ನಿಲ್ದಾಣದಲ್ಲಿನ ಸುರಕ್ಷತಾ ಕ್ರಮಗಳು ದೋಷಪೂರಿತ ಎಂಬುದಕ್ಕೆ ನಿದರ್ಶನ. ಇವರು ಯಾರು, ಎಲ್ಲಿ ಮತ್ತು ಏಕೆ ಪ್ರಯಾಣಿಸುತ್ತಿದ್ದರು ಎಂಬುದನ್ನು ಮಲೇಷ್ಯಾ ಸರ್ಕಾರ ಪತ್ತೆ ಹಚ್ಚಬೇಕು. ಅದು ಈ ವಿಮಾನದ ನಾಪತ್ತೆ ಮೇಲೆ ಬೆಳಕು ಚೆಲ್ಲಬಲ್ಲದು.   ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವು ಎಷ್ಟೊಂದು  ಮುಂದುವರಿದಿದ್ದರೂ ವಿಮಾನವೊಂದು ಕ್ಷಣಾರ್ಧದಲ್ಲಿ ಎಳ್ಳಷ್ಟೂ ಸುಳಿವು ನೀಡದೇ ಕಣ್ಮರೆಯಾಗುವುದು ವಿಸ್ಮಯಕಾರಿ. ಇದು ಮಾನವನ ಬುದ್ಧಿಶಕ್ತಿಗೆ ಸವಾಲು. ಇದರಿಂದ ಪಾಠ ಕಲಿಯಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.