ಗುರುವಾರ , ಮೇ 13, 2021
35 °C

ಏಳು ತಿಂಗಳಾದರೂ `ಸುವರ್ಣ' ಗ್ರಾಮವಾಗಲಿಲ್ಲ!

ಪ್ರಜಾವಾಣಿ ವಾರ್ತೆ/ ಮನೋಜ್‌ಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಧಾರವಾಡ: ಅಡಿಗಲ್ಲು ಸಮಾರಂಭ ಮಾಡಿದಷ್ಟೇ ಉತ್ಸಾಹದಿಂದ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಹಣವನ್ನೂ ಬಿಡುಗಡೆ ಮಾಡಿದ್ದರೆ ತಾಲ್ಲೂಕಿನ ಆರು ಗ್ರಾಮಗಳು ಈಗಾಗಲೇ ಉತ್ತಮ ರಸ್ತೆ, ಒಳಚರಂಡಿ, ಕುಡಿಯುವ ನೀರು ವ್ಯವಸ್ಥೆ ಹೊಂದಬೇಕಿತ್ತು. ಆದರೆ ಯಾವೊಂದು ಗ್ರಾಮಕ್ಕೂ ಇನ್ನೂ ನಿಗದಿತ ಹಣ ಬಿಡುಗಡೆಯಾಗಿಲ್ಲ.ತಾಲ್ಲೂಕಿನ ಹಾರೋಬೆಳವಡಿ, ಮಾದನಭಾವಿ, ಕರಡಿಗುಡ್ಡ, ಬೇಲೂರ, ಕವಲಗೇರಿ, ವನಹಳ್ಳಿ ಗ್ರಾಮಗಳು 5ನೇ ಹಂತದ ಸುವರ್ಣ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದವು. ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗೆ ಚಾಲನೆಯನ್ನು ಅಂದಿನ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೆರವೇರಿಸಿದ್ದರು. ಶಾಸಕಿಯಾಗಿದ್ದ ಸೀಮಾ ಮಸೂತಿ, `ಶೀಘ್ರವೇ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳನ್ನು ಮುಕ್ತಾಯಗೊಳಿಸಲಾಗುವುದು' ಎಂದು ಭರವಸೆ ನೀಡಿದ್ದರು. ಆದರೆ ಅವರದೇ ಸರ್ಕಾರ ಆರು ಗ್ರಾಮಗಳ ಮಧ್ಯೆ ಹಂಚಿಕೆ ಮಾಡಿದ್ದ 3.98 ಕೋಟಿ ಒಟ್ಟು ಅನುದಾನದ ಪೈಕಿ ಕೇವಲ 40 ಲಕ್ಷ ರೂಪಾಯಿ ಅನುದಾನ ಮಾತ್ರ ಬಿಡುಗಡೆ ಆಗಿದೆ. ಹಾಗೆಂದು ಇದ್ದ ಹಣದಲ್ಲಿಯೇ ಕಾಮಗಾರಿ ಕೈಗೊಳ್ಳಲು ಕಾಮಗಾರಿಯ ಹೊಣೆಹೊತ್ತ ಭೂಸೇನಾ ನಿಗಮ ಸಿದ್ಧವಿಲ್ಲ. `ಹಣ ಕೈಗೆ ಬಂದರಷ್ಟೇ ಕೆಲಸ ಶುರು ಮಾಡುತ್ತೇವೆ. ಇಲ್ಲದಿದ್ದರೆ ಇಲ್ಲ' ಎಂದು ನಿಗಮದ ಅಧಿಕಾರಿಗಳು ಕಡ್ಡಿ ತುಂಡು ಮಾಡಿದ್ದಾರೆ.ಆರು ಗ್ರಾಮಗಳ ಮಧ್ಯೆ 40 ಲಕ್ಷ ಹಂಚಿಕೆ ಮಾಡಿದರೆ ಯಾವುದೇ ಕೆಲಸ ಕೈಗೊಳ್ಳುವುದು ಸಾಧ್ಯವಾಗುವುದಿಲ್ಲ. ಅದರ ಬದಲು ಒಂದೇ ಗ್ರಾಮಕ್ಕೆ ಆ ಹಣವನ್ನು ಹಂಚಿಕೆ ಮಾಡಿದರೆ ಅಲ್ಪ ಮಟ್ಟಿಗಿನ ಕೆಲಸಗಳು ನಡೆಯಬಹುದು ಎಂಬ ಬಗ್ಗೆ ಇತ್ತೀಚೆಗೆ ಧಾರವಾಡ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೂತನ ಶಾಸಕ ವಿನಯ ಕುಲಕರ್ಣಿ ಅವರೊಂದಿಗೆ ಅಧಿಕಾರಿಗಳು ಚರ್ಚೆ ನಡೆಸಿದರು. ಶಾಸಕರು ಆ ಹಣವನ್ನು ಹಾರೊಬೆಳವಡಿಗೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.`ಸರ್ಕಾರ ವಿಧಿಸಿದ ಗಡುವಿನ ಪ್ರಕಾರ ಯೋಜನೆ ಪ್ರಾರಂಭವಾದ ಎರಡು ವರ್ಷಗಳಲ್ಲಿಯೇ ಕಾಮಗಾರಿಗಳು ಮುಕ್ತಾಯವಾಗಬೇಕು. ಆದರೆ ಇಲ್ಲಿಯತನಕ ಯಾವುದೇ ಕೆಲಸಗಳು ಆರಂಭವಾಗಿಲ್ಲ. ದುಡ್ಡಿದ್ದರಲ್ಲವೇ ಕಾಮಗಾರಿಗಳನ್ನು ಪ್ರಾರಂಭಿಸುವುದು?' ಎಂದು ಪ್ರಶ್ನಿಸುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಬಂಡಿ.`40 ಲಕ್ಷದಲ್ಲಿ ಮುಗಿಯುವ ಯೋಜನೆಗಳನ್ನಷ್ಟೇ ಕೈಗೆತ್ತಿಕೊಂಡು ಮುಗಿಸುತ್ತೇವೆ. ಮತ್ತೆ ಅನುದಾನ ಬಿಡುಗಡೆಯಾದಾಗ ಇನ್ನುಳಿದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ' ಎಂದು ಅವರು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.