ಗುರುವಾರ , ಏಪ್ರಿಲ್ 15, 2021
21 °C

ಒಂದೇ ದಿನ ತೆರೆದುಕೊಳ್ಳುವ ಪಡಿತರ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: `ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಮಸ್ಥರ ಅನೇಕ ಪಡಿತರ ಚೀಟಿಗಳನ್ನು ತನ್ನ ಬಳಿಯೆ ಇಟ್ಟುಕೊಂಡಿದ್ದಾರೆ. ಪಡಿತರ ಆಹಾರ ಧಾನ್ಯ ಒಂದೇ ದಿನ ವಿತರಣೆ ಮಾಡಿ ಅಂಗಡಿ ಬಂದ್ ಮಾಡುತ್ತಾರೆ. ಇದರಿಂದ ಗ್ರಾಮದ ಜನರಿಗೆ ಸರ್ಕಾರದ ಪಡಿತರ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ~ ಎಂದು ತಾಲ್ಲೂಕಿನ ಕಾಟಮ್ಮದೇವರ ಹಳ್ಳಿ ಗ್ರಾಮಸ್ಥರು ತಹಶೀಲ್ದಾರ್‌ರನ್ನು ಕಂಡು ದೂರಿದ್ದಾರೆ.ಗ್ರಾಮದ ಹೊಲದಲ್ಲಿ ಈಚೆಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಶ್ರೀಮಂತ ದಂಡನಾಯಕ ಅವರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ ಮಾಡಲು ಶುಕ್ರವಾರ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್ ಬಾಲರಾಜ್ ಅವರ ವಾಹನದ ಬಳಿ ಸೇರಿದ್ದ  ಗ್ರಾಮಸ್ಥರು, `ಗ್ರಾಮದಲ್ಲಿ ಪಡಿತರ ಸೌಲಭ್ಯ ಸಿಗುತ್ತಿಲ್ಲ, ವ್ಯವಸ್ಥೆ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು.`ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದವರು ಗ್ರಾಮದಲ್ಲಿ ಇರುವುದಿಲ್ಲ. ತಿಂಗಳಿಗೆ ಒಂದು ದಿನ ಮಾತ್ರ ಬಂದು ಜನರಿಗೆ ಒಂದೇ ದಿನ ಆಹಾರ ಧಾನ್ಯ ವಿತರಣೆ ಮಾಡಿ ಕೈತೊಳೆದುಕೊಳ್ಳುತ್ತಾರೆ. ಹೀಗಾಗಿ ಜನರಿಗೆ ಪಡಿತರ ಕಾಳುಕಡಿ ಸಿಗುತ್ತಿಲ್ಲ. ಸೀಮೆ ಎಣ್ಣೆಯೂ ದುರ್ಲಭ~ ಎಂದು ಗ್ರಾಮದ ಬಿಜೆಪಿ ಯುವ ಮುಖಂಡ ಮತ್ತು ಪೇಠಶಿರೂರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ ಯಾಗಾಪುರ ಅವರು ತಹಶೀಲ್ದಾರ್ ಅವರ ಗಮನಕ್ಕೆ ತಂದರು.`ನ್ಯಾಯಬೆಲೆ ಅಂಗಡಿಯವರನ್ನು ಕೇಳಿದರೆ, ನೀವು ಎಲ್ಲಿ ಬೇಕಾದರೂ ಹೋಗಿ ದೂರು ಕೊಡಿ ಎಂದು ಜನರನ್ನೆ ಹೆದರಿಸುತ್ತಾರೆ. ಪಡಿತರ ಚೀಟಿ ಕೇಳಿದರೆ ಬಂದಿಲ್ಲ ಎನ್ನುತ್ತಾರೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಪಡಿತರ ಚೀಟಿ ಇಲ್ಲದೆ ಜನರು ಸರ್ಕಾರದ ಅನೇಕ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಸೂಕ್ತ ಕ್ರಮ ಕೈಗೊಂಡು ಗ್ರಾಮದ ಜನರಿಗೆ ನ್ಯಾಯ ಒದಗಿಸಬೇಕು~ ಎಂದು ಶಿವಕುಮಾರ ಆಗ್ರಹಿಸಿದರು.ಪರವಾನಗಿ ರದ್ದು ಮಾಡುವ ಎಚ್ಚರಿಕೆ: ಗ್ರಾಮಸ್ಥರ ದೂರನ್ನು ಕೇಳಿದ ತಹಶೀಲ್ದಾರ್ ಬಾಲರಾಜ್ ಅವರು, ದೂರವಾಣಿ ಮೂಲಕ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಸಂಪರ್ಕಿಸಿ, `ನಿಮ್ಮ ವಿರುದ್ಧ ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಬಂದಿವೆ. ಸರ್ಕಾರದ ಪಡಿತರ ಸೌಲಭ್ಯ ಜನರಿಗೆ ಸರಿಯಾಗಿ ತಲುಪಬೇಕು. ಇಲ್ಲದಿದ್ದರೆ ನಿಮ್ಮ ಪರವಾನಗಿ ರದ್ದು ಮಾಡುವಂತೆ ಮೇಲಾಧಿಕಾರಿಗಳಿಗೆ ವರದಿ ಕಳಿಸುತ್ತೇನೆ~ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭಾಗಣ್ಣಗೌಡ, ನಾಗಯ್ಯಾ ಸ್ವಾಮಿ, ಗ್ರಾಮ ಲೇಖಪಾಲಕ ಮನು ವ್ಯಾಸ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.