ಮಂಗಳವಾರ, ಮೇ 24, 2022
27 °C
ಬಂಗಾರಪೇಟೆಯ 40 ಗ್ರಾಮಗಳಲ್ಲಿ ಜಾಗೃತಿ ಅಭಿಯಾನ

ಕಂಸಾಳೆ ಮೂಲಕ ಎಚ್‌ಐವಿ- ಏಡ್ಸ್ ಜನ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಸಾಳೆ ಮೂಲಕ ಎಚ್‌ಐವಿ- ಏಡ್ಸ್ ಜನ ಜಾಗೃತಿ

ಕೋಲಾರ: ಎಚ್‌ಐವಿ-ಏಡ್ಸ್ ಜಾಗೃತಿಗೂ ಜನಪದ ಕಲಾ ಪ್ರಕಾರವಾದ ಕಂಸಾಳೆಗೂ ಸಂಬಂಧವುಂಟೆ ಎಂದು ಯಾರಾದರೂ ಕೇಳಿದರೆ, `ಹೌದು' ಎನ್ನುತ್ತದೆ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ.ಏಕೆಂದರೆ ಇದುವರೆಗೂ ಬೀದಿನಾಟಕಗಳ ಮೂಲಕ ಎಚ್‌ಐವಿ-ಏಡ್ಸ್ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದ ಮಂಡಳಿಯು ಈಗ ಕಂಸಾಳೆಯ ನೆರವನ್ನೂ ಬಳಸಿಕೊಳ್ಳುತ್ತಿದೆ. ಕಂಸಾಳೆಯ ನಾದಮಯ ಝೇಂಕಾರ ಮತ್ತು ಕಲಾವಿದರ ನೃತ್ಯದ ಸಮ್ಮೊಹಕತೆಯ ಮೂಲಕ ಈಗ ಎಚ್‌ಐವಿ-ಏಡ್ಸ್ ಜಾಗೃತಿ ಪಾಠಗಳು ಜನರ ನಡುವೆ ಬಿತ್ತರವಾಗಲಿವೆ. ಹಾಡು ಮತ್ತು ಕುಣಿತವನ್ನು ಒಳಗೊಂಡ ಚಾಮರಾಜನಗರದ ಜನಪದ ಕಲಾಪ್ರಕಾರವಾದ ಕಂಸಾಳೆಯು ಈಗ ಬಯಲು ಸೀಮೆಯ ಜಿಲ್ಲೆಯ ಹಳ್ಳಿಗಳಲ್ಲಿ ಮಾರ್ದನಿಸಲಿದೆ.ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ 40 ಗ್ರಾಮಗಳಲ್ಲಿ ಎಚ್‌ಐವಿ-ಏಡ್ಸ್ ಜಾಗೃತಿ ಅಭಿಯಾನ ಸೋಮವಾರದಿಂದ ಶುರುವಾಗಲಿದೆ. ವಿಶೇಷ ಎಂದರೆ ಜನಪದ ಕಲಾ ಪ್ರಕಾರವಾದ ಕಂಸಾಳೆ ಮೂಲಕ ಈ ಜಾಗೃತಿ ಅಭಿಯಾನ ನಡೆಯುತ್ತಿದೆ ಎನ್ನುವುದು.ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಹಯೋಗದಲ್ಲಿ ಜುಲೈ 1ರಿಂದ 20ರವರೆಗೆ ಅಭಿಯಾನ ನಡೆಯಲಿದ್ದು ಕರ್ನಾಟಕ ಜಾನಪದ ಕಂಸಾಳೆ ಕಲಾವಿದರ ಸಂಘದ ಲಿಂಗಯ್ಯ ನೇತೃತ್ವದ ತಂಡದ ಸದಸ್ಯರು ಕಂಸಾಳೆ ಪ್ರದರ್ಶಿಸಿ ಜಾಗೃತಿ ಮೂಡಿಸಲಿದ್ದಾರೆ ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ರಾಜಕುಮಾರ್.`ಪ್ರಜಾವಾಣಿ'ಯೊಂದಿಗೆ ಭಾನುವಾರ ಮಾತನಾಡಿದ ಅವರು, ಎಚ್.ಐ.ವಿ-ಏಡ್ಸ್ ಕುರಿತಾದ ಜಾಗೃತಿ ಅಭಿಯಾನವು ಮಹಿಳೆಯರು ಹಾಗೂ ಯುವಕ ಯುವತಿಯರನ್ನು ಕೇಂದ್ರವಾಗಿಟ್ಟುಕೊಂಡಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ, ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆ, ಅಂಗನವಾಡಿ, ದೇಗುಲ ಮತ್ತು ದೊಡ್ಡ ಮರಗಳ ಸಮೀಪದಲ್ಲಿ ಕಂಸಾಳೆ ಪ್ರದರ್ಶನ ನಡೆಯಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ ಎಂದು ಅವರು ಹೇಳಿದರು.