ಭಾನುವಾರ, ಮೇ 22, 2022
22 °C

ಒಲಿಂಪಿಕ್ಸ್ ಇನ್ನು 57 ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ 1896ರಲ್ಲಿ ಮೊದಲ ಆಧುನಿಕ ಒಲಿಂಪಿಕ್ಸ್ ನಡೆಯಿತು. ಆಗ ಕೇವಲ 14 ದೇಶಗಳ 241 ಕ್ರೀಡಾಪಟುಗಳು ಮಾತ್ರ ಪಾಲ್ಗೊಂಡಿದ್ದರು. ಆ ನಂತರ ದಶಕಗಳಿಂದ ದಶಕಕ್ಕೆ ಒಲಿಂಪಿಕ್ಸ್ ಹೆಚ್ಚು ಜನಮನ್ನಣೆ ಪಡೆಯುತ್ತಾ ಬಂದಿದೆ. ಬೀಜಿಂಗ್‌ನಲ್ಲಿ 2008ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 204 ದೇಶಗಳ 10,500 ಮಂದಿ ಪಾಲ್ಗೊಂಡಿದ್ದರು. ಲಂಡನ್‌ನಲ್ಲಿ ಒಲಿಂಪಿಕ್ಸ್ ಇನ್ನಷ್ಟೂ ಹಿರಿದಾಗಲಿದೆ.ಈ ಸಂದರ್ಭದಲ್ಲಿ ಫ್ರಾನ್ಸ್‌ನ ಪಿಯರೆ ಡಿ ಕ್ಯುಬರ್ಟನ್ (1863-1937) ನೆನಪಾಗುತ್ತಾರೆ. ಇವರು ಪ್ಯಾರಿಸ್‌ನಲ್ಲೇ ಶಿಕ್ಷಣ ಮುಗಿಸಿ ಲಂಡನ್ ನಗರಕ್ಕೆ ತೆರಳಿ ಅಲ್ಲಿ ದೈಹಿಕ ಶಿಕ್ಷಣದ ಬಗ್ಗೆ ಉನ್ನತ ಶಿಕ್ಷಣ ಪಡೆಯುತ್ತಾರೆ. ಜತೆಗೆ ಇತಿಹಾಸದಲ್ಲಿಯೂ ಅಪಾರ ಪಾಂಡಿತ್ಯ ಗಳಿಸುತ್ತಾರೆ. ಅದೊಂದು ದಿನ ಅವರಿಗೆ ಪ್ರಾಚೀನ ಒಲಿಂಪಿಕ್ಸ್ ಬಗ್ಗೆ ಗೊತ್ತಾಗುತ್ತದೆ.ಅದು ನಿರಂತರವಾಗಿ ಅವರ ಮನಸ್ಸನ್ನು ಕಾಡತೊಡಗುತ್ತದೆ. ಮಾನವ ಕುಲದಲ್ಲಿ ಸದಾ ಪ್ರೀತಿ ಸ್ನೇಹದ ಭಾವಗಳೇ ತುಂಬಿ ತುಳುಕಲಿ ಎಂಬ ಆಶಯ ಹೊಂದಿದ್ದ ಅವರು ಅದಕ್ಕೆ ಪೂರಕವಾಗುವಂತೆ ಒಲಿಂಪಿಕ್ ಪರಿಕಲ್ಪನೆಯನ್ನು ತಮ್ಮ ಗೆಳೆಯರ ಬಳಗದಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ. ಜಾತಿ, ಜನಾಂಗ, ಮತಗಳ ಗೋಡೆಗಳನ್ನು ಒದ್ದು ಒಡೆದು ಜನ ಒಂದೆಡೆ ಒಟ್ಟುಗೂಡುವುದೇ ಕ್ರೀಡಾಕೂಟಗಳ ಉದ್ದೇಶ ಎಂದು ಅವರು ಹೇಳುತ್ತಾರೆ.ಕ್ಯುಬರ್ಟನ್ ಆಶಯಕ್ಕೆ ಆಗಿನ ಯೂರೊಪ್‌ನ ಕೆಲವು ದೇಶಗಳ ಮಂದಿ ಸಹಮತ ವ್ಯಕ್ತ ಪಡಿಸುತ್ತಾರೆ. ಇಂತಹದ್ದೊಂದು ಸದುದ್ದೇಶ ಇರಿಸಿಕೊಂಡು ಅಥೆನ್ಸ್‌ನಲ್ಲಿಯೇ ಮೊದಲ ಆಧುನಿಕ ಒಲಿಂಪಿಕ್ಸ್ ನಡೆಯತ್ತದೆ.

