ಮಂಗಳವಾರ, ಜುಲೈ 27, 2021
21 °C

ಐಸ್ ಕ್ಯಾಂಡಿ!

-ಡಿ.ಕೆ. ರಮೇಶ್ . Updated:

ಅಕ್ಷರ ಗಾತ್ರ : | |

ಹಿಮದ ಮಳೆ, ಹಿಮದ ಹೊಳೆ. ಒಡಲೊಳಗೆ ಅವಿತ ಅಗ್ನಿ ಪರ್ವತಗಳು. ಧುಮ್ಮಿಕ್ಕುವ ಜಲಧಾರೆ. ಹಾಯ್ ಹೇಳುವ ಹಿಮಮೃಗಗಳು... ಹೆಸರೇ ಐಸ್‌ಲ್ಯಾಂಡ್. ಇನ್ನು ಈ ಹಿಮದ್ವೀಪದ ಬಗ್ಗೆ ಹೆಚ್ಚೇನು ಹೇಳುವುದು? ಅಚ್ಚ ಬಿಳಿಯ ಬಣ್ಣ ಬಳಿದುಕೊಂಡ ಅದು ಹೇಮಾವತಿಯೇ ಸರಿ.ಇಂಥ ಐಸ್‌ಲ್ಯಾಂಡ್‌ನಲ್ಲಿ ಕನ್ನಡದ `ಬೃಂದಾವನ' ನೆಲೆಯೂರಿದೆ. ದರ್ಶನ್, ಕಾರ್ತಿಕಾ ನಾಯರ್, ಮಿಲನ ಅಭಿನಯದ ಚಿತ್ರವನ್ನು ಐಸ್‌ಲ್ಯಾಂಡ್‌ನಲ್ಲೇ ಚಿತ್ರೀಕರಿಸಬೇಕು ಎಂಬುದು ನಿರ್ಮಾಪಕರಾದ ಶ್ರೀನಿವಾಸಮೂರ್ತಿ ಹಾಗೂ ಸುರೇಶ್ ಗೌಡ್ರ ಕನಸಾಗಿತ್ತು. `ರಾಜ್' ಚಿತ್ರೀಕರಣದ ವೇಳೆಯೇ ಅಲ್ಲಿಗೆ ತೆರಳಲು ಸಿದ್ಧತೆ ನಡೆದಿತ್ತು. ಆದರೆ ಆರು ತಿಂಗಳು ಸರಿಯಾಗಿ ಬೆಳಕು ಬೀಳದ ಕಾಲವಾದ್ದರಿಂದ ಯೋಜನೆ ಮುಂದೂಡಲಾಗಿತ್ತು. ಈಗ ಕಾಲ ಕೂಡಿಬಂದಿದೆ. ಐಸ್‌ಲ್ಯಾಂಡ್‌ನ ಗಂಗೋತ್ರಿಗಳಲ್ಲಿ, ಸುಮಾರು ನೂರು ಅಡಿಗಳಷ್ಟು ಎತ್ತರಕ್ಕೆ ಹಬೆಯುಗುಳುವ ತಾಣಗಳಲ್ಲಿ, ಅಗ್ನಿಪರ್ವತಗಳ ಸೆರಗಿನಲ್ಲಿ ಚಿತ್ರೀಕರಣ ಆರಂಭವಾಗಿದೆ.ಚಿತ್ರತಂಡದ ಪ್ರಕಾರ ಕನ್ನಡದ ಮಟ್ಟಿಗೆ ಅಷ್ಟೇ ಏಕೆ, ದಕ್ಷಿಣ ಭಾರತದ ಮಟ್ಟಿಗೆ ಐಸ್‌ಲ್ಯಾಂಡ್‌ನಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಇದೇ ಮೊದಲು. ಐಸ್‌ಲ್ಯಾಂಡ್ ಜೊತೆಗೆ ಡೆನ್ಮಾರ್ಕ್‌ನ ಸೌಂದರ್ಯವೂ ಚಿತ್ರದಲ್ಲುಂಟು. ರೇಯ್ಕ ಝಾವಿಕ್ ನಗರ, ಗ್ರುಂದಾರ್ತಂಗಿ, ಕೆಫ್ಲಾವಿಕ್, ಸೆಲ್ಫೊಸ್, ಹ್ವನ್ನದಲ್‌ಶ್ನುಕರ್, ವಟ್ನಜುಕುಲ್, ಹೋವ್ನ್, ರೆಯೋವಜೊರುರ್, ಸೆಯೋಸಿಜೊರ್, ಬ್ಲೂ ಲಗೂನ್, ಹಬೆ ಬುಗ್ಗೆ ಜೈಸೆರ್, ಕಪ್ಪು ಮರಳಿನ ಕಡಲ ಕಿನಾರೆ, ಕೋಪನ್‌ಹೆಗನ್ ಮತ್ತಿತರ ಕಡೆ ದೃಶ್ಯಸಿರಿ ಹರಿದಾಡಲಿದೆ. ಒಟ್ಟು ಹನ್ನೆರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಹಾಡುಗಳ ಜೊತೆಗೆ ಕಥಾಭಾಗವನ್ನು ಚಿತ್ರಿಸಲಾಗುತ್ತಿದೆ.ಹಾಗೆಂದು ಐಸ್‌ಲ್ಯಾಂಡ್ ಮಾರ್ಗ ಸುಲಭವಾಗಿರಲಿಲ್ಲ. ದೆಹಲಿಯ ವಲಸೆ ಕಚೇರಿಯಲ್ಲಿ ದೊಡ್ಡ ಪರೀಕ್ಷೆ ನಡೆದಿತ್ತು. ಅಲ್ಲೇ ಏಕೆ ಶೂಟಿಂಗ್ ಮಾಡಬೇಕು? ಇಲ್ಲೇ ಹಿಮಾಲಯ ಇದೆಯಲ್ಲಾ ಎಂದು ಅಧಿಕಾರಿಗಳು ಪ್ರಶ್ನಿಸಿದ್ದರು. ಈ ಹಿಂದೆ ಅಲ್ಲಿಗೆ ಪ್ರವಾಸಕ್ಕೆಂದು ತೆರಳಿದ್ದ ಕೆಲವರು ಮರಳದೇ ಇದ್ದುದು ಅವರ ಆತಂಕಕ್ಕೆ ಕಾರಣ. ಆದರೆ ಚಿತ್ರಕ್ಕೆ ಐಸ್‌ಲ್ಯಾಂಡ್ ಹೊಸ ಚೌಕಟ್ಟು ಒದಗಿಸಲಿದೆ ಎಂದು ಮನವರಿಕೆ ಮಾಡಿಕೊಟ್ಟ ಮೇಲಷ್ಟೇ ಷರತ್ತಿನ ಒಪ್ಪಿಗೆ ದೊರೆತಿದೆ. ಇಡೀ ಚಿತ್ರತಂಡ ಪ್ರತಿದಿನ ಐಸ್‌ಲ್ಯಾಂಡ್ ಅಧಿಕಾರಿಗಳ ಎದುರು ಹಾಜರಾತಿ ಹಾಕುವುದು ಕಡ್ಡಾಯವಾಗಿದೆ.`ಐಸ್‌ಲ್ಯಾಂಡ್‌ಗೆ ನೇರವಾಗಿ ವೀಸಾ ಪಡೆದ ದಕ್ಷಿಣ ಭಾರತದ ಮೊದಲ ಚಿತ್ರತಂಡ ನಮ್ಮದು. ಅಡುಗೆಯವರು ಸೇರಿದಂತೆ ಪುಟ್ಟದೊಂದು ಕಾರವಾನ್ ನಮ್ಮ ಜೊತೆಯಲ್ಲಿರುತ್ತದೆ. ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎನ್ನುತ್ತಾರೆ ನಿರ್ಮಾಪಕ ಶ್ರೀನಿವಾಸಮೂರ್ತಿ.ಇಡೀ ಯಾನಕ್ಕೆ ಒಟ್ಟು ಒಂದೂವರೆ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ನಟವರ್ಗ ಸೇರಿದಂತೆ 25 ಮಂದಿಯ ಚಿತ್ರತಂಡ ಈಗಾಗಲೇ ಚಿತ್ರೀಕರಣ ಆರಂಭಿಸಿದೆ. ಸ್ಥಳೀಯ ನೃತ್ಯಪಟುಗಳನ್ನೂ ಚಿತ್ರಕ್ಕಾಗಿ ದುಡಿಸಿಕೊಳ್ಳಲಾಗುತ್ತಿದೆ. ಇಲ್ಲಿಂದಲೇ ಉಡುಪುಗಳನ್ನು ಕೂಡ ಕೊಂಡೊಯ್ಯಲಾಗಿದೆ. ಚಿತ್ರತಂಡ ಉಳಿದಿರುವ ಸ್ಥಳದಿಂದ ಕನಿಷ್ಠ ಐದು ಗಂಟೆಗಳ ಕಾಲ ಪಯಣಿಸಿ ಸುಂದರ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.ನಿರ್ದೇಶಕ ಕೆ. ಮಾದೇಶ್ ಅವರಿಗೆ ಇದೊಂದು ಹೊಸ ಅನುಭವ. `ಐಸ್‌ಲ್ಯಾಂಡ್‌ಗೆ ತೆರಳುವುದು ನಿರ್ಮಾಪಕರ ಕನಸಾಗಿತ್ತು. `ರಾಜ್', `ಗಜ' ಚಿತ್ರದ ಚಿತ್ರೀಕರಣದ ವೇಳೆಯೂ ಇಂಥ ಪ್ರಯತ್ನಗಳು ನಡೆದಿದ್ದವು. ಈಗ ಆ ಕನಸು ನನಸಾಗಿದೆ. ಐಸ್‌ಲ್ಯಾಂಡ್ ಖಂಡಿತಾ ಚಿತ್ರಕ್ಕೆ ಹೊಸ ಆಯಾಮ ನೀಡುತ್ತದೆ' ಎನ್ನುವುದು ಅವರ ಮಾತು.ಎರಡು ಹಾಡುಗಳ ಚಿತ್ರೀಕರಣಕ್ಕೆ ಸುಮಾರು ಹತ್ತು ದಿನಗಳನ್ನು ಮೀಸಲಿಡಲಾಗಿದೆ. ಉಳಿದ ಅವಧಿಯಲ್ಲಿ ಕಥಾಭಾಗವನ್ನು ಚಿತ್ರೀಕರಿಸಲಾಗುತ್ತದೆ. ಹೈದರಾಬಾದ್‌ನ ನೃತ್ಯ ನಿರ್ದೇಶಕ ಗಣೇಶ್ ಹಾಡುಗಳ ನಿರ್ದೇಶನ ಮಾಡುತ್ತಿದ್ದಾರೆ. ಈ ರೀಮೇಕ್ ಚಿತ್ರದ ಶೇ 65ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಮೈಸೂರು, ಬಾದಾಮಿಯಲ್ಲಿ ಉಳಿದ ಕೆಲವು ದೃಶ್ಯಗಳನ್ನು ನಂತರ ಚಿತ್ರೀಕರಿಸಲಾಗುತ್ತದೆ.

-ಡಿ.ಕೆ. ರಮೇಶ್ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.