ಗುರುವಾರ , ಫೆಬ್ರವರಿ 25, 2021
23 °C

ಐಸ್‌ಕ್ರೀಂ ಸ್ವಾದ ವೈವಿಧ್ಯ

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

ಐಸ್‌ಕ್ರೀಂ ಸ್ವಾದ ವೈವಿಧ್ಯ

ಬೆೀಸಿಗೆ ಬಂದಾಗಿದೆ. ನೆತ್ತಿಯೂ ಸುಡುತ್ತಿದೆ, ಕಾಲಡಿಯ ನೆಲ ಕೆಂಡದಂತಾಗಿದೆ. ಬಿಸಿಲಿನಲ್ಲಿ ನಡೆಯುವುದಂತೂ ಆಗದ ಮಾತು. ತೆಳು ಹತ್ತಿಯ ಬಟ್ಟೆ ತೊಟ್ಟು, ತಲೆಗೆ ಟೋಪಿ, ತಂಪು ಕನ್ನಡಕ, ಛತ್ರಿ ಹಿಡಿದು ಓಡಾಡುವ ದೃಶ್ಯ ಈಗ ಮಾಮೂಲು. ಧಗೆಯ ನಡುವೆ ತೀರದ ದಾಹ. ದಾಹ ತೀರಿಸಲು ತರಹೇವಾರಿ ಹಣ್ಣುಗಳು ಬಂದಿವೆ. ಪಾನೀಯಗಳೂ ಇವೆ. ಎಳನೀರು, ಕಲ್ಲಂಗಡಿ, ನಿಂಬೆ, ಸೇಬು, ದ್ರಾಕ್ಷಿ, ಕರ್ಬೂಜ, ಮಾವು, ಕಿತ್ತಳೆ, ಮೂಸಂಬಿ ಶರಬತ್ತಿಗೆ ಹಿರಿಯರು ಮೊರೆಹೋದರೆ, ಮಕ್ಕಳು– ಯುವಕರು ದಾಹ ತೀರಿಸಿಕೊಳ್ಳಲು  ಐಸ್‌ಕ್ರೀಂ ಪಾರ್ಲರ್‌ಗೆ ಲಗ್ಗೆ ಇಡುತ್ತಿದ್ದಾರೆ. ನಗರದಲ್ಲಿ ನೂರಾರು ಐಸ್‌ಕ್ರೀಂ ಅಂಗಡಿಗಳಿವೆ. ಅಲ್ಲಿ ಹತ್ತಾರು ಬಗೆಯ ಐಸ್‌ಕ್ರೀಂಗಳು ಸಿಗುತ್ತಿವೆ. ಪಾರ್ಲರ್‌ನಲ್ಲಿ ಗೆಳೆಯರೊಂದಿಗೆ ಕುಳಿತು ಬಗೆಬಗೆ ಐಸ್‌ಕ್ರೀಂ ತಿಂದು ಹೊಟ್ಟೆ, ಮನಸು ತಂಪಾಗಿಸಿಕೊಳ್ಳುವ ಯುವಕರಿಗೆ ಬಿಸಿಲ ಧಗೆಯೂ ಮೋಜಿನ ಕ್ಷಣವೇ. ಪ್ರೇಮಿಗಳ ನೆಚ್ಚಿನ ಜಾಗ ಐಸ್‌ಕ್ರೀಂ ಪಾರ್ಲರ್.