ಗುರುವಾರ , ಮೇ 19, 2022
24 °C

ಒಲಿಂಪಿಕ್ಸ್‌ಗೆ ಭಾರತ ಟೆನಿಸ್ ತಂಡ: ಭೂಪತಿ, ರೋಹನ್‌ಗೆ ಎಐಟಿಎ ಮತ್ತೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಡನ್ ಒಲಿಂಪಿಕ್ಸ್ ಟೆನಿಸ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಭಾರತ ಡಬಲ್ಸ್ ತಂಡದ ಸ್ವರೂಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಅವರಿಗೆ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಮತ್ತೊಮ್ಮೆ ಎಚ್ಚರಿಕೆ ನೀಡಿದೆ.`ಆಯ್ಕೆ ಸಮಿತಿ ನಿರ್ಧಾರಕ್ಕೆ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಬದ್ಧರಾಗಿರಬೇಕು. ಒತ್ತಡ ಹೇರಿದರೆ ತಂಡದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂಬ ಅವರ ತಿಳಿವಳಿಕೆ ಅಸಂಬದ್ಧವಾದುದು. ಈ ರೀತಿ ಮಾಡಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ~ ಎಂದು ಎಐಟಿಎ ನೂತನ ಅಧ್ಯಕ್ಷ ಅನಿಲ್ ಖನ್ನಾ ಸ್ಪಷ್ಟಪಡಿಸಿದರು.`ಭೂಪತಿ ಕೊಂಚ ಪ್ರಬುದ್ಧವಾಗಿ ಯೋಚಿಸಬೇಕು. ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು. ಈಗ ಆಯ್ಕೆ ಮಾಡಿರುವಂತೆ ಭೂಪತಿ ಹಾಗೂ ಲಿಯಾಂಡರ್ ಪೇಸ್ ಜೊತೆಯಾಗಿ ಆಡಬೇಕು. ಅದಕ್ಕೆ ಮಹೇಶ್ ಒಪ್ಪದಿದ್ದರೆ ಪೇಸ್ ಹಾಗೂ ಬೋಪಣ್ಣ ಅವರನ್ನು ಕಳುಹಿಸಲಾಗುವುದು. ಹಾಗಾಗಿ ಈ ಬಗ್ಗೆ ಭೂಪತಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಅಕಸ್ಮಾತ್ ಪೇಸ್ ಜೊತೆ ಭೂಪತಿ ಅಥವಾ ರೋಹನ್ ಆಡಲು ನಿರಾಕರಿಸಿದರೆ ನಾವು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ~ ಖನ್ನಾ ತಿಳಿಸಿದ್ದಾರೆ.`ಪೇಸ್ ಈಗ ಡಬಲ್ಸ್‌ನಲ್ಲಿ ಏಳನೇ ರ‌್ಯಾಂಕ್ ಹೊಂದಿದ್ದಾರೆ. ಹಾಗಾಗಿ ಅವರಿಗೆ ಪ್ರಥಮ ಪ್ರಾಶಸ್ತ್ಯ ನೀಡಿದ್ದೇವೆ. ಆದರೆ ಮಹೇಶ್ ಹಾಗೂ ಬೋಪಣ್ಣ ನಡುವಿನ ಆಯ್ಕೆ ಕೊಂಚ ಕಷ್ಟವಾಯಿತು. ಹಾಗಾಗಿ  ಯಾರನ್ನು ಜೊತೆಯಾಗಿ ಪಡೆಯಲು ಬಯಸುತ್ತೀರಿ ಎಂದು ನಾವು ಪೇಸ್ ಅವರಲ್ಲಿ ಕೇಳಿದೆವು. ಆದರೆ ಆಯ್ಕೆದಾರರು ಉತ್ತಮ ತಂಡದ ಆಯ್ಕೆಗೆ ಒತ್ತು ನೀಡಿದರು. ಬೋಪಣ್ಣ ಯುವ ಆಟಗಾರ. ಜೊತೆಗೆ ಹಸಿರು ಅಂಕಣದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಅವರಲ್ಲಿದೆ. ಆದರೆ ಮಹೇಶ್ ಹೆಚ್ಚಿನ ಅನುಭವ ಹೊಂದಿದ್ದಾರೆ. ಜೊತೆಗೆ ಅವರು ಮಿಶ್ರ ಡಬಲ್ಸ್‌ನಲ್ಲೂ ಪರಿಣತಿ ಹೊಂದಿದ್ದಾರೆ~ ಎಂದರು.`ಆದರೆ ಬೋಪಣ್ಣ ಹಾಗೂ ಮಹೇಶ್ ಉತ್ತಮ ಸ್ನೇಹಿತರು. ಹಾಗಾಗಿ ಮಹೇಶ್ ಈ ರೀತಿ ವರ್ತಿಸುತ್ತಿದ್ದಾರೆ. ಅವರಿಬ್ಬರು ಅತಿಯಾದ ಬದ್ಧತೆ ಹೊಂದಿದ್ದಾರೆ ಎನಿಸುತ್ತದೆ. ಅವರ ಗೆಳೆತನಕ್ಕೆ ನಮ್ಮ ಮೆಚ್ಚುಗೆ ಇದೆ. ಆದರೆ ದೇಶ ಮೊದಲು ಎಂಬ ವಿಷಯವನ್ನು ಅವರು ಅರಿಯಬೇಕು. ದೇಶಕ್ಕಾಗಿ ಆಡಲು ಕೆಲವು ಸಂಗತಿಗಳನ್ನು ತ್ಯಾಗಮಾಡಬೇಕು~ ಎಂದೂ ಖನ್ನಾ ಹೇಳಿದರು.

