ಶುಕ್ರವಾರ, ಮೇ 14, 2021
29 °C

ಏರದ ನೈಂಟಿ ನಶೆ (ಚಿತ್ರ: 90 (ನೈಂಟಿ))

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

ಏರದ ನೈಂಟಿ ನಶೆ (ಚಿತ್ರ: 90 (ನೈಂಟಿ))

ನಟ ಸಾಧುಕೋಕಿಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಪಾತ್ರ, ಎತ್ತಿದ ಅವತಾರಗಳೇ ಇಲ್ಲ ಎನ್ನಬಹುದು. ಇದೀಗ ಅವರು `ಗುಂಡುಗಲಿ~ಗಳ ಕುಡಿತವನ್ನು ಬಿಡಿಸುವ ಬೋಧನಾತ್ಮಕ, ಕುಡಿತದಿಂದ ಕೆಡುಕು ಎಂಬ ಹಳೆಯ ಸಂದೇಶವನ್ನು `ನೈಂಟಿ~ (ಗುಂಡನ್ನು 90 ಎಂ.ಎಲ್ ಪ್ರಮಾಣದಲ್ಲಿ ಅಳೆಯುತ್ತಾರೆ)ಯಲ್ಲಿ ಸಾರಿದ್ದಾರೆ. ಇದರ ನಿರ್ದೇಶಕರು `ಜಮಾನ~ದಂಥ ಉತ್ತಮ ಸಿನಿಮಾ ನಿರ್ದೇಶಿಸಿದ ಶಂಕರ್.ಕುಡಿತ ಬೇಡ ಎಂಬುದನ್ನು ಬಾರ್ ಒಂದರಲ್ಲಿರುವ ಕುಡುಕರಿಗೆ ಹೇಳುವ, ಅವರ ಪ್ರಯತ್ನದಿಂದಾಗಿ ಕುಡಿತ ಬಿಡುವಂತೆ ಮಾಡುವ ಪಾತ್ರ ಸಾಧುಕೋಕಿಲ ಅವರದು. ಇಲ್ಲಿ ಅವರದು ನಾಯಕ ಪಾತ್ರ ಕೂಡ.ಅವರು ಈ ಸಮಾಜ ಸುಧಾರಣೆ ಮಾಡಲೆಂದೇ ಬಾರಿಗೆ ಹೋದವರಲ್ಲ.

 

ನಿರ್ದೇಶಕರಾಗಿರುವ ಅವರು ತಮ್ಮ ಹೊಸ ಸಿನಿಮಾಕ್ಕಾಗಿ ಕಥೆ ಹುಡುಕಲು ಕುಡುಕ ಗೆಳೆಯನೊಂದಿಗೆ ಅಲ್ಲಿಗೆ ಹೋಗುತ್ತಾರೆ. ಅಲ್ಲಿನ ಕುಡುಕರ ಕತೆಗಳನ್ನು ಕೇಳಿ ಅವರಲ್ಲಿ ಕೆಲವರ ಕುಡಿತದ ಚಟವನ್ನು ಬಿಡಿಸುತ್ತಾರೆ.

 

ಈ ಸಾಮಾನ್ಯ ಕತೆಯನ್ನು ಧಾರಾವಾಹಿಗಳ ಕಂತುಗಳ ರೀತಿಯಲ್ಲಿ ಎಳೆಎಳೆಯಾಗಿ ಎಳೆದು ನಿರ್ದೇಶಕ ಶಂಕರ್ ಚಿತ್ರಿಸುತ್ತಾರೆ. ಕೆಲವು ಕಡೆ ಕುಡಿತದ ಕೆಡಕುಗಳನ್ನು ತೋರುವ ಸಾಕ್ಷ್ಯಚಿತ್ರದಂತೆಯೂ ಸಿನಿಮಾ ಕಾಣುತ್ತದೆ.ಆದರೆ ಕೆಲವೆಡೆ ತಬಲಾ ನಾಣಿ ಅವರ ಪಂಚ್ ಇರುವ ಸಂಭಾಷಣೆಯೇ ಕೊಂಚ ತಮಾಷೆಯ ಅಲೆಗಳನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತದೆ. ನಾಣಿ ಅವರ ಸಂಭಾಷಣೆಯಿಂದಾಗಿ ಅದು ಕೇಳುವಂತೆ ಆಗುತ್ತದೆ!ಸಿನಿಮಾದ ವಸ್ತು ಹೊಸದೇನಲ್ಲ. ಈಗಾಗಲೇ ನಿರ್ದೇಶಕ ಗುರುಪ್ರಸಾದ್ `ಎದ್ದೇಳು ಮಂಜುನಾಥ~ದಲ್ಲಿ ಇದನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ತಬಲಾ ನಾಣಿ ಕೆಲಸ ಮಾಡಿದ್ದರು. ಇಲ್ಲಿ ಕೇವಲ ಅವರ ಸಂಭಾಷಣೆಯಷ್ಟೆ ಪರಿಣಾಮ ಬೀರಿದೆ.ಚಿತ್ರಕತೆ, ನಿರೂಪಣೆಯಲ್ಲಿ ಧಮ್ ಇಲ್ಲದಿರುವುದರಿಂದ ಅಷ್ಟಾಗಿ `ನೈಂಟಿ~ ಪ್ರೇಕ್ಷಕರಿಗೆ ಕಿಕ್ ಕೊಡುವುದಿಲ್ಲ. ಅಷ್ಟಿದ್ದರೂ ಸಾಧು ಕಿಕ್ ಹೊಡೆಯಲು ಪ್ರಜ್ಞಾ ಎಂಬ ಕನ್ನಡ ಕಲಾವಿದೆಯನ್ನು ಐಟಂ ಸಾಂಗ್ ಒಂದರಲ್ಲಿ ಕುಣಿಸಿದ್ದಾರೆ.

 

ಇದರೊಂದಿಗೆ ಇನ್ನೊಂದು ಐಟಂ ಸಾಂಗ್ ಪಡ್ಡೆ ಹೈಕಳಿಗೆ ಕೊಂಚ ಸಮಾಧಾನ ನೀಡಬಹುದು. ಶಕೀಲಾ ಎಂಬ ಅಂದಕಾಲತ್ತಿಲ್ ಹಾಟ್ ಬೆಡಗಿಯನ್ನು ಕೂಲ್ ಆಗಿ ತೋರಿಸಲಾಗಿದೆ ಎಂಬುದು ಕುಟುಂಬವಂತರಿಗೆ ಕೊಂಚ ಸಮಾಧಾನ ಕೊಡುತ್ತದೆ. ಅದು ಕೆಲ ಪ್ರೇಕ್ಷಕರಲ್ಲಿ ಅಸಮಾಧಾನ ಹುಟ್ಟಿಸುವ ಸಾಧ್ಯತೆಯೂ ಇದೆ!ಸಿನಿಮಾದಲ್ಲಿ ಬುಲೆಟ್ ಪ್ರಕಾಶ್, ಬಿರಾದಾರ್, ರಂಗಾಯಣ ರಘು, ರಾಜು ತಾಳಿಕೋಟೆಯಂಥ ಕನ್ನಡದ ಹಾಸ್ಯ ಕಲಾವಿದರಿದ್ದಾರೆ. ರಾಜು ತಾಳಿಕೋಟೆ ತಮ್ಮ ಕ್ಯಾಸೆಟ್‌ಗಳಿಂದ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧರಾದವರು.ಅಂಥ ಕ್ಯಾಸೆಟ್ ಪ್ರಸಂಗಗಳ ಕೆಲವು ಮಾದರಿಗಳು ಇಲ್ಲಿ ಬಳಕೆಯಾಗಿವೆ. ಕೆಲವು ಹಾಡುಗಳೂ ಅದೇ ರೀತಿಯಲ್ಲಿವೆ. ಸಾಧು ಮತ್ತು ಮನು ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ಹೇಳುವಂಥದ್ದೇನಿಲ್ಲ.`ಕುಡಿಯೋದೆ ನನ್ನ ವೀಕ್‌ನೆಸ್ಸು~ ಅಂದರು ನಟ ರವಿಚಂದ್ರನ್. ಅಂಥದ್ದನ್ನೇ ದೈನಿಕದ ಕಾಯಕವನ್ನಾಗಿ ಮಾಡಿಕೊಂಡವರಿಗೆ, `ಕುಡಿದು ಕುಪ್ಪಳಿಸುವವರಿಗೆ~ ಅದನ್ನು ಬಿಡಲು ನಿರ್ದೇಶಕ ಶಂಕರ್ ಸಿನಿಮಾದ ಮೂಲಕ ಉಪದೇಶ ಮಾಡಿದ್ದಾರೆ.

 

ಸಿನಿಮಾದ ನಿರ್ಮಾಪಕ ಹಾಗೂ ನಾಯಕರಾಗಿ ಸಾಧು, ನಿರ್ದೇಶಕ ಶಂಕರ್ ಅವರ ಕಾಯಕವೇನೊ ಜನ- ಜಗ ಮೆಚ್ಚುವಂಥದ್ದು. ಅದನ್ನು ನಶೆ ಏರಿದವರ, ಅವರಿಂದ ಪೀಡಿತರಾದವರ ಮನಕ್ಕೆ ನಾಟುವಂತೆ ಮಾಡಿಲ್ಲ ಎನ್ನುವುದೇ ಸಿನಿಮಾದ ಬಹು ದೊಡ್ಡ ಕೊರತೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.