ಮಂಗಳವಾರ, ಏಪ್ರಿಲ್ 13, 2021
26 °C

ಏಲಕ್ಕಿ ಬಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೊನೆಗಳು ಮೂಡುವ ಸಮಯಕ್ಕೆ ಸರಿಯಾಗಿ ಏಲಕ್ಕಿ ಬಾಳೆಗೆ ಹಳದಿ ರೋಗ ಬರುತ್ತದೆ. ಯಾವುದೇ ಔಷಧಿ  ಸಿಂಪರಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಾರದೆ ಗಿಡಗಳು ಒಣಗಿ ಹೋಗುತ್ತವೆ. ಹತ್ತು ತಿಂಗಳು ಶ್ರಮಪಟ್ಟು ಬೆಳೆಸಿದ ಬಾಳೆ ಫಸಲು ರೈತನ ಕೈಗೆ ಸಿಗುವುದಿಲ್ಲ. ಹೀಗಾಗಿ ಬಹುತೇಕ ರೈತರು ಏಲಕ್ಕಿ ಬಾಳೆಯ ಸಹವಾಸವೇ ಬೇಡ ಎಂದು ಸುಮ್ಮನಾಗಿ ಬಿಡುತ್ತಾರೆ.ಏಲಕ್ಕಿ ಬಾಳೆ ಗಿಡಗಳು ಕನಿಷ್ಠ 8 ರಿಂದ 12 ಅಡಿ ಎತ್ತರ ಬೆಳೆಯುತ್ತವೆ. ಸ್ವಲ್ಪ ಗಾಳಿ ಬೀಸಿದರೂ ಗಿಡಗಳು ಬಾಗುತ್ತವೆ. ಗಾಳಿ ಜಾಸ್ತಿಯಾದರೆ ಮುರಿದು ಬೀಳುತ್ತವೆ. ಈ ಸಮಸ್ಯೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಹೊಸಹಳ್ಳಿಯ ರೈತರ ಶಿವಪ್ಪ ಉತ್ತರ ಕಂಡುಕೊಂಡಿದ್ದಾರೆ. ಅವರು ಬೆಳೆಸಿರುವ ಏಲಕ್ಕಿ ಬಾಳೆ ಗಿಡಗಳು ಸುಮಾರು 10-12 ಅಡಿ ಎತ್ತರ  ಬೆಳೆದಿದ್ದರೂ ಯಾವುದೇ ಗಿಡಕ್ಕೂ ಊರುಗೋಲುಗಳನ್ನು ನೀಡಿಲ್ಲ. ಗಿಡಗಳು ಗಾಳಿಗೆ ಬಾಗಿಲ್ಲ. ಅದಕ್ಕೆ ಕಾರಣ ಜುಲೈ-ಆಗಸ್ಟ್ ಅವಧಿಯಲ್ಲಿ ಬೀಸುವ ಬಿರುಗಾಳಿಗೆ ಬಾಳೆ ಗಿಡಗಳು ಸಿಕ್ಕದಂತೆ ಪೂರ್ವ-ಪಶ್ಚಿಮಾಭಿಮುಖವಾಗಿ ಸಾಲಿನಿಂದ ಸಾಲಿಗೆ 8 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಹೀಗಾಗಿ ಗಾಳಿ ಎಷ್ಟೇ ವೇಗವಾಗಿ ಬೀಸಿದರೂ ಗಿಡಗಳಿಗೆ ತೊಂದರೆ ಇಲ್ಲ.