ಶನಿವಾರ, ಮೇ 8, 2021
18 °C

ಕಟ್ಟುನಿಟ್ಟು ನಿಯಮದ ಹಿರೀಸಾವೆ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಹಿರೀಸಾವೆಯಲ್ಲಿ ಒಂದು ವಾರ ಗ್ರಾಮ ದೇವತೆ ಚೌಡೇಶ್ವರಿ ಮತ್ತು ಹೆಬ್ಬಾರಮ್ಮನ  ಹಬ್ಬದ ಸಡಗರ. ಹೆಬ್ಬಾರಮ್ಮ ದೇವಸ್ಥಾನದ ಮುಂದೆ ಚಪ್ಪರ ಹಾಕುವ ಮೂಲಕ ಹಬ್ಬಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಇಂದು ರಾತ್ರಿ ಊರ ಮುಂದಿನ ಉಯ್ಯಾಲೆ ಕಂಬಕ್ಕೆ ಸಂಪ್ರದಾಯದ ಪ್ರಕಾರ ಬಾಳೆ ಕಂಬಗಳನ್ನು ತಂದು ಕಟ್ಟಲಾಗುತ್ತದೆ.ಹಬ್ಬದ ಆಚರಣೆಯಲ್ಲಿ ಹಲವು ರೀತಿಯ ನಿಯಮಗಳನ್ನು ಗ್ರಾಮಸ್ಥರು ಪಾಲಿಸುತ್ತಾರೆ. ಚೌಡೇಶ್ವರಿ ಮತ್ತು ಹೆಬ್ಬಾರಮ್ಮ ದೇವರುಗಳನ್ನು ಮೆರವಣಿಗೆ ಮಾಡುವ ಪ್ರಮುಖ ಬೀದಿಯಲ್ಲಿ ಈ ಅವಧಿಯಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಓಡಾಡುವಂತಿಲ್ಲ.ದೇವರ ಮನೆತನದವರು ಮನೆಗಳಲ್ಲಿ ಮಾಂಸಾಹಾರ, ರೊಟ್ಟಿ ಮತ್ತು ಕಂಟು ಪದಾರ್ಥಗಳನ್ನು ಮಾಡುವುದಿಲ್ಲ. ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ. ಈ ದೇವರುಗಳ ತವರು ಮನೆಯಾದ ಹೊನ್ನೇನಹಳ್ಳಿಯಲ್ಲಿಯೂ ಇದೇ ರೀತಿಯ ನಿಯಮಗಳನ್ನು ಪಾಲಿಸುತ್ತಾರೆ.   ಪ್ರತಿ ರಾತ್ರಿ ಒಂದೊಂದು ಮನೆತನದವರು ಚೌಡೇಶ್ವರಿ ದೇವರ ಮೆರವಣಿಗೆ ಮತ್ತು ವಿಶೇಷ ಪೂಜೆ ಮಾಡಿಸುತ್ತಾರೆ. ರಾತ್ರಿಯಿಡೀ ಗ್ರಾಮಗಳಲ್ಲಿ ಜನಪದ ಶೈಲಿಯ ರಂಗದ ಕುಣಿತ ಕುಣಿಯುತ್ತಾರೆ. ಜಾಗರಣೆ ಪ್ರಯುಕ್ತ ಅಕ್ಕ ಪಕ್ಕದ ಹಳ್ಳಿಗಳ ಗ್ರಾಮಸ್ಥರು ಬಂದು ರಂಗ ಕುಣಿತದಲ್ಲಿ ಪಾಲ್ಗೊಳ್ಳುವುದು ವಿಶೇಷ.     ಏಪ್ರಿಲ್ 7ರಂದು ಎರಡೂ ಗ್ರಾಮಗಳಲ್ಲಿ ಹೆಬ್ಬಾರಮ್ಮ ದೇವರ ಹಬ್ಬ ನಡೆಯುತ್ತದೆ. ಏಪ್ರಿಲ್10ರಂದು ಎರಡೂ ಗ್ರಾಮಗಳಲ್ಲಿ ಮಣ್ಣಿನ ಮಡಕೆಯಲ್ಲಿ ಮಡೆ ಮಾಡುತ್ತಾರೆ. ಹೊನ್ನೇನಹಳ್ಳಿ ಗ್ರಾಮದವರು ಹಸಿ ಈಚಲು ಗರಿಯಿಂದ ಮಡೆ ಅನ್ನ ಬೇಯಿಸುವುದು ವಾಡಿಕೆ.ಅಂದು ರಾತ್ರಿ ಅಲಂಕೃತ ಮಡೆಗಳನ್ನು ಹೊತ್ತು ಭಕ್ತರು, ಹೆಬ್ಬಾರಮ್ಮ ದೇವರ ಜೊತೆಯಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಾರೆ. ಏಪ್ರಿಲ್ 11ರಂದು ಚೌಡೇಶ್ವರಿ ದೇವರ ಬ್ರಹ್ಮ ರಥೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಬಂದು ಭಕ್ತರು ಭಾಗವಹಿಸುತ್ತಾರೆ. ಶನಿವಾರ ದೇವರುಗಳ ಕಂಕಣ ಬಿಚ್ಚುವ ಮೂಲಕ ಹಬ್ಬವು ಕೊನೆಗೊಳ್ಳುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.