ಸೆರ್ಗೆಯ್ ಬುಬ್ಕಾ

ಒಲಿಂಪಿಕ್ಸ್‌ನಲ್ಲಿ ಅತ್ಯಂತ ದುರದೃಷ್ಟ ಅಥ್ಲೀಟ್ ಯಾರು ಅಂದರೆ ನೆನಪಾಗುವ ಹೆಸರು ಸೆರ್ಗೆಯ್ ಬುಬ್ಕಾ. ಈತ ಪೋಲ್‌ವಾಲ್ಟ್‌ನಲ್ಲಿ ಮಾಡಿರುವ ಸಾಧನೆ ಚರಿತ್ರೆಯ ಪುಟಗಳಲ್ಲಿ ಉಳಿಯುವಂತಹದ್ದು. ಎರಡು ದಶಕಗಳ ಕಾಲ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎತ್ತರದ ಸಾಧನೆ ತೋರುತ್ತಲೇ ಇದ್ದ ಈತ ಕೇವಲ ಒಂದು ಒಲಿಂಪಿಕ್ಸ್‌ನಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದ್ದೊಂದು ವಿಪರ್ಯಾಸ.ಉಕ್ರೇನ್‌ನ ಬುಬ್ಕಾ 1981ರಲ್ಲಿ ಮೊದಲ ಬಾರಿಗೆ ಯುರೋಪ್ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಂಡು 7ನೇ ಸ್ಥಾನ ಗಳಿಸಿದ್ದರು. ಆ ನಂತರ ಆತ ಹಿಂತಿರುಗಿ ನೋಡಿದ್ದೇ ಇಲ್ಲ. ಇವರು ಪೋಲ್‌ವಾಲ್ಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ 6ಮೀಟರ್ಸ್ ಜಿಗಿದರಲ್ಲದೆ, ನಂತರ 6.14 ಮೀಟರ್ಸ್ ಜಿಗಿದರು. ಇವರು ಒಟ್ಟು 35 ಸಲ ತಮ್ಮದೇ ವಿಶ್ವದಾಖಲೆಯನ್ನು ಸುಧಾರಿಸಿದ್ದೊಂದು ವಿಶೇಷ. ಇವರು 1983, 87, 91ರ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗಳಲ್ಲಿ ಸ್ವರ್ಣ ಪದಕ ಗೆದ್ದಿದ್ದರು.ಆದರೆ ಇವರು 1984 ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕಿತ್ತಾದರೂ, ಆ ವರ್ಷ ರಷ್ಯ ಆ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಿದ್ದರಿಂದ ಬುಬ್ಕಾ ಅಲ್ಲಿಗೆ ಹೋಗಲಿಲ್ಲ. 1988ರಲ್ಲಿ ಸೋಲ್‌ನಲ್ಲಿ ಪಾಲ್ಗೊಂಡ ಇವರು 5.90 ಮೀಟರ್ಸ್ ಜಿಗಿದು ಚಿನ್ನದ ಪದಕ ಗೆದ್ದುಕೊಂಡರು. ಆದರೆ ಬಾರ್ಸಿಲೋನ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡರಾದರೂ, 5.70ಮೀ. ಎತ್ತರವನ್ನು ಮೂರೂ ಯತ್ನಗಳಲ್ಲಿ ಯತ್ನಿಸಿ ವಿಫಲರಾಗಿ ಬರಿಗೈನಲ್ಲಿ ಹಿಂತಿರುಗಿದರು.1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಅವರು ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದಾಗಲೇ ತೀವ್ರವಾದ ಹಿಮ್ಮಡಿ ನೋವಿನಿಂದಾಗಿ ಸ್ಪರ್ಧಿಸಲೇ ಇಲ್ಲ. ಸಿಡ್ನಿಯಲ್ಲಿ 2000ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಬಹಳ ನಿರೀಕ್ಷೆಗಳನ್ನಿರಿಸಿಕೊಂಡು ಸ್ಪರ್ಧಿಸಿದರಾದರೂ ಅದೇಕೋ ಏನೋ 5.70ಮೀ. ಗಡಿಯನ್ನು ಮೀರಲಾಗದೆ ನಿರಾಸೆಗೊಂಡರು.

