ಶುಕ್ರವಾರ, ಮಾರ್ಚ್ 5, 2021
21 °C

ಕಂಡಿರದ ಬದುಕಿನ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಡಿರದ ಬದುಕಿನ ಚಿತ್ರಗಳು

ಪ್ರತಿ ದಿನ ಪ್ರಯೋಗಗಳಿಗೆ ತೆರೆದುಕೊಳ್ಳುವ ಸಿನಿಮಾ ಲೋಕದಲ್ಲಿ ಬಂದು ಹೋಗಿರುವ ಚಿತ್ರಗಳಿಗೆ ಲೆಕ್ಕವಿಲ್ಲ. ಆದರೆ ಇತ್ತೀಚೆಗಷ್ಟೆ ನಗರದ ಗೋಥೆ ಇನ್‌ಸ್ಟಿಟ್ಯೂಟ್, ಮ್ಯಾಕ್ಸ್‌ ಮುಲ್ಲರ್ ಭವನದಲ್ಲಿ ವಿಶೇಷವಾದ ಚಲನಚಿತ್ರೋತ್ಸವ ನಡೆಯಿತು. ಅದುವೇ ‘ದ ವೇ ವಿ ಲಿವ್’.ಸಾಮಾನ್ಯ ಬದುಕಿನ ಜಂಜಡಗಳನ್ನು ಹೊರತುಪಡಿಸಿ ಅಲ್ಲಿ ಅಂಗವಿಕಲರ ಚಿತ್ರಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಲಾಗಿತ್ತು. ಈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಹೊಣೆಗಾರಿಕೆ ಹೊತ್ತಿದ್ದವರು ಜರ್ಮನ್‌ ರಂಗ ನಿರ್ದೇಶಕ ಗ್ರೆಗೊರ್ ಕರ್ನ್ ಹಾಗೂ ನಟ ಮೋಹನ್ ಅಗಾಶೆ.ಅಂಗವಿಕಲತೆಯಿಂದ ಬಳಲುವವರ ಜೀವನ ವೈಖರಿ, ಅವರ ಸಂತಸ, ದುಃಖದ ಅನಾವರಣ, ಅವರ ಸ್ಫೂರ್ತಿ ತುಂಬಿದ ಸಿನಿಮಾಗಳನ್ನು ಅಲ್ಲಿ ಪ್ರದರ್ಶಿಸಲಾಗಿತ್ತು.­ ‘ವೈಟ್ ಸೌಂಡ್’, ‘ಡೆಸ್ಪರೇಡಸ್ ಎಪಿಸೋಡ್ 2’, ‘ಫೀನಿಕ್ಸ್ ಡಾನ್ಸ್‌’ ಮೊದಲಾದ ಚಿತ್ರಗಳು ಪ್ರದರ್ಶನಗೊಂಡವು.ಪ್ರತಿ ಸಿನಿಮಾ ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಸಕ್ತಿಕರವಾಗಿತ್ತು. ಚಲನಚಿತ್ರದಲ್ಲಿನ ಹಲವು ಅಂಶಗಳ ಕುರಿತು ಪ್ರೇಕ್ಷಕರು ಮತ್ತು ಕಲಾವಿದರು ಚರ್ಚೆ ನಡೆಸುತ್ತಿದ್ದರು.ಒಂದು ವರ್ಷದಿಂದ ಅಂತರರಾಷ್ಟ್ರೀಯ ಕಿರುಚಿತ್ರಗಳ ಕಲಾ ನಿರ್ದೇಶಕರಾಗಿರುವ ಗ್ರೆಗೊರ್, ಈ ಚಲನಚಿತ್ರೋತ್ಸವವನ್ನು ಮತ್ತೆ ಭಾರತಕ್ಕೆ ತಂದಿರುವುದರ ಬಗ್ಗೆ ತುಂಬಾ ಸಂತೋಷಗೊಂಡಿದ್ದರು.‘ನಾನು ನಿರೀಕ್ಷೆಗಳೊಂದಿಗೆ ಇಲ್ಲಿಗೆ ಬರಲಿಲ್ಲ. ಹಲವು ಭರವಸೆಗಳೊಂದಿಗೆ ಬಂದಿದ್ದೆ. ಇಲ್ಲಿ ಪ್ರದರ್ಶಿಸಿದ ಈ ಚಿತ್ರಗಳು ಜನರ ಮೇಲೆ ಪರಿಣಾಮ ಬೀರಿವೆ ಎಂದೆನಿಸುತ್ತಿದೆ’ ಎಂದು ಖುಷಿಯಿಂದ ಬೀಗಿದರು ಗ್ರೆಗೊರ್. ನಟ ಮೋಹನ್ ಅಗಾಶೆ ಅವರಲ್ಲೂ ಈ ಚಿತ್ರಗಳ ಬಗ್ಗೆ ಸಾಕಷ್ಟು ಅಭಿಮಾನ ತುಂಬಿಕೊಂಡಿತ್ತು.‘ಹೆಚ್ಚು ಮಾಧ್ಯಮಗಳಲ್ಲಿ ಅಂಗವಿಕಲತೆ ಬಗ್ಗೆ ತುಂಬಾ ಸಪ್ಪೆಯಾದ ಮಾಹಿತಿ ಮೂಡುತ್ತದೆ ಅಥವಾ ಅವರ ಸಮಸ್ಯೆಗಳ ಅಧ್ಯಯನದ ರೀತಿಯನ್ನು ಹೇಳಿ ಮುಗಿಸಿಬಿಡುತ್ತಾರೆ. ಆದರೆ ಈ ಸಿನಿಮಾಗಳ ಪ್ರಯತ್ನ ಬೇರೆಯದ್ದೇ ಆಗಿದೆ. ಇಲ್ಲಿ ಅಂಗವಿಕಲರ ಬದುಕನ್ನು ಇಡಿಯಾಗಿ ಒಂದೆಡೆ ತಂದಿದ್ದೇವೆ. ಆದ್ದರಿಂದ ಅವರ ಹಲವು ಭಾವಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದಿಲ್ಲ’ ಎಂದು ಹೇಳಿಕೊಂಡರು.‘ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಆಸೆ, ಹಕ್ಕಿರುತ್ತದೆ. ಅದನ್ನೇ ಈ ಚಲನಚಿತ್ರೋತ್ಸವ ಪ್ರತಿಪಾದಿಸುತ್ತದೆ’ ಎಂದು ಕಾರ್ಯಕ್ರಮದ ಉದ್ದೇಶವನ್ನು ಬಿಡಿಸಿಟ್ಟರು. ಅಂಗವಿಕಲರ ದೃಷ್ಟಿಕೋನದಿಂದ ಈ ಚಿತ್ರಗಳನ್ನು ಆರಿಸಿಕೊಂಡಿರುವುದು ಈ ಉತ್ಸವದ ವೈಶಿಷ್ಟ್ಯವಾಗಿತ್ತು.ಇದೇ ಸಂದರ್ಭದಲ್ಲಿ ಮನಃಶಾಸ್ತ್ರಜ್ಞರಾದ ಅರುಣಿತಾ, ‘ಈ ಚಿತ್ರಗಳನ್ನು ವೃತ್ತಿಪರ ಹಾಗೂ ವೈಯಕ್ತಿಕವಾಗಿಯೂ ತೆಗೆದುಕೊಳ್ಳಬಹುದು. ಸಿನಿಮಾಗಳು ಅರಿವು ಹಾಗೂ ಸಂವೇದನಾ ಕಲಿಕೆಯ ಸಮ್ಮಿಶ್ರಣವಾಗಿದೆ. ಸಿನಿಮಾ ನಂತರದ ಸಂವಾದ ಆಸಕ್ತಿ ಹೆಚ್ಚಿಸಿತ್ತು’ ಎಂದರು.

