ಬುಧವಾರ, ಜೂನ್ 3, 2020
27 °C

ಐತಿಹಾಸಿಕ ಸಾಧನೆಯ ಕನಸು: ಸರಣಿ ವಿಜಯಕ್ಕೆ ಮಹಿ ಪಡೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಟ್ ಏಲಿಜಬೆತ್: ಟೆಸ್ಟ್ ಸರಣಿಯನ್ನು ಸಮಮಾಡಿಕೊಂಡು ಹರಿಣಗಳ ನಾಡಿನಲ್ಲಿ ಐತಿಹಾಸಿಕ ಸಾಧನೆಯ ಶ್ರೇಯ ಪಡೆದ ಭಾರತ ತಂಡದವರು ಏಕದಿನ ಸರಣಿಯನ್ನು ಗೆದ್ದು, ಕ್ರಿಕೆಟ್ ಇತಿಹಾಸದ ಪುಟದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ವಿಜಯ ಸಾಧಿಸಿಲ್ಲ ಎನ್ನುವ ನಿರಾಸೆಯನ್ನು ಮರೆಯುವ ಅವಕಾಶವೂ ಎದುರಿಗಿದೆ. ‘ಮಹಿ’ ಬಳಗದವರು 2-1ರಲ್ಲಿ ಮುನ್ನಡೆ ಸಾಧಿಸಿದ ನಂತರ ಸರಣಿ ಜಯದ ಸಾಧ್ಯತೆಗಳೂ ಹೆಚ್ಚಿವೆ. ಐದು ಪಂದ್ಯಗಳ ಸರಣಿಯ ಇನ್ನೊಂದು ಹಣಾಹಣಿಯಲ್ಲಿ ಯಶ ಪಡೆದರೆ ಬಹುಕಾಲದಿಂದ ಕಂಡ ಕನಸು ನನಸಾಗುತ್ತದೆ.

ಶುಕ್ರವಾರ ಸೇಂಟ್ ಜಾರ್ಜ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುವ ನಾಲ್ಕನೇ ಏಕದಿನ ಪಂದ್ಯವನ್ನು ಗೆದ್ದು 3-1ರಲ್ಲಿ ಮುನ್ನಡೆ ಸಾಧಿಸಿ, ಸರಣಿ ವಿಜಯವನ್ನು ಖಾತ್ರಿ ಮಾಡಿಕೊಳ್ಳುವುದು ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಯ ಆಶಯ. ಆಸೆ ಈಡೇರಿಸಿಕೊಳ್ಳಲು ಅಗತ್ಯವಾದ ಆಟವಾಡುವ ವಿಶ್ವಾಸವೂ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಚೇತರಿಕೆ ಸಾಧ್ಯವಾದರೆ; ಗ್ರೇಮ್ ಸ್ಮಿತ್ ನೇತೃತ್ವದ ತಂಡಕ್ಕೆ ಸುಲಭವಾಗಿ ಆಘಾತ ನೀಡಬಹುದು.

ಆರಂಭದ ಕ್ರಮಾಂಕದಲ್ಲಿರುವ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿಸಿದಷ್ಟು ರನ್‌ಗಳನ್ನು ಗಳಿಸುತ್ತಿಲ್ಲ. ಆದ್ದರಿಂದ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡುವವರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಯೂಸುಫ್ ಪಠಾಣ್ ಅವರಂಥ ಬಲವುಳ್ಳ ಬ್ಯಾಟ್ಸ್‌ಮನ್ ಇದ್ದರೂ, ಅವರ ಮೇಲೆಯೇ ಹೆಚ್ಚಿನ ಹೊರೆ ಬೀಳುವಂತೆ ಮಾಡುವುದು ಅಪಾಯಕಾರಿ. ಇನಿಂಗ್ಸ್ ಆರಂಭವು ಉತ್ತಮವಾದಲ್ಲಿ ಭಾರತವು ಕೊನೆಯ ಎರಡೂ ಪಂದ್ಯಗಳಲ್ಲಿಯೂ ವಿಜಯದ ಸಂಭ್ರಮದಿಂದ ನಲಿಯಲು ಸಾಧ್ಯ.

