ಶುಕ್ರವಾರ, ಜನವರಿ 24, 2020
17 °C

ಕಡಿಮೆ ಖರ್ಚಿನ ವಿದ್ಯುತ್ ಬೇಲಿ

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಬೆಣ್ಣೆತೊರಾ ನದಿ ಪಕ್ಕದಲ್ಲೇ ಇರುವುದರಿಂದ ಕಾಡುಪ್ರಾಣಿಗಳ ಕಾಟ ವಿಪರೀತ. ಹಿಂಡುಹಿಂಡಾಗಿ ಬರುವ ಕಾಡುಹಂದಿಗಳು ಬೆಳೆಯನ್ನೆಲ್ಲ ಒಂದೇ ರಾತ್ರಿಯಲ್ಲಿ ಧ್ವಂಸ ಮಾಡುತ್ತಿದ್ದವು. ಪೂರ್ಣ ಇಳುವರಿ ಕೈಗೆ ಸಿಕ್ಕಿದ್ದೇ ಅಪರೂಪ.

 

`ಬೆಳಿ ಕಾಯ್ಲಿಕ್ಕೆ ದಿನಕ್ ನೂರು ರೂಪಾಯಿ ಕೂಲಿ. ರೈತ್ರು ಎಷ್ಟಂತ ಹೀಂಗ್ ಖರ್ಚ್ ಮಾಡ್ಲಿಕ್ಕೆ ಆಗ್ತದರಿ?~ ಎಂದು ಪ್ರಶ್ನಿಸುವ ಗುಲ್ಬರ್ಗ ತಾಲ್ಲೂಕು ಹಾಳಸುಲ್ತಾನಪುರ ಗ್ರಾಮದ ಯುವ ಕೃಷಿಕ ಶರಣಗೌಡ ಪಾಟೀಲ, ಇದಕ್ಕೆ ಕಡಿಮೆ ಖರ್ಚಿನ ವಿದ್ಯುತ್ ಬೇಲಿ ಉಪಾಯ ಕಂಡುಕೊಂಡಿದ್ದಾರೆ.ಲಕ್ಷಾಂತರ ವೆಚ್ಚದಲ್ಲಿ ಅಳವಡಿಸುವ ವಿದ್ಯುತ್ ಬೇಲಿ ಎಲ್ಲರ ಕೈಗೆಟುಕುವುದಿಲ್ಲ. ಇದಕ್ಕಾಗಿ ಶರಣಗೌಡ ಸುಲಭ ಹಾಗೂ ಕಡಿಮೆ ವೆಚ್ಚದ ಬೇಲಿ ರೂಪಿಸಿಕೊಂಡಿದ್ದಾರೆ.ಕಳೆದ ವರ್ಷ ಒಂದೂವರೆ ಎಕರೆ ಈರುಳ್ಳಿ ಹೊಲಕ್ಕೆ ಪ್ರಾಯೋಗಿಕವಾಗಿ ಹಾಕಿದ್ದ ಬೇಲಿಯಿಂದ 50 ಸಾವಿರ ರೂಪಾಯಿಗೂ ಹೆಚ್ಚು ಲಾಭವಾಗಿದೆ. ಈ ವರ್ಷ ಅದನ್ನು 15 ಎಕರೆಗೆ ವಿಸ್ತರಿಸಿದ್ದಾರೆ. ಬೆಳೆ ಒಂದಿಷ್ಟೂ ಹಾನಿಯಾಗಿಲ್ಲ. ಸುತ್ತಲೂ ಹಾಕಲಾದ ಒಂದೇ ಒಂದು ತಂತಿ ಇಡೀ ಬೆಳೆಯನ್ನು ಸಂಪೂರ್ಣ ರಕ್ಷಿಸಿದೆ.ಹೊಲದಲ್ಲಿ ಕೆಲಸ ಮಾಡುತ್ತಲೇ ಹೊಸ ಹೊಸ ಸಂಶೋಧನೆ ಅಳವಡಿಸಿಕೊಳ್ಳುವುದು ಶರಣಗೌಡ ಪಾಟೀಲ ಅವರ ಹವ್ಯಾಸ. ವಿದ್ಯುತ್ ಬೇಲಿ ಕೂಡ ಅವುಗಳಲ್ಲಿ ಒಂದು.