ಬಹುತೇಕ ರೈತರು ಗಾಳಿಗೆ ಹೆದರಿ ಜೂನ್‌ನಿಂದ ಆಗಸ್ಟ್ ಅವಧಿಯಲ್ಲಿ ಬಾಳೆ ನಾಟಿ ಮಾಡುವುದಿಲ್ಲ. ಆದರೆ ಈ ಸಮಯದಲ್ಲಿ ನಾಟಿ ಮಾಡಿದರೆ ಸಾಲು ಹಬ್ಬಗಳ ವೇಳೆಗೆ ಗೊನೆಗಳು ಕಟಾವಿಗೆ ಬರುತ್ತವೆ. ಹೆಚ್ಚು ಬೆಲೆ ಸಿಗುತ್ತದೆ  ಎನ್ನುತ್ತಾರೆ ಶಿವಪ್ಪ.   ರೋಗ ಮುಕ್ತ

 ಶಿವಪ್ಪ ಅವರು ನಾಟಿ ಮಾಡಿರುವ ಬಾಳೆ ಗಿಡಗಳು ನೂರಕ್ಕೆ ನೂರರಷ್ಟು ರೋಗ ಮುಕ್ತವಾಗಿವೆ. ಖಾಸಗಿ (ರಾಮ್ಕೊ) ಕಂಪನಿಯೊಂದು ಟಿಷ್ಯೂ ಕಲ್ಚರ್‌ನಲ್ಲಿ ಏಲಕ್ಕಿ ಬಾಳೆ ಗಿಡಗಳನ್ನು ಬೆಳೆಸುವ ಪ್ರಯೋಗಕ್ಕಾಗಿ ಶಿವಪ್ಪ ಅವರ ತೋಟದಿಂದ ಬಾಳೆ ಗೆಡ್ಡೆಗಳನ್ನು ಖರೀದಿಸಿದೆ. ಈ ಗೆಡ್ಡೆಗಳನ್ನು ಬಳಸಿ ಕಂಪೆನಿ ಪ್ರಯೋಗಾಲಯದಲ್ಲಿ ಬೆಳೆಸಿದ ಸಸಿಗಳು ನೂರಕ್ಕೆ ನೂರರಷ್ಟು ರೋಗ ಮುಕ್ತವಾಗಿರುವುದು ಸಾಬೀತಾಗಿದೆ.ಬಾಳೆಗೆ ಬರುವ ರೋಗ ನಿವಾರಣೆಗೆ ಯಾವುದೇ ಒಂದು ನಿರ್ದಿಷ್ಟ ಔಷಧಿ ಇಲ್ಲ. ಸಾಮಾನ್ಯವಾಗಿ ಏಲಕ್ಕಿ ಬಾಳೆ ಹಳದಿ ರೋಗಕ್ಕೆ ತುತ್ತಾಗಲು ಹಾಗೂ ಕಾಯಿಗಳು ಸೀಳು ಬಿಡಲು ಮುಖ್ಯ ಕಾರಣ ಸಸಿಗೆ ಸೂಕ್ತ ಸಮಯದಲ್ಲಿ ಸಾವಯವ ಪೋಷಕಾಂಶಗಳು ಸಿಕ್ಕದೇ ಇರುವುದೇ ಕಾರಣ.ಬಾಳೆ ತೋಟದಲ್ಲಿಯೇ ಸಾವಯವ ಗೊಬ್ಬರ ತಯಾರಿಸಿಕೊಳ್ಳಲು ಅವಕಾಶವಿದೆ. ಗಿಡದ ಪಕ್ಕದಲ್ಲಿ ಬೆಳೆಯುವ, ಬೇಡವಾದ ಕಂದುಗಳನ್ನು ಹತ್ತು ದಿನಗಳಿಗೆ ಒಮ್ಮೆ ಕೊಯ್ದು ಹಾಕಬೇಕು. ಗುದ್ದಲಿ ಬಳಸಿ ಕೀಳಬಾರದು. ಇದರಿಂದ ಗಿಡಗಳು ಬೇಗ ರೋಗಕ್ಕೆ ತುತ್ತಾಗುತ್ತವೆ. ತೋಟದಲ್ಲೇ ಸಾಕಷ್ಟು ಒಣಗಿದ ಎಲೆಗಳು ಸಿಗುವುದರಿಂದ ಅವನ್ನು ಗಿಡಗಳ ನಡುವಿನ ಭಾಗದಲ್ಲಿ ಬಿಸಿಲು ನೆಲಕ್ಕೆ ಬೀಳದಂತೆ ಹೊದಿಕೆಯಂತೆ ಹಾಸಬೇಕು. ಈ ಒಣ   ಎಲೆಗಳ ಹೊದಿಕೆ ಮೇಲೆ ಸುಣ್ಣಕಲ್ಲು ಪುಡಿಯನ್ನು ಎರಚಿ ನೀರು ಹಾಕಬೇಕು.