ಶುಕ್ರವಾರ, ಮೇ 7, 2021
25 °C

ಓಲೈಕೆ ಕಸರತ್ತಿನ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಚುನಾವಣಾ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಮೇಲೆ ನಿಗಾ ಇಡಲು ಮೊದಲ ಬಾರಿಗೆ ವಿಡಿಯೊ ಚಿತ್ರೀಕರಣ ಹಾಗೂ ಪರಿಶೀಲನೆಗಾಗಿ ವಿಶೇಷ ತಂಡ ರಚನೆಯಾಗಿದ್ದು ಅಂಥ ವ್ಯವಸ್ಥೆಗೆ ಈ ಉಪಚುನಾವಣೆ ಸಾಕ್ಷಿಯಾಗಿದೆ.ಸಾರ್ವತ್ರಿಕ ಅಥವಾ ಉಪಚುನಾವಣೆ ವೇಳೆ ಮಾದರಿ ನೀತಿಸಂಹಿತೆ ಉಲ್ಲಂಘನೆಯ ಮೆಲೆ ನಿಗಾ ಇಡಲು ಹಾಗೂ ಮದ್ಯ- ಹಣ ಹಂಚಿಕೆಯನ್ನು ಪರಿಶೀಲಿಸಲು ತಂಡಗಳನ್ನು ರಚಿಸುವುದು ಸಾಮಾನ್ಯ. ಇದೇ ಮೊದಲ ಬಾರಿಗೆ ಈ ಉಪಚುನಾವಣೆ ಸಂದರ್ಭದಲ್ಲಿ ಉಮೇದುವಾರರು ಹಾಗೂ ಅವರ ಬೆಂಬಲಿಗರ ಪ್ರತಿಯೊಂದು  ಚಲನವಲನದ ಮೇಲೆ ನಿಗಾ ಇಡುವ ಸಲುವಾಗಿ ~ವಿಡಿಯೋ ಸಮೀಕ್ಷಾ ತಂಡ~ಗಳನ್ನು ರಚಿಸಿರುವುದು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುಪ್ಪವಾಗಿದೆ.~ಸರ, ಭಾಳ ತ್ರಾಸ ಆಗೈತ್ರಿ. ನಾವ್ ಎಲ್ಲಿ ಹೋಗ್ತೀವಿ ಅಲ್ಲೆಲ್ಲಾ ಈ ತಂಡದವ್ರ ಶೂಟಿಂಗ್ ಮಾಡಾಕ ಬರ್ತಾರ‌್ರಿ~ ಎಂಬುದು ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರ ದೂರು. ಹೆಸರನ್ನು ಬಹಿರಂಗಪಡಿಸಲು ಬಯಸದೇ ~ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಪಕ್ಷಗಳ ಕಾರ್ಯಕರ್ತರು, ಈ ಸಲ ಎಲೆಕ್ಷನ್ ಭಾಳಾ ಸ್ಟ್ರಿಕ್ಟ್ ಮಾಡ್ಯಾರ‌್ರಿ. ನಮಗ ಏನ್ ಮಾಡ್‌ಬೇಕು ಅಂತನ ಗೊತ್ತಾಗ್ತಿಲ್ರಿ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.ಇಬ್ಬರು ಸಿಬ್ಬಂದಿ ಹೊಂದಿರುವ ಐದು ~ವಿಡಿಯೋ ಸಮೀಕ್ಷಾ ತಂಡ~ಗಳನ್ನು ರಚಿಸಲಾಗಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಈ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುವಾಗ ಈ ತಂಡಗಳು ಅವರನ್ನು ಹಿಂಬಾಲಿಸಲಿವೆ. ಅವರ ಪ್ರತಿ ಕಾರ್ಯಕ್ರಮ, ಯಾರನ್ನು ಭೇಟಿ ಮಾಡುತ್ತಾರೆ, ಜನರ ಬಳಿ ಮತ ಯಾಚನೆ ಮಾಡುವಾಗ ಏನು ಆಶ್ವಾಸನೆ, ಆಮಿಷ ಒಡ್ಡುತ್ತಾರೆ ಎಂಬುದನ್ನು ಸಮಗ್ರವಾಗಿ ಚಿತ್ರೀಕರಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಎಂ.ಶರಣಬಸಪ್ಪ ವಿವರಿಸುತ್ತಾರೆ.ಈ ರೀತಿ ಚಿತ್ರೀಕರಿಸಿದ ಸಿ.ಡಿ.ಯನ್ನು ಪರಿಶೀಲಿಸಲು ಐದು ಜನ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡವನ್ನೂ ಮೊದಲ ಬಾರಿಗೆ ರಚಿಸಲಾಗಿದೆ. ಪ್ರಚಾರದ ಯಾವ ಹಂತದಲ್ಲಿ ಚುನಾವಣೆಯ ಮಾದರಿ ನೀತಿಸಂಹಿತೆಯ ಉಲ್ಲಂಘನೆ ನಡೆದಿದೆ ಎಂಬುದನ್ನು ಈ ತಂಡ ಪರಿಶೀಲಿಸಿ, ವೀಕ್ಷಕರ ಗಮನಕ್ಕೆ ತರಲಿದೆ ಎಂದೂ ಅವರು ವಿವರಿಸುತ್ತಾರೆ.ಇದರ ಜೊತೆಗೆ, ಮೊದಲ ಬಾರಿ ಸಂಚಾರಿ ತಂಡಗಳನ್ನೂ ರಚಿಸಲಾಗಿದೆ. ಜಿಲ್ಲೆಯಲ್ಲಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಈ ತಂಡದ ನೇತೃತ್ವ ವಹಿಸಲಾಗಿದೆ. ಪ್ರತಿ ಪಿಡಿಒ ಜೊತೆಗೆ ಒಬ್ಬ ಗನ್‌ಮ್ಯಾನ್ ಇರುತ್ತಾನೆ.ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಈ ಸಂಚಾರಿ ತಂಡಗಳು ಪರಿಶೀಲಿಸಿ, ವರದಿ ನೀಡಲಿವೆ ಎಂದು ತಿಳಿಸುತ್ತಾರೆ.ಇದಲ್ಲದೇ, ಪ್ರತಿ ಚುನಾವಣೆಯಲ್ಲಿ ಇರುವಂತೆ, ಜಿಲ್ಲೆಯಲ್ಲಿ 8 ಅಬಕಾರಿ ಚೆಕ್‌ಪೋಸ್ಟ್‌ಗಳು, ಮಾದರಿ ನೀತಿಸಂಹಿತೆ ಜಾರಿಯಾಗಿರುವ ಬಗ್ಗೆ ಪರಿಶೀಲಿಸಲು ಒಟ್ಟು 8 ಉಸ್ತುವಾರಿ ತಂಡಗಳನ್ನೂ ರಚಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.