ಸೋಮವಾರ, ಮಾರ್ಚ್ 1, 2021
31 °C

ಒಲಿಂಪಿಕ್ಸ್‌ನಲ್ಲಿ ರಾಜಮಹಾರಾಜರು

ಜಗನ್ನಾಥ ಪ್ರಕಾಶ್ Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್‌ನಲ್ಲಿ ರಾಜಮಹಾರಾಜರು

ಬಿಲ್ಲುಗಾರಿಕೆ, ಗದಾಯುದ್ಧ, ಮುಷ್ಟಿಯುದ್ಧ, ಕುಸ್ತಿ ಮುಂತಾದ ಕ್ರೀಡೆಗಳೆಲ್ಲವೂ ರಾಜಮಹಾರಾಜರಿಗಾಗಿಯೇ ಇದ್ದ ಕಾಲವೊಂದಿತ್ತು. ಪ್ರಾಚೀನ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ರಾಜಮನೆತನದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು.

 

ಆಗ ಕ್ರೀಡಾ ತರಬೇತಿಗೆ ಅಗತ್ಯವಾದ ಸಮಯ-ಹಣ ಲಭ್ಯವಿದ್ದುದು ಸಿರಿವಂತರಿಗೆ ಹಾಗೂ ದೊರೆಗಳಿಗೆ ತಾನೆ?  ಆ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ರಾಜ ಮಹಾರಾಜರ ಪ್ರೋತ್ಸಾಹವೇ ಮುಖ್ಯವಾಗಿರುತಿತ್ತು.ಆಧುನಿಕ ಒಲಿಂಪಿಕ್ಸ್ ಶುರುವಾದ ಮೇಲೆ ಅಂಚೆ ವಿತರಕರು, ಸೈನಿಕರು, ಬಾಣಸಿಗರು ಹೀಗೆ ಸಮಾಜದ ಎಲ್ಲಾ ವಿಭಾಗದವರೂ ತಮ್ಮ ಸಾಮರ್ಥ್ಯ ತೋರಿಸಲಾರಂಭಿಸಿದರು.