ಕೋನ್‌ಗೆ ಐಸ್‌ಕ್ರೀಂ ತುಂಬಿ ಕೊಡುವ ಹುಡುಗನಿಗೆ ಪ್ರತಿಸಲವೂ ಕಲಾತ್ಮಕವಾಗಿ ಬಣ್ಣ ಬಣ್ಣದ ಕ್ರೀಂನಿಂದ ಕೋನ್‌ಗೆ ಹೊಸರೂಪ ನೀಡುವ ಖುಷಿ. ಇನ್ನು ಫ್ರೂಟ್‌ ಸಲಾಡ್ ತಯಾರಿಸುವ ಅಂಗಡಿಗಳಲ್ಲಿ ನೂರಾರು ಬಗೆಯ ಸಲಾಡ್‌ಗಳಿವೆ. ವಿದೇಶಿ ಹಣ್ಣುಗಳಿಂದ ಹಿಡಿದು ದೇಸೀ ಹಣ್ಣುಗಳ ಮಿಶ್ರಣ ಮಾಡಿದ ಸಲಾಡ್‌ ತಿಂದರೆ ಊಟದ ಹಂಗಿಲ್ಲ.ಕಪ್‌ ಐಸ್‌ಕ್ರೀಂನಲ್ಲೂ ಹತ್ತಾರು ಬಗೆಗಳಿವೆ. ವೆನಿಲ್ಲಾ, ಮ್ಯಾಂಗೋ, ಪಿಸ್ತಾ, ಬಾದಾಮಿ, ಚಾಕೊಲೆಟ್, ಸ್ಟ್ರಾಬೆರಿ, ನೇರಳೆ ಹಣ್ಣಿನ ಸ್ವಾದದಲ್ಲಿ ಲಭ್ಯವಿದೆ. ಒಂದೊಂದು ಹಣ್ಣಿನದು ಒಂದೊಂದು ಬಣ್ಣ. ಹಲ್ಲಿಲ್ಲದ ಮುದುಕರೂ ಒಮ್ಮೆ ರುಚಿ ನೋಡಬೇಕೆಂದು ಆಸೆ ಪಡುವಂಥ ಆಕರ್ಷಣೆ.ಕಪ್‌, ಕೋನ್‌ ಐಸ್‌ಕ್ರೀಂ ಮತ್ತು ಕ್ಯಾಂಡಿಗಳನ್ನು ಸೈಕಲ್‌ಗಾಡಿಗಳಲ್ಲಿ ಮಾರುವ ದೃಶ್ಯ ಅಲ್ಲಲ್ಲಿ ಕಾಣಸಿಗುತ್ತದೆ. ಬಡಾವಣೆಯ ರಸ್ತೆಗಳಲ್ಲಿ ಬೆಲ್‌ ಮಾಡುತ್ತ ಕ್ಯಾಂಡಿವಾಲ ಬರುತ್ತಿದ್ದರೆ ಬೆಲ್‌ ಶಬ್ದಕ್ಕೆ ಕಿವಿ ನಿಮಿರಿಸುವ ಪುಟ್ಟ ಮಕ್ಕಳು ಅಮ್ಮನ ಕೈಯಿಂದ ಐದೋ ಹತ್ತೋ ರೂಪಾಯಿ ಎಗರಿಸಿಕೊಂಡು ಕ್ಯಾಂಡಿ ಸೈಕಲ್‌ ಮುಂದೆ ಪ್ರತ್ಯಕ್ಷರಾಗುತ್ತಾರೆ. ಬಣ್ಣದ ಕ್ಯಾಂಡಿ ಚೀಪುತ್ತಾ ಕುಣಿಯುವ ಮಕ್ಕಳ ಮನಸಿಗೆ ಬೇಸಿಗೆಯ ಧಗೆ ಲೆಕ್ಕವೇ ಇಲ್ಲ.ಬರ್ತ್‌ಡೇ, ಎಂಗೇಜ್‌ಮೆಂಟ್‌, ರಿಸೆಪ್ಶನ್, ಮದುವೆ ವಾರ್ಷಿಕೋತ್ಸವ, ಗೃಹಪ್ರವೇಶ, ಮಗುವಿನ ನಾಮಕರಣ ಹೀಗೆ ಎಲ್ಲ ಊಟದಲ್ಲೂ ಈಗ ಐಸ್‌ಕ್ರೀಂ ಇಲ್ಲದಿಲ್ಲ. ನಗರದ ಪಾರ್ಕ್‌ಗಳ ಗೇಟಿನ ಬಳಿ ಐಸ್‌ಕ್ರೀಂ ಮಾರುವ ಗಾಡಿಗಳ ಟ್ರಿನ್‌ ಟ್ರಿನ್‌ ಬೆಲ್ಲಿನ ಸದ್ದು ಎಂಥವರನ್ನೂ ಸೆಳೆಯುತ್ತಿದೆ.

