ಸೋಮವಾರ, ಜೂನ್ 14, 2021
28 °C
ಗುಂಡಾ ಕಾಯ್ದೆಅಡಿ 3 ಜನರ ಬಂಧನ: ಎಸ್‌.ಪಿ ನಾಗರಾಜ

ಏಳು ಜನರ ಗಡೀಪಾರಿಗೆ ಪ್ರಸ್ತಾವನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಸಮಾಜದ ಅಶಾಂತಿಗೆ, ಕಂಟಕ­ಪ್ರಾಯರಾಗಿ ವರ್ತಿಸುತ್ತಿದ್ದ ಮೂವರನ್ನು ಗುಂಡಾ ಕಾಯ್ದೆಅಡಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ ಹೇಳಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಮಡ್ಡಿಪೇಟೆ ಬಡಾವಣೆಯ ಕೊರವರ ಓಣಿಯ  ಗಜ್ಜಿ ವಿರೇಶ ಜಂಬಯ್ಯ, ಅಶೋಕನಗರದ ಹುಲಿಗೆಪ್ಪ ಮಾರಪ್ಪ ಹಾಗೂ ಸಿಂಧನೂರು ನಗರದ ಪಟೇಲವಾಡಿ ಬಡಾವಣೆಯ ಟೀಕರಾಜ ಮಲ್ಲಿ­ಕಾರ್ಜುನ ಎಂಬುವವರನ್ನು ಗುಂಡಾ ಕಾಯ್ದೆಅಡಿ ಬಂಧಿಸಲಾಗಿದೆ ಎಂದು ತಿಳಿಸಿದರು.ಆರೋಪಿ ಗಜ್ಜಿ ವಿರೇಶ ರೂಢಿಗತವಾಗಿ ಕಲಬೆರಕೆ ಸೇಂದಿ, ಸೇಂದಿ ತಯಾರಿಕೆಗೆ ಬಳಸುವ ರಾಸಾಯನಿಕ ಸಿ.ಎಚ್ ಪೌಡರ್ ಮಾರಾಟದಲ್ಲಿ ತೊಡಗಿಸಿ­ಕೊಂಡಿದ್ದ, ಈತನ ವಿರುದ್ಧ 23 ಪ್ರಕರಣ ದಾಖಲಾಗಿವೆ. ಅದೇ ರೀತಿ ಅಶೋಕನಗರದ ಆರೋಪಿ ಹುಲಿಗೆಪ್ಪ ಈತನೂ ರೂಢಿಗತವಾಗಿ ಕಲಬೆರಕೆ ಸೇಂದಿ, ಸಿ.ಎಚ್ ಪೌಡರ್ ಮಾರಾಟ  ಮಾಡುತ್ತಿದ್ದ. ಈತನ ವಿರುದ್ಧ 14 ಪ್ರಕರಣ ದಾಖಲಾಗಿವೆ ಎಂದು ಹೇಳಿದರು.ಆರೋಪಿ ಟೀಕರಾಜ ಈತನು ರೂಢಿಗತವಾಗಿ ಮಟಕಾ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ. ಈತನ ವಿರುದ್ಧವೂ 18 ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು. ಈ ಮೂವರು ವ್ಯಕ್ತಿ­ಗಳು ನಿರ­ಂತರವಾಗಿ ಕಾನೂನು ಬಾಹಿರ ಕೃತ್ಯ­ದಲ್ಲಿ ತೊಡಗಿ ಸಮಾ­ಜಕ್ಕೆ ಕಂಟಕ­ಪ್ರಾಯ­ರಾಗಿ ವರ್ತಿ­ಸುತ್ತಿದ್ದ­ರಿಂದ ಇವರನ್ನು ಸಾಮಾನ್ಯ ಕಾನೂ­ನುಗಳಡಿ ನಿಯಂತ್ರಿಸಲು ಸಾಧ್ಯವಾಗದೇ ಇದ್ದುದರಿಂದ ಗುಂಡಾ ಕಾಯ್ದೆಯಡಿ ಕ್ರಮ ಕೈಗೊಂಡು ಬಂಧಿಸಲಾಗಿದೆ ಎಂದು ಹೇಳಿದರು.ಮೂವರು ಆರೋಪಿಗಳ ವಿರುದ್ದ ಗುಂಡಾ ಕಾಯ್ದಯಡಿ ಪ್ರಕರಣ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ­ಗಳಿಗೆ ಸಲ್ಲಿಸಿದಾಗ  ಗುಂಡಾ ಕಾಯ್ದೆಯಡಿ ಈ ಮೂರು ಜನರ ಬಂಧನಕ್ಕೆ ಆದೇಶ ಹೊರಡಿಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ ವಿವರಿಸಿದರು.

