ಸೋಮವಾರ, ಮೇ 23, 2022
20 °C

ಕಂಬಿಬಾಣೆ ಕೃಷಿಕನ ಮನೆಗೆ ಸಿಎಂ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಕೊಡಗು ಜಿಲ್ಲೆಗೆ ಮಾರ್ಚ್ 26ರ ಶನಿವಾರ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಸುಂಟಿಕೊಪ್ಪ ಹೋಬಳಿಯ ಸಾವಯವ ಕೃಷಿ ಗ್ರಾಮವಾದ ಕಂಬಿಬಾಣೆಯ ಸಾವಯವ  ಕೃಷಿಕರಾದ ಮಂಜುನಾಥ ರೈ ಮತ್ತು ಲೀಲಾವತಿ ರೈ ದಂಪತಿ ಮನೆಗೆ ಭೇಟಿ ನೀಡಲಿದ್ದಾರೆ.ಅಂದು ಮಧ್ಯಾಹ್ನ 12.30 ಕ್ಕೆ ಹೆಲಿಕಾಪ್ಟರ್ ಮೂಲಕ ಕೊಡಗರಹಳ್ಳಿಗೆ ಆಗಮಿಸುವ ಯಡಿಯೂರಪ್ಪ ನಂತರ ಕಂಬಿಬಾಣೆಯ ಮಂಜುನಾಥ ರೈ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದ ನಂತರ ಸಾವಯವ ಕೃಷಿಕರೊಂದಿಗೆ  ಸಂವಾದ ನಡೆಸಲಿದ್ದಾರೆ.ತನ್ನ ತಂದೆ ಗುಡ್ಡಪ್ಪ ರೈ ಅವರಿಂದ ಪ್ರೇರಿತರಾಗಿರುವ ಮಂಜುನಾಥ್ ರೈ ಕಳೆದ 27 ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಮಳೆಯಾಶ್ರಿತ ಜಮೀನಿನಲ್ಲಿ ಸಾವಯವ ಗೊಬ್ಬರದಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು, ಭತ್ತದ ಬೆಳೆಯೊಂದಿಗೆ ಹಣ್ಣಿನ ಬೆಳೆಗಳಾದ ಪಪ್ಪಾಯಿ, ಸಪೋಟ, ಮಾವು,  ಕಿತ್ತಳೆ ಬೆಳೆ ಬೆಳೆಯುವ ಮೂಲಕ ಉತ್ತಮ ಇಳುವರಿ ಪಡೆಯುವಲ್ಲಿ ರೈ ಯಶಸ್ವಿಯಾಗಿದ್ದಾರೆ.ತಮ್ಮ ಮನೆಯಂಗಳದ ಕೆರೆಯಲ್ಲಿ ಗೋವುಗಳಿಗೆ ಪ್ರಮುಖ ಆಹಾರವಾದ ಅಜೋಲವನ್ನು ಬೆಳೆಯುತ್ತಿರುವ ಮಂಜುನಾಥ ರೈ, ಎರೆಹುಳು ಸಾಕಾಣಿಕೆಯಲ್ಲಿ ತೊಡಗಿದ್ದಾರೆ.ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿ ಮೂಲಕ ಆಹಾರ ಬೆಳೆ ಬೆಳೆಯುವಲ್ಲಿ ತಮ್ಮ ಕುಟುಂಬ ತೊಡಗಿದೆ. ಸಾಯವಯ ಕೃಷಿಕರಿಗೆ ಪ್ರೋತ್ಸಾಹಿಸುವ ದಿಸೆಯಲ್ಲಿ ತಮ್ಮ ಮನೆಗೆ ಸಿಎಂ ಯಡಿಯೂರಪ್ಪ ಆಗಮಿಸುತ್ತಿರುವುದು ತಮಗೆ ಹೆಮ್ಮೆ ಮತ್ತು ಸಂತಸ ತಂದಿದೆ ಎಂದು ಕೃಷಿಕ ಮಂಜುನಾಥ ರೈ ‘ಪ್ರಜಾವಾಣಿ’ ಗೆ  ಬುಧವಾರ ತಿಳಿಸಿದರು.‘ನಾವೇ ಬೆಳೆದ ಬೆಳೆಯಿಂದ ಕೊಡಗಿನ ವಿಶಿಷ್ಟ ಕಡಬು-ಚಟ್ನಿ, ಹೋಳಿಗೆ, ಕಾಯಿಹಾಲು, ಅನ್ನ-ಸಾರು,  ನೀರುದೋಸೆ, ಮೊಸರನ್ನ, ಹಪ್ಪಳ ಇತ್ಯಾದಿ ತಿಂಡಿ ತಯಾರಿಸಿ ಮುಖ್ಯಮಂತ್ರಿಗೆ ಹಬ್ಬದ ಮಾದರಿಯಲ್ಲಿ ಆತಿಥ್ಯ   ನೀಡಲಾಗುವುದು’ ಎಂದರು.9 ನೇ ತರಗತಿಯಲ್ಲಿ ಓದುತ್ತಿರುವ ರೈ ಅವರ ಮಗಳು ಮೇಘನಾ, 7 ನೇ ತರಗತಿಯಲ್ಲಿ ಕಲಿಯುತ್ತಿರುವ ಮಗ ವಿಕಾಸ್ ರೈ ಕೂಡ ಮುಖ್ಯಮಂತ್ರಿ ಬರುವಿಕೆಗಾಗಿ ಕಾತುರರಾಗಿದ್ದಾರೆ.ಆರ್ಥಿಕ ಹೊರೆಯಲ್ಲದ ಸಾವಯವ ಕೃಷಿಯಿಂದ ತಾವು ಕಳೆದ 30 ವರ್ಷಗಳಿಂದ ಉತ್ತಮ ಇಳುವರಿ  ಪಡೆದಿರುವುದಾಗಿ ಮಂಜುನಾಥ ರೈ ಅವರ ತಂದೆ ಗುಡ್ಡಪ್ಪ ರೈ ಅಭಿಪ್ರಾಯಪಟ್ಟರು. ಸಾವಯವ ಕೃಷಿ ಪದ್ಧತಿಯಿಂದ ಅಧಿಕ ಇಳುವರಿ ಪಡೆಯುವಲ್ಲಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿರುವ ಕಂಬಿಬಾಣೆ ಗ್ರಾಮದ 59 ಮಂದಿ ಕೃಷಿಕರು ಸಾವಯವ ಕೃಷಿಯಲ್ಲಿ  ಗಮನ ಸೆಳೆದಿದ್ದಾರೆ.ರೈತನ ಮನೆಯಲ್ಲಿ ಯಡಿಯೂರಪ್ಪ ಅವರ ಆತಿಥ್ಯಕ್ಕೆ ಈಗಾಗಲೇ ಸಿದ್ಧತೆ ನಡೆಸಿದ್ದು, ಭೇಟಿ ಹಿನ್ನೆಲೆಯಲ್ಲಿ  ಬುಧವಾರ ಜಿಲ್ಲಾಧಿಕಾರಿ ಕೆ.ಎಚ್.ಅಶ್ವತ್ಥನಾರಾಯಣಗೌಡ, ಅಪರ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ಎಸ್ಪಿ  ಮಂಜುನಾಥ್ ಕೆ.ಅಣ್ಣಿಗೇರಿ, ಜಿ.ಪಂ.ಸದಸ್ಯ ಬಿ.ಬಿ.ಭಾರತೀಶ್, ಗ್ರಾ.ಪಂ.ಅಧ್ಯಕ್ಷ ಶಶಿಕಾಂತ್ ರೈ  ಬುಧವಾರ ಭೇಟಿ  ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.