ಶುಕ್ರವಾರ, ಏಪ್ರಿಲ್ 16, 2021
31 °C

ಒಂದೇ ವೇದಿಕೆಯಡಿ ದಾರ್ಶನಿಕರ ಜಯಂತಿ ಆಚರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಸಮಾಜದ ಎಲ್ಲ ದಾರ್ಶನಿಕರ ಜಯಂತಿಯನ್ನು ಒಂದೇ ವೇದಿಕೆಯಡಿ ವಿಜೃಂಭಣೆಯಿಂದ ಆಚರಿಸುವಂತಹ ಸಾಮರಸ್ಯ ಎಲ್ಲರಲ್ಲೂ ಮೂಡಬೇಕಿದೆ~ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಶಿಸಿದರು.ತಾಲ್ಲೂಕಿನ ಸಾಗಡೆ ಗ್ರಾಮದಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.ಸಮಾಜ ಸುಧಾರಕರ ಜಯಂತಿಯನ್ನು ಆಯಾ ಜಾತಿಗೆ ಸೀಮಿತಗೊಳಿಸಬಾರದು. ಗ್ರಾಮದಲ್ಲಿರುವ ಎಲ್ಲರೂ ಒಗ್ಗಟ್ಟಿನಿಂದ ಜಯಂತಿ ಆಚರಿಸಿದರೆ  ಅರ್ಥಪೂರ್ಣವಾಗಿರುತ್ತದೆ ಎಂದರು.ಗ್ರಾಮಸ್ಥರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಬೇಕು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ವಾಲ್ಮೀಕಿ ಜಯಂತಿ ಆಚರಿಸುವ ಜತೆಗೆ ಅವರ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ನಾವಿಂದು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳನ್ನು ಸೃಷ್ಟಿ ಮಾಡಿಕೊಂಡಿದ್ದೇವೆ. ಈ ಪರಂಪರೆ ಒಳ್ಳೆಯದಲ್ಲ. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.ನಾಡು ಮತ್ತು ರಾಷ್ಟ್ರವನ್ನು ಕಟ್ಟಿದ ಕೀರ್ತಿ ನಾಯಕ ಸಮುದಾಯಕ್ಕಿದೆ. ಪ್ರಸ್ತುತ  ಹಿಂದುಳಿದ ಸಮಾಜದವರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರಿಯಬೇಕಿದೆ ಎಂದು ಹೇಳಿದರು.ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಮಹಾಸಂಸ್ಥಾನ ಮಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಸರ್ಕಾರದ ಸವಲತ್ತು  ಪಡೆದುಕೊಳ್ಳಲು ಪ್ರತಿಯೊಬ್ಬರು ಸಂಘಟಿತರಾಗಬೇಕಿದೆ ಎಂದು ಹೇಳಿದರು.ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದ ಜನರು ಒಗ್ಗಟಿನಿಂದ ಸಾಗಿದರೆ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಮಠಮಾನ್ಯಗಳ ಮಾರ್ಗದರ್ಶನ ಅವಶ್ಯ. ಎಲ್ಲರೂ ಶಿಕ್ಷಣ ಪಡೆದು ಗ್ರಾಮದಲ್ಲಿ ಸೌಹಾರ್ದದಿಂದ ಬದುಕಬೇಕು ಎಂದು ಸಲಹೆ ನೀಡಿದರು.

 

ಅಹಿಂದ ಮುಖಂಡ ಎಂ. ಅಪ್ಪಣ್ಣ ಮಾತನಾಡಿ, `ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಾಗೂ ಪ್ರಸನ್ನಾನಂದ ಸ್ವಾಮೀಜಿ ನಮಗೆ ಎರಡು ಕಣ್ಣುಗಳಿದ್ದಂತೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು~ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸಮ್ಮ, ಮಾಜಿ ಅಧ್ಯಕ್ಷೆ ಶೈಲಜಾ ಮಲ್ಲೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕಮಹದೇವು, ಮಾಜಿ ಉಪಾಧ್ಯಕ್ಷ ನಾರಾಯಣನಾಯಕ, ಸಾಗಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಶೆಟ್ಟಿ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಸೋಮಶೇಖರ್, ಶಿವಕುಮಾರ್, ನಿಂಗಶೆಟ್ಟಿ, ಶಿವಲಿಂಗೇಗೌಡ, ಮಾದಪ್ಪ, ಸರ್ವಮಂಗಳಾ, ಕಿರುತೆರೆ ನಟ ರಾಘವ್, ಮುಖಂಡರಾದ ಮಹೇಶ್, ಕಣ್ಣೇಗಾಲ ಮಹದೇವನಾಯಕ, ಎಚ್.ವಿ. ಚಂದ್ರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.