ಕಿರುಚಿತ್ರ ನಿರ್ಮಾಪಕಿ ಸಾರಿಕಾ ಮಧುಶ್ರೀ ಅವರೂ ಇಂಥದ್ದೇ ಮೆಚ್ಚುಗೆ ವ್ಯಕ್ತಪಡಿಸಿದ್ದರು.‘ಅಂಗವಿಕಲತೆಯ ವಿವಿಧ ಆಯಾಮಗಳನ್ನು ಒಂದೆಡೆ ನೋಡಿದಂತಿತ್ತು. ಅವರಿಗೆ ಅವರ ಪ್ರಪಂಚ ಮಾಮೂಲಿಯಂತೆ ನಡೆದು ಹೋಗುತ್ತಿದೆ. ನಾವು ಅವರಿಗೆ ವಿಶೇಷವಾಗಿ ಕಾಣಿಸುತ್ತಿದ್ದೇವೆ. ಅಂಗವಿಕಲ ವ್ಯಕ್ತಿಗಳ ದೈನಂದಿನ ಬದುಕನ್ನು ಚಿತ್ರಿಸುವುದೂ ಸವಾಲು’ ಎಂದರು.ಯಾವುದೇ ವಿಷಯ ಸ್ವತಃ ಅನುಭವಕ್ಕೆ ನಿಲುಕಿದರೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ಮಾತು ಅಲ್ಲಿ ನಿಜವಾಗಿತ್ತು. ಕೊನೆಗೆ ‘ನಮ್ಮನ್ನೂ ನಿಮ್ಮಂತೆ ಸಹಜವಾಗಿ ನಡೆಸಿಕೊಳ್ಳಿ’ ಎಂಬ ಮಾತನ್ನು ಸಾರುವುದೇ ಈ ಚಿತ್ರೋತ್ಸವದ ಉದ್ದೇಶದಂತೆ ಕಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.