ಮೂರ್ನಾಲ್ಕು ವರ್ಷಗಳ ಹಿಂದೆ ಐದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಾಗ ಬಹುತೇಕ ಬೆಳೆ ಕಾಡುಹಂದಿ ಪಾಲಾಗಿತ್ತು. ಈ ಬಗ್ಗೆ ಚಿಂತಿಸಿ ವಿದ್ಯುತ್ ಬೇಲಿ ತಯಾರಕರನ್ನು ಸಂಪರ್ಕಿದರು. ಅವರು ಬೇಲಿ ಅಳವಡಿಕೆಗೆ ಹೇಳಿದ ವೆಚ್ಚ ಗಾಬರಿ ಮೂಡಿಸಿತು. ಅದನ್ನು ಅಲ್ಲಿಗೇ ಕೈಬಿಟ್ಟರು. ಆದರೆ ಕಾಡುಹಂದಿಗಳು ಬೆಳೆಯನ್ನು ಬಿಡಬೇಕಲ್ಲ?!ಮತ್ತೆ ಮತ್ತೆ ಚಿಂತನೆ ನಡೆಯಿತು. ಐಟಿಐ ಎಲೆಕ್ಟ್ರೀಷಿಯನ್ ಕೋರ್ಸ್ ಮಾಡಿದ್ದ ಪಾಟೀಲರು, ಆ ವಿದ್ಯೆಯನ್ನು ತಮ್ಮ ಹೊಲದ ರಕ್ಷಣೆಗೆ ಅಳವಡಿಸಲು ಮುಂದಾದರು.ವಿದ್ಯುತ್ ಬೇಲಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಗೊತ್ತಿತ್ತು. ಅದನ್ನೇ ಪ್ರಯೋಗಿಸಲು ಮುಂದಾದರು. ಬೆಣ್ಣೆತೊರಾ ನದಿ ಪಕ್ಕದ ಜಮೀನಿನಲ್ಲಿ ಒಂದೂವರೆ ಎಕರೆ ಈರುಳ್ಳಿ ಬೆಳೆದಿದ್ದರು. ಅದರ ಸುತ್ತ ಕಟ್ಟಿಗೆ ನೆಟ್ಟು, ಅಲ್ಪ ವೆಚ್ಚದ ತಂತಿ ಕಟ್ಟಿದರು.ವಿದ್ಯುತ್ ಪರಿವರ್ತಕ, 12 ವೋಲ್ಟ್ ಬ್ಯಾಟರಿ, ಸೈರನ್ ಪ್ರತ್ಯೇಕವಾಗಿ ಖರೀದಿಸಿ ತಂದು ಜೋಡಿಸಿದರು. ಪ್ರಯೋಗ ಫಲ ನೀಡಿತ್ತು. ಆ ವರ್ಷ ಕಾಡುಪ್ರಾಣಿಗಳ ಹಾವಳಿ ಒಂದಿಷ್ಟೂ ಇರಲಿಲ್ಲ.`10 ಸಾವಿರ ರೂಪಾಯಿ ಸಿಗ್ದ ಹೊಲ್ದಾಗ 50 ಸಾವಿರ ರೂಪಾಯಿ ಬೆಳಿ ಬಂತ್ರಿ. ಅದಕ್ಕ ಈ ಸಲ ಹದಿನೈದು ಎಕ್ರಿಗೆ ಬೇಲಿ ಹಾಕೀನಿ. ಬೆಳಿ ನೋಡ್ರಿ... ಒಂದ್ ಸಾಲೂ ಖರಾಬ್ ಆಗಿಲ್ಲ..!~ ಎಂದು ಹೆಮ್ಮೆಯಿಂದ ತೋರಿಸುತ್ತಾರೆ, ಶರಣಗೌಡ. ಅಂದ ಹಾಗೆ, 5 ಎಕರೆ ಕಡಲೆ, 9 ಎಕರೆ ತೊಗರಿ ಹಾಗೂ ಒಂದು ಎಕರೆ ಮೆಕ್ಕೆಜೋಳ ಇರುವ ಈ ಹೊಲಕ್ಕೆ ಬೇಲಿ ಹಾಕಲು ತಗುಲಿದ ವೆಚ್ಚ 20 ಸಾವಿರ ರೂಪಾಯಿಗೂ ಕಡಿಮೆ!