ಫ್ರಾನ್ಸ್

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ ನಗರದಲ್ಲಿ 1900ರಲ್ಲಿ ನಡೆದಿದ್ದ ಎರಡನೇ ಒಲಿಂಪಿಕ್ಸ್ ಹಲವು ಕಾರಣಗಳಿಂದ ಮಹತ್ವದ್ದು. ಆ ಕೂಟದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್, ಮೋಟಾರುಸೈಕಲ್ ರೇಸ್ ಸ್ಪರ್ಧೆಗಳನ್ನು ನಡೆಸಲಾಗಿತ್ತು.ವಿಶೇಷವೆಂದರೆ ಒಲಿಂಪಿಕ್ಸ್‌ನಲ್ಲಿ ಆ ಕ್ರೀಡಾ ಸ್ಪರ್ಧೆಗಳು ಮತ್ತೆ ನಡೆಯಲೇ ಇಲ್ಲ. ಒಲಿಂಪಿಕ್ಸ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರು ಸ್ಪರ್ಧಿಸಿದ್ದು ಕೂಡಾ ಆ ಕೂಟದಲ್ಲಿಯೇ.ಆ ಕೂಟದ ಬಹುತೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಫ್ರಾನ್ಸ್‌ನ ಕ್ರೀಡಾಪಟುಗಳು ಗಮನಾರ್ಹ ಸಾಮರ್ಥ್ಯವನ್ನೇ ತೋರಿದ್ದರು.

 

ಆ ನಂತರ 1924ರಲ್ಲಿ ಮತ್ತೆ ಪ್ಯಾರಿಸ್ ನಗರದಲ್ಲಿಯೇ ಒಲಿಂಪಿಕ್ಸ್ ಕೂಟ ನಡೆದಿತ್ತು. ಫ್ರಾನ್ಸ್ 2008ರ ಬೀಜಿಂಗ್ ಒಲಿಂಪಿಕ್ಸ್ ಕೂಟದಲ್ಲಿ 7 ಚಿನ್ನವೂ ಸೇರಿದಂತೆ ಒಟ್ಟು 41 ಪದಕಗಳನ್ನು ಗೆದ್ದಿತ್ತು. ಬೀಜಿಂಗ್ ಸಾಧನೆಯೂ ಸೇರಿದಂತೆ ಫ್ರಾನ್ಸ್ ದೇಶವು ಒಲಿಂಪಿಕ್ಸ್‌ನಲ್ಲಿ ಒಟ್ಟು 191 ಚಿನ್ನದ ಪದಕಗಳೂ ಸೇರಿದಂತೆ 637 ಪದಕಗಳನ್ನು ಗಳಿಸಿದೆ. ಪ್ಯಾರಿಸ್‌ನಲ್ಲಿ 1900ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳೇ ನಡೆದಿರಲಿಲ್ಲ ಎನ್ನುವುದು ಇನ್ನೊಂದು ವಿಶೇಷ.

ಚುಟುಕು

ಅಥೆನ್ಸ್‌ನಲ್ಲಿ 1896ರಲ್ಲಿ ನಡೆದಿದ್ದ ಆಧುನಿಕ ಒಲಿಂಪಿಕ್ಸ್‌ನಲ್ಲಿ ಯಾವುದೇ ಒಲಿಂಪಿಕ್ ದಾಖಲೆ ಬರಲಿಲ್ಲ. ಏಕೆಂದರೆ ಅದು ಮೊದಲ ಒಲಿಂಪಿಕ್ಸ್ ತಾನೆ!

