ಭಾನುವಾರ, ಏಪ್ರಿಲ್ 11, 2021
21 °C

ಕಂಬಳಿ ಅಂಚು ಕಟ್ಟುವ ಕಾಯಕ

ಗಣಪತಿ ಹಾಸ್ಪುರ Updated:

ಅಕ್ಷರ ಗಾತ್ರ : | |

ರಾಜ್ಯದ ಅನೇಕ ಕಡೆ ಮಳೆಗಾಲ ಪ್ರಾರಂಭವಾಗಿದೆ. ರೈತರಿಗೆ ಬಿಡುವಿಲ್ಲದ ಕೆಲಸ. ಇದರ ಮಧ್ಯೆ ಮಳೆ ನೀರಿಗೆ ತಡೆಯೊಡ್ಡುವ ಕಂಬಳಿ, ಪ್ಲಾಸ್ಟಿಕ್, ಕೊಡೆ, ರೇನ್‌ಕೋಟ್‌ಗಳಿಗೆ ಬೇಡಿಕೆ ಬಂದಿದೆ. ಅವನ್ನು ಕೊಳ್ಳಲು ಜನ ಅಂಗಡಿಗಳ ಮುಂದೆ ನಿಂತ ದೃಶ್ಯ ಮಲೆನಾಡಲ್ಲಂತೂ ಸಾಮಾನ್ಯ.ಹೌದು. ಈ ಸಮಯದಲ್ಲಿ ತೋಟ-ಗದ್ದೆಗಳಲ್ಲಿ ಕೆಲಸ ಮಾಡುವವರು ಕಂಬಳಿ, ಪ್ಲಾಸ್ಟಿಕ್‌ನ ಕೊಪ್ಪೆ ಉಪಯೋಗಿಸಿದರೆ, ಶಾಲೆ-ಕಾಲೇಜು ವಿದ್ಯಾರ್ಥಿಗಳು, ಪೇಟೆಗೆ-ಉದ್ಯೋಗಕ್ಕೆ ತೆರಳುವವರು ಕೊಡೆ, ರೇನ್‌ಕೋಟ್‌ಗಳನ್ನೇ ಅವಲಂಬಿಸುತ್ತಾರೆ.ಅಂಗಡಿಗಳಲ್ಲಿ ಸಿಗುವ ಕೊಡೆ, ರೇನ್‌ಕೋಟ್, ಪ್ಲಾಸ್ಟಿಕ್‌ನ ಕೊಪ್ಪೆ ಇತ್ಯಾದಿಗಳನ್ನು ಕೂಡಲೇ ಬಳಸಬಹುದು. ಆದರೆ ತೋಟ-ಗದ್ದೆಯಲ್ಲಿ ದುಡಿಯುವ ರೈತರು, ಕಾರ್ಮಿಕರು ಸಪ್ಪ ಕಂಬಳಿಯನ್ನು ಕೊಂಡಾಕ್ಷಣವೇ ಉಪಯೋಗಿಸಲು ಸಾಧ್ಯವಿಲ್ಲ.ಏಕೆಂದರೆ ಆ ಕಂಬಳಿಗಳ ಅಂಚುಗಳ ಎಳೆ (ದಾರ) ವ್ಯವಸ್ಥಿತವಾಗಿ ಕಟ್ಟಿಕೊಂಡಿರುವುದಿಲ್ಲ. ಅದಕ್ಕಾಗಿ ಅಂಚುಗಳನ್ನು ಕಟ್ಟಿಕೊಂಡೇ ಉಪಯೋಗಿಸುವ ಶಿಷ್ಟಾಚಾರ ಇಂದಿಗೂ ಮಲೆನಾಡಿನಲ್ಲಿ ಚಾಲ್ತಿಯಲ್ಲಿದೆ.ಒಂದು ವೇಳೆ ಕಂಬಳಿಯ ಅಂಚನ್ನು ಕಟ್ಟಿಕೊಳ್ಳದೇ ಬಳಸಿದರೇ ಕಂಬಳಿ ಬಾಳಕೆ ಕಡಿಮೆ ಎಂಬುದು ಸಪ್ಪ ಕಂಬಳಿಯನ್ನು ಉಪಯೋಗಿಸುವವರ ಅಭಿಪ್ರಾಯ.ಅದಕ್ಕಾಗಿ ಸಪ್ಪ ಕಂಬಳಿಯ ಅಂಚಿನ ಭಾಗವನ್ನು ವ್ಯವಸ್ಥಿತವಾಗಿ ತಾವೇ ಕಟ್ಟಿಕೊಂಡು, ತಾವೇ ಬಳಸುವುದು ಮಲೆನಾಡು ರೈತರ ವಿಶೇಷ.ಸಪ್ಪ ಕಂಬಳಿಯ ತಳ ಭಾಗದಲ್ಲಿ ಗುಂಪು ಗುಂಪಾಗಿರುವ ಎಳೆಗಳನ್ನು ಬಿಡಿಸುವುದು, ಆಮೇಲೆ ವಿಶಿಷ್ಟ ರೂಪದಲ್ಲಿ ಗಂಟು ಹಾಕಿ ಹೆಣೆಯುವುದು ಬಹಳ ಸೂಕ್ಷ್ಮ ಹಾಗೂ ನಾಜೂಕಿನ ಕೆಲಸ. ಸ್ಪಲ್ಪ ಅಲಕ್ಷ್ಯ ಮಾಡಿದರೂ ಎಳೆಯೇ ಬಿಟ್ಟು ಹೋಗಬಹುದು ಅಥವಾ ಗಂಟು ಹಾಕುವಲ್ಲಿ ವ್ಯತ್ಯಾಸ ಆಗುವ ಸಾಧ್ಯತೆಯೇ ಉಂಟು.ಇದು ಅವಸರದಿಂದ ಮಾಡುವ ಕೆಲಸವಲ್ಲ. ಹೀಗಾಗಿ ಕಂಬಳಿಯ ಎಳೆ (ದಾರ) ಗಳನ್ನು ಕಟ್ಟುವವರಿಗೆ ಸಹನೆ, ತಾಳ್ಮೆ ಅವಶ್ಯಕ. ಎಳೆಗಳನ್ನು ಬಿಡಿಸಿ, ಚೆನ್ನಾಗಿ ಹೆಣೆದರೆ ಐದಾರು ವರ್ಷ ಆರಾಮವಾಗಿ ಬಳಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.