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಗದ ರೀತಿಯಲ್ಲಿ ತಡೆದು ನಿಲ್ಲಿಸುವಂಥ ಸತ್ವವುಳ್ಳ ಬೌಲಿಂಗ್ ದಾಳಿಯನ್ನು ಪ್ರವಾಸಿ ತಂಡದವರು ಕಳೆದ ಎರಡು ಪಂದ್ಯಗಳಲ್ಲಿ ನಡೆಸಿದ್ದಾರೆ. ಆದರೆ ಕೊರತೆ ಕಾಣಿಸಿದ್ದು ಬ್ಯಾಟಿಂಗ್‌ನಲ್ಲಿ; ಅದರಲ್ಲಿಯೂ ಸರದಿಯಲ್ಲಿ ಮೊದಲು ಬರುವವರು ತಮ್ಮ ಜವಾಬ್ದಾರಿಯನ್ನು ಅರಿತು ಆಡುತ್ತಿಲ್ಲ. ಇದೇ ಅಂಶವು ಆತಂಕಕ್ಕೆ ಕಾರಣವಾಗಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್‌ಗಳ ಅಂತರದಿಂದ ಆತಿಥೇಯರನ್ನು ಮಣಿಸಿರುವ ಭಾರತಕ್ಕೆ ಈಗ ಸತತ ಎರಡು ಗೆಲುವಿನ ಉತ್ಸಾಹ. ಈ ಉತ್ಸಾಹವು ನಾಲ್ಕನೆಯ ಹಣಾಹಣಿಯಲ್ಲಿ ಇಮ್ಮಡಿಯಾದಲ್ಲಿ ಸರಣಿ ‘ಮಹಿ’ ಬಳಗದ ವಶಕ್ಕೆ! ಕೊನೆಯ ಎರಡರಲ್ಲಿ ಒಂದನ್ನು ಗೆದ್ದರೂ ಸರಣಿ ಜಯ ಸಾಧ್ಯ. ಶುಕ್ರವಾರವೇ ಸರಣಿ ಗೆಲುವಿನ ವ್ಯವಹಾರ ಪೂರೈಸುವ ಉದ್ದೇಶವನ್ನು ‘ಮಹಿ’ ಬಳಗ ಹೊಂದಿದೆ.

ಸ್ಮಿತ್ ಬಳಗದವರು ಪುಟಿದೆದ್ದು ಮತ್ತೆ ಸಮಬಲ ಸಾಧಿಸಿ, ಸರಣಿಯು ರೋಚಕ ಘಟ್ಟ ತಲುಪುವಂತೆ ಮಾಡುವ ಆಶಯ ಹೊಂದಿದ್ದಾರೆ. ಎರಡು ಪಂದ್ಯಗಳಲ್ಲಿ ತಪ್ಪಿರುವ ಲೆಕ್ಕಾಚಾರವನ್ನು ಸರಿದೂಗಿಸಿಕೊಂಡು ಹೋರಾಡಲು ದಕ್ಷಿಣ ಆಫ್ರಿಕಾದವರು ಯೋಜನೆಯ ಬಲೆಯನ್ನು ಹೆಣೆದುಕೊಂಡಿದ್ದಾರೆ. ಭಾರತದಂತೆಯೇ ಆತಿಥೇಯರಿಗೂ ಬ್ಯಾಟಿಂಗ್ ವಿಭಾಗದಲ್ಲಿನ ಕೊರತೆಯು ಅಪಾಯಕಾರಿಯಾಗಿ ಕಾಡುತ್ತಿದೆ. ತಮ್ಮದೇ ನಾಡಿನಲ್ಲಿ ನಿರೀಕ್ಷಿಸಿದಷ್ಟು ವೇಗವಾಗಿ ರನ್ ಗಳಿಸುವಲ್ಲಿಯೂ ಸಮಸ್ಯೆ ಕಾಡಿದೆ.

