ಸೋಮವಾರ, ಜನವರಿ 27, 2020
27 °C

ಕಂಬಾರರಿಗೆ ಜನಪದೀಯ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಜಾನಪದೀಯ ದೃಶ್ಯ ರೂಪಕಗಳಲ್ಲಿ ಕಂಡು ಬರುವಂತಹ ಚಿತ್ತಾರದ ಛತ್ರಿ, ರಾಜರು ಕುಳಿತುಕೊಳ್ಳುವಂತಹ ಸಿಂಹಾಸನ, ಹಿನ್ನೆಲೆಯಲ್ಲಿ ಗಾಢ ಕೆಮ್ಮಣ್ಣು ಬಣ್ಣದ ವೇದಿಕೆ. ಥೇಟ್ ಮಣ್ಣಿನ ಸೊಗಡಿನ ವಾತಾವರಣ ನಿರ್ಮಾಣವಾಗಿತ್ತು.  ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರಿಗೆ ಇಂತಹ ಪರಿಸರದಲ್ಲಿ ಆತ್ಮೀಯ ಸನ್ಮಾನ ಮಾಡಿದವರು ಗದುಗಿನ ರಂಗಚೇತನ ಸಂಸ್ಥೆ ಹಾಗೂ ಕಸಾಪದವರು. ಇವರೊಂದಿಗೆ ನಗರಸಭೆಯ ವತಿಯಿಂದ ಪೌರ ಸನ್ಮಾನವೂ ಆಯಿತು.ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧಲಿಂಗಸ್ವಾಮೀಜಿ ಕಂಬಾರರಿಗೆ ಮೈಸೂರು ಪೇಟ ತೊಡಿಸಿ, ಭಿನ್ನವತ್ತಳೆ ಅರ್ಪಿಸಿ, ಪುಷ್ಪವೃಷ್ಟಿ ಮಾಡಿ ಗೌರವಿಸಿದರು.ಈ ದಿನಮಾನ ಕಂಡಿರುವ ಶ್ರೇಷ್ಠ ಕವಿ ಚಂದ್ರಶೇಖರ ಕಂಬಾರ. ಅವರಿಗೆ ಜ್ಞಾನಪೀಠ ಯಾವಾಗಲೋ ಸಿಗಬೇಕಾಗಿತ್ತು. ಈಗಲಾದರೂ ಗೌರವ ದೊರಕಿದೆ ಎಂದು ಶ್ರೀಗಳು ಬಣ್ಣಿಸಿದರು .ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂಬಾರರು, ವಿಸ್ಮೃತಿಯಲ್ಲಿ ಕಳೆದುಹೋಗಿರುವ ನಮ್ಮ ಮೌಲ್ಯಗಳನ್ನು ಶೋಧನೆ ಮಾಡಿ ಹೊಸ ವಿನ್ಯಾಸದೊಂದಿಗೆ ಸೃಷ್ಟಿಸುವಂತಹ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಭಾರತ ದೇಶ ಮೌಲ್ಯದಲ್ಲಿ ನಂಬಿಕೆ ಇಟ್ಟಿದೆ. ಅದಕ್ಕೆ ಮಹಾಭಾರತವನ್ನು ಹತ್ತು ಸಾವಿರ ವರ್ಷಗಳ ಕಾಲ ಇಡೀ ದೇಶಕ್ಕೆ ದೇಶವೇ ಪುನರ್ ರಚನೆ ಮಾಡುತ್ತ ಬಂದಿರುವುದೇ ಉದಾಹರಣೆ ಎಂದರು.ದೇಶದ ನೂರು ವಿಶ್ವವಿದ್ಯಾ ನಿಲಯದಲ್ಲಿ ಸಂಗೀತವನ್ನು ಹೇಳಿಕೊಡಲಾಗುತ್ತದೆ. ಆದರೆ ಒಬ್ಬ ಕಲಾವಿದರು ಅಲ್ಲಿ ಸೃಷ್ಟಿಯಾಗಲಿಲ್ಲ. ಬದಲಾಗಿ ಕೆಟ್ಟ ವಿಮರ್ಶಕರನ್ನು ಸೃಷ್ಟಿಸಿವೆ ಎಂದು ಅವರು ಈ ಸಂದರ್ಭದಲ್ಲಿ  ವಿಷಾದಿಸಿದರು.

ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಮಾತನಾಡುತ್ತಾ ಕುಂಬಾರರ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡರು. ಪ್ರೊ.ಎಸ್‌ಜಿ.ಸಿದ್ದರಾಮಯ್ಯ ಅಭಿನಂದನಾ ನುಡಿಯಾಡಿದರು.ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ಪೂಜಾರ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಡಾ.ಜಿ.ಬಿ.ಪಾಟೀಲ, ಚಂದ್ರಶೇಖರ ವಸ್ತ್ರದ ಮತ್ತಿತರರು ಹಾಜರಿದ್ದರು.`ಪಂಚತಂತ್ರ ಉದ್ಯಾನ ನಿರ್ಮಿಸಿ~

ಗದಗ: ಪಂಚತಂತ್ರವನ್ನು ರಚಿಸಿದ ದುರ್ಗಾಸಿಂಹನ ಹುಟ್ಟೂರಾದ ರೋಣ ತಾಲ್ಲೂಕಿನ ಸವಡಿಯಲ್ಲಿ ಪಂಚತಂತ್ರ ರೂಪಕದ ಉದ್ಯಾನವನ್ನು ನಿರ್ಮಿಸಿ ಎಂದು ಡಾ.ಚಂದ್ರಶೇಖರ ಕಂಬಾರ ಸಲಹೆ ನೀಡಿದರು.ಬೈಬಲ್ ಬಿಟ್ಟರೆ ಪಂಚತಂತ್ರವೇ  ಹೆಚ್ಚು ಭಾಷೆಗೆ ಅನುವಾದಗೊಂಡಿರುವ ಕೃತಿ. ಇಂತಹ ಕೃತಿಯನ್ನು ಕೊಟ್ಟ ಊರಿನಲ್ಲಿ ಮುಂದಿನ ಪೀಳಿಗೆ ನೆನೆಪು ಮಾಡಿಕೊಳ್ಳುವುದಕ್ಕಾಗಿ ಉದ್ಯಾನ ನಿರ್ಮಾಣ ಮಾಡಿ, ಅಲ್ಲಿ ಪಂಚತಂತ್ರದಲ್ಲಿ ಬರುವ ಕಥಾ ಪಾತ್ರಗಳನ್ನು ಸ್ಥಾಪನೆ ಮಾಡಬೇಕು ಎಂದರು.

ಪ್ರತಿಕ್ರಿಯಿಸಿ (+)