ರಾಜ್ಯದ ಎಲ್ಲ ಜಿಲ್ಲೆಗಳ ಒಂದೊಂದು ತಾಲ್ಲೂಕಿನಲ್ಲಿ ಈ ಜಾಗೃತಿ ಅಭಿಯಾನ ನಡೆಯುತ್ತಿದೆ. ಜಿಲ್ಲೆಯಲ್ಲಿ ಬಂಗಾರಪೇಟೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ತಾಲ್ಲೂಕಿನಲ್ಲಿ ಎಚ್‌ಐವಿ ಸೋಂಕಿತರು ಮತ್ತು ಏಡ್ಸ್ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಈ ಆಯ್ಕೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.ಎಲ್ಲೆಲ್ಲಿ?: ಹುದುಕುಳ, ಸೂಲಿಕುಂಟೆ, ಕೆಸರನಹಳ್ಳಿ, ಎಸ್.ಜಿ.ಕೋಟೆ, ದೊಡ್ಡೂರು ಕರಪನಹಳ್ಳಿ, ತೊಪ್ಪನಹಳ್ಳಿ, ಕಾಮಸಂದ್ರ, ಕೇತಗಾನಹಳ್ಳಿ, ದೋಣಿಮಡುಗು, ಬಲಮಂದೆ, ಬೂದಿಕೋಟೆ, ಗುಲ್ಲಹಳ್ಳಿ, ಐನೋರಹೊಸಹಳ್ಳಿ, ಹುಲಿಬೆಲೆ, ಕಾರಹಳ್ಳಿ, ಜಕ್ಕರಸಕುಪ್ಪ, ಘಟ್ಟಮಾದಮಂಗಲ, ಕಮ್ಮಸಂದ್ರ, ಶ್ರೀನಿವಾಸಂದ್ರ ಗ್ರಾಮ ಪಂಚಾಯಿತಿಗಳ ಹಳ್ಳಿಗಳಲ್ಲಿ ಕಂಸಾಳೆ ಪ್ರದರ್ಶನ ನಡೆಯಲಿದೆ.ಪ್ರತಿ ಗ್ರಾಮ ಪಂಚಾಯಿತಿಯ ಎರಡು ಹಳ್ಳಿಗಳಲ್ಲಿ ಪ್ರದರ್ಶನ ನಡೆಯಲಿದೆ. ಮೊದಲ ಪ್ರದರ್ಶನ ಮಧ್ಯಾಹ್ನ 3 ಗಂಟೆಗೆ ಮತ್ತು 2ನೇ ಪ್ರದರ್ಶನ ಸಂಜೆ 7 ಗಂಟೆಗೆ ನಡೆಯಲಿದೆ. ಹಳ್ಳಿಗಳ ವಿವರ ಹೀಗಿದೆ:1ರಂದು ಹುದುಕುಳ, ಮಾದಮಂಗಲ, 2ರಂದು ದೇಶಿಹಳ್ಳಿ, ಎಸ್.ಜಿ.ಕೋಟೆ, 3ರಂದು ದೊಡ್ಡೂರು ಕರಪನಹಳ್ಳಿ, ದಾಸರಹೊಸಳ್ಳಿ, 4ರಂದು ಡಿ.ಸಿ.ಹಳ್ಳಿ, ಸಿವಿ ಮಡಿ, 5ರಂದು ಅಜ್ಜಪ್ಪನಹಳ್ಳಿ, ಹಾರೋಹಳ್ಳಿ, 6ರಂದು ತೊಪ್ಪನಹಳ್ಳಿ, ಕಮ್ಮಸಂದ್ರ, 7ರಂದು ದೊಡ್ಡಮರಹಳ್ಳಿ, ಪಿಚ್ಚಳ್ಳಿ, 8ರಂದು ಪೋಲೇನಹಳ್ಳಿ, ಕುಂಡರಸನಹಳ್ಳಿ, 9ರಂದು ಬಲಮಂದೆ, ಬುವನಹಳ್ಳಿ, 10ರಂದು ಬೂದಿಕೋಟೆ, ಯಚ್ಚಮನಹಳ್ಳಿ, 11ರಂದು ಹೂವರಸನಹಳ್ಳಿ, ಐನೋರಹೊಸಳ್ಳಿ, 12ರಂದು ತುಮಟಗಿರಿ, ಅತ್ತಿಗಿರಿಕೊಪ್ಪ,  14ರಂದು ನೆರ್ನಹಳ್ಳಿ, ಯಲಬುರ್ಗಿ, 15ರಂದು ಚಿಂಚಂಡಹಳ್ಳಿ, ಕೊತ್ತೂರು. 16ರಂದು ಪೀಲಾವರ, ಮರದಘಟ್ಟ,17ರಂದು ಶ್ರೀನಿವಾಸಂದ್ರ, ಬೀರನಕುಪ್ಪ,18ರಂದು ಘಟ್ಟಮಾದಮಂಗಲ, ಕೆ.ಜಿ.ಕೋಟೆ, 19ರಂದು ಕಾಮಂಡಹಳ್ಳಿ, ಗುಟ್ಟಹಳ್ಳಿ, 20ರಂದು ಗೊಲ್ಲಹಳ್ಳಿ, ಹೊಸಹಳ್ಳಿಯಲ್ಲಿ ಕಂಸಾಳೆ ಪ್ರದರ್ಶನ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.