ಗುರುವಾರ , ಮೇ 19, 2022
23 °C

ಒಂಬತ್ತಕ್ಕೆ ಮುಂಚೆ ಸಂಚಾರ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವನ್ಯಜೀವಿಗಳ ಸುರಕ್ಷತೆ ದೃಷ್ಟಿಯಿಂದ ಕೇರಳ- ಕರ್ನಾಟಕ ನಡುವಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹೆದ್ದಾರಿಗಳಲ್ಲಿ ರಾತ್ರಿ ಒಂಬತ್ತರ ಬದಲಿಗೆ ಇನ್ನೆರಡು-ಮೂರು ಗಂಟೆ ಮೊದಲೇ ವಾಹನ ಸಂಚಾರ ನಿರ್ಬಂಧಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ ಎಂದು ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ತಿಳಿಸಿದ್ದಾರೆ.ಅರಣ್ಯ ಇಲಾಖೆಯು ನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ `57ನೇ ವನ್ಯಜೀವಿ ಸಪ್ತಾಹ ಆಚರಣೆ-2011~ರ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮೂಲೆಹೊಳೆ ಬಳಿ ಇತ್ತೀಚೆಗೆ ವಾಹನ ಅಪಘಾತದಿಂದ ಮರಿಯಾನೆ ಸಾವಿಗೀಡಾಗಿದ್ದನ್ನು ಪ್ರಸ್ತಾಪಿಸಿದ ಸಚಿವರು, `ಸಂಜೆಯಾಗುತ್ತಿದ್ದಂತೆಯೇ ವನ್ಯಜೀವಿಗಳು ಅರಣ್ಯದಿಂದ ಈಚೆ ಬರುತ್ತವೆ. ಹೀಗಾಗಿ, ರಾತ್ರಿ ಒಂಬತ್ತಕ್ಕಿಂತ ಎರಡು-ಮೂರು ಗಂಟೆ ಮೊದಲೇ ಈ ವ್ಯಾಪ್ತಿಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ನಿಷೇಧಿಸಲು ಚಿಂತಿಸಲಾಗುತ್ತಿದೆ~ ಎಂದರು.ಊಟಿ ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ-67 ಹಾಗೂ ಬೆಂಗಳೂರು-ಕಲ್ಲಿಕೋಟೆ ನಡುವಣ ರಾಷ್ಟ್ರೀಯ ಹೆದ್ದಾರಿ-212ರ ವ್ಯಾಪ್ತಿಯ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಈಗಾಗಲೇ ರಾತ್ರಿ 9 ರಿಂದ ವಾಹನ ಸಂಚಾರ ನಿರ್ಬಂಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು.ರಾಜ್ಯಕ್ಕೆ ಮೊದಲ ಸ್ಥಾನ:ಹುಲಿಗಳ ಸಂರಕ್ಷಣೆಯಲ್ಲಿ ಕರ್ನಾಟಕವು ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. 2006 ಹುಲಿ ಗಣತಿ ಪ್ರಕಾರ, ಹುಲಿ ಸಂರಕ್ಷಣೆಯಲ್ಲಿ ಮಧ್ಯಪ್ರದೇಶ ಮೊದಲನೇ ಸ್ಥಾನದಲ್ಲಿದ್ದರೆ, 2010ರ ಗಣತಿ ಪ್ರಕಾರ ಕರ್ನಾಟಕವು ಮಧ್ಯಪ್ರದೇಶವನ್ನು ಹಿಂದಿಕ್ಕಿದೆ ಎಂದು ಸಚಿವರು ಹೇಳಿದರು.ಪರಿಸರ ಸಮತೋಲನ ದೃಷ್ಟಿಯಿಂದ ರಕ್ಷಣೆ: 


ಇದಕ್ಕೂ ಮುನ್ನ ಸಮಾರಂಭವನ್ನು ಉದ್ಘಾಟಿಸಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, `ಜನಸಂಖ್ಯೆ ಹೆಚ್ಚಳ, ನಗರೀಕರಣ, ಕೈಗಾರಿಕೀರಣ, ಗಣಿಗಾರಿಕೆ ಮತ್ತಿತರ ಕಾರಣಗಳಿಂದ ದೇಶದಲ್ಲಿ ಅರಣ್ಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪರಿಸರ ಸಮತೋಲನ ದೃಷ್ಟಿಯಿಂದ ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ಅನಿವಾರ್ಯವಾಗಿದೆ~ ಎಂದರು.ಸಂಸದ ಡಿ.ಬಿ. ಚಂದ್ರೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಐ.ಬಿ. ಶ್ರೀವಾಸ್ತವ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ.ಕೆ.  ವರ್ಮ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ವೇದಾಂತ್ ಉಪಸ್ಥಿತರಿದ್ದರು.ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ (ವನ್ಯಜೀವಿ ವಿಭಾಗ) ಸ್ವಾಗತಿಸಿದರು. ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಡಾ.ಎಂ.ಎಚ್. ಸ್ವಾಮಿನಾಥನ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.