ಸೋಮವಾರ, ಮೇ 23, 2022
30 °C

ಐರ್ಲೆಂಡ್‌ಗೆ ಅಚ್ಚರಿಯ ಐತಿಹಾಸಿಕ ವಿಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಲವಾದ ಬಿಗಿಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದು, ಐರ್ಲೆಂಡ್ ತಂಡದವರು ಗುರಿ ಮುಟ್ಟುವುದು ಕಷ್ಟ...ಕಷ್ಟ... ಎಂದು ಚಡಪಡಿಸುವಂತೆ ಮಾಡುವ ಉದ್ದೇಶ ಹೊಂದಿದ್ದ ಬಲಾಢ್ಯ ಇಂಗ್ಲೆಂಡ್ ತಂಡಕ್ಕೇ ಆಘಾತ! ಇಂಥದೊಂದು ಫಲಿತಾಂಶವನ್ನು ಖಂಡಿತವಾಗಿಯೂ ಯಾರೂ ನಿರೀಕ್ಷಿಸಿರಲಿಲ್ಲ. ಆದ್ದರಿಂದಲೇ ಬೆರಗಾಗಿ ಎದ್ದು ನಿಂತ ಕ್ರಿಕೆಟ್ ಪ್ರೇಮಿಗಳು ‘ವಾಹ್ ಐರ್ಲೆಂಡ್...; ಅಬ್ಬಾ ಕೆವಿನ್ ಓಬ್ರಿಯನ್...’ ಎಂದರು. ಕ್ರಿಕೆಟ್ ಕ್ರೀಡೆಯ ಕೂಸನ್ನು ಲಾಲಿಸಿ ಬೆಳೆಸಿ, ವಿಶ್ವಕ್ಕೆ ಪರಿಚಯಿಸಿದ ದೇಶ ಇಂಗ್ಲೆಂಡ್; ಕೆಲವೇ ವರ್ಷಗಳ ಹಿಂದಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟದ್ದು ಐರ್ಲೆಂಡ್. ಇವೆರಡೂ ತಂಡಗಳ ನಡುವೆ ಹೋಲಿಕೆ ಸಾಧ್ಯವೇ ಇಲ್ಲ. ಅಸೀಮ ಬಲದ ಪರಾಕ್ರಮಿಯ ಎದುರು ಅನುಭವದ ಕವಚವಿಲ್ಲದೆಯೇ ಯುದ್ಧಕ್ಕೆ ನಿಂತ ಸೈನಿಕನಂತೆ ಕಾಣಿಸಿದ್ದ ವಿಲಿಯಮ್ ಪೋರ್ಟರ್‌ಫೀಲ್ಡ್ ನಾಯಕತ್ವದ ಐರ್ಲೆಂಡ್ ಈ ಬಾರಿಯ ವಿಶ್ವಕಪ್‌ನಲ್ಲಿ ಅಚ್ಚರಿಯೊಂದು ಸಾಧ್ಯವಾಗುವಂತೆ ಮಾಡಿತು.ಆದ್ದರಿಂದಲೇ ಅದು ಮೂರು ವಿಕೆಟ್‌ಗಳ ಅಂತರದಿಂದ ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ಇಂಗ್ಲೆಂಡ್‌ಗೆ ಸೋಲಿನ ಕಹಿಯುಣಿಸಿದಾಗ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ತೆರೆದುಕೊಂಡಿತು. ಇಂಗ್ಲೆಂಡ್ ಎದುರು ಮೊಟ್ಟ ಮೊದಲ ವಿಜಯದ ಸಂಭ್ರಮ ಐರ್ಲೆಂಡ್ ತಂಡದ್ದಾಯಿತು. ಜೊತೆಗೆ ದೊಡ್ಡ ಗುರಿ ಮುಟ್ಟಿದ ದಾಖಲೆಯ ಹಿರಿಮೆಯ ಗರಿಯೂ ಇದೇ ತಂಡದ ಕಿರೀಟದ ಅಲಂಕಾರವಾಯಿತು.