ಇವರು ರೂಪಿಸುವ ವಿದ್ಯುತ್ ಬೇಲಿ ಪ್ರಾಣಕ್ಕೆ ಅಪಾಯ ಉಂಟು ಮಾಡುವುದಿಲ್ಲ.ಪ್ರಾಣಿಗಳಾಗಲೀ, ಮನುಷ್ಯರಾಗಲೀ ತಂತಿ ಮುಟ್ಟಿದರೆ ಒಂದು ಕ್ಷಣ ಶಾಕ್ ಹೊಡೆಯುತ್ತದೆ ಅಷ್ಟೇ. ಕಳ್ಳರು ತಂತಿ ಕತ್ತರಿಸಿದರೆ ಅಥವಾ ಇನ್ನಾವುದೇ ಕಾರಣದಿಂದ ತಂತಿಯಲ್ಲಿ ವಿದ್ಯುತ್ ಪ್ರವಾಹ ನಿಂತು ಹೋದರೆ ಸೈರನ್ ಶಬ್ದ ಮಾಡುತ್ತದೆ! ಪ್ರಾಣಿಗಳು ತಂತಿ ಮೇಲೆ ಬಿದ್ದು, ಏಳಲು ಆಗದೇ ಇರುವಾಗ ವಿದ್ಯುತ್ ಪ್ರವಹಿಸುವುದು ಸ್ಥಗಿತಗೊಂಡು ಸೈರನ್ ಕೂಗಿಕೊಳ್ಳುತ್ತದೆ. ಹೀಗಾಗಿ ಪ್ರಾಣಾಪಾಯ ಉಂಟಾಗುವುದೇ ಇಲ್ಲ ಎನ್ನುತ್ತಾರೆ ಶರಣಪ್ಪ.ಒಮ್ಮೆ ಬ್ಯಾಟರಿ ಚಾರ್ಜ್ ಆದರೆ ಎರಡರಿಂದ ಮೂರು ದಿನಗಳ ಕಾಲ ನಡೆಯುತ್ತದೆ. ವಿದ್ಯುತ್ ಸಂಪರ್ಕ ಇರದಿದ್ದರೆ, ಸೋಲಾರ್ ಫಲಕ ಅಳವಡಿಸಬಹುದು.ವಿದ್ಯುತ್ ಬೇಲಿಗೆ ಬೇಕಾದ ಕಲ್ಲುಕಂಬ, ಗಟ್ಟಿ ತಂತಿ ಹಾಗೂ ಉಪಕರಣಗಳಿಗೆ ಹೆಚ್ಚು ಹಣ ಖರ್ಚಾಗುತ್ತದೆ. ಆದರೆ ರೈತರ ಅಗತ್ಯ ಹಾಗೂ ಕಡಿಮೆ ಬೆಲೆಗೆ ಬೇಲಿ ರೂಪಿಸಿಕೊಡುವುದು ಶರಣಪ್ಪ ಅವರ ಹವ್ಯಾಸ. ಈಗಾಗಲೇ ಐದಾರು ಜನರಿಗೆ ಈ ತೆರನಾದ ಬೇಲಿ ಮಾಡಿಕೊಟ್ಟಿದ್ದಾರೆ. ಕಂಬದ ಬದಲಿಗೆ ನಾಲ್ಕಾರು ಅಡಿ ಉದ್ದದ ಕಟ್ಟಿಗೆ ತುಂಡುಗಳನ್ನೇ ಹೂಳಿ, ಬೇಲಿ ಮಾಡಿರುವ ಅವರ ಹೊಲವೇ ಒಂದರ್ಥದಲ್ಲಿ ಪ್ರಾತ್ಯಕ್ಷಿಕೆ ಕೇಂದ್ರದಂತಿದೆ.