ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಓಣಂ ಪೂಕ್ಕಳಂ

Published:
Updated:

ಮಹಾನಗರದ ಧಾವಂತದ ಬದುಕಿಗೆ ಬ್ರೇಕ್ ಕೊಟ್ಟ ಕೇರಳೀಯರು ಇದೀಗ ಓಣಂ ಆಚರಣೆಗೆ ಸಿದ್ಧರಾಗಿದ್ದಾರೆ. `ಮಾವೇಲಿ ನಾಡು ವಾಣೀಡುಂ ಕಾಲಂ... ಮಾನುಷರೆಲ್ಲಾರುಂ ಒನ್ನು ಪೋಲೆ..  (ಮಹಾಬಲಿ ಆಳುವ ನಾಡಿನಲ್ಲಿ ಎಲ್ಲರೂ ಸಮಾನರು) ಹಾಡು ಎಲ್ಲೆಲ್ಲೂ ಅನುರಣಿಸುತ್ತಿದೆ. ಅಲ್ಲಲ್ಲಿ `ಪೂಕ್ಕಳಂ~ (ಹೂವಿನ ರಂಗೋಲಿ) ಕಾಣಿಸಿಕೊಂಡಿದೆ. ಹಬ್ಬಕ್ಕೆಂದು `ಓಣಕ್ಕೋಡಿ~ (ಹೊಸ ಉಡುಪು) ಖರೀದಿ ಜೋರಾಗಿಯೇ ನಡೆದಿದೆ.ಗಣೇಶ ಚತುರ್ಥಿ ಮುಗಿದಿದ್ದೇ ತಡ, ಬಂತು ಓಣಂ. ಅಂದಹಾಗೆ ಶುಕ್ರವಾರ ತಿರುವೋಣಂ. ಹೀಗಾಗಿ ಎಲ್ಲೆಡೆ ಓಣಂ ಸಿದ್ಧತೆ, ಭವ್ಯವಾಗಿ ಬರಮಾಡಿಕೊಳ್ಳುವ ಸಡಗರ. ಉದ್ಯಾನನಗರಿಯೂ ಇದರಿಂದ ಹೊರತಲ್ಲ. ಸುಳ್ಳು, ವಂಚನೆ, ಕಪಟ ಇಲ್ಲದ ನಾಡನ್ನು ಆಳಿದ್ದ ಮಾವೇಲಿಯನ್ನು ಸ್ವಾಗತಿಸಲು ಇಲ್ಲಿನ `ಮರುನಾಡನ್ ಮಲಯಾಳಿ~ಗಳು (ಹೊರನಾಡ ಮಲಯಾಳಿಗಳು) ಸಕಲ ಸಿದ್ಧತೆ ನಡೆಸಿದ್ದಾರೆ. `ಪುಳಿ ಇಂಜಿ~ ಕರಿಯ ಹುಳಿಯೊಂದಿಗೆ ಅಡಪ್ರಥಮನ್‌ನ ಸಿಹಿಯೂ ಸೇರಿ ಓಣಂ ಸಂಭ್ರಮ ಗರಿಗೆದರಿದೆ.ಓಣಂ ಬಂದರೆ ಸಾಕು. ಪ್ರತೀ ಕೇರಳೀಯನೂ ನೆನಪಿನಾಳಕ್ಕೆ ಇಳಿಯುತ್ತಾನೆ. ಆಗಷ್ಟೇ ಮಳೆ ಕಳೆದು ಕಾಣಿಸಿಕೊಂಡ ಸೂರ್ಯನ ಎಳೆ ಬಿಸಿಲು, ಅತ್ತಂನಿಂದ ಆರಂಭವಾಗಿ ತಿರುವೋಣಂವರೆಗೆ ನಿತ್ಯ ಬೆಳ್ಳಂಬೆಳಗ್ಗೆ ಎದ್ದು ಹೂಗಳ ಹುಡುಗಾಟಕ್ಕೆ ಹೊರಟ  ಆ ಬಾಲ್ಯ ಕಾಲ...ಮುಂಜಾನೆಯ ಮಂಜಿನ ಹನಿಗಳ ನಡುವೆ `ಪೂವೇ... ಪೊಲಿ ಪೂವೇ~  ಎನ್ನುತ್ತಾ ಹೂಗಳನ್ನು ಬುಟ್ಟಿ ತುಂಬಾ ಆರಿಸಿದ್ದು... ಮಕ್ಕಳು ಆರಿಸಲಿ ಎಂದೇ ಹಿತ್ತಲ ತುಂಬಾ ಅರಳಿ ನಿಂತ ಹೆಸರೇ ಗೊತ್ತಿಲ್ಲದ ಬಗೆಬಗೆಯ ಹೂಗಳು... ಕಣ್ಣಿಗೂ, ಮನಸ್ಸಿಗೂ ಆನಂದ ನೀಡುವ ಮನೆಯ ಮುಂದಿನ ಹೂವಿನ ರಂಗೋಲಿ ಪೂಕ್ಕಳಂ.ಮನೆ ತುಂಬಾ ಮಕ್ಕಳ ಓಡಾಟ, ಕೇಕೆ. ನೆಂಟರಿಷ್ಟರ ಮಾತು. ಮನೆ ಮುಂದಿನ ಮಾವಿನ ಮರಕ್ಕೆ ಕಟ್ಟಿದ ಉಯ್ಯಾಲೆಯಲ್ಲಿ ಕುಳಿತು ಎತ್ತರೆತ್ತರ ಹಾರಿದ್ದು.ಎಲ್ಲಕ್ಕಿಂತಲೂ ಮಿಗಿಲಾಗಿ ಅಡುಗೆ ಕೋಣೆಯಿಂದ ಬರುವ ಅವಿಯಲ್, ಪರಿಪ್ಪು ಕರಿ, ಸಾಂಬಾರ್, ಕಾಳನ್, ಓಲನ್, ತೋರನ್, ಚಿಪ್ಸ್, ಶರ್ಕರವರಟ್ಟಿ, ಹಪ್ಪಳ, ಪಾಯಸ, ಅಡಪ್ರಥಮನ್, ಬಾಳೆಹಣ್ಣು ಎಲಾ ಸೇರಿರುವ `ಓಣಂ ಸದ್ಯ~ದ ಸುವಾಸನೆ.ವಾಹ್... ಕೇರಳೀಯರ ಮನಸ್ಸಿನಿಂದ ಈ ಚಿತ್ರ ಎಂದೂ ಮಾಸದು. ಉದ್ಯೋಗ ಅರಸಿ ಬಂದು ಮಹಾನಗರದ ಭಾಗವಾದರೂ ಆ ನೆನಪು ಎಂದೆಂದೂ ಮರೆಯಾಗದು. ಓಣಂ ಎಂದರೆ ಇದು.ಆದರೆ ಎಲ್ಲದ್ದಕ್ಕೂ ಧಾವಂತ ಕಾಣುವ ಕಾಂಕ್ರೀಟ್ ಕಾಡಿನ ನಗರಗಳ `ಮರುನಾಡನ್~ ಮಲಯಾಳಿಗಳ ಓಣಂ ಆಚರಣೆಗೆ ಈ ಸಂಭ್ರಮವಿದೆಯೇ? ಖಂಡಿತ ಇದೆ ಎಂದು ಹೇಳುವಷ್ಟು ಧೈರ್ಯ ಇಂದು ಉದ್ಯಾನನಗರಿಯ ಕೇರಳೀಯರಲ್ಲಿದೆ.ಹಾಗಾಗಿ ನದಿ, ತೊರೆಗಳ, ಹಚ್ಚ ಹಸಿರಿನ ದೇವರ ಸ್ವಂತ ನಾಡಿನಲ್ಲಿ ಪೂಕ್ಕಳಂ ಹಾಕುವುದು, ಉಯ್ಯಾಲೆ ಆಡುವುದು, ಅಮ್ಮ ಮಾಡಿದ ಒಣಂ ಸದ್ಯ ಉಣ್ಣುವುದೇ ನಿಜವಾದ ಓಣಂ ಎಂಬ ಮಾತು ಇದೀಗ ಅಪ್ರಸ್ತುತ.ಎಲ್ಲವೂ ಪ್ಯಾಕೇಜ್ ಆಗಿ ಮಾರ್ಪಟ್ಟಿರುವ ತಾಯ್ನಾಡಿನ ಓಣಂಗಿಂತ ಇಲ್ಲಿನ ಸಂಘ ಸಂಸ್ಥೆಗಳು ನಡೆಸುವ ಓಣಂ ಹಬ್ಬವೇ  ನಿಜವಾದ ಓಣಂ ಎಂಬ  ಧೈರ್ಯದ ಮಾತು ಅವರ ಬಾಯಿಂದ ಉಲಿಯುತ್ತದೆ. ಬಸ್‌ನ್ಲ್ಲಲೂ ರಷ್... ರೈಲಿನಲ್ಲೂ ರಷ್... ಈ ರಷ್‌ಗಳ ಮಧ್ಯೆ ಊರಿಗೆ ಹೋಗಿ ಓಣಂ ಸಂಭ್ರಮ ಏಕೆ ಎಂದು ಕೇಳುವವರೂ ಇಲ್ಲಿ ಸಾಕಷ್ಟಿದ್ದಾರೆ.ಅದಕ್ಕೇ ಅವರೀಗ ತಮ್ಮ ಕೆಲಸಕ್ಕೆ ವಿರಾಮ ಹೇಳಿ ಓಣಂ ಲಹರಿಯಲ್ಲಿದ್ದಾರೆ. ಕಚೇರಿಗೆ ಬಿಡುವು ಮಾಡಿಕೊಂಡು ತರಕಾರಿಗಳ ಖರೀದಿಗೆಂದು `ಓಣಂ ಸಂತೆ~ಯತ್ತ ಮುಖ ಮಾಡಿದ್ದಾರೆ.  ಸೇವಂತಿಗೆ, ಮಲ್ಲಿಗೆ, ಚೆಂಡು ಹೂ, ರುದ್ರಾಕ್ಷಿ ಹೂಗಳ ಖರೀದಿಗಾಗಿ ಕೆ.ಆರ್. ಮಾರುಕಟ್ಟೆ ಹಾಗೂ ಗಾಂಧಿ ಬಜಾರ್, ಮಲ್ಲೇಶ್ವರಂನತ್ತ ದೌಡಾಯಿಸಿದ್ದಾರೆ. ನೇಂದ್ರ ಬಾಳೆಕಾಯಿ, ಚಿಪ್ಸ್, ಶರ್ಕರವರಟ್ಟಿಯ ಬೆಲೆ ಹೆಚ್ಚಾದರೂ ಅಡ್ಡಿಯಿಲ್ಲ, ಖರೀದಿ ಮಾಡಿಯೇ ಸಿದ್ಧ.ಊರ ನೆನಪು ಬಂದರೂ ರಜೆ ಇಲ್ಲ, ಬಸ್, ರೈಲಿನಲ್ಲಿ ಟಿಕೆಟ್ ಇಲ್ಲ ಎಂದು ಬ್ಯಾಚಲರ್‌ಗಳು ಅಲವತ್ತುಕೊಂಡರೂ ಅವರನ್ನು ಸಂತೋಷಪಡಿಸಲು ಇಲ್ಲಿನ ಮಲಯಾಳಿ ಹೋಟೆಲ್‌ಗಳು ಸಿದ್ಧವಾಗಿವೆ.ಕೈಯಿಂದ ಹಣ ಸ್ವಲ್ಪ ಹೆಚ್ಚು ಹೋದರೇನಂತೆ, ಮನೆಗೇ ಬರುತ್ತದೆಯಲ್ಲ ಪಾರ್ಸೆಲ್ ಅಥವಾ ಹೋಟೆಲ್‌ಗೆ ಹೋದರೂ ಭರ್ಜರಿ ಓಣಂ ಸದ್ಯ ಉಣ್ಣಬಹುದಲ್ಲ. ಇನ್ನುಳಿದವರೋ... ಅದೆಲ್ಲ ಬೇಡ, ಮನೆಯಲ್ಲೇ ಏನಾದರೂ ಮಾಡೋಣ ಅಂತ  ಸಾಂಬಾರ್, ಅವಿಯಲ್, ಪರಿಪ್ಪು ಕರಿ, ಪಾಯಸ ಇಷ್ಟಕ್ಕೇ ತಮ್ಮ ಸಂಭ್ರಮವನ್ನು ಮಿತಿಗೊಳಿಸಬಹುದು.ಬೆಂಗಳೂರಿನಲ್ಲಿ ಓಣಂ

ಮಹಾನಗರಿಯಲ್ಲಿ ಓಣಂ ಹಬ್ಬದ ಆಚರಣೆಗೆ ಅದೆಷ್ಟೋ ವರ್ಷಗಳ ಇತಿಹಾಸವಿದೆ.  1940ರಿಂದಲೇ ಇಲ್ಲಿ ಓಣಂ ಆಚರಿಸಿದ ಬಗ್ಗೆ ಮಾಹಿತಿಯಿದೆ. ಆಗ ಇದ್ದದ್ದು ಒಂದೇ ಮಲಯಾಳಿ ಸಮಾಜ.ಓಣಂ ನಂತರದ ಭಾನುವಾರ ಅಥವಾ ಕೆಲವೊಮ್ಮೆ ಓಣಂ ದಿನವೇ ಹಬ್ಬ ಆಚರಿಸಲಾಗುತ್ತಿತ್ತು. ತಿರುವಾದಿರ ನೃತ್ಯ, ಕಳರಿಪಯಟ್, ಕಥಕ್ಕಳಿ, ಜತೆಗೆ ನಾಟಕ ಪ್ರದರ್ಶನವೂ ಹಬ್ಬದ ಆಚರಣೆಯ ಭಾಗವಾಗಿ ನಡೆಯುತ್ತಿತ್ತು.ಆದರೆ ಇಂದು ಪರಿಸ್ಥಿತಿ ಹಾಗಲ್ಲ. 1950ರಿಂದೀಚೆಗೆ ನಗರದ ವಿವಿಧ ಭಾಗಗಳಲ್ಲಿ ಹಲವು ಸಂಘಟನೆಗಳು ಹುಟ್ಟಿಕೊಂಡಿವೆ. ಒಂದೊಂದು ಸಂಘಟನೆಗಳೂ ಓಣಂ ಹಬ್ಬವನ್ನು ನಾ ಮುಂದು ತಾ ಮುಂದು ಎಂದು ಆಚರಿಸುತ್ತಿವೆ.

 

`ಓಣಂ ಸದ್ಯ~ ತಯಾರಿಗೆಂದೇ ಕೇರಳದಿಂದ ಖ್ಯಾತ ಬಾಣಸಿಗರನ್ನು ಕರೆಸುತ್ತಿವೆ. ಮನೆಯಲ್ಲಿ `ಸದ್ಯ~ ಮಾಡುವವರಿಗೆಂದೇ ಅಗತ್ಯವಾದ ಸಾಧನಗಳ ಓಣಂ ಸಂತೆಯನ್ನು ನಡೆಸುತ್ತಿವೆ. ಜತೆಗೆ ಆಚರಣೆಗೆ ಮತ್ತಷ್ಟು ಕಳೆ ತುಂಬಲು ಸಿನಿಮಾ ನಟ, ನಟಿಯರನ್ನು ಕರೆಸುವಲ್ಲಿ ಪೈಪೋಟಿ ನಡೆಸುತ್ತಿವೆ.ನಾಳೆ ತಿರುವೋಣಂ. ಆದರೂ ಮಹಾನಗರಿಯ ಸಂಭ್ರಮ ನಾಳೆಗೇ ಮುಗಿಯದು. ಮಾಸಾಂತ್ಯದವರೆಗೂ ಈ ಸಂಭ್ರಮ, ಸಡಗರ ಇದ್ದೇ ಇರುತ್ತದೆ. ಮನೆ ಮುಂದಿನ `ಪೂಕ್ಕಳಂ~ ಸ್ವಾಗತ ಕೋರುತ್ತಲೇ ಇರುತ್ತದೆ. ಇದು ಕೇರಳೀಯರ ಹಬ್ಬವಾದರೂ ಸಂಭ್ರಮಕ್ಕೆ ಎಲ್ಲೆಗಳಿಲ್ಲ.

Post Comments (+)