ಡೆಲ್ ಸ್ಟೇನ್ ಅವರಂತೆ ಬಾಕಿ ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ಭಯ ಹುಟ್ಟಿಸಿಲ್ಲ. ಇದು ಸಹ ದಕ್ಷಿಣ ಆಫ್ರಿಕಾ ತಂಡದ ಚಿಂತಕರ ಚಾವಡಿಯಲ್ಲಿ ಚರ್ಚೆಗೆ ಅವಕಾಶ ನೀಡಿದೆ. ಮೂರನೇ ಪಂದ್ಯದಲ್ಲಿ ಸ್ಟೇನ್ ಪಾಲಿನ ಓವರ್‌ಗಳು ಪೂರ್ಣಗೊಂಡ ನಂತರ ಭಾರತದ ಸರದಿಯ ಕೊನೆಯ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವುದಕ್ಕೆ ಸಾಧ್ಯವಾಗಲಿಲ್ಲ. ಇನಿಂಗ್ಸ್ ಆರಂಭದಲ್ಲಿ ವಿಕೆಟ್ ಕಬಳಿಸಿದಾಗಿನ ಹುಮ್ಮಸ್ಸನ್ನು ಕಾಯ್ದುಕೊಂಡು ಹೋಗುವುದೇ ಸವಾಲಾಗಿದೆ. ಈ ನಿಟ್ಟಿನಲ್ಲಿ ಬೌಲಿಂಗ್ ದಾಳಿಯ ಯೋಜನೆಯನ್ನು ಶುಕ್ರವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದವರು ಬದಲಿಸಿದರೆ ಅಚ್ಚರಿಯಿಲ್ಲ.

ತಂಡಗಳು

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಮುರಳಿ ವಿಜಯ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಯೂಸುಫ್ ಪಠಾಣ್, ಹರಭಜನ್ ಸಿಂಗ್, ಜಹೀರ್ ಖಾನ್, ಮುನಾಫ್ ಪಟೇಲ್, ಆಶಿಶ್ ನೆಹ್ರಾ, ಎಸ್.ಶ್ರೀಶಾಂತ್, ಇಶಾಂತ್ ಶರ್ಮ, ಆರ್.ಅಶ್ವಿನ್, ಪಿಯೂಶ್ ಚಾವ್ಲಾ ಮತ್ತು ಪಾರ್ಥಿವ್ ಪಟೇಲ್.

ದಕ್ಷಿಣ ಆಫ್ರಿಕಾ: ಗ್ರೇಮ್ ಸ್ಮಿತ್ (ನಾಯಕ), ಹಾಶೀಮ್ ಆಮ್ಲಾ, ಜಾನ್ ಬೊಥಾ, ಅಬ್ರಹಾಮ್ ಡಿ ವೀಲಿಯರ್ಸ್, ಜೆನ್ ಪಾಲ್ ಡುಮಿನಿ, ಫಾಫ್ ಡು ಪ್ಲೆಸ್ಸಿಸ್, ಇಮ್ರಾನ್ ತಾಹೀರ್, ಕಾಲಿನ್ ಇನ್‌ಗ್ರಾಮ್, ಡೇವಿಡ್ ಮಿಲ್ಲರ್, ಮಾರ್ನ್ ಮಾರ್ಕೆಲ್, ವಯ್ನೆ ಪರ್ನೆಲ್, ರಾಬಿನ್ ಪೀಟರ್ಸನ್, ಡೆಲ್ ಸ್ಟೇನ್ ಮತ್ತು ಲಾನ್‌ವಾಬೊ ತ್ಸೊತ್ಸೊಬೆ.

ಪಂದ್ಯ ಆರಂಭ (ಭಾರತೀಯ ಕಾಲಮಾನ): ಸಂಜೆ 6.00ಕ್ಕೆ.

ನೇರ ಪ್ರಸಾರ: ಟೆನ್ ಕ್ರಿಕೆಟ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.