ಭಾನುವಾರ, ಜನವರಿ 26, 2020
29 °C

ಓದು ಯಾಕೆ? ಹೇಗೆ

–ಪರಮೇಶ್ವರಯ್ಯ ಸೊಪ್ಪಿಮಠ Updated:

ಅಕ್ಷರ ಗಾತ್ರ : | |

ದು ಒಂದು ವಿಶಿಷ್ಟ ಪ್ರಪಂಚ.  ಅಲ್ಲಿ ಕವಿಗಳು ಓದುಗನನ್ನು ಒಲವಿನ ಲೋಕಕ್ಕೆ ಕರೆದೊಯ್ಯಬಲ್ಲರು; ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡಬಲ್ಲರು; ಕಾದಂಬರಿಕಾರರು ಬದುಕಿನ ಪರಿಚಯ ಮಾಡಿಕೊಡಬಲ್ಲರು; ಅನ್ವೇಷಕರು ನೆಲ– ಜಲಗಳ ಅದ್ಭುತ ಅನ್ವೇಷಣೆ, ಸಾಹಸಗಳನ್ನು ಹೇಳಬಲ್ಲರು; ವಿಜ್ಞಾನಿಗಳು ಪ್ರಕೃತಿಯಲ್ಲಿ ಹುದುಗಿರುವ ವೈಜ್ಞಾನಿಕ ಸತ್ಯಗಳನ್ನು ತಿಳಿಸಿಕೊಡಬಲ್ಲರು;

ಚರಿತ್ರಕಾರರು ಮಹನೀಯರ ಬದುಕಿನ ದರ್ಶನ ಮಾಡಿಕೊಡಬಲ್ಲರು; ಇತಿಹಾಸಕಾರರು ಆಗಿ ಹೋದ ಘಟನೆಗಳನ್ನು ಪುನಃ ಕಣ್ಣಿಗೆ ಕಟ್ಟುವಂತೆ ಬಣ್ಣಿಸಬಲ್ಲರು, ಮುಂದಾಗಬಹುದಾದ ಘಟನೆಗಳ ಇಣುಕು ನೋಟವನ್ನೂ ಒದಗಿಸಬಲ್ಲರು; ದಾರ್ಶನಿಕರು ಬದುಕಿನ ಅರ್ಥಪೂರ್ಣತೆಯ ಪ್ರಜ್ಞೆ ತಂದುಕೊಡಬಲ್ಲರು... ಹಾಲ್‌ಬ್ರೂಕ್‌ ಜಾಕ್ಸನ್– (ತಮ್ಮ ‘ದಿ ಜಾಯ್ ಆಫ್ ರೀಡಿಂಗ್’ ಪುಸ್ತಕದಲ್ಲಿ)

ಶಾಲಾ ದಿನಗಳಲ್ಲೇ ಅತ್ಯಂತ ಹೆಚ್ಚು ಪುಸ್ತಕ ಓದುತ್ತಿದ್ದ, ನಸು ನಾಚಿಕೆ ಸ್ವಭಾವದ, ಎಲ್ಲ ಪರೀಕ್ಷೆಗಳಲ್ಲೂ ಟಾಪರ್ ಆಗಿರುತ್ತಿದ್ದ ಮಂಗಳೂರಿನ ಹುಡುಗ ಅರವಿಂದ ಅಡಿಗ ಬುಕರ್‌ ಪ್ರಶಸ್ತಿ ಗಳಿಸುವಲ್ಲಿ ಸಫಲರಾದರು.ಓದು ಎಂದರೆ...

     ಒಂದು ಅಕ್ಷರವನ್ನು ಶಬ್ದದೊಂದಿಗೆ ಅದಕ್ಕೆ ಇರುವ ಸಂಬಂಧವನ್ನು ಊಹಿಸಿ ಅರ್ಥ ಮಾಡಿಕೊಳ್ಳು­ವುದೇ ಓದು. ಬರಹವನ್ನು ಓದುವುದಷ್ಟೇ ಓದಲ್ಲ. ಅಲ್ಲಿರುವ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಓದಿನಲ್ಲಿ ಸೇರಿದೆ. ಹಾಗಾಗಿ ಇಲ್ಲಿ ಗುರುತಿಸುವಿಕೆಯ ಜೊತೆಗೆ ಗ್ರಹಿಕೆಯೂ ಪ್ರಧಾನ ಪಾತ್ರ ವಹಿಸುತ್ತದೆ.

ಓದು ನಾಲ್ಕು ಹಂತಗಳಲ್ಲಿ ಸಾಗುತ್ತದೆ.1. ಸಂಕೇತಗಳ ಗುರುತಿಸುವಿಕೆ (ಅಕ್ಷರ, ಚಿಹ್ನೆ, ಚಿತ್ರಗಳು)

2. ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವುದು.

3. ಸಂಕೇತಗಳ ವ್ಯತ್ಯಾಸ ಗುರುತಿಸುವುದು.

4. ಪದ/ ಶಬ್ದಗಳ ವಿಶ್ಲೇಷಣೆಬಾಲ್ಯದಲ್ಲೇ ಓದು ಯಾಕೆಂದರೆ...

ಚಿಕ್ಕ ಪ್ರಾಯದ ಮಕ್ಕಳಿಗೆ ಕಲಿಸುವುದು ಸರಳ ಮತ್ತು ಸುಮಧುರ. ಮಕ್ಕಳು ಸುಲಭವಾಗಿ ಮಾಹಿತಿಗಳನ್ನು ಗ್ರಹಿಸಬಲ್ಲರು ಹಾಗೇ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳ­ಬ­ಲ್ಲರು. ಚಿಕ್ಕ ವಯಸ್ಸಿನಲ್ಲಿ ಕಲಿಯುವ ಆಸಕ್ತಿ ಅಧಿಕವಾ­ಗಿ­ರುತ್ತದೆ. ಬಾಲ್ಯದಲ್ಲೇ ಓದನ್ನು ಕಲಿತ ಮಕ್ಕಳು ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸಬಲ್ಲರು. ಅಂದರೆ, ಅಂತಹ ಮಕ್ಕಳು ಉಳಿದ ಮಕ್ಕಳಿಗಿಂತ ವೇಗವಾಗಿ ಓದ­ಬಲ್ಲರು, ಸುಲಭವಾಗಿ ಗ್ರಹಿಸಬಲ್ಲವರಾಗಿರುತ್ತಾರೆ.ಓದಲು ನಿರುತ್ಸಾಹವೇ?: ಮಕ್ಕಳಿಗೆ ಓದುವಿಕೆಯ ಸುಸಜ್ಜಿತ ಚೌಕಟ್ಟು ನೀಡುವುದು ಶಾಲೆ. ಮನೆಯಲ್ಲೂ  ಮಗು ಓದುತ್ತದೆ ಎಂದಾದರೂ ಅದಕ್ಕೆ ನಿರ್ದಿಷ್ಟ ಬೆಲೆ ಸಿಗುವುದು ಶಾಲೆಗಳಲ್ಲಿ. ಅದರಿಂದಾಗಿ, ಮಕ್ಕಳು ಓದಿನಲ್ಲಿ ಆಸಕ್ತಿ ತಾಳುತ್ತಿಲ್ಲ ಎಂಬ ಕೂಗು ಪ್ರಾರಂಭವಾಗುವುದು ಶಾಲೆಯಲ್ಲಿ. ಗುರುಗಳು ಪಠ್ಯವನ್ನು ಓದಲು ಹೇಳಿದಾಗ ಮಕ್ಕಳು ಸರಿಯಾಗಿ ಓದುವುದಿಲ್ಲ, ಇಲ್ಲವೇ ತಪ್ಪು ತಪ್ಪಾಗಿ ಉಚ್ಚರಿಸುತ್ತಾರೆ. ಕೆಲ ಮಕ್ಕಳು ಪಠ್ಯವನ್ನು ಯಶಸ್ವಿಯಾಗಿ ಓದಿದರೂ ಇತರ (ಪತ್ರಿಕೆ, ಪುಸ್ತಕ...) ಓದಿನಲ್ಲಿ ಎಡವುತ್ತಾರೆ. ಇದಕ್ಕೆ ಕಾರಣಗಳೇನು ಎಂಬ ಪ್ರಶ್ನೆ ತಕ್ಷಣ ನಮ್ಮ ಮನದಲ್ಲಿ ಮೂಡುತ್ತದೆ.

ಅದಕ್ಕೆ ಉತ್ತರ ಹುಡುಕುತ್ತಾ ಹೋದರೆ ಅನೇಕ ಅಂಶಗಳು ದೊರೆಯುತ್ತವೆ. ಅವುಗಳಲ್ಲಿ ಪ್ರಮುಖವಾದವು:

* ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ನಿರ್ಲಕ್ಷಿಸಿರುವುದು.

* ಮಕ್ಕಳಿಗೆ ವರ್ಣಮಾಲೆ/ ಕಾಗುಣಿತದ ಸ್ಪಷ್ಟತೆ ಇಲ್ಲದಿರುವುದು.

* ಶಿಕ್ಷಕರಿಗೆ ಭಾಷಾ ಕೌಶಲದಲ್ಲಿ ಅನಾಸಕ್ತಿ.

* ಮಕ್ಕಳಿಗೆ ವಿವರಿಸುವ ರೀತಿ, ಪ್ರಶ್ನೆ ಕೇಳುವ ವಿಧಾನ, ಓದುವುದರ ಮಹತ್ವ ತಿಳಿಯದಿರುವುದು.

* ವೃತ್ತಿಗೆ ಸೇರುವ ಮುಂಚೆ ಪಡೆಯುವ ತರಬೇತಿ­ಯಲ್ಲಿ ಓದಿಗೆ ಹೆಚ್ಚು ಒತ್ತು ನೀಡದಿರುವುದು.

* ಸೇವಾ ಅವಧಿಯ ತರಬೇತಿಯಲ್ಲಿ ಮಾಹಿತಿ ಸಿಗದಿರುವುದು.

* ಪಠ್ಯಪುಸ್ತಕಗಳಲ್ಲಿ ಓದುವಿಕೆಯನ್ನು ಸರಿಯಾದ ಕ್ರಮದಲ್ಲಿ ವಿವರಿಸದೇ ಅಸಂಬದ್ಧವಾಗಿ ರೂಪಿಸಿರುವುದು.

* ಅಸಂಬದ್ಧ ಕಲಿಕಾ ವಿಧಾನಗಳು.  ಭಾಷೆಯ ಕಲಿಕೆಯಲ್ಲಿ ಓದು ಅತ್ಯಂತ ಪ್ರಮುಖವಾದದ್ದು. ಮಕ್ಕಳು ಓದನ್ನು ಆನಂದದಿಂದ ಅನುಭವಿಸಬೇಕು. ನಮ್ಮ ಪಠ್ಯಪುಸ್ತಕಗಳು ಸಂತಸವಾಗಿ ಓದಿಸಿಕೊಂಡು ಹೋಗುವಂತೆ ಮಾಡುವಲ್ಲಿ ಸಂಪೂರ್ಣ ಯಶಸ್ಸು ಕಂಡಿಲ್ಲ. ಮಕ್ಕಳಲ್ಲಿ ಅದನ್ನು ಬಿತ್ತಬೇಕಾದರೆ ವೈಯಕ್ತಿಕ ಓದುವಿಕೆಗೆ ಹೆಚ್ಚು ಗಮನ ನೀಡಬೇಕು. ಶಿಕ್ಷಕರೂ ಓದುವಿಕೆಯ ಮಹತ್ವ ಸಾರಲು ಮಕ್ಕಳಿಗೆ ಮಾದರಿಯಾಗಿ ಇರಬೇಕು.ಒತ್ತಡ ಬೇಡ: ಮನೆ ಅಥವಾ ಶಾಲೆಯಲ್ಲಿ ನಾವು ಮಕ್ಕಳಿಗೆ ಸದಾ ಓದು ಎಂದು ಒತ್ತಡ ಹಾಕುತ್ತಿರು­ತ್ತೇವೆ. ಆದರೆ ಆ ಮಗು ಓದುವಿಕೆಯನ್ನು ಆನಂದಿ­ಸಲು ಸಿದ್ಧವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದೇ ಇಲ್ಲ. ಅಂಥ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಮಾತನ್ನು ಮೀರಿದಾಗ, ನಮ್ಮ ಮಗು ಓದುವುದೇ ಇಲ್ಲ ಎಂದು ದೂರಲು ಪ್ರಾರಂಭಿಸುತ್ತೇವೆ. ಹಾಗೆ ಮತ್ತೆ ಮತ್ತೆ ಮಗುವನ್ನು ಹೀಯಾಳಿಸುತ್ತಾ ಹೋದಂತೆ, ಅದರಲ್ಲಿ ಓದಲು ಆಸಕ್ತಿಯಿದ್ದರೂ ಅದನ್ನು ನಾವೇ ಚಿವುಟಿ ಹಾಕುತ್ತೇವೆ.ಮಗು ಶಾಲೆಗೆ ಸೇರಿದ ನಂತರ ಕಲಿಯಲು ಪ್ರಾರಂಭಿಸುತ್ತದೆ ಎಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ. ಆದರೆ ಇದು ಶುದ್ಧ ತಪ್ಪು. ಶಾಲೆಗೆ ಸೇರುವ ಮೊದಲೇ ಮನೆ, ವಸ್ತು, ಪರಿಸರ ಇತ್ಯಾದಿಗಳ ಬಗ್ಗೆ ಸಾಕಷ್ಟು ಕಲಿತಿರುತ್ತದೆ. ತನ್ನ ಮಟ್ಟದಲ್ಲಿ ವಿಷಯಗಳ ಸಂಗ್ರಹಣೆ ಮಾಡಿರುತ್ತದೆ. ಅದನ್ನು ನಾವು ಪರಿಗಣಿಸುವುದು ತುಂಬಾ ಕಡಿಮೆ.ಶಿಕ್ಷಕರು ಇಲ್ಲವೇ ಪೋಷಕರು ಮಕ್ಕಳಿಗೆ ಓದು ಕಲಿಸುವ ಮುನ್ನ ಮಗುವಿನ ಕಲಿಕಾಂಶಗಳ ಬಗ್ಗೆ ಸಂಪೂರ್ಣ ವಿವರ ಪಡೆಯಬೇಕು. ಅದನ್ನು ಬುನಾದಿಯಾಗಿ ಇಟ್ಟುಕೊಂಡು ಮಕ್ಕಳಿಗೆ ಪೂರಕವಾಗುವಂತೆ ಓದನ್ನು ರೂಪಿಸಿದರೆ ಅವರು ಬಹು ಬೇಗ ಓದಿನತ್ತ ಆಕರ್ಷಿತರಾಗುತ್ತಾರೆ.

ಪ್ರಾರಂಭದಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅದನ್ನು ಪ್ರೀತಿಯಿಂದ ತಿದ್ದಬೇಕು. ಉತ್ತಮವಾದುದಕ್ಕೆ ಬೆನ್ನು ತಟ್ಟಬೇಕು. ಇದು ಉತ್ತಮ ಓದಿಗೆ ಪ್ರೇರಣೆ ನೀಡುತ್ತದೆ. ಬಹುಬೇಗ ಓದು ಕಲಿತವರು ಅದನ್ನು ಹುಟ್ಟಿನಿಂದಲೇ ಪಡೆದವರೇನಲ್ಲ. ಅವರೂ ಆರಂಭದಲ್ಲಿ ಸಾಮಾನ್ಯ ಓದುಗರು. ಶಿಕ್ಷಕರು, ಮನೆಯವರು ನೀಡಿದ ಪ್ರಶಂಸೆಗಳೇ ಅವರ ಬೆಳವಣಿಗೆಗೆ ಮೂಲ.ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತಾರೆ. ಅವರ ಕ್ರಿಯಾಶೀಲತೆಗೆ ಒಂದು ಉದಾಹರಣೆ ಎಂದರೆ, ಯಾವ ವಸ್ತುವನ್ನು ಕೊಟ್ಟರೂ ಅದು ಮೂಲ ಸ್ಥಿತಿ ಕಳೆದುಕೊಳ್ಳುತ್ತದೆ. ಸಹಜವಾಗಿ ಅವರು ಪುಸ್ತಕ, ಪತ್ರಿಕೆಗಳನ್ನು ತೆಗೆದುಕೊಂಡು ಓದಿದಂತೆ ಮಾಡುತ್ತಾರೆ. ಅವರ ಈ ಚಟುವಟಿಕೆ ಮುಂದೆ ಅವರನ್ನು ಉತ್ತಮ ಓದುಗರನ್ನಾಗಿ ಮಾಡುತ್ತದೆ. ಆದರೆ ನಾವು ಅದನ್ನು ಸ್ವೀಕರಿಸುವ ರೀತಿಯೇ ಬೇರೆ. ಮಕ್ಕಳು ಪಠ್ಯಪುಸ್ತಕ ಬಿಟ್ಟು ಬೇರೆ ಪುಸ್ತಕ ಹಿಡಿದರೆ ಅಥವಾ ಹತ್ತಿರ ಹೋದರೆ ಸಾಕು ಹಾವು ಮೈಮೇಲೆ ಬಂದಂತೆ ವರ್ತಿಸುತ್ತೇವೆ.

ಅದರಿಂದ ಆ ಪುಸ್ತಕ ಹರಿಯು­ವುದು ಇಲ್ಲವೇ ಹಾಳಾ­ಗುವುದನ್ನು ತಪ್ಪಿಸಿದ ತೃಪ್ತಿ ಮಾತ್ರ ನಮ್ಮದಾ­ಗು­ತ್ತದೆ. ಆದರೆ ಅದರಿಂದಾಗುವ ದೂರಗಾಮಿ ಪರಿ­ಣಾಮ ನಮ್ಮ ಗಮನಕ್ಕೆ ಬರುವುದಿಲ್ಲ. ಪುಸ್ತಕ­ದೊಂದಿಗೆ ಮಗು ಬೆಳೆಸಿಕೊಳ್ಳುವ ಸಂಬಂಧವನ್ನು ನಾವು ಕೊಂದುಹಾಕುತ್ತೇವೆ. ಅದು ಮುಂದುವರಿದರೆ, ಮಗು ಪುಸ್ತಕ ಕಂಡರೆ ಸಾಕು ಮಾರು ದೂರ ಸರಿ­ಯಲು ಪ್ರಾರಂಭಿಸುತ್ತದೆ. ಇದು ಮುಂದೆ ಓದಿನೆಡೆಗೆ ಅದು ಆಸಕ್ತಿ ಕಳೆದುಕೊಳ್ಳುವಂತೆ ಮಾಡುವಲ್ಲಿ ಮಹ­ತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು.

ಓದಿಗೆ ಪ್ರೇರಣೆ

ನ್ಯಾಷನಲ್ ಬುಕ್ ಟ್ರಸ್ಟ್ ಆಫ್‌ ಇಂಡಿಯಾ: ಓದುವ ಹವ್ಯಾ­ಸ­ವನ್ನು ಪ್ರೋತ್ಸಾಹಿಸಲಿಕ್ಕಾಗಿಯೇ 1957ರಲ್ಲಿ ಆರಂಭವಾದ ಈ ಸಂಸ್ಥೆ, ಪ್ರತಿ ವರ್ಷ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಪುಸ್ತಕ ಸಪ್ತಾಹ ಹಮ್ಮಿಕೊಳ್ಳುತ್ತದೆ. ದೇಶದಾದ್ಯಂತ ಶಾಲಾ, ಕಾಲೇಜು, ಸಂಘ ಸಂಸ್ಥೆಗಳು, ಓದುಗರ ಕ್ಲಬ್‌ಗಳ ಮೂಲಕ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.ಬುಕ್ ಕ್ಲಬ್/ ರೀಡರ್ಸ್ ಕ್ಲಬ್ ಎಂಬ ಓದುವ ಸಂಘಗಳನ್ನು ಶಾಲೆಗಳಲ್ಲಿ ಸ್ಥಾಪಿಸಿ, ಓದುವ ಚಟುವಟಿಕೆಗೆ ಪ್ರೋತ್ಸಾಹದಾಯಕ ಬಹುಮಾನಗಳನ್ನು ನೀಡುತ್ತದೆ.  ಉಚಿತ ಪುಸ್ತಕಗಳು, ನಿಯತಕಾಲಿಕಗಳನ್ನು ಕಳುಹಿಸಿಕೊಡುತ್ತದೆ. (ಆಸಕ್ತರು National Book Trust, India, A-5, Green Park, New Delhi - 110 016 ವಿಳಾಸವನ್ನು ಸಂಪರ್ಕಿಸಿ ಪುಸ್ತಕಗಳನ್ನು ತರಿಸಿಕೊಳ್ಳಬಹುದು)     

ಅತ್ಯುತ್ಸಾಹ ಬೇಡ

ಬಾಲ್ಯದಲ್ಲಿ ಮಕ್ಕಳ ಓದಿನ ಸಮಯದಲ್ಲಿ ಶಿಕ್ಷಕರು ಹಾಗೂ ಪಾಲಕರು ಎಚ್ಚರಿಕೆಯಿಂದ ಇರಬೇಕು. ಓದುವಿಕೆಯ ಮೂಲ ನಿಯಮಗಳನ್ನು ಸರಿಯಾಗಿ ತಿಳಿದು ಪಾಲಿಸಬೇಕು. ಕಲಿಸುವ ಅತ್ಯುತ್ಸಾಹದಲ್ಲಿ ಸ್ಪಷ್ಟ ಓದು ಮೂಡದಿದ್ದರೆ ನಿರೀಕ್ಷಿತ ಫಲ ಸಿಗುವುದಿಲ್ಲ. ಓದುವುದನ್ನು ಕಲಿಸುವ ಸಮಯದಲ್ಲಿ ಮಕ್ಕಳ ವರ್ತನೆ, ವಿಷಯದ ವ್ಯಾಪ್ತಿಗಳನ್ನು ಸದಾ ಗಮನಿಸುತ್ತಿರಬೇಕು. ಇಲ್ಲದಿದ್ದರೆ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು.

ಮಕ್ಕಳಿಗೆ ಓದುವುದು ಸಾಕು ಎನ್ನಿಸುವಾಗಲೇ ಓದಿಸುವುದನ್ನು ನಿಲ್ಲಿಸಬೇಕು. ಅದರಿಂದ ಮಗುವಿಗೆ ಓದುವುದರಲ್ಲಿನ ಉತ್ಸಾಹ ಹಾಗೇ ಉಳಿಯುತ್ತದೆ. ಇಲ್ಲದಿದ್ದರೆ ಮುಂದೆ ಓದುವುದೆಂದರೆ ಅದಕ್ಕೆ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ.

ಪ್ರತಿಕ್ರಿಯಿಸಿ (+)