***

ಮೊದಲ ಆಧುನಿಕ ಒಲಿಂಪಿಕ್ಸ್ ಸ್ಪರ್ಧೆಗಳನ್ನು ಅಥೆನ್ಸ್‌ನ ಪನಾ ತಿನಾಯ್‌ಕೊ ಕ್ರೀಡಾಂಗಣದಲ್ಲಿ ಸಂಘಟಿಸಲಾಗಿತ್ತು. ಅದರಲ್ಲಿ 80ಸಾವಿರ ಮಂದಿ ಕುಳಿತು ಕೊಳ್ಳುವ ಸಾಮರ್ಥ್ಯವಿತ್ತು.

***

ಅಮೆರಿಕಾದ ಅಟ್ಲಾಂಟಾದಲ್ಲಿ 1996ರಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಅಲ್ಲಿನ ಪ್ರಧಾನ ಕ್ರೀಡಾಂಗಣದ ಬಳಿ ಪುಟ್ಟ ಬಾಂಬು ಸ್ಫೋಟಗೊಂಡಿತು. ಆ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದರು.

ಭಾರತ... ಏನು ಎತ್ತ

ಭಾರತವು ಒಲಿಂಪಿಕ್ಸ್‌ನ ಫುಟ್‌ಬಾಲ್‌ನಲ್ಲಿ ಆರು ದಶಕಗಳ ಹಿಂದೆ ಗಮನ ಸೆಳೆದಿತ್ತಾದರೂ, ನಂತರದ ವರ್ಷಗಳಲ್ಲಿ ಎದ್ದು ಕಾಣಲೇ ಇಲ್ಲ. ಲಂಡನ್‌ನಲ್ಲಿ 1948ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತ ಫುಟ್‌ಬಾಲ್ ತಂಡವನ್ನು ಫ್ರಾನ್ಸ್  2-1 ಗೋಲುಗಳಿಂದ ಸೋಲಿಸಿತ್ತು. ಆದರೆ ಅಂದು ಬರಿಗಾಲಲ್ಲೇ ಆಡಿದ್ದ ಭಾರತದ ಆಟಗಾರರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.ಹೆಲ್ಸಿಂಕಿಯಲ್ಲಿ ನಡೆದ 1952ರ ಒಲಿಂಪಿಕ್ಸ್‌ನಲ್ಲಿ ಭಾರತದ ಫುಟ್‌ಬಾಲ್ ಆಟಗಾರರು ಪಾಲ್ಗೊಂಡಿದ್ದರಾದರೂ, ಯುಗೊಸ್ಲಾವಿಯ ತಂಡದ ಎದುರು 1-10 ಗೋಲುಗಳಿಂದ ಹೀನಾಯವಾಗಿ ಸೋತು ವಾಪಸಾದರು.

ಆದರೆ ಮೆಲ್ಬರ್ನ್‌ನಲ್ಲಿ ಭಾರತದ ಫುಟ್‌ಬಾಲ್ ಆಟಗಾರರು ಉತ್ತಮ ಸಾಮರ್ಥ್ಯವನ್ನೇ ತೋರಿದ್ದು, ನಾಲ್ಕನೇ ಸ್ಥಾನ ಗಳಿಸಿದರು.

 

ಮೊದಲ ಪಂದ್ಯದಲ್ಲಿಯೇ ಭಾರತ 4-2 ಗೋಲುಗಳಿಂದ ಆತಿಥೇಯ ಆಸ್ಟ್ರೇಲಿಯವನ್ನು ಮಣಿಸಿತ್ತು. ಆದರೆ ಯುಗೊಸ್ಲಾವಿಯವು 4-1ಗೋಲುಗಳಿಂದ ಭಾರತವನ್ನು ಸೋಲಿಸಿದರೆ, ಕೊನೆಯ ಪಂದ್ಯದಲ್ಲಿ ಭಾರತವು 0-3 ಗೋಲುಗಳಿಂದ ಬಲ್ಗೇರಿಯಾದ ಎದುರು ಸೋತಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.