ಯಾರೊಂದಿಗಾದರೂ ಆಡಲು ಸಿದ್ಧ: ಪೇಸ್

ಬೆಂಗಳೂರು: ಎಐಟಿಎ ಆಯ್ಕೆ ಮಾಡಿದ ಆಟಗಾರನ ಜೊತೆ ಒಲಿಂಪಿಕ್ಸ್‌ನಲ್ಲಿ ಆಡುವೆ ಎಂದಿರುವ ಲಿಯಾಂಡರ್ ಪೇಸ್, `ರೋಹನ್ ಬೋಪಣ್ಣ ಜೊತೆ ಆಡಲು ಆದ್ಯತೆ ನೀಡುವೆನು. ಏಕೆಂದರೆ ಅವರು ಉತ್ತಮ ಫಿಟ್‌ನೆಸ್ ಹೊಂದಿದ್ದಾರೆ~ ಎಂದಿದ್ದಾರೆ.`ಮಹೇಶ್ ಭೂಪತಿ ನೀಡಿರುವ ಹೇಳಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಐಟಿಎ ಸೂಚಿಸಿದ ಆಟಗಾರನ ಜೊತೆ ಒಲಿಂಪಿಕ್ಸ್‌ನಲ್ಲಿ ಆಡುವೆ ಎಂಬುದನ್ನು ಈ ಹಿಂದಿನಿಂದ ಹೇಳುತ್ತಾ ಬಂದಿದ್ದೇನೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ~ ಎಂದು ಪೇಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಐಟಿಎನಿಂದ ವರದಿ ಕೇಳಿದ ಒಲಿಂಪಿಕ್ ಸಂಸ್ಥೆ

ನವದೆಹಲಿ (ಪಿಟಿಐ): ಒಲಿಂಪಿಕ್ಸ್‌ಗೆ ಟೆನಿಸ್ ತಂಡ ಆಯ್ಕೆ ಸಂಬಂಧ ಉದ್ಭವಿಸಿರುವ ವಿವಾದದ ಬಗ್ಗೆ ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಅಖಿಲ ಭಾರತ ಟೆನಿಸ್ ಸಂಸ್ಥೆಯಿಂದ (ಎಐಟಿಎ) ವರದಿ ಕೋರಿದೆ.`ಒಲಿಂಪಿಕ್ಸ್‌ಗೆ ಉತ್ತಮ ತಂಡ ಕಳುಹಿಸುವುದು ನಮ್ಮ ಉದ್ದೇಶ. ಟೆನಿಸ್‌ನಲ್ಲಿ ಈ ಬಾರಿ ಪದಕ ಗೆಲ್ಲುವ ಸಾಧ್ಯತೆ ಈ ಬಾರಿ ಹೆಚ್ಚಿದೆ. ಒಲಿಂಪಿಕ್ಸ್‌ಗೆ ಎಲ್ಲಾ ತಂಡಗಳು ಐಒಎ ಸಾನಿಧ್ಯದಲ್ಲಿ ತೆರಳುತ್ತಿರುವುದರಿಂದ ಆ ಬಗ್ಗೆ ನಮಗೆ ಸೂಕ್ತ ಮಾಹಿತಿ ಇರಬೇಕು. ಹಾಗಾಗಿ ಎಐಟಿಎಯಿಂದ ವರದಿ ಕೋರಿದ್ದೇವೆ~ ಎಂದು ಐಒಎ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಎಐಟಿಎ ಅಧ್ಯಕ್ಷ ಅನಿಲ್ ಖನ್ನಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.