ಭಾನುವಾರ, ಮೇ 9, 2021
19 °C

ಕಠಿಣ ಸವಾಲು ಎದುರಾಗಲಿದೆ: ಕೈಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೇರೆ ದೇಶಗಳ ತಂಡಗಳು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದರಿಂದ ಈ ಸಲ ಭಾರಿ ಸವಾಲು ಎದುರಾಗಲಿದೆ. ಆರಂಭದಲ್ಲಿ ಉತ್ತಮ ಬುನಾದಿ ಹಾಕಿದರೆ ಮುಂದೆ ಯಶಸ್ಸಿನ ಹಾದಿಯಲ್ಲಿ ಸಾಗಬಹುದು. ಅದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದೇವೆ...~ಹೀಗೆ ಪತ್ರಕರ್ತರ ಎದುರು ನಗುಮೊಗದಿಂದಲೇ ಮಾತನಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಮೊಹಮ್ಮದ್ ಕೈಫ್. ಶುಕ್ರವಾರ (ಸೆ. 23) ಆರಂಭವಾಗಲಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿ ಆಡಲು ಉದ್ಯಾನನಗರಿ ಬೆಂಗಳೂರಿಗೆ ಆಗಮಿಸಿರುವ ರಾಯಲ್ ಚಾಲೆಂಜರ್ಸ್ ತಂಡದ ಕೆಲ ಆಟಗಾರರು ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿದರು.`ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಐಪಿಎಲ್ ನಡೆದಿದೆಯಾದರೂ, ಈ ಸಲ ಬೇರೆಯದೇ ರೀತಿಯಲ್ಲಿ ಪೈಪೋಟಿ ಏರ್ಪಡಲಿದೆ. ಇಂಗ್ಲೆಂಡ್‌ನ ಕೌಂಟಿ ತಂಡಗಳು ಇಲ್ಲಿ ಆಡಲಿವೆ. ಆದ್ದರಿಂದ ರೋಚಕ ಹೋರಾಟ ಎದುರಾಗಬಹುದು. ಅದಕ್ಕಾಗಿ ನಮ್ಮ ತಂಡದ ನಾಯಕ ಡೇನಿಯಲ್ ವೆಟೋರಿ ನೇತೃತ್ವದಲ್ಲಿ ಸಾಕಷ್ಟು ತಾಲೀಮು ನಡೆಸಿದ್ದೇವೆ~ ಎನ್ನುತ್ತಾರೆ ಕೈಫ್.ಕ್ರಿಸ್ ಗೇಲ್ ನಮ್ಮ ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಬಲ ತುಂಬಲಿದ್ದಾರೆ. ಐಪಿಎಲ್ ನಾಲ್ಕನೇ ಆವೃತ್ತಿಯಲ್ಲಿ ಅವರು ನೀಡಿದ ಪ್ರದರ್ಶನವೇ ಅದಕ್ಕೆ ಸಾಕ್ಷಿ. ವೆಸ್ಟ್ ಇಂಡೀಸ್‌ನ ಆಟಗಾರನಿಂದ ಮತ್ತೆ ಭರ್ಜರಿ ಬ್ಯಾಟಿಂಗ್ ಮೂಡಿಬಂದರೆ ಪ್ರಶಸ್ತಿ ಜಯಿಸುವುದೇ ಕಷ್ಟವೇನಲ್ಲ. ಸ್ಪೂರ್ತಿ ತುಂಬುವ ನಾಯಕ ವೆಟೋರಿ ಸಹ ನಮ್ಮ ಬೆಂಬಲಕ್ಕಿದ್ದಾರೆ ಎನ್ನುವ ವಿಶ್ವಾಸ ಉತ್ತರ ಪ್ರದೇಶದ ಆಟಗಾರನದ್ದು.`ಉತ್ತಮ ಪ್ರದರ್ಶನ ನೀಡುವೆ~: ಈ ಸಲದ ಐಪಿಎಲ್‌ನಲ್ಲಿ ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡದ ಸೌರಭ್ ತಿವಾರಿಗೆ ಈ ಸಲ ತಮ್ಮ ಪ್ರದರ್ಶನ ಸುಧಾರಿಸಿಕೊಳ್ಳುವ ವಿಶ್ವಾಸ. ಕಳೆದ ತಿಂಗಳು ನಡೆದ ಉದಯೋನ್ಮುಖ ಆಟಗಾರರ ಟೂರ್ನಿಯಲ್ಲಿ ಈ ಆಟಗಾರ ಉತ್ತಮ ಪ್ರದರ್ಶನ ನೀಡಿದ್ದಾರೆ.ಆಸ್ಟ್ರೇಲಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ್ದರು. ಚುಟುಕು ಕ್ರಿಕೆಟ್ ಅಬ್ಬರದಲ್ಲಿ ಏಕದಿನ ಹಾಗೂ ಟೆಸ್ಟ್  ಕ್ರಿಕೆಟ್‌ನತ್ತ ಒಲವು ಕಡಿಮೆಯಾಗುತ್ತಿದೆ ಎನ್ನುವ ವಾದವನ್ನು ತಿವಾರಿ ಒಪ್ಪುವುದಿಲ್ಲ. ಈ ಚುಟುಕು ಆಟದಿಂದ ಯುವ ಆಟಗಾರರಿಗೆ ತಮ್ಮ ಪ್ರತಿಭೆ ತೋರಿಸಲು ವೇದಿಕೆ ದೊರೆಯುತ್ತದೆ. ನನಗೆ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಮೂರು ಮಾದರಿಯ ಪಂದ್ಯಗಳು ಖುಷಿ ನೀಡುತ್ತವೆ. ಭವಿಷ್ಯದ ದೃಷ್ಟಿಯಿಂದ ನನಗೆ ಮುಖ್ಯವಾದ ಟೂರ್ನಿ ಇದು~ ಎಂದು ತಿವಾರಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.