ಫ್ರಿಜ್‌ನೊಳಗಿಂದ ಐಸ್‌ ತುಂಡುಗಳನ್ನು ತೆಗೆದು ನೀರು, ಮಜ್ಜಿಗೆ, ಜ್ಯೂಸ್‌ನೊಳಗೆ ಹಾಕಿ ಹೊಟ್ಟೆ ತಂಪು ಮಾಡಿಕೊಳ್ಳುವ ಮನೆಮಂದಿ. ಹೀಗೆ ಈಗ ಎಲ್ಲೆಲ್ಲೂ ಐಸ್‌ನದ್ದೇ ಕಾರುಬಾರು.ನಗರದ ಐಸ್‌ಕ್ರೀಂ ವ್ಯಾಪಾರದ ಖದರು ಹೆೀಗಿದೆ? ಯಾರಿಗೆ ಯಾವುದು ಇಷ್ಟ, ಎಷ್ಟು ಬಗೆ, ಏನೆಲ್ಲ ಹೆಸರು ಎಂದು ನೋಡಿದರೆ ಎಣಿಕೆಗೆ ಸಿಗದಷ್ಟಿದೆ.

ಕುಲ್ಫಿ, ಕ್ಯಾಂಡಿ, ಕಪ್‌, ಕೋನ್‌, ಫ್ರೂಟ್‌ ಸಲಾಡ್‌, ಚಾಕೋ ಬಾರ್ ಹೀಗೆ ವಿವಿಧ ಬಗೆಗಳಲ್ಲಿ ತಂಪಾದ ತಿನಿಸುಗಳು ಲಭ್ಯ. ಸ್ಟ್ರಾಬೆರಿ, ಲಿಚಿ ಮುಂತಾದ ವಿದೇಶಿ ಹಣ್ಣುಗಳೂ ತಣ್ಣಗೆ ಐಸ್‌ಕ್ರೀಂ ಬೌಲ್‌ನಲ್ಲಿ ಕುಳಿತಿವೆ. ಐಸ್‌ಕ್ರೀಂ ಅಂಗಡಿಯ ಹುಡುಗರಿಗೆ ಈಗ ಕಾಲೂರಲೂ ಬಿಡುವಿಲ್ಲದಷ್ಟು ಕೆಲಸ. ಇನ್ನೆರಡು ತಿಂಗಳು ಬರೀ ತಂಪು ತಂಪು ಮಾತು.ಎಂ.ಜಿ.ರಸ್ತೆಯ ಕಣ್ಣನ್‌ ಕಾಂಪ್ಲೆಕ್ಸ್‌ನಲ್ಲಿರುವ ಪಾರ್ಕ್‌ ವ್ಯೂ ನಗರದ ಪ್ರಮುಖ ಐಸ್‌ಕ್ರೀಂ ತಾಣ. ಇಲ್ಲಿ ವಾರದ ಎಲ್ಲ ದಿನವೂ ರಾತ್ರಿ 1ರವರೆಗೂ ಗ್ರಾಹಕರಿಗೆ ಸ್ವಾಗತವಿದೆ. 1930ರಲ್ಲಿ ಹಲಸೂರು ಬಳಿ ಆರಂಭವಾದ ಈ ಐಸ್‌ಕ್ರೀಂ ಪಾರ್ಲರ್‌ 23 ವರ್ಷಗಳಿಂದ ಎಂ.ಜಿ.ರಸ್ತೆಯಲ್ಲಿ ಶಾಪಿಂಗ್‌ಗೆ, ಕೆಲಸಕ್ಕೆ ಬರುವವರೆಲ್ಲರ ದಾಹ ತಣಿಸುತ್ತಿದೆ. ಇಂದಿರಾನಗರ, ಮಾಸ್ಕ್‌ ರಸ್ತೆಯಲ್ಲೂ ಶಾಖೆ ಹೊಂದಿದೆ.‘ನಗರದಲ್ಲಿ ಐಸ್‌ಕ್ರೀಂ ಪ್ರಿಯರು ಹೆಚ್ಚು ಇದ್ದಾರೆ. ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ವೃತ್ತಿನಿರತರು ರಾತ್ರಿ ಹೊತ್ತು ಬರುತ್ತಾರೆ. ಹಗಲು ಶಾಪಿಂಗ್‌ಗೆ ಬರುವವರು, ಕಾಲೇಜು ಯುವಕರು, ಹೆಚ್ಚಾಗಿ ಬರುತ್ತಾರೆ. ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲ ಬಗೆಯ ಗ್ರಾಹಕರೂ ಇಲ್ಲಿಗೆ ಬರುತ್ತಾರೆ. ವರ್ಷದ ಎಲ್ಲ ದಿನವೂ ಐಸ್‌ಕ್ರೀಂ ವ್ಯಾಪಾರ ನಡೆಯುತ್ತದೆ. ಹೆಚ್ಚು ಮಳೆ ಇದ್ದಾಗ ಒಂದೆರಡು ವಾರ ವ್ಯಾಪಾರದಲ್ಲಿ ಇಳಿಮುಖವಾಗುತ್ತದೆ. ಉಳಿದಂತೆ ಎಲ್ಲ ದಿನವೂ ವ್ಯಾಪಾರ ಚೆನ್ನಾಗಿಯೇ ಆಗುತ್ತದೆ. ಬೇಸಿಗೆಯಲ್ಲಿ ಶೇ 20ರಷ್ಟು ಹೆಚ್ಚಳವಾಗುತ್ತದೆ. ನಮ್ಮಲ್ಲಿ ಎಂಬತ್ತಕ್ಕೂ ಹೆಚ್ಚು ಬಗೆಯ ಐಸ್‌ಕ್ರೀಂಗಳು ಎಲ್ಲಾ ದಿನಗಳೂ ಲಭ್ಯ. ಮಾವಿನ ಸೀಸನ್‌ನಲ್ಲಿ ಮಾವಿನ ವಿಶೇಷ ಇರುತ್ತದೆ. ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಬಳಸುತ್ತೇವೆ. ಹಣ್ಣಿನ ಸೀಸನ್‌ನಲ್ಲಿ ಫ್ರೂಟ್‌ಸಲಾಡ್‌ನಲ್ಲಿ ವೈವಿಧ್ಯವಿರುತ್ತದೆ’ ಎನ್ನುತ್ತಾರೆ ಪಾರ್ಕ್‌ ವ್ಯೂನ ನಾಗರಾಜ್‌.ದಾಸರಹಳ್ಳಿಯ ಮಲ್ನಾಡ್‌ ಐಸ್‌ಕ್ರೀಂ ಪಾರ್ಲರ್‌ ಚಿಕ್ಕಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಣ್ಣ ಘಟಕವಾದರೂ ತಳ್ಳುಗಾಡಿಯವರೆಲ್ಲ ಇದರ ಮುಖ್ಯ ಗ್ರಾಹಕರು. ದಾಸರಹಳ್ಳಿ, ಪೀಣ್ಯ ಸುತ್ತಮುತ್ತಲು ಗಾರ್ಮೆಂಟ್ಸ್ ಮತ್ತು ಫ್ಯಾಕ್ಟರಿಗಳು ಹೆಚ್ಚು ಇರುವ ಕಾರಣ ತಳ್ಳುಗಾಡಿಯಲ್ಲಿ ಕಪ್‌ ಐಸ್‌ಕ್ರೀಂ, ಕ್ಯಾಂಡಿ, ಕೋನ್‌ಗೆ ಹೆಚ್ಚು ಬೇಡಿಕೆ ಇದೆ. ‘ಬೇಡಿಕೆ ಎಲ್ಲ ದಿನವೂ ಒಂದೇ ರೀತಿ ಇಲ್ಲ. ಬೇಸಿಗೆಯ ಈ ದಿನಗಳಲ್ಲಿ ಸ್ವಲ್ಪ ಹೆಚ್ಚು ವ್ಯಾಪಾರವಾಗುವುದಂತೂ ನಿಜ’ ಎನ್ನುತ್ತಾರೆ ಮಲ್ನಾಡ್‌ ಐಸ್‌ಕ್ರೀಂ  ಪಾರ್ಲರ್‌ನ ಗುರುಪ್ರಸಾದ್‌.ಚಿಕ್ಕ ವ್ಯಾಪಾರಿಗಳ ಕಷ್ಟ

ಐಸ್‌ಕ್ರೀಂ ತಿಂದವರ ಹೊಟ್ಟೆ ತಂಪಾದರೆ ಸಿದ್ಧ ಐಸ್‌ಕ್ರೀಂಗಳನ್ನು ತಂದಿಟ್ಟು ಮಾರುವ ವ್ಯಾಪಾರಿಗಳ ತಲೆ ಬಿಸಿಯೇರುತ್ತದೆ. ಹೀಗೆಂದು ತಮ್ಮ ಅನುಭವ ಹೇಳುತ್ತಾರೆ ಬಳೇಪೇಟೆಯ ಜಿ.ಕೆ.ಎಸ್‌.ಫುಡ್‌ಝೋನ್‌ನ ಗುರುನಾಥ್‌.‘ಖ್ಯಾತ ಕಂಪೆನಿಗಳ ಐಸ್‌ಕ್ರೀಂಗಳನ್ನು ತಂದು ಅಂಗಡಿಯಲ್ಲಿಟ್ಟು ಮಾರುವುದು ನಷ್ಟದ ಬಾಬತ್ತು. ಯಾಕೆಂದರೆ ಅವುಗಳನ್ನು ಎಂ.ಆರ್‌.ಪಿ.ಬೆಲೆಗೆ ಮಾರಬೇಕು. ಇದರಿಂದ ಲಾಭವಿಲ್ಲ. ಕರೆಂಟ್‌ ಬಿಲ್ಲು, ಅಂಗಡಿ ಬಾಡಿಗೆ ಕಟ್ಟುವುದೂ ಕಷ್ಟವಾಗುತ್ತದೆ. ಕಂಪೆನಿಯವರು ಶೇ 30ರಷ್ಟು ಮಾರ್ಜಿನ್‌ ಕೊಡುತ್ತೇವೆ ಎನ್ನುತ್ತಾರೆ. ಆದರೆ ಇದರಿಂದ ವರ್ಕೌಟ್‌ ಆಗುವುದಿಲ್ಲ. ವಾಣಿಜ್ಯ ಉದ್ದೇಶಕ್ಕೆ ಪ್ರತಿ ಯೂನಿಟ್‌ಗೆ 4 ರೂಪಾಯಿ ನಿಗದಿಯಾಗಿದೆ. ಆದರೆ ಐಸ್‌ಕ್ರೀಂ ಮಾರುವ ಅಂಗಡಿಗಳಿಗೆ ಯೂನಿಟ್‌ಗೆ 8 ರೂಪಾಯಿಯಂತೆ ಬಿಲ್‌ ಬರುತ್ತದೆ. ಈ ಬಿಲ್ ಕಟ್ಟಲು ಐಸ್‌ಕ್ರೀಂ ಕಂಪೆನಿಯವರು ಶೇ 50 ಮಾರ್ಜಿನ್‌ ಇಟ್ಟರೂ ಕಷ್ಟವೇ. ಹಾಗಾಗಿ ನಗರದಲ್ಲಿ ಅನೇಕ ಐಸ್‌ಕ್ರೀಂ ಅಂಗಡಿಗಳು ಮುಚ್ಚಿವೆ. ಹೀಗೆ ವ್ಯಾಪಾರ ಶುರು ಮಾಡಿ ಮೂರೇ ತಿಂಗಳಲ್ಲಿ ನಿಲ್ಲಿಸಿಬಿಟ್ಟೆ’ ಎಂದು ಐಸ್‌ಕ್ರೀಂ ವ್ಯಾಪಾರದಲ್ಲಿ ಕೈಸುಟ್ಟುಕೊಂಡ ಅನುಭವವನ್ನು ತೆರೆದಿಡುತ್ತಾರೆ ಗುರುನಾಥ್.ಡೆತ್‌ ಬೈ ಚಾಕೋಲೆಟ್‌