ಎರಡು ಎಕರೆ ಹೊಲದ ಸುತ್ತಲೂ ಬಿದಿರು ಕಟ್ಟಿಗೆ ಹೂಳಿ, ಅದಕ್ಕೇ ತಂತಿ ಸುತ್ತಿ ಬೇಲಿ ಮಾಡಿಸಿಕೊಂಡ ಶ್ರೀನಿವಾಸ ಸರಡಗಿ ಗ್ರಾಮದ ಕೃಷಿಕ ಮಹಾಲಿಂಗಪ್ಪ ತಾಡಪಳ್ಳಿ, `ಇದಕ್ ಖರ್ಚಾಗಿದ್ದು ಭಾಳ ಕಡಿಮಿ ಬಿಡ್ರಿ. ಆದ್ರ ಲಾಭ ಮಾತ್ರ ಜಾಸ್ತಿ~ ಎಂದು ಬಣ್ಣಿಸುತ್ತಾರೆ.ಜಮೀನಿನ ಬೆಳೆ, ಗಿಡದ ಆಧಾರದಲ್ಲಿ ಬೇಲಿ ಮಾಡಿಕೊಡುವುದು ಶರಣಗೌಡ ಅವರ ವೈಶಿಷ್ಟ್ಯ. ತೋಟವಿದ್ದರೆ ತಲಾ ಒಂದೂವರೆ ಅಡಿ ಎತ್ತರದಲ್ಲಿ ಮೂರು ಸುತ್ತು, ತೊಗರಿ ಬೆಳೆ ಹೊಲಕ್ಕೆ ಎರಡು ಸುತ್ತು, ಈರುಳ್ಳಿ- ಕಡಲೆಗೆ ನೆಲದಿಂದ ಒಂದೂವರೆ ಅಡಿ ಎತ್ತರದಲ್ಲಿ ಒಂದೇ ಸುತ್ತು ತಂತಿ ಹಾಕಿದರೂ ಸಾಕು ಎನ್ನುತ್ತಾರೆ ಅವರು.ನಳ ನೀರಾವರಿ, ಸ್ವಯಂಚಾಲಿತ ಪಂಪ್‌ಸೆಟ್ ಸ್ಥಗಿತ, ಮೊಗ್ಗು ಕತ್ತರಿಸುವ ಯಂತ್ರ, ಕಸ ತೆಗೆಯುವ ಕೂರಿಗೆಯಂಥ ಹಲವು ಉಪಕರಣಗಳನ್ನು ಅತ್ಯಲ್ಪ ವೆಚ್ಚದಲ್ಲಿ ಶರಣಗೌಡ ರೂಪಿಸಿದ್ದಾರೆ. ಕೃಷಿ ವಿಜ್ಞಾನಿಗಳು ರೂಪಿಸುವ ಉಪಕರಣ, ಮಾಡುವ ಬಹುತೇಕ ಸಂಶೋಧನೆಗಳೆಲ್ಲ ಸಾಮಾನ್ಯ ರೈತರ ಕೈಗೆಟುಕದ ಸ್ಥಿತಿಯಲ್ಲಿ ಇರುವಾಗ, ರೈತನ ಆರ್ಥಿಕ ಸ್ಥಿತಿಗೆ ತಕ್ಕಂತೆ ಸಲಕರಣೆ ರೂಪಿಸಿ, ವ್ಯವಸಾಯದ ಕೆಲಸ ಹಗುರ ಮಾಡುವ ಶರಣಗೌಡ ಪಾಟೀಲ ನಿಜವಾದ `ರೈತ ಸಂಶೋಧಕ~.

(ಮಾಹಿತಿಗೆ ಅವರ ದೂರವಾಣಿ 99004 38541)

ಪ್ರತಿಕ್ರಿಯಿಸಿ (+)