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಶ್ವಕಪ್ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಲೆಕ್ಕಾಚಾರವೆಲ್ಲ ತಲೆಕೆಳಗೆ. ದೊಡ್ಡ ಮೊತ್ತ ಗಳಿಸಿದರೂ ಅದಕ್ಕೆ ಯಶ ಕೈಗೆಟುಕಲಿಲ್ಲ. ಎದುರಾಳಿ ಐರ್ಲೆಂಡ್‌ನವರು ಕಷ್ಟದ ನಡುವೆಯೂ ಇಷ್ಟವಾಗುವಂತೆ ಹೋರಾಡಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಲ್ಲಿರುವ ಇಂಗ್ಲೆಂಡ್‌ಗೆ ನಿಕಟ ಪೈಪೋಟಿ ನೀಡುವುದು ಐರ್ಲೆಂಡ್‌ಗೆ ಸಾಧ್ಯವಾಗುವುದಿಲ್ಲ ಎಂದಿದ್ದ ಕ್ರಿಕೆಟ್ ಪಂಡಿತರ ಭವಿಷ್ಯವೂ ಹುಸಿ. ಎದುರಾಳಿಗಳ ಮನದಲ್ಲಿ ತಮ್ಮ ಬಗ್ಗೆ ಗೌರವ ಹುಟ್ಟುವಷ್ಟು ಚೆನ್ನಾಗಿ ಆಡಬೇಕೆನ್ನುವ ಆಶಯದೊಂದಿಗೆ ಹೋರಾಡಲು ಐರ್ಲೆಂಡ್‌ನವರು ಬಯಸಿದ್ದರು. ಆ ನಿಟ್ಟಿನಲ್ಲಿ ಪೋರ್ಟರ್‌ಫೀಲ್ಡ್ ಬಳಗದವರು ತಕ್ಕ ಪ್ರಯತ್ನವನ್ನೇ ಮಾಡಿ, ಯಶಸ್ಸಿನ ಹೊಸದೊಂದು ಯುಗಾರಂಭ ಮಾಡಿದರು.ಕ್ವಾರ್ಟರ್ ಫೈನಲ್ ತಲುಪಲು ಮುಂದಿನ ಪ್ರತಿಯೊಂದು ಪಂದ್ಯ ಗೆಲ್ಲಬೇಕೆನ್ನುವ ಅನಿವಾರ್ಯ ಸ್ಥಿತಿಯಲ್ಲಿಯೂ ಒತ್ತಡದಿಂದ ಮುಕ್ತವಾಗಿ ಆಡಿದ ಐರ್ಲೆಂಡ್, ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವ ಛಲವುಳ್ಳ ತಂಡವೆನ್ನುವುದೂ ಇಲ್ಲಿ ಸಾಬೀತಾಯಿತು. ‘ಟಾಸ್’ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತನ್ನ ಪಾಲಿನ ಐವತ್ತು ಓವರುಗಳಲ್ಲಿ 327 ರನ್ ಗಳಿಸಿದರೂ, ಎಂಟು ವಿಕೆಟ್ ಕಳೆದುಕೊಂಡಿತು ಎನ್ನುವುದನ್ನು ಮರೆಯುವಂತಿಲ್ಲ. ಇಷ್ಟೊಂದು ವಿಕೆಟ್ ಪತನಕ್ಕೆ ಕಾರಣ ಐರ್ಲೆಂಡ್‌ನವರ ಪ್ರಭಾವಿ ಬೌಲಿಂಗ್. ವಿಕೆಟ್ ಉರುಳುವುದು ಕಡಿಮೆ ಆಗಿದ್ದರೆ ಸ್ಟ್ರಾಸ್ ನಾಯಕತ್ವದ ಪಡೆಯು ಇನ್ನೂ ದೊಡ್ಡ ಮೊತ್ತ ಪೇರಿಸುವ ಅಪಾಯವಿತ್ತು.