ಇಂದಿರಾನಗರದ ‘ಕಾರ್ನರ್ ಹೌಸ್’  ಚಾಕೋಲೆಟ್‌ ಐಸ್‌ಕ್ರೀಂಗೆ ಪ್ರಸಿದ್ಧ. ಇಲ್ಲಿ ಚಾಕೊಲೇಟ್‌ನಿಂದ ಹಾಟ್‌ ಐಸ್‌ಕ್ರೀಂ ಸೇರಿದಂತೆ ಅನೇಕ ಬಗೆಯ ಐಸ್‌ಕ್ರೀಂಗಳನ್ನು ತಯಾರಿಸುತ್ತಾರೆ. ‘ಡೆತ್‌ ಬೈ ಚಾಕೋಲೆಟ್‌’ ಇವರ ಸಿಗ್ನೇಚರ್‌ ಐಸ್‌ಕ್ರೀಂ.‘ಮಾರ್ಚ್‌ ತಿಂಗಳು ಪರೀಕ್ಷೆಯ ಕಾಲವಾದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಆದರೆ ಏಪ್ರಿಲ್‌ನಿಂದ ಜೂನ್‌ವರೆಗೂ ಐಸ್‌ಕ್ರೀಂ ಮಾರಾಟದ ಭರಾಟೆ ಜೋರಾಗಿರುತ್ತದೆ. ಇಲ್ಲಿ ಚಾಕೋಲೆಟ್‌ ಐಸ್‌ಕ್ರೀಂಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇನ್ನು ಡ್ರೈಫ್ರೂಟ್ಸ್ ಸೇರಿದಂತೆ ವಿವಿಧ ಬಗೆಯ ಫ್ಲೇವರ್‌ ಇರುವ ಐಸ್‌ಕ್ರೀಂಗಳೂ ಲಭ್ಯ. ಹನಿ ಐಸ್‌ಕ್ರೀಂಗೆ ಕೂಡ ಬೇಡಿಕೆಯಿದೆ. ಮಧುಮೇಹಿಗಳಿಗೆಂದೇ ಶುಗರ್‌ಫ್ರೀ ವೆನಿಲ್ಲಾ ಐಸ್‌ಕ್ರೀಂ ಇದೆ. ಚುನಾವಣೆಯ ಬಿಸಿ ಈ ಉದ್ಯಮಕ್ಕೂ ತಟ್ಟಿದೆ. ಐಸ್‌ಕ್ರೀಂ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ಏರಿದೆ. ಹಾಗಾಗಿ ಐಸ್‌ಕ್ರೀಂ ಬೆಲೆಯೂ ವ್ಯತ್ಯಾಸವಾಗುತ್ತದೆ.

–ಮಾರ್ಟಿನ್‌, ಇಂದಿರಾನಗರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.