ತಂಡಕ್ಕೆ ಬಹುಮಾನ: ಅಕ್ರಮ ಸೇಂದಿ, ಸಿ.ಎಚ್ ಪೌಡರ್ ಮಾರಾಟ ಜಾಲ ಬೇಧಿಸುವಲ್ಲಿ ನಿರಂತರ ಶ್ರಮವಹಿಸಿದ ಸಿಪಿಐ ಚಂದ್ರಶೇಖರ ಹಾಗೂ ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಅವರ ತಂಡಕ್ಕೆ ₨ 10,000 ಬಹುಮಾನ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.ಇನ್ನೂ 7 ಜನರ ಗಡೀಪಾರಿಗೆ ಪ್ರಸ್ತಾವನೆ: ಸಮಾಜಕ್ಕೆ ಕಂಟಕಪ್ರಾಯರಾದ 7 ಜನರ ಗಡಿಪಾರಿಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 4 ಜನ ಮಟ್ಕಾ ಬುಕ್ಕಿಗಳು, 3 ಜನರು ಸಿ.ಎಚ್ ಪೌಡರ್ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಇದರಲ್ಲಿ ಇಬ್ಬರು ಲಿಂಗಸುಗೂರು, ಒಬ್ಬ ದೇವದುರ್ಗ, ಇನ್ನುಳಿದವರು ರಾಯಚೂರಿನವರಾಗಿದ್ದಾರೆ ಎಂದರು.ಲೋಕಸಭೆ ಚುನಾವಣೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿನ 600 ರೌಡಿ ಶೀಟರ್‌ಗಳಿಂದ ವೈಯಕ್ತಿಕ ಬಾಂಡ್‌ಗಳನ್ನು ಪಡೆಯಲಾಗುತ್ತಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇಲಾಖೆಯಲ್ಲಿ ಇರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 831 ರೌಡಿ ಶೀಟರ್‌ಗಳಿದ್ದಾರೆ. ಸಮಾಜ ಘಾತುಕ ಶಕ್ತಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿ ಶಶಿಕಾಂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ದೂರು ಸಲ್ಲಿಸಿದ್ದಾರೆ. ಐಪಿಸಿ306, ರ್‍ಯಾಗಿಂಗ್ ಆ್ಯಕ್ಟ್ ಹಾಗೂ 325 ಎಸ್ಸಿಎಸ್ಟಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಡಿಎಸ್ಪಿಯವರು ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಹಂತ ಹಂತವಾಗಿ ಕ್ರಮ ಜರುಗಿಸಲಾಗುತ್ತಿದೆ. ಆಟೋ ರಿಕ್ಷಾಚಾಲಕರು ಮತ್ತು ಮಾಲೀಕರಿಗೆ ತಿಳಿವಳಿಕೆ ನೀಡಿ ಆಟೋಗಳಿಗೆ ನಂಬರ್ ಹಾಕಿಸಲಾಗಿದೆ. ಆಟೋ, ಚಾಲಕರ, ಮಾಲೀಕರ ಪೂರ್ಣ ವಿವರ ಹೊಂದಿದ ಬೋರ್ಡ್ ಆಟೋದಲ್ಲಿ ಅಳವಡಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ಸುಮಾರು 600ಕ್ಕೂ ಹೆಚ್ಚು ಆಟೋ ಚಾಲಕರು ಚಾಲನಾ ಪರವಾನಗಿ ಪಡೆದಿದ್ದಾರೆ ಎಂದರು.ಸಿಂಧನೂರು ನಗರದಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆ ಪ್ರಸ್ತಾವನೆ ಇದ್ದು, ಅಲ್ಲಿ ಸಂಚಾರ ಠಾಣೆ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ, ಡಿಎಸ್ಪಿ ವಿಜಯಕುಮಾರ ಮಡಿವಾಳ,ಪ್ರೊಬೇಷನರಿ ಡಿಎಸ್ಪಿ ಮಹಾನಂದಿ, ಅಬಕಾರಿ ಇಲಾಖೆ ಡಿಎಸ್ಪಿ ಮಂಜುನಾಥ, ಸಿಪಿಐ ಚಂದ್ರಶೇಖರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.