ಕೆಲವು ರಾಜಮನೆತನಕ್ಕೆ ಸೇರಿದವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಗೆದ್ದವರನ್ನು ಪ್ರೀತಿಸಿದ್ದೂ ಇದೆ.ಇನ್ನೂ ಹಲವರು ಪದಕ ಗೆದ್ದ ಮೇಲೆ ರಾಜಕುಟುಂಬದವರನ್ನು ಲಗ್ನವಾಗಿದ್ದೂ ಇದೆ. ಎಡಿನ್ ಬರೋದ ರಾಜಕುಮಾರ ಫಿಲಿಪ್ ಹಾಗೂ ಎರಡನೇ ಎಲಿಜಬೆತ್ ರಾಣಿಯ ಪುತ್ರಿ ರಾಜಕುವರಿ ಆ್ಯನ್ ಈವರೆಗೆ       ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಇಂಗ್ಲೆಂಡ್ ರಾಜಕುಟುಂಬದ ಏಕಮಾತ್ರ ಕ್ರೀಡಾಪಟು.ರಾಜಕುವರಿ ಆ್ಯನ್ 1976ರಲ್ಲಿ ಇಂಗ್ಲೆಂಡಿನ ಕುದುರೆ ಸವಾರಿ ಸ್ಪರ್ಧೆಯ ತಂಡದ ಸದಸ್ಯೆಯಾಗಿ ಭಾಗವಹಿಸಿದ್ದರು. ವೈಯಕ್ತಿಕ ಹಾಗೂ ತಂಡ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರೂ ಪದಕ ಪಡೆಯಲಿಲ್ಲ. ಈವರೆಗಿನ  ಒಲಿಂಪಿಕ್ಸ್ ಕೂಟಗಳಲ್ಲಿ ಲಿಂಗ ಪರೀಕ್ಷೆಗೆ ಒಳಗಾಗದ ಏಕೈಕ ಮಹಿಳಾ ಕ್ರೀಡಾಪಟು ಆ್ಯನ್ ಎಂಬುದು ಇನ್ನೊಂದು ವಿಶೇಷ.ಆ್ಯನ್ ಪುತ್ರಿ ಜಾರಾ ಫಿಲಿಪ್ಸ್ 2004 ಹಾಗೂ 2008ರ   ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಇಂಗ್ಲೆಂಡ್ ತಂಡದಲ್ಲಿದ್ದರು. ಆದರೆ ಕುದುರೆಯಿಂದ ಬಿದ್ದು ಗಾಯಗೊಂಡಿದ್ದರಿಂದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ರಾಜಮನೆತನಕ್ಕೆ ಸೇರಿದ ಇಬ್ಬರು ಭಾಗವಹಿಸಿದ್ದರು. ಸ್ವಿಟ್ಜರ್‌ಲೆಂಡ್‌ನ ಹ್ಯೂಜ್ಯೂನಾಟ್ ರಾಜ ವಂಶಕ್ಕೆ ಸೇರಿದ ಹಿರ್ಮಾನ್ ಅಲೆಗ್ಸಾಂಡ್ರಿಯಾ ಹಾಯಿದೋಣಿ ಸ್ಪರ್ಧೆಗಳಲ್ಲಿ ಒಂದು ಚಿನ್ನ ಹಾಗೂ ಬೆಳ್ಳಿ ಪದಕ ಪಡೆದುಕೊಂಡಿದ್ದರು. ಆಧುನಿಕ        ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ಪ್ರಥಮ ರಾಜವಂಶಸ್ಥ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.ಅಲೆಗ್ಸಾಂಡ್ರಿಯಾ ಪತ್ನಿ  ಹೆಲೆನಾ ಕೂಡ ಇದೇ ಹಾಯಿದೋಣಿ ಸ್ಪರ್ಧೆಯ ತಂಡದ ಸದಸ್ಯೆಯಾಗಿದ್ದರು. ಈಕೆ ಆಧುನಿಕ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ಮಹಿಳೆ ಮತ್ತು ಪದಕ ಗೆದ್ದ ಪ್ರಥಮ ಮಹಿಳಾ ಸ್ಪರ್ಧಿ.ನಾರ್ವೆಯ ರಾಜಕುಮಾರ ಐದನೇ ಆಲ್ವ ಆಮ್‌ಸ್ಟರ್‌ಡಂ ಒಲಿಂಪಿಕ್ಸ್‌ನ ಹಾಯಿದೋಣಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಂಪಾದಿಸಿದ ಕ್ರೀಡಾಪಟು. 1957ರಲ್ಲಿ ನಾರ್ವೆಯ ಮಹಾರಾಜರಾಗಿ ಪಟ್ಟಾಭಿಷೇಕವಾಯಿತು. 1991ರಲ್ಲಿ ನಿಧನರಾಗುವವರೆಗೂ ಆಲ್ವ ಆ ದೇಶದ ಅರಸರಾಗಿದ್ದರು.ಜರ್ಮನಿಯ ರಾಜಕುಮಾರ ಫೆಡ್ರಿಕ್ ಕಾರ್ಲ್  ಅವರು 1912ರ ಸ್ಟಾಕ್‌ಹೋಂ ಒಲಿಂಪಿಕ್ಸ್‌ನ ಈಕ್ವೆಸ್ಟ್ರೀಯನ್ ತಂಡ ಸ್ಪರ್ಧೆಗಳಲ್ಲಿ ಕಂಚಿನ ಪದಕ ಪಡೆದಿದ್ದರು. ಗ್ರೀಸ್ ದೊರೆ 2ನೇ ಕಾನ್‌ಸ್ಟನ್‌ಟೈನ್, ಸ್ಪೇನ್ ರಾಜ ಒಂದನೇ ಜುವಾನ್ ಕಾರ್ಲೊಸ್, ಆಸ್ಟ್ರೀಯಸ್ ಪಾಲ್ಫೆ ಮುಂತಾದವರು ಒಲಿಂಪಿಕ್ಸ್‌ನಲ್ಲಿ ಪದಕ ಪಡೆದರು.ಜೋರ್ಡಾನ್ ರಾಜಕುಮಾರಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಈಕ್ವೆಸ್ಟ್ರೀಯನ್ ತಂಡದ ಸದಸ್ಯಳಾಗಿ ಪಾಲ್ಗೊಂಡಿದ್ದೇ ಅಲ್ಲದೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ತಮ್ಮ ದೇಶದ ಧ್ವಜ ಹಿಡಿದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.