ಒಲಿಂಪಿಕ್ಸ್ ಬಾಕ್ಸಿಂಗ್ನಲ್ಲಿ ಮುಂದುವರಿದ ಎಡವಟ್ಟು:ಇದು ಮೋಸ, ಮೋಸ, ಮೋಸ: ಮನೋಜ್
ಲಂಡನ್ (ಪಿಟಿಐ/ಐಎಎನ್ಎಸ್): ಒಲಿಂಪಿಕ್ಸ್ ಬಾಕ್ಸಿಂಗ್ನಲ್ಲಿ ಸಂಭವಿಸುತ್ತಿರುವ ಸಾಲು ಸಾಲು ಎಡವಟ್ಟುಗಳ ಪಟ್ಟಿಗೆ ಮತ್ತೊಂದು ಕೊಂಡಿ ಸೇರಿದೆ. ಶನಿವಾರ ರಾತ್ರಿ ನಡೆದ ಲೈಟ್ವೆಲ್ಟರ್ ವೇಟ್ (64 ಕೆ.ಜಿ.) ವಿಭಾಗದಲ್ಲಿ ಭಾರತದ ಬಾಕ್ಸರ್ ಮನೋಜ್ ಕುಮಾರ್ ವಿರುದ್ಧ ಬಂದ ವಿವಾದಿತ ತೀರ್ಪು ಅದಕ್ಕೆ ಸಾಕ್ಷಿ.
ಈ ಕಾರಣ ಮನೋಜ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿಯೇ ಸೋತು ಹೊರಬೀಳುವಂತಾಯಿತು. ಎಕ್ಸ್ ಸೆಲ್ ಅರೆನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಆತಿಥೇಯ ಇಂಗ್ಲೆಂಡ್ನ ಥಾಮಸ್ ಸ್ಟಾಕರ್ 20-16 ಪಾಯಿಂಟ್ಗಳಿಂದ ಗೆದ್ದು ಕ್ವಾರ್ಟರ್ ಪೈನಲ್ಗೆ ಮುನ್ನಡೆದರು. ಅವರು ಮೊದಲ ಬೌಟ್ನಲ್ಲಿ ಬೈ ಪಡೆದಿದ್ದರು.
ಈ ಹೋರಾಟ ನಿಕಟ ಪೈಪೋಟಿಯಿಂದ ಕೂಡಿತ್ತು. ಭಾರತದ ಬಾಕ್ಸರ್ ಮೇಲುಗೈ ಸಾಧಿಸಿದ್ದಾರೆ ಎಂಬುದು ಕಂಡುಬಂದಿತಾದರೂ ಪಾಯಿಂಟ್ಗಳ ಅಂತರದಲ್ಲಿ ಮೊದಲ ಎರಡು ಸುತ್ತುಗಳಲ್ಲಿ ಸ್ಟಾಕರ್ ಮುನ್ನಡೆ ಸಾಧಿಸಿದ್ದರು. ಕೊನೆಯ ಸುತ್ತಿನಲ್ಲಿ ಮನೋಜ್ ಪಾರಮ್ಯ ಮೆರೆದರು. ಆದರೆ ಅಂತಿಮವಾಗಿ ರೆಫರಿ ವಿಜಯಿ ಎಂದು ಇಂಗ್ಲೆಂಡ್ನ ಬಾಕ್ಸರ್ನ ಕೈ ಮೇಲೆತ್ತಿದರು.
`ಇದರಲ್ಲಿ ಖಂಡಿತ ಮೋಸವಿದೆ. ನನ್ನ ಎದುರಾಳಿ ಬಾಕ್ಸರ್ನ ಶೈಲಿಯೇ ನನ್ನಲ್ಲಿ ಅಚ್ಚರಿ ಮೂಡಿಸಿತು. ಆದರೆ ಮೊದಲ ಎರಡು ಸುತ್ತಿನಲ್ಲಿ ಅವರು 7-4, 9-4ರಲ್ಲಿ ಮುನ್ನಡೆ ಹೊಂದಿದ್ದಾರೆ ಎಂದು ಪ್ರಕಟಿಸಿದ್ದು ನನ್ನಲ್ಲಿ ಅಚ್ಚರಿ ಮೂಡಿಸಿದೆ. ಇದು ಅನ್ಯಾಯದ ಫಲಿತಾಂಶ~ ಎಂದು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಬಾಕ್ಸರ್ ಮನೋಜ್ ಹೇಳಿದರು.
`ಇದು ಒಲಿಂಪಿಕ್ಸ್ ಸ್ಪರ್ಧೆ ರೀತಿ ಕಾಣುತ್ತಿಲ್ಲ. ಇದೊಂದು ಜಿಲ್ಲಾ ಮಟ್ಟದ ಬಾಕ್ಸಿಂಗ್ ಟೂರ್ನಿ ರೀತಿ ನಡೆಯುತ್ತಿದೆ. ಇಲ್ಲಿ ಮೋಸ ಬಿಟ್ಟರೆ ಮತ್ತೊಂದು ವಿಷಯ ಇರುವುದಿಲ್ಲ. ರಿಂಗ್ನಲ್ಲಿ ಇಂಗ್ಲೆಂಡ್ನ ಬಾಕ್ಸರ್ ಇದ್ದರೆ ಮುಗಿಯಿತು. ನಿಮ್ಮ ಎದುರಾಳಿ ಯಾರು ಎಂಬುದು ಅನಗತ್ಯ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸ್ಪರ್ಧೆ ಬಳಿಕ ಭಾರತದ ಪಾಳಯದಲ್ಲಿ ಆಕ್ರೋಶ ಮಡುಗಟ್ಟಿತ್ತು. ಎದುರಾಳಿಗೆ ನೀಡಿದ ಕೆಲ ಪಾಯಿಂಟ್ಗಳು ಈ ಕೋಪಕ್ಕೆ ಕಾರಣವಾದವು.
`ಮನೋಜ್ ಆರಂಭದಿಂದ ಕೊನೆಯವರೆಗೆ ಒಂದೇ ರೀತಿಯಲ್ಲಿ ಹೋರಾಟ ನಡೆಸಿದರು. ಆದರೆ ಕೊನೆಯ ಸುತ್ತಿನಲ್ಲಿ ಮಾತ್ರ ಮನೋಜ್ 7-4ರಲ್ಲಿ ಮುನ್ನಡೆ ಎಂದು ತೀರ್ಪು ನೀಡಿದರು. ಇದಕ್ಕಿಂತ ಮೊದಲಿನ ಎರಡು ಸುತ್ತುಗಳಲ್ಲಿಯೂ ಇದೇ ರೀತಿ ಪೈಪೋಟಿ ನಡೆಸಿದ್ದರು. ಕೊನೆಯ ಸುತ್ತಿನಲ್ಲಿ ಮಾತ್ರ ಈ ರೀತಿ ತೀರ್ಪು ಏಕೆ? ಇದೊಂದು ಕೆಟ್ಟ ತೀರ್ಪು~ ಎಂದು ಭಾರತ ತಂಡದ ವಿದೇಶಿ ಕೋಚ್ ಬ್ಲಾಸ್ ಇಗ್ಲೆಸಿಯಾಸ್ ಫರ್ನಾಂಡೀಸ್ ನುಡಿದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.