ಗುರುವಾರ , ಮೇ 19, 2022
20 °C

ಒಲಿಂಪಿಕ್ಸ್‌ನಲ್ಲಿ ಸಾಧನೆ: ಸೈನಾ ಆತ್ಮವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಭಾರತದ ಹೆಸರಾಂತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಲಂಡನ್ ಒಲಿಂಪಿಕ್ಸ್‌ನಲ್ಲಿ ಎತ್ತರದ ಸಾಧನೆ ತೋರುವ ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ದಾರೆ.ಈಚೆಗೆ ಥಾಯ್ಲೆಂಡ್ ಓಪನ್ ಗ್ರ್ಯಾನ್‌ಪ್ರಿ ಮತ್ತು ಇಂಡೊನೇಷ್ಯಾ ಓಪನ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಮಂಗಳವಾರ ಇಲ್ಲಿಗೆ ಬಂದಿಳಿದ ನಂತರ ಪತ್ರಕರ್ತರೊಡನೆ ಮಾತನಾಡಿದ ಅವರು `ಲಂಡನ್‌ನಲ್ಲಿ ಚೀನಾದ ಪ್ರಬಲ ಆಟಗಾರ್ತಿಯರನ್ನು ಎದುರಿಸಬೇಕೆಂದರೆ ಇನ್ನಷ್ಟೂ ಪರಿಶ್ರಮ ಪಡಲೇ ಬೇಕು~ ಎಂದರು.`ಚೀನಾದ ಆಟಗಾರ್ತಿಯರನ್ನು ಎದುರಿಸುವುದು ಸುಲಭವೇನಲ್ಲ. ಅವರು ಬಲಿಷ್ಠ ಆಟಗಾರ್ತಿಯರು. ಒಂದೊಂದು ಪಾಯಿಂಟ್‌ಗೂ ನೆಲಕಚ್ಚಿ ಆಡುತ್ತಾರೆ~ ಎಂದೂ ನುಡಿದರು.`ಚೀನಾದ ಆಟಗಾರ್ತಿಯರನ್ನು ಸೋಲಿಸುವುದು ಕಷ್ಟ ನಿಜ, ಆದರೆ ಒಲಿಂಪಿಕ್ಸ್ ಪದಕ ಗೆಲ್ಲುವುದು ಅಸಾಧ್ಯವೇನಲ್ಲ~ ಎಂದರು.`ಮುಂದಿನ ಐದು ವಾರಗಳ ಕಾಲ ಅತ್ಯಂತ ಕಠಿಣ ತರಬೇತಿ ನಡೆಸಲಿದ್ದೇನೆ. ಅದು ನನ್ನ ಶಕ್ತಿ, ಸಹಿಷ್ಣುತೆ ಮತ್ತು ತಂತ್ರಗಾರಿಕೆಯನ್ನು ವೃದ್ಧಿಸಿಕೊಳ್ಳಲು ಅನುಕೂಲವಾಗಲಿದೆ~ ಎಂದು ಅಭಿಪ್ರಾಯ ಪಟ್ಟರು.`ಕಳೆದ ಎರಡು ಟೂರ್ನಿಗಳಲ್ಲಿ ನನ್ನ ದೌರ್ಬಲ್ಯ ಏನು ಎಂಬುದನ್ನು ಕಂಡು ಕೊಂಡಿದ್ದೇನೆ. ಅಂತಹ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಮಾಡದಿರುವುದಕ್ಕಾಗಿ ಇನ್ನಷ್ಟು ವಿಶೇಷ ತರಬೇತಿ ಪಡೆಯಲಿದ್ದೇನೆ~ ಎಂದರು.`ಒಲಿಂಪಿಕ್ಸ್ ಎಂದರೆ ಒಲಿಂಪಿಕ್ಸ್ ತಾನೆ. ಒತ್ತಡ ಸಹಜವಾಗಿಯೇ ಇರುತ್ತದೆ. ಆ ಬಗ್ಗೆ ನಾನು ಯೋಚಿಸಲು ಹೋಗುವುದಿಲ್ಲ~ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.`ಇಂಡೊನೇಷ್ಯಾವೆಂದರೆ ನನಗೆ ಅತೀವ ಪ್ರೀತಿ. ಅದೇಕೊ ಏನೋ ನಾನು ಆ ನೆಲದಲ್ಲಿ ಹೋಗಿ ಇಳಿಯುತ್ತಿದ್ದಂತೆ ಪ್ರಶಸ್ತಿ ಗೆದ್ದು ಬಿಟ್ಟೆ ಎಂಬ ಭಾವನೆ ಮನದೊಳಗೆ ಮೂಡಿತ್ತು~ ಎಂದೂ ಸೈನಾ ನುಡಿದರು. ಅವರು ಇಂಡೊನೇಷ್ಯಾ ಓಪನ್ ಪ್ರಶಸ್ತಿಯನ್ನು ಮೂರನೇ ಬಾರಿ ಗೆದ್ದು ಕೊಂಡಿದ್ದಾರೆ.ಆಂಧ್ರ ಪ್ರದೇಶ ಕ್ರೀಡಾ ಸಚಿವಾಲಯವು ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಮಂಗಳವಾರ ಸೈನಾ ನೆಹ್ವಾಲ್ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.