ಗುರುವಾರ , ಮಾರ್ಚ್ 4, 2021
20 °C

ಒಲಿಂಪಿಕ್ಸ್‌ಗೆ ವಿಜೇಂದರ್ ಅರ್ಹತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್‌ಗೆ ವಿಜೇಂದರ್ ಅರ್ಹತೆ

ನವದೆಹಲಿ (ಪಿಟಿಐ): ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಕೊನೆಯ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಆದ್ದರಿಂದ ಅವರಿಗೆ ಜುಲೈನಲ್ಲಿ ನಡೆಯುವ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಲಭಿಸಿತು.ಈ ಸಲದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕಜಕಸ್ತಾನದ ಅಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಟೂರ್ನಿ ಕೊನೆಯ ಅವಕಾಶವಾಗಿತ್ತು. ಈ `ಅಗ್ನಿಪರೀಕ್ಷೆ~ಯಲ್ಲಿ ಅವರು ಗೆದ್ದು ಬಂದರು. ಈ ಮೂಲಕ ಸತತ ಮೂರನೆಯ ಸಲ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಬಾಕ್ಸರ್ ಎನ್ನುವ ಕೀರ್ತಿಗೂ ಪಾತ್ರರಾದರು.75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ವಿಜೇಂದರ್ ಭಾನುವಾರ ಸೆಮಿಫೈನಲ್ ಪ್ರವೇಶಿಸಿದರು. ಇದರಿಂದ ಲಂಡನ್ ಪ್ರಯಾಣದ ಹಾದಿ ಖಚಿತವಾಯಿತು. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಈ ಬಾಕ್ಸರ್ 27-17 ಪಾಯಿಂಟ್‌ಗಳಿಂದ ಮಂಗೋಲಿಯಾದ ಚುಲುಂತಮರ್ ತುಮರ್ಕಯಾಗ್ ಎದುರು ಗೆಲುವು ಪಡೆದರು. ಈ ಮೂಲಕ ಒಲಿಂಪಿಕ್ಸ್ ಅರ್ಹತೆ ಜೊತೆಗೆ ಪದಕವನ್ನೂ ಖಚಿತಪಡಿಸಿಕೊಂಡರು.2008ರ ಬೀಜಿಂಗ್ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ್ದ ವಿಜೇಂದರ್ ಮೊದಲು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು.ಪುಟಿದೆದ್ದು ಬಂದೆ: -ಲಂಡನ್‌ಗೆ ರಹದಾರಿ ಪಡೆದ ನಂತರ ಸಂತಸದಿಂದಲೇ ವಿಜೇಂದರ್ ಮೊದಲು ಪ್ರತಿಕ್ರಿಯಿಸಿದ್ದು ಹೀಗೆ.`ಒಂದು ವೇಳೆ ಈ ಸಲ ನಾನು ಸೋಲು ಕಂಡಿದ್ದರೆ, ಇನ್ನೂ ನಾಲ್ಕು ವರ್ಷ ಕಾಯಬೇಕಾಗುತ್ತಿತ್ತು. ಕಳೆದ ವರ್ಷದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದೆ. ಆಗ ನನ್ನನ್ನು ಸಾಕಷ್ಟು ಜನ ಟೀಕೆ ಮಾಡಿದ್ದರು. ಎಲ್ಲಾ ಟೀಕಾಕಾರರಿಗೆ ಈ ನನ್ನ ಸಾಧನೆಯ ಮೂಲಕವೇ ಉತ್ತರ ನೀಡಿದ್ದೇನೆ~ ಎಂದು ಹರಿಯಾಣದ ಬಾಕ್ಸರ್ ಹೇಳಿದರು.ವಿಜೇಂದರ್ ಬೀಜಿಂಗ್ ಒಲಿಂಪಿಕ್ಸ್ ಗೂ ಮುನ್ನ ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಈ ಟೂರ್ನಿಯೂ ಕಜಕಸ್ತಾನದಲ್ಲಿ ನಡೆದಿತ್ತು.`ಈಗ ನನ್ನ ಸಾಮರ್ಥ್ಯ ಸಾಬೀತು ಪಡಿಸಿದ್ದೇನೆ. ನನಗೀಗ ನಿರಾಳ ಭಾವ. ಸತತ ಮೂರನೇ ಸಲ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಬಾಕ್ಸರ್ ಎನ್ನುವುದೂ ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ. ಈ ಸಾಧನೆಯ ಜೊತೆಗೆ ಇದೊಂದು ವಿಶೇಷ ಕ್ಷಣ~ ಎಂದು ವಿಜೇಂದರ್ ನುಡಿದರು.`ವಿಜೇಂದರ್ ಅವರ ದೈಹಿಕ ಸಾಮರ್ಥ್ಯ ಹಾಗೂ ಫಿಟ್‌ನೆಸ್ ಬಗ್ಗೆ ನನಗೆ ನಂಬಿಕೆಯಿತ್ತು. ಈ ಸಂತಸದ ವೇಳೆಯಲ್ಲಿ ಏನು ಹೇಳಬೇಕು ಎನ್ನುವುದು ತೋಚುತ್ತಿಲ್ಲ~ ಎಂದು ಕೋಚ್ ಗುರುಬಕ್ಷ್ ಸಿಂಗ್ ಸಂಧು ಸಂತಸ ವ್ಯಕ್ತಪಡಿಸಿದರು.ಭಾರತದ ಬಾಕ್ಸರ್ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಪ್ರಾಥಮಿಕ ಸುತ್ತಿನಲ್ಲಿಯೇ ನಿರಾಸೆ ಅನುಭವಿಸಿದ್ದರು. ಈ ಸಲದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಐದನೆಯ ಬಾಕ್ಸರ್ ಇವರಾದರು. ಎಲ್. ದೇವೇಂದ್ರ ಬಿಶೂ (49 ಕೆ.ಜಿ.), ಜೈ ಭಗವಾನ್ (60 ಕೆ.ಜಿ.), ಮನೋಜ್ ಕುಮಾರ್ (64 ಕೆ.ಜಿ.) ಹಾಗೂ ವಿಕಾಸ್ ಕೃಷ್ಣನ್ (69 ಕೆ.ಜಿ.) ಅವರು ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಇವರು ಲಂಡನ್ ಪ್ರಯಾಣ ಖಚಿತಪಡಿಸಿಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.