ಇದರಿಂದ ಎಲೆಗಳು ಕೊಳೆತು ಗೊಬ್ಬರವಾಗುತ್ತವೆ.  ಬೇಸಿಗೆಯಲ್ಲಿ ಭೂಮಿಯಲ್ಲಿ ತೇವಾಂಶ ಉಳಿಯಲು ಸಹಕಾರಿಯಾಗುತ್ತದೆ.ಬೇರುಗಳು ಸರಾಗವಾಗಿ ಭೂಮಿಯಲ್ಲಿ ಇಳಿಯಲು ಅನುಕೂಲವಾಗುವಂತೆ ಅಡಿಕೆ ಸಿಪ್ಪೆಯನ್ನು ಗಿಡಗಳ ಬುಡಕ್ಕೆ ಹಾಕಬೇಕು.ಇದರಿಂದ ಭೂಮಿ ಸಡಿಲಗೊಂಡು ಬೇರುಗಳು  ಭೂಮಿಯ ಆಳಕ್ಕೆ ಹೋಗಿ ಎಷ್ಟೇ ಜೋರಾಗಿ ಗಾಳಿ ಬೀಸಿದರೂ ಗಿಡಗಳು ಭದ್ರವಾಗಿ ನಿಲ್ಲುತ್ತವೆ.ಅಂಗಾಂಶ ಸಸಿ

ಗೆಡ್ಡೆಗಳನ್ನು ನಾಟಿ ಮಾಡುವುದರಿಂದ ಗೊನೆಗಳು ಒಮ್ಮೆಲೇ ಕಟಾವಿಗೆ ಬರುವುದಿಲ್ಲ. ಬೆಳೆ ಸಂಪೂರ್ಣ ಪಡೆಯಲು 14 ತಿಂಗಳು ಕಾಯಬೇಕು. ಅಂಗಾಂಶ ಸಸಿಗಳನ್ನು ನಾಟಿ ಮಾಡುವುದರಿಂದ 9 ರಿಂದ 11 ತಿಂಗಳಿಗೆ  ಎಲ್ಲ ಗೊನೆಗಳು ಕೊಯ್ಲಿಗೆ ಬರುತ್ತವೆ.ಶಿವಪ್ಪ ಅವರು ಒಂದು ಎಕರೆಯಲ್ಲಿ 600 ರಿಂದ 650 ಸಸಿಗಳನ್ನು ನಾಟಿ ಮಾಡಿದ್ದಾರೆ. ಮೂರು ವರ್ಷಗಳಿಂದ ಅವರು ಬೆಳೆಯುತ್ತಿರುವ ಗೊನೆಗಳ ತೂಕ ಸರಾಸರಿ 20 ರಿಂದ 25 ಕೆ.ಜಿ.ಯಷ್ಟಿದೆ.  ಬಾಳೆ ಹಾಗೂ ಇತರೆ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಶಿವಪ್ಪ ಅವರ ಸಾಧನೆಯನ್ನು ಗುರುತಿಸಿರುವ ಬೆಂಗಳೂರಿನ ಕುವೆಂಪು ಟ್ರಸ್ಟ್ ಅವರಿಗೆ ‘ನೇಗಿಲ ಯೋಗಿ ಪ್ರಶಸ್ತಿ’ ನೀಡಿ ಗೌರವಿಸಿದೆ.ಆಸಕ್ತರು ಶಿವಪ್ಪ ಅವರೊಂದಿಗೆ ಮಾತನಾಡಬಹುದು. ಅವರ ಮೊಬೈಲ್ ನಂಬರ್- 9880127746  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.