ತನ್ನ ಮಟ್ಟಿಗೆ ಅಸಾಧ್ಯ ಎನಿಸಿದ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡವು ಇಂಗ್ಲೆಂಡ್ ಬೌಲರ್‌ಗಳು ಬೀಸಿದ ಬಲೆಗಂತೂ ಬೀಳಲಿಲ್ಲ. ವಿಕೆಟ್‌ಗಳನ್ನು ಕಾಯ್ದುಕೊಳ್ಳುವ ಸಾಹಸ ಮಾಡುವ ಜೊತೆಗೆ ಎದುರಾಳಿ ಬೌಲರ್‌ಗಳು ಚಡಪಡಿಸುವಂತೆಯೂ ಮಾಡಿತು. ಆದ್ದರಿಂದಲೇ ಇಂಗ್ಲೆಂಡ್ ಎದುರು ಮೊಟ್ಟ ಮೊದಲ ವಿಜಯ ಪಡೆದು, ಐತಿಹಾಸಿಕ ಸಾಧನೆ ಮಾಡಬೇಕೆನ್ನುವ ಅದರ ಉದ್ದೇಶವೂ ಈಡೇರಿತು. ಐರ್ಲೆಂಡ್ 49.1 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 329 ರನ್ ಗಳಿಸುವ ಮೂಲಕ ದೊಡ್ಡ ಗುರಿ ಬೆನ್ನಟ್ಟಿ ಗೆದ್ದ ಶ್ರೀಲಂಕಾ (312 ಗುರಿ, 1992) ವಿಶ್ವಕಪ್ ದಾಖಲೆ .ಇದರೊಂದಿಗೆ ಅತಿ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿ ವಿಶ್ವಕಪ್ ಪಂದ್ಯದಲ್ಲಿ ವಿಜಯ ಸಾಧಿಸಿದ ಶ್ರೇಯವನ್ನು ಕೂಡ ಐರ್ಲೆಂಡ್ ಪಡೆದುಕೊಂಡಿತು. ಇಂಥದೊಂದು ವಿಶಿಷ್ಟವಾದ ವಿಜಯಕ್ಕೆ ಕಾರಣ ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಶತಕ (50 ಎಸೆತ, 13 ಬೌಂಡರಿ, 6 ಸಿಕ್ಸರ್) ಗಳಿಸಿದ ಕೆವಿನ್ ಓಬ್ರಿಯನ್ (113; 63 ಎ., 13 ಬೌಂಡರಿ, 6 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್. ಮ್ಯಾಥ್ಯೂ ಹೇಡನ್ ದಾಖಲೆ (66 ಎಸೆತಗಳಲ್ಲಿ 100) ಮುರಿದ ಓಬ್ರಿಯನ್ ಅವರೇ ಪಂದ್ಯದ ‘ಹೀರೋ’.ಬ್ಯಾಟಿಂಗ್ ವಿಭಾಗದಲ್ಲಿ ಚೇತರಿಕೆ ತೋರುತ್ತೇವೆ ಎಂದು ಹೇಳಿದ್ದ ಐರ್ಲೆಂಡ್ ತಂಡದ ನಾಯಕನ ಮಾತು ಇಲ್ಲಿ ನಿಜವಾಯಿತು. ಕೆವಿನ್ ಅಂತೂ ಇಂಗ್ಲೆಂಡ್ ಬೌಲರ್‌ಗಳು ತಬ್ಬಿಬ್ಬಾಗಿ ನಿಲ್ಲುವಂತೆ ಬ್ಯಾಟ್ ಬೀಸಿದರು. ಅವರು 91 ರನ್‌ನಲ್ಲಿದ್ದಾಗ ಸ್ಟ್ರಾಸ್ ಅವರು ಕ್ಯಾಚ್ ಪಡೆಯುವಲ್ಲಿ ವಿಫಲವಾಗಿದ್ದು ಇಂಗ್ಲೆಂಡ್‌ಗೆ ದುಬಾರಿ ಎನಿಸಿತು. ಸ್ಟ್ರಾಸ್ ಪಡೆಯ ಬಿಗುವಿನ ದಾಳಿಯ ನಡುವೆಯೂ ಪಾಲ್ ಸ್ಟಿರ್ಲಿಂಗ್, ಎಡ್ ಜಾಯ್ಸಿ, ನೀಲ್ ಓಬ್ರಿಯನ್ ಹಾಗೂ ಅಲೆಕ್ಸ್ ಕ್ಯೂಸೆಕ್ ಕೂಡ ಐರ್ಲೆಂಡ್ ತಂಡದ ಮೊತ್ತಕ್ಕೆ ಬೆಲೆಯುಳ್ಳ ಕೊಡುಗೆ ನೀಡುವ ಮೂಲಕ, ಜೊತೆಯಾಟಗಳನ್ನು ಬೆಳೆಸಿದರು.ಇಂಗ್ಲೆಂಡ್ ಇನಿಂಗ್ಸ್ ಶುರುವಿನಲ್ಲಿಯೇ ಬಲ ಪಡೆದುಕೊಂಡಿತು. ನಾಯಕ ಸ್ಟ್ರಾಸ್ (34; 37 ಎ., 2 ಬೌಂಡರಿ, 1 ಸಿಕ್ಸರ್) ಹಾಗೂ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ (59; 50 ಎ., 7 ಬೌಂಡರಿ, 2 ಸಿಕ್ಸರ್) ಜೊತೆಗೂಡಿ ಮೊದಲ ವಿಕೆಟ್‌ನಲ್ಲಿಯೇ 91 ರನ್ ಗಳಿಸಿದಾಗ ಇಂಗ್ಲೆಂಡ್ ಮುನ್ನೂರರ ಗಡಿ ದಾಟುವ ವಿಶ್ವಾಸ ಮೂಡಿತು. ಇಂಗ್ಲೆಂಡ್ ಬಲದ ರೆಕ್ಕೆ ಮೂಡುವಂತೆ ಮಾಡಿದ್ದು ಜೋನಾಥನ್ ಟ್ರಾಟ್ (92; 92 ಎ., 9 ಬೌಂಡರಿ) ಹಾಗೂ ಇಯಾನ್ ಬೆಲ್ (81; 86 ಎ., 6 ಬೌಂಡರಿ, 1 ಸಿಕ್ಸರ್). ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟ 167 ರನ್‌ಗಳವರೆಗೂ ಮುರಿಯದಂತೆ ಎಚ್ಚರವಹಿಸಿದರು.ನಂತರ ಐರ್ಲೆಂಡ್ ಬೌಲರ್‌ಗಳ ಅಬ್ಬರ ಹೆಚ್ಚಿತು. ಅಂಥ ಪರಿಸ್ಥಿತಿಯಲ್ಲಿಯೂ ಪಾಲ್ ಕಾಲಿಂಗ್‌ವುಡ್ ಬಿರುಸಿನ ಆಟವಾಡುವ ಆತುರ ತೋರಿ ಜಾನ್ ಮೂನಿ ಎಸೆತದಲ್ಲಿ ೆವಿನ್ ಓಬ್ರಿಯನ್‌ಗೆ ಕ್ಯಾಚಿತ್ತು ಆಘಾತ ಅನುಭವಿಸಿದರು. ಅದಕ್ಕೂ ಮುನ್ನ ಪಾಲ್ ಅದ್ಭುತವಾದ ಸಿಕ್ಸರ್ ಸಿಡಿಸಿದ್ದು ಸ್ಮರಣೀಯ.ಈ ವಿಶ್ವಕಪ್‌ನಲ್ಲಿ ಚೆಂಡನ್ನು ಅತ್ಯಂತ ದೂರಕ್ಕೆ ಸಿಕ್ಸರ್‌ಗೆ ಎತ್ತಿದ ಮೂರನೇ ಬ್ಯಾಟ್ಸ್‌ಮನ್ ಎನ್ನುವ ಶ್ರೇಯಕ್ಕೆ ಅವರು ಪಾತ್ರರಾದರು. ಐರ್ಲೆಂಡ್‌ನ ಕೆವಿನ್ ಓಬ್ರಿಯನ್ ಹಾಗೂ ಭಾರತದ ಸಚಿನ್ ಕ್ರಮವಾಗಿ 102 ಹಾಗೂ 97 ಮೀಟರ್ ದೂರ ಚೆಂಡನ್ನು ಸಿಕ್ಸರ್‌ಗೆ ಎತ್ತಿದ್ದರೆ, ಪಾಲ್ ಚೆಂಡನ್ನು ಗ್ಯಾಲರಿಯ ಮೇಲೆ ಕಳುಹಿಸಿದಾಗ ಚೆಂಡು ಕ್ರಮಿಸಿದ ಅಂತರ 96 ಮೀಟರ್!ಸ್ಕೋರು ವಿವರ

ಇಂಗ್ಲೆಂಡ್: 50 ಓವರುಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 327

ಆ್ಯಂಡ್ರ್ಯೂ ಸ್ಟ್ರಾಸ್ ಬಿ ಜಾರ್ಜ್ ಡಾಕ್ರೆಲ್  34

ಕೆವಿನ್ ಪೀಟರ್ಸನ್ ಸಿ ಓಬ್ರಿಯನ್ ಬಿ ಪಾಲ್ ಸ್ಟಿರ್ಲಿಂಗ್  59

ಜೋನಾಥನ್ ಟ್ರಾಟ್ ಬಿ ಜಾನ್ ಮೂನಿ  92

ಇಯಾನ್ ಬೆಲ್ ಸಿ ಪಾಲ್ ಸ್ಟಿರ್ಲಿಂಗ್ ಬಿ ಜಾನ್ ಮೂನಿ  81

ಪಾಲ್ ಕಾಲಿಂಗ್‌ವುಡ್ ಸಿ ಕೆವಿನ್ ಓಬ್ರಿಯನ್ ಬಿ ಜಾನ್ ಮೂನಿ      16

ಮ್ಯಾಟ್ ಪ್ರಿಯೋರ್ ಬಿ ಟ್ರೆಂಟ್ ಜಾನ್‌ಸ್ಟನ್  06

ಟಿಮ್ ಬ್ರೆಸ್ನನ್ ಸಿ ಟ್ರೆಂಟ್ ಜಾನ್‌ಸ್ಟನ್ ಬಿ ಜಾನ್ ಮೂನಿ  04

ಮೈಕಲ್ ಯಾರ್ಡಿ ಬಿ ಟ್ರೆಂಟ್ ಜಾನ್‌ಸ್ಟನ್  03

ಗ್ರೇಮ್ ಸ್ವಾನ್ ಔಟಾಗದೆ  09

ಇತರೆ: (ಬೈ-1, ಲೆಗ್‌ಬೈ-2, ವೈಡ್-20) 23

ವಿಕೆಟ್ ಪತನ: 1-91 (ಆ್ಯಂಡ್ರ್ಯೂ ಸ್ಟ್ರಾಸ್; 13.3), 2-111 (ಕೆವಿನ್ ಪೀಟರ್ಸನ್; 16.6), 3-278 (ಇಯಾನ್ ಬೆಲ್; 42.6), 4-288 (ಜೋನಾಥನ್ ಟ್ರಾಟ್; 44.3), 5-299 (ಮ್ಯಾಟ್ ಪ್ರಿಯೋರ್; 45.6), 6-312 (ಪಾಲ್ ಕಾಲಿಂಗ್‌ವುಡ್; 46.6), 7-317 (ಮೈಕಲ್ ಯಾರ್ಡಿ; 48.3),  8-327 (ಟಿಮ್ ಬ್ರೆಸ್ನನ್; 49.6).

ಬೌಲಿಂಗ್: ಬಾಯ್ಡೆ ರಂಕಿನ್ 7-0-51-0 (ವೈಡ್-4), ಟ್ರೆಂಟ್ ಜಾನ್‌ಸ್ಟನ್ 10-0-58-2, ಅಲೆಕ್ಸ್ ಕ್ಯೂಸೆಕ್ 4-0-39-0 (ವೈಡ್-1), ಜಾರ್ಜ್ ಡಾಕ್ರೆಲ್ 10-0-68-1 (ವೈಡ್-5), ಜಾನ್ ಮೂನಿ 9-0-63-4 (ವೈಡ್-1), ಪಾಲ್ ಸ್ಟಿರ್ಲಿಂಗ್ 10-0-45-1

ಐರ್ಲೆಂಡ್: 49.1 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 329

ವಿಲಿಯಮ್ ಪೋರ್ಟರ್‌ಫೀಲ್ಡ್ ಬಿ ಜೇಮ್ಸ್ ಆ್ಯಂಡರ್ಸನ್  00

ಪಾಲ್ ಸ್ಟಿರ್ಲಿಂಗ್ ಸಿ ಕೆವಿನ್ ಪೀಟರ್ಸನ್ ಬಿ ಟಿಮ್ ಬ್ರೆಸ್ನನ್  32

ಎಡ್ ಜಾಯ್ಸೆ ಸ್ಟಂಪ್ಡ್ ಮ್ಯಾಟ್ ಪ್ರಿಯೋರ್ ಬಿ ಗ್ರೇಮ್ ಸ್ವಾನ್    32

ನೀಲ್ ಓಬ್ರಿಯನ್ ಬಿ ಗ್ರೇಮ್ ಸ್ವಾನ್  29

ಗ್ಯಾರಿ ವಿಲ್ಸನ್ ಎಲ್‌ಬಿಡಬ್ಲ್ಯು ಬಿ ಗ್ರೇಮ್ ಸ್ವಾನ್  03

ಕೆವಿನ್ ಓಬ್ರಿಯನ್ ರನ್‌ಔಟ್ (ಬ್ರೆಸ್ನನ್/ಪ್ರಿಯೋರ್)  113

ಅಲೆಕ್ಸ್ ಕ್ಯೂಸೆಕ್ ರನ್‌ಔಟ್ (ಕಾಲಿಂಗ್‌ವುಡ್/ಬ್ರಾಡ್)  47

ಜಾನ್ ಮೂನಿ ಔಟಾಗದೆ  33

ಟ್ರೆಂಟ್ ಜಾನ್‌ಸ್ಟನ್ ಔಟಾಗದೆ  07

ಇತರೆ: (ಬೈ-5, ಲೆಗ್‌ಬೈ-16, ವೈಡ್-12)  33

ವಿಕೆಟ್ ಪತನ: 1-0 (ವಿಲಿಯಮ್ ಪೋರ್ಟರ್‌ಫೀಲ್ಡ್; 0.1), 2-62 (ಪಾಲ್ ಸ್ಟಿರ್ಲಿಂಗ್; 9.5), 3-103 (ನೀಲ್ ಓಬ್ರಿಯನ್; 20.2), 4-106 (ಎಡ್ ಜಾಯ್ಸಿ, 22.2), 5-111 (ಗ್ಯಾರಿ ವಿಲ್ಸನ್; 24.2), 6-273 (ಅಲೆಕ್ಸ್ ಕ್ಯೂಸೆಕ್; 41.3), 7-317 (ಕೆವಿನ್ ಓಬ್ರಿಯನ್; 48.1).

ಬೌಲಿಂಗ್: ಜೇಮ್ಸ್ ಆ್ಯಂಡರ್ಸನ್ 8.1-1-49-1 (ವೈಡ್-1), ಸ್ಟುವರ್ಟ್ ಬ್ರಾಡ್ 9-0-73-0 (ವೈಡ್-2), ಟಿಮ್ ಬ್ರೆಸ್ನನ್ 10-0-64-1 (ವೈಡ್-2), ಮೈಕಲ್ ಯಾರ್ಡಿ 7-0-49-0 (ವೈಡ್-2), ಗ್ರೇಮ್ ಸ್ವಾನ್ 10-0-47-3, ಪಾಲ್ ಕಾಲಿಂಗ್‌ವುಡ್ 5-0-26-0

ಫಲಿತಾಂಶ: ಐರ್ಲೆಂಡ್ ತಂಡಕ್ಕೆ 3 ವಿಕೆಟ್‌ಗಳ ಗೆಲುವು.

ಪಾಯಿಂಟ್ಸ್: ಐರ್ಲೆಂಡ್-2, ಇಂಗ್ಲೆಂಡ್-0ಪಂದ್ಯ ಶ್ರೇಷ್ಠ: ಕೆವಿನ್ ಓಬ್ರಿಯನ್ (ಐರ್ಲೆಂಡ್).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.