ಗುರುವಾರ , ಜೂನ್ 24, 2021
25 °C
ನಾಪೋಕ್ಲುವಿನಲ್ಲಿ ಕಾಫಿ ಬೆಳೆಗಾರರ ಸಭೆ

ಕಡಿಮೆ ಬೆಲೆಗೆ ಕಾಫಿ ಖರೀದಿ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಜಿಲ್ಲೆಯ ಇತರೆಡೆ ಇರುವ ಕಾಫಿ ಧಾರಣೆಗಿಂತ ₨ 200ರಿಂದ 300 ಗಳಷ್ಟು ಕಡಿಮೆ ಬೆಲೆಗೆ ನಾಪೋಕ್ಲುವಿನ ವ್ಯಾಪಾರಸ್ಥರು ಕಾಫಿ ಖರೀದಿಸುತ್ತಿರುವುದನ್ನು ವಿರೋಧಿಸಿ ನಾಪೋಕ್ಲು ವ್ಯಾಪ್ತಿಯ ಕಾಫಿ ಬೆಳೆಗಾರರು ಭಾನುವಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.

ಬಳಿಕ ಬೆಳೆಗಾರರ ಮತ್ತು ವ್ಯಾಪಾರಸ್ಥರ ನಡುವೆ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರನ್ನು ಸಭೆಗೆ ಕರೆಸಲಾಯಿತು.ಈ ವೇಳೆ ಮಾತನಾಡಿದ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೀಪಾಡಂಡ ಮಧು ಬೋಪಣ್ಣ, ನಾಪೋಕ್ಲು ವ್ಯಾಪ್ತಿಯ ಬೆಳೆಗಾರರ ಕಾಫಿಗೆ ಕಡಿಮೆ ಧಾರಣೆ ನೀಡಿ ವ್ಯಾಪಾರಸ್ಥರು ವಂಚಿಸುತ್ತಿದ್ದಾರೆ. ಜಿಲ್ಲೆಯ ಇತರೆಡೆಗಳಲ್ಲಿ ನೀಡುವ ಬೆಲೆಯನ್ನು ಇಲ್ಲಿನ ಬೆಳೆಗಾರರಿಗೂ ನೀಡಬೇಕು ಎಂದು  ಒತ್ತಾಯಿಸಿದರು.

ಕಾಫಿ ಬೆಳೆಗಾರ ಬಿದ್ದಾಟಂಡ ಟಿ. ದಿನೇಶ್ ಮಾತನಾಡಿ, ಈ ವರ್ಷ ಕಾಫಿ ಫಸಲು ಶೇ 20ರಷ್ಟು ಮಾತ್ರ ದೊರೆತಿದೆ. ಕಾರ್ಮಿಕರ ಕೂಲಿ, ಗೊಬ್ಬರದ ದುಬಾರಿ ಬೆಲೆ  ಬೆಳೆಗಾರರನ್ನು ಕಂಗೆಡಿಸಿದೆ. ಗಾಯದ ಮೇಲೆ ಬರೆ ಎಂಬಂತೆ ವ್ಯಾಪಾರಸ್ಥರು ಬೆಲೆ ಕಡಿಮೆಗೊಳಿಸುವುದರ ಮೂಲಕ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದರು.ಅಪ್ಪಾರಂಡ ಅಪ್ಪಯ್ಯ, ಕುಲ್ಲೇಟಿರ ಅಜಿತ್ ನಾಣಯ್ಯ, ಕೇಟೋಳಿರ ಹರೀಶ್ ಪೂವಯ್ಯ, ಬಿದ್ದಾಟಂಡ ಬೆಳ್ಯಪ್ಪ ಮತ್ತಿತರ ಬೆಳೆಗಾರರೂ ಇದಕ್ಕೆ ಧನಿಗೂಡಿಸಿದರು. ವ್ಯಾಪಾರಸ್ಥರಾದ ಶಿವಚಾಳಿಯಂಡ ಲವ ಕಾಳಪ್ಪ, ಎಂ.ಎಂ. ನಜೀರ್, ಷಂಶು, ಹರೀಶ್, ಮಹಮ್ಮದ್ ಆಲಿ ಪ್ರತಿಕ್ರಿಯಿಸಿ ಕಾಫಿಯ ಔಟ್‌ಟರ್ನ್‌ ಆಧಾರದಲ್ಲಿ ಕಾಫಿಗೆ ಬೆಲೆ ನಿಗದಿಗೊಳಿಸಿ ಖರೀದಿಸಲಾಗುತ್ತಿದೆ. ಇತರ ಸ್ಥಳಗಳಲ್ಲಿ ಕಾಫಿಗೆ ಹೆಚ್ಚಿನ ಬೆಲೆ ಏಕಿದೆ ಎಂಬುದು ತಿಳಿದಿಲ್ಲ. ಬೆಲೆ ಹೆಚ್ಚಿಸಿದರೆ ನಷ್ಟವಾಗುತ್ತದೆ ಎಂದು ವಿವರಣೆ ನೀಡಿದರು. ಆದರೂ ಪಟ್ಟುಬಿಡದ ಬೆಳೆಗಾರರು ತಕ್ಷಣ ಕಾಫಿಗೆ ಬೆಲೆ ಹೆಚ್ಚಿಸಬೇಕೆಂದು ಒತ್ತಡ ಹೇರಿದರು.ಬಿದ್ದಾಟಂಡ ಜಿನ್ನು ನಾಣಯ್ಯ, ಸೋಮಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಎನ್.ಎಸ್. ಉದಯ ಶಂಕರ್, ಕುಲ್ಲೇಟಿರ ಅರುಣ್ ಬೇಬ, ಪಟ್ರಪಂಡ ಮೋಹನ್ ಮುದ್ದಪ್ಪ, ಅಪ್ಪಾರಂಡ ಸುಭಾಷ್ ತಿಮ್ಮಯ್ಯ, ಕಾಂಡಂಡ ಸೂರಜ್ ಪೊನ್ನಣ್ಣ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.