ಶುಕ್ರವಾರ, ಮೇ 7, 2021
25 °C

ಓಬಳಾಪುರಂ ಕಂಪೆನಿ ನಿರ್ದೇಶಕರ ತನಿಖೆ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಏಕಕಾಲಕ್ಕೆ ಎರಡು ಮಹತ್ವದ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಅಕ್ರಮ ಗಣಿಗಾರಿಕೆ ಸಂಬಂಧ ಓಬಳಾಪುರಂ ಕಂಪೆನಿಯ ಇನ್ನಷ್ಟು ನಿರ್ದೇಶಕರನ್ನು ಶೀಘ್ರವೇ ತನಿಖೆಗೆ ಒಳಪಡಿಸಲಿದ್ದಾರೆ.ಇದೇ ವೇಳೆ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವ ಸಂಸದ ವೈ.ಎಸ್.ಜಗನ್ಮೋಹನ ರೆಡ್ಡಿ ಒಡೆತನದ ಎಂ.ಆರ್. ಪ್ರಾಪರ್ಟೀಸ್‌ನ ಅವ್ಯವಹಾರಗಳ ಸಂಬಂಧ ಕೆಲವು ಚಿತ್ರನಟರು, ಹಿರಿಯ ರಾಜಕಾರಣಿಗಳು, ಮತ್ತಿತರ ಗಣ್ಯ ವ್ಯಕ್ತಿಗಳನ್ನು ಕೂಡ ಸಿಬಿಐ ತನಿಖೆಗೆ ಗುರಿ ಮಾಡಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸಿಬಿಐ 85 ಗಣ್ಯರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ.ನಟರಾದ ಮಹೇಶ್ ಬಾಬು, ಅವರ ಪತ್ನಿ ನಮ್ರತಾ ಶಿರೋಡ್ಕರ್, ಚಿರಂಜೀವಿ ಪುತ್ರ ರಾಮ್‌ಚರಣ್ ತೇಜ, ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಸೊಸೆ ನರ ಬ್ರಹ್ಮಣಿ, ಕೈಗಾರಿಕಾ ಸಚಿವೆ ಜೆ.ಗೀತಾ ರೆಡ್ಡಿ, ಎಪಿಸಿಸಿ ಮಾಜಿ ಅಧ್ಯಕ್ಷ ಡಿ.ಶ್ರೀನಿವಾಸ್, ಬಿಜೆಪಿ ನಾಯಕ ಎಂ.ವೆಂಕಯ್ಯ ನಾಯ್ಡು ಸೊಸೆ ಎಂ.ರಾಧಾ, ಗಣಿ ಮತ್ತು ಭೂಗರ್ಭ ಇಲಾಖೆ ಸಚಿವೆ ಗಲ್ಲ ಅರುಣಾ ಕುಮಾರಿ ಸೊಸೆ ಗಲ್ಲ ಪದ್ಮಾವತಿ ಮತ್ತಿತರರು ನೋಟಿಸ್ ಪಡೆದವರಲ್ಲಿ ಸೇರಿದ್ದಾರೆ.ಎಂ.ಆರ್.ಬೌಲ್ಡರ್ ಹಿಲ್ಸ್ ಟೌನ್‌ಷಿಪ್ ಯೋಜನೆಯಡಿ ನಿರ್ಮಿಸಿದ ಐಷಾರಾಮಿ ವಿಲ್ಲಾಗಳನ್ನು ತೀರಾ ಅಗ್ಗದ ಬೆಲೆಗೆ ಖರೀದಿಸಿದ ಆರೋಪ ಇವರೆಲ್ಲರ ಮೇಲಿದೆ. ಮಾರುಕಟ್ಟೆ ಬೆಲೆ ಒಂದು ಚದುರ ಗಜಕ್ಕೆ 1 ಲಕ್ಷ ರೂಪಾಯಿ ಇದ್ದರೆ ಇವರು ಚದುರ ಗಜಕ್ಕೆ ಕೇವಲ 5000 ರೂಪಾಯಿ ಬೆಲೆಯಲ್ಲಿ ವಿಲ್ಲಾಗಳನ್ನು ಖರೀದಿಸಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.ಸಿಬಿಐ ಜಂಟಿ ನಿರ್ದೇಶಕ ವಿ.ವಿ.ಲಕ್ಷ್ಮೀನಾರಾಯಣ ತಿಳಿಸಿರುವ ಪ್ರಕಾರ ತನಿಖೆ ಸೆ.14ರಿಂದ 18ರವರೆಗೆ ನಡೆಯಲಿದ್ದು, ಪ್ರತಿಯೊಬ್ಬರ ಹೇಳಿಕೆಯನ್ನೂ ದಾಖಲು ಮಾಡಿಕೊಳ್ಳಲಾಗುವುದು. ದಿನಕ್ಕೆ ಎಂಟು ಜನರನ್ನು ತನಿಖೆ ಮಾಡಲಾಗುತ್ತದೆ.ಮಹಿಳೆಯರನ್ನು ಅವರ ಮನೆಗಳಿಗೇ ತೆರಳಿ ತನಿಖೆಗೆ ಗುರಿಪಡಿಸಲಾಗುವುದು. ಉಳಿದವರನ್ನು ಸಿಬಿಐ ಅಧಿಕಾರಿಗಳು ಬೀಡು ಬಿಟ್ಟಿರುವ ರಾಜಭವನ ರಸ್ತೆಯ ದಿಲ್‌ಕುಷಾ ಅತಿಥಿ ಗೃಹದಲ್ಲಿ ತನಿಖೆ ಮಾಡಲಾಗುತ್ತದೆ.ಈ ಮಧ್ಯೆ ಎಂ.ಆರ್. ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಬಿಐ ಅಧಿಕಾರಿಗಳು ಜೂಬಿಲಿ ಮೀಡಿಯಾ ಹೌಸ್ ಅಧ್ಯಕ್ಷ ಲಗಡಪತಿ ಶ್ರೀಧರ್ ಅವರ ಕಚೇರಿಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಶೋಧಿಸಿದ್ದಾರೆ. ಜಗತಿ ಪಬ್ಲಿಕೇಷನ್ಸ್ ಉಪಾಧ್ಯಕ್ಷ ವಿಜಯ್ ಸಾಯಿ ರೆಡ್ಡಿ ತನಿಖೆ ಆರನೇ ದಿನವಾದ ಗುರುವಾರವೂ ಮುಂದುವರಿಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.