ಶನಿವಾರ, ಜನವರಿ 18, 2020
22 °C

ಏರ್ ಇಂಡಿಯಾ ಚೇತರಿಕೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ):ತೀವ್ರ ಹಣಕಾಸು ಬಿಕ್ಕಟ್ಟು ಮತ್ತು ಸಾಲದಲ್ಲಿ ಮುಳುಗಿರುವ ಏರ್ ಇಂಡಿಯಾ ಸಂಸ್ಥೆಗೆ ಚೇತರಿಕೆ ಯೋಜನೆಗಳನ್ನು ರೂಪಿಸುವ ಸಲುವಾಗಿ ಸಚಿವರ ಗುಂಪಿನ ಮಹತ್ವದ ಸಭೆ ಮಂಗಳವಾರ ನಡೆಯಲಿದೆ. ಸಂಸ್ಥೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಅಗತ್ಯ ಇರುವ ಹಣಕಾಸಿನ ನೆರವು ನೀಡುವ ಸಲುವಾಗಿ ಹೆಚ್ಚುವರಿ ಷೇರು ಬಂಡವಾಳ ತುಂಬುವ ಕುರಿತು ಸಭೆ ಕೇಂದ್ರ ಸಚಿವ ಸಂಪುಟಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.

 ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಏರ್ ಇಂಡಿಯಾದ ಚೇತರಿಕೆಗಾಗಿ  ಆರ್‌ಬಿಐನ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಜತೆಗೆ ಸಂಸ್ಥೆಗೆ 27 ಬೋಯಿಂಗ್ 787 ವಿಮಾನಗಳ ಖರೀದಿ ವಿಷಯವೂ ಚರ್ಚೆಗೆ ಬರಲಿದೆ.ಅಜಿತ್ ಸಿಂಗ್ ಅವರು ನಾಗರಿಕ ವಿಮಾನಯಾನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ನಡೆಯುತ್ತಿರುವ ಸಚಿವರ ಮೊದಲ ಸಭೆ ಇದಾಗಿದೆ. ಈ ವಿಷಯವಾಗಿ ಕಾರ್ಯದರ್ಶಿಗಳ ತಂಡ ನಡೆಸಿರುವ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ನಿರ್ಣಯದಂತೆ ಸಂಸ್ಥೆಗೆ ಮುಂದಿನ ಹತ್ತು ವರ್ಷಗಳಲ್ಲಿ 23 ಸಾವಿರ ಕೋಟಿ ರೂಪಾಯಿ ಹಣಕಾಸು ನೆರವು ನೀಡುವುದು ಸೇರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 6,600 ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವ ಶಿಫಾರಸೂ ಇದರಲ್ಲಿ ಸೇರಿದೆ.ಏರ್ ಇಂಡಿಯಾ ಒಟ್ಟು 67,520 ಕೋಟಿ ರೂಪಾಯಿ ಸಾಲದಲ್ಲಿ ಮುಳುಗಿದೆ. ಇದರಲ್ಲಿ 22 ಸಾವಿರ ಕೋಟಿ ರೂಪಾಯಿ ದೀರ್ಘಾವಧಿ ಸಾಲವಾಗಿದ್ದು, 21,200 ಕೋಟಿ ರೂಪಾಯಿ ದುಡಿಯುವ ಬಂಡವಾಳವಾಗಿದೆ. ಜತೆಗೆ 20,320 ಕೋಟಿ ರೂಪಾಯಿ ನಷ್ಟದಲ್ಲಿದೆ.

ಪ್ರತಿಕ್ರಿಯಿಸಿ (+)