ಗುರುವಾರ , ಜೂಲೈ 9, 2020
28 °C

ಐಪಿಎಲ್: ಬೋಲಿಂಜರ್ ಸ್ಥಾನಕ್ಕೆ ಟಿಮ್ ಸೌಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಪಿಎಲ್: ಬೋಲಿಂಜರ್ ಸ್ಥಾನಕ್ಕೆ ಟಿಮ್ ಸೌಥಿ

ನವದೆಹಲಿ (ಪಿಟಿಐ): ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಟಿಮ್ ಸೌಥಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಸಾಧ್ಯತೆಯಿದೆ.ಸೌಥಿ ಅವರು ಆಸ್ಟ್ರೇಲಿಯಾದ ವೇಗಿ ಡಗ್ ಬೋಲಿಂಜರ್ ಅವರಿಗೆ ಬದಲಿ ಆಟಗಾರನಾಗಿ ಚೆನ್ನೈ ತಂಡವನ್ನು ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಐಪಿಎಲ್ ನಾಲ್ಕನೇ ಋತುವಿನ ಟೂರ್ನಿ ಏಪ್ರಿಲ್ 8 ರಿಂದ ಅರಂಭವಾಗಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬೋಲಿಂಜರ್ ಈ ವೇಳೆಗೆ ದೈಹಿಕ ಸಾಮರ್ಥ್ಯ ಮರಳಿ ಪಡೆಯುವ ಸಾಧ್ಯತೆ ಕಡಿಮೆ. ಈ ಕಾರಣ ಬೋಲಿಂಜರ್ ಬದಲಿಗೆ ಸೌಥಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಚೆನ್ನೈ ತಂಡದ ಆಡಳಿತ ಮಂಡಳಿ ಐಪಿಎಲ್ ಆಡಳಿತ ಮಂಡಳಿಯನ್ನು ಕೇಳಿಕೊಂಡಿದೆ.ಟಿಮ್ ಸೌಥಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಿದ್ದಾರೆ. ಒಟ್ಟು 18 ವಿಕೆಟ್ ಪಡೆದಿರುವ ಅವರು ನ್ಯೂಜಿಲೆಂಡ್ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಡೇನಿಯಲ್ ವೆಟೋರಿ ಬಳಗ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವಲ್ಲಿ ಸೌಥಿ ಪ್ರಮುಖ ಪಾತ್ರ ವಹಿಸಿದ್ದರು.ಕಿವೀಸ್ ಪರ 13 ಟೆಸ್ಟ್ ಹಾಗೂ 51 ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು ಕ್ರಮವಾಗಿ 35 ಮತ್ತು 70 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ರೀತಿ 19 ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ.ಪಾಕಿಸ್ತಾನ ತಂಡದ ವಿರುದ್ಧ ಕಳೆದ ವರ್ಷ ಆಕ್ಲೆಂಡ